Homeಮುಖಪುಟಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಡಿ: ಶಹೀದ್ ಅಶ್ಫಾಖುಲ್ಲಾ ಖಾನ್

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಡಿ: ಶಹೀದ್ ಅಶ್ಫಾಖುಲ್ಲಾ ಖಾನ್

- Advertisement -
- Advertisement -

“ವೋ ಜಿಸ್ಮ್ ಬೀ ಕ್ಯಾ ಜಿಸ್ಮ್ ಹೈ, ಜಿಸ್ಮೆ ನಾಹೋ ಖೂನ್-ಎ-ಜುನೂನ್, ಕ್ಯಾ ಲಡೇ ತೂಫಾನೋಂ ಸೆ, ಜೋ ಕಶ್ತಿ-ಎ-ಸಾಹಿಲ್ ಮೆ ಹೈ… ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ, ದೇಖ್ ನಾ ಹೈ ಝೋರ್ ಕಿತ್ನಾ ಬಾಝು-ಎ-ಖಾತಿಲ್ ಮೆ ಹೈ”….

ಜೈಲಿನ ಕೋಣೆಗಳಿಂದ ಕೇಳಿ ಬರುತ್ತಿದ್ದ ಈ ಕ್ರಾಂತಿ ಗೀತೆ ಬ್ರಿಟಿಷ್ ಪ್ರಭುತ್ವದ ಎದೆಯಲ್ಲಿ ಅದ್ಯಾವ ಪರಿ ಭಯ ಹುಟ್ಟಿಸಿತ್ತೆಂದರೆ ಜೀವದ ಗೆಳೆಯರಾಗಿದ್ದ ಆ ಇಬ್ಬರು ಕ್ರಾಂತಿಕಾರಿಗಳನ್ನು ದೂರದೂರದ ಸೆಲ್ ಗಳಿಗೆ ಹಾಕಿಬಿಟ್ಟರು. ಅವರೇ ಶಹೀದ್ ಅಶ್ಫಾಕುಲ್ಲಾಹ್ ಖಾನ್ ಮತ್ತು ಶಹೀದ್ ರಾಂ ಪ್ರಸಾದ್ ಬಿಸ್ಮಿಲ್.

ಅಶ್ಫಾಕುಲ್ಲಾಹ್ ಖಾನ್ ಹುಟ್ಟಿದ್ದು ಉತ್ತರ ಪ್ರದೇಶದ ಶಹಜಹಾನ್ ಪುರದ ಪ್ರತಿಷ್ಠಿತ ಶ್ರೀಮಂತ ಮನೆತನದಲ್ಲಿ. ತಂದೆಯ ಕಡೆಯವರು ಅಂತಹ ವಿದ್ಯಾವಂತರೇನಲ್ಲ. ತಾಯಿ ಮಝ್ ಹರುನ್ನೀಸಾರ ಕಡೆಯಲ್ಲಿ ಎಲ್ಲರೂ ಆ ಕಾಲಕ್ಕೆ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿದ್ದರು. ಅವರ ಕುಟುಂಬಿಕರಲ್ಲಿ ಮ್ಯಾಜಿಸ್ಟ್ರೇಟ್ ಗಳೂ ಇದ್ದರು. ಅವೆಲ್ಲವೂ ಬ್ರಿಟಿಷ್ ಸರಕಾರದ ಹುದ್ದೆಗಳಾಗಿದ್ದವು. ತಂದೆ ಶಫೀಕುರ್ರಹ್ಮಾನ್ ಪೋಲೀಸ್ ಇಲಾಖೆಯಲ್ಲಿದ್ದರು.

ಗಾಂಧೀಜಿ ಅಸಹಕಾರ ಚಳವಳಿಗೆ ಕರೆಕೊಟ್ಟಾಗ ಅಶ್ಫಾಕ್ ಇನ್ನೂ ವಿದ್ಯಾರ್ಥಿಯಾಗಿದ್ದರು. ಅದು ಅವರ ಮೇಲೆ ಗಾಢ ಪ್ರಭಾವ ಬೀರಿತು. ತನ್ನ ಕುಟುಂಬಿಕರು ಬ್ರಿಟಿಷ್ ಸರಕಾರದ ಹುದ್ದೆಗಳಲ್ಲಿರುವುದು ಅಶ್ಫಾಕ್ ರಿಗೆ ಒಂದು ಕಪ್ಪು ಚುಕ್ಕೆಯಂತೆ ಅನಿಸುತ್ತಿತ್ತು. ಸುಶಿಕ್ಷಿತ ಕುಟುಂಬದ ಹಿನ್ನೆಲೆಯವರಾದ ಅವರ ಹೆತ್ತವರು ತಮ್ಮ ಕಿರಿಯ ಮಗ ಅಶ್ಫಾಕ್ ನನ್ನು ಪ್ರತಿಷ್ಟಿತ ಕಾನ್ವೆಂಟ್ ಶಾಲೆಯೊಂದಕ್ಕೆ ಸೇರಿಸಿದ್ದರು. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಬ್ರಿಟಿಷ್ ಪ್ರಭುತ್ವದ ವಿರುದ್ಧ ಮಾತನಾಡುತ್ತಿದ್ದ ಅವರನ್ನು ‘ಮಕ್ಕಳ ತಲೆಯಲ್ಲಿ ಸರಕಾರದ ವಿರುದ್ಧ ಭಾವನೆಗಳನ್ನು ಬಿತ್ತುತ್ತಾನೆಂದು’ ಶಾಲೆಯಿಂದ ಹೊರಹಾಕಲಾಗಿತ್ತು. ಗಾಂಧೀಜಿ ಅಸಹಕಾರ ಚಳವಳಿಗೆ ಕರೆಕೊಟ್ಟಾಗ ಅಶ್ಫಾಕ್ ತನ್ನ ಸಹಪಾಠಿಗಳೊಂದಿಗೆ ಬೀದಿಗಿಳಿದು ಸಂಗ್ರಾಮದ ಕೆಲಸಗಳಲ್ಲಿ ಸಕ್ರಿಯರಾದರು.

ಅದಾಗಲೇ ಕ್ರಾಂತಿಕಾರಿ ಪುಸ್ತಕಗಳು ಅಶ್ಫಾಕ್ ರ ಸಂಗಾತಿಗಳಾಗಿದ್ದವು. ಉರ್ದು ಮತ್ತು ಸಂಸ್ಕೃತದಲ್ಲಿ ಒಳ್ಳೆಯ ಪಾಂಡಿತ್ಯ ಪಡೆದಿದ್ದ ಅಶ್ಫಾಕ್ ಉರ್ದುವಿನಲ್ಲಿ ಹಲವಾರು ಕವಿತೆಗಳನ್ನು ಬರೆಯುತ್ತಿದ್ದರು. ಅಸಹಕಾರ ಚಳವಳಿ ಚೌರಿ ಚೌರಾದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದರಿಂದ ಗಾಂಧೀಜಿ ಅಸಹಕಾರ ಚಳವಳಿಯನ್ನು ಹಿಂದೆಗೆದರು. ಬಿಸಿರಕ್ತದ ತರುಣರಾದ ಅಶ್ಫಾಕ್ ಅದರಿಂದಾಗಿ ಕ್ರುದ್ಧರಾದರು. ಬ್ರಿಟಿಷ್ ಪ್ರಭುತ್ವದ ವಿರುದ್ಧ ಇನ್ನು ಸಶಸ್ತ್ರ ಹೋರಾಟವೇ ಸರಿಯಾದ ಮಾರ್ಗ ಎಂದು ನಿರ್ಧರಿಸಿ ಕ್ರಾಂತಿಕಾರಿ ತಂಡದ ತಲಾಶೆಯಲ್ಲಿದ್ದರು. ಅಶ್ಫಾಕರಿಗಿಂತ ಮೂರು ವರ್ಷ ಹಿರಿಯರಾದ ರಾಂ ಪ್ರಸಾದ್ ಬಿಸ್ಮಿಲ್ ಅದಾಗಲೇ ಬ್ರಿಟಿಷ್ ಪ್ರಭುತ್ವದ ವಿರುದ್ಧದ ಸಿಡಿದೆದ್ದು ಪ್ರಸಿದ್ಧರಾಗಿದ್ದರು. ಅವರು ಅಶ್ಫಾಕ್ ರ ಹುಟ್ಟೂರು ಶಹಜಹಾನ್ ಪುರದವರೇ ಆಗಿದ್ದರೂ ಆಗಾಗ ಭೂಗತರಾಗಬೇಕಾದ ಅನಿವಾರ್ಯತೆಯಿತ್ತು.

ಶಹಜಹಾನ್ ಪುರದಲ್ಲಿ ನಡೆಯಲಿರುವ ಗುಪ್ತ ಸಭೆಯೊಂದಕ್ಕೆ ಬಿಸ್ಮಿಲ್ ಬರುವ ವಿಚಾರ ಅಶ್ಫಾಕರಿಗೆ ತಿಳಿಯಿತು. ಅಂದಿನ ಆ ಗುಪ್ತ ಸಭೆಗೆ ಹೋಗಿ ರಾಂ ಪ್ರಸಾದ್ ಬಿಸ್ಮಿಲ್ ರ ಜೊತೆ ಅಶ್ಫಾಕ್ ಸೇರಿಕೊಂಡರು. ಅವರು ಮೊದಮೊದಲು ಒಂದು ವಿಧದಲ್ಲಿ ಗುರು ಶಿಷ್ಯರಂತಿದ್ದರು. ಆ ಬಳಿಕ ಅವರ ಸ್ನೇಹ ಗಾಢವಾಯಿತು. ಅದೆಷ್ಟು ಗಾಢವಾಯಿತೆಂದರೆ ಒಮ್ಮೆ ಅಶ್ಫಾಕ್ ವಿಪರೀತ ಜ್ವರದಿಂದ ಬಳಲುತ್ತಿದ್ದರು. ಆಗ ನಿದ್ದೆಯಲ್ಲಿ ‘ರಾಂ, ಮೇರೇ ಪ್ಯಾರೇ ರಾಂ’ ಎಂದು ನರಳುತ್ತಿದ್ದರಂತೆ. ಇದನ್ನು ಕೇಳಿಸಿಕೊಂಡ ಹೆತ್ತವರು ಪ್ರಶ್ನಿಸಿದಾಗ “ನಾನು ನನ್ನ ಪ್ರಾಣ ಸ್ನೇಹಿತ ರಾಂ ಪ್ರಸಾದನ ಹೆಸರು ಕರೆಯುತ್ತಿದ್ದೇನೆ” ಎಂದರು. ಕೂಡಲೇ ಅವರು ರಾಂ ಪ್ರಸಾದ್ ಬಿಸ್ಮಿಲ್ ರನ್ನು ಕರೆಸಿದರು. ರಾಂ ಪ್ರಸಾದ್ ಬಂದು ಅಶ್ಫಾಕರನ್ನು ಅಪ್ಪಿ ಹಿಡಿದು ಅತ್ತರಂತೆ.

ಬ್ರಿಟಿಷ್ ಪ್ರಭುತ್ವದ ವಿರುದ್ಧ ಇನ್ನು ಸಶಸ್ತ್ರ ಹೋರಾಟವೇ ಸರಿಯಾದ ಮಾರ್ಗವೆಂದು ನಿರ್ಧರಿಸಿದ್ದ ಅಶ್ಫಾಕ್, ಬಿಸ್ಮಿಲ್ ಮತ್ತವರ ಸಂಗಡಿಗರ ಕೈಯಲ್ಲಿ ಶಸ್ತ್ರಾಸ್ತ್ರ ಖರೀದಿಸಲು ಕಾಸಿರಲಿಲ್ಲ. ಹೀಗಿರಲು ದುಡ್ಡು ಸಂಗ್ರಹಿಸಲು ಏನು ಮಾಡುವುದಪ್ಪಾ ಎಂಬ ಚಿಂತೆಯಲ್ಲಿದ್ದಾಗ ಅವರಿಗೆ ಲಕ್ನೋದಿಂದ ಲಾಹೋರ್ ಗೆ ಹೋಗುವ ರೈಲಿನಲ್ಲಿ ಬ್ರಿಟಿಷ್ ಪ್ರಭುತ್ವ ದುಡ್ಡು ಸಾಗಿಸುತ್ತದೆಯೆಂಬ ಮಾಹಿತಿ ಸಿಕ್ಕಿತ್ತು. ಅವರು ಆ ರೈಲನ್ನು ದರೋಡೆ ಮಾಡುವುದೆಂದು ತೀರ್ಮಾನಿಸಿದರು. ಆದರೆ ಧರ್ಮನಿಷ್ಠ ಕುಟುಂಬದ ಹಿನ್ನೆಲೆಯವರಾದ ಅಶ್ಫಾಕ್ ರಿಗೆ ದರೋಡೆಯ ವಿಚಾರದಲ್ಲಿ ಮೊದಲು ಸಹಮತವಿರಲಿಲ್ಲ.

1925ರ ಅಗಸ್ಟ್ ಎಂಟರಂದು ಬಿಸ್ಮಿಲ್, ಅಶ್ಫಾಕ್ ನೇತೃತ್ವದ ತಂಡ ಗುಪ್ತ ಸಭೆ ಸೇರಿದಾಗ ಅಶ್ಫಾಕ್ ಮೊದಲು ದರೋಡೆಯ ವಿಚಾರದಲ್ಲಿ ಸಹಮತ ತೋರಲಿಲ್ಲ. ಆಗ ಅವರ ತಂಡದಲ್ಲಿದ್ದ ಇತರರು ನಾವು ಈ ಮುಸಲ್ಮಾನನನ್ನು ನಮ್ಮ ತಂಡದಲ್ಲಿ ಸೇರಿಸಿದ್ದೇ ತಪ್ಪಾಯಿತು ಎಂದು ಅಸಹನೆ ವ್ಯಕ್ತಪಡಿಸಿದರು. ಆ ರೀತಿ ಅಸಹನೆ ತೋರಿದವರ ಮೇಲೆ ರಾಂ ಪ್ರಸಾದ್ ಗರಂ ಆದರು.

ಆ ಬಳಿಕ ಬಿಸ್ಮಿಲ್ ತನ್ನ ಪ್ರಾಣ ಸ್ನೇಹಿತನಿಗೆ ಮನವರಿಕೆ ಮಾಡುತ್ತಾರೆ… “ಅಶ್ಫಾಕ್… ನಾವು ಲೂಟಿ ಬಯಸಿರುವುದು ಬ್ರಿಟಿಷರ ವಶದಲ್ಲಿರುವ ನಮ್ಮದೇ ನೆಲದ ಸೊತ್ತನ್ನು.. ಅವರು ನಮ್ಮಿಂದ ಕೊಳ್ಳೆ ಹೊಡೆದುದರ ಒಂದು ಅತೀ ಸಣ್ಣ ಅಂಶವೊಂದನ್ನು ಮಾತ್ರ.. ಅದೂ ಯಾಕಾಗಿ.. ನಮ್ಮ ಸ್ವಂತ ಲಾಭಕ್ಕಾಗಿಯೇ..? ನಮ್ಮ ಮಾತೃಭೂಮಿಯನ್ನು ಅವರ ಕೈಯಿಂದ ವಿಮೋಚನೆಗೊಳಿಸುವ ಏಕೈಕ ಉದ್ದೇಶಕ್ಕಾಗಿ.. ಇದರಲ್ಲಿ ಪುಣ್ಯವಲ್ಲದೇ ಅಪರಾಧವೇನಿದೆ..?”…

ಬಿಸ್ಮಿಲ್ಲ ಅವರ ಮಾತುಗಳು ನಿಧಾನಕ್ಕೆ ಅಶ್ಫಾಕ್ ರ ಹೃದಯಕ್ಕಿಳಿಯಿತು. ಆಗ ಅಶ್ಫಾಕ್ ತನ್ನ ವಿರುದ್ಧ ಮತ್ತು ತನ್ನ ಧರ್ಮದ ವಿರುದ್ಧ ಅಸಹನೆ ತೋರಿದ ಸಂಗಾತಿಗಳನ್ನುದ್ದೇಶಿಸಿ, “ಈ ದೇಶಕ್ಕಾಗಿ ನಮ್ಮ ತಂಡದ ಮೊದಲ ಹುತಾತ್ಮ ಮುಸಲ್ಮಾನ ಅಶ್ಫಾಕ್ ಆಗಲಿದ್ದಾನೆ.. ಇಂಶಾ ಅಲ್ಲಾಹ್” ಎಂದು ಶಪಥ ಮಾಡಿದರು.

1925ರ ಅಗಸ್ಟ್ ಒಂಬತ್ತರಂದು ಲಕ್ನೋದಿಂದ ಲಾಹೋರಿಗೆ ಹೊರಟ ರೈಲನ್ನು ಕಾಕೋರಿಯಲ್ಲಿ ದರೋಡೆ ಮಾಡಿದರು. ಈ ಘಟನೆ ಬ್ರಿಟಿಷ್ ಪ್ರಭುತ್ವದ ಎದೆ ನಡುಗಿಸಿತು. ಎಲ್ಲಾ ಕ್ರಾಂತಿಕಾರಿಗಳು ತಪ್ಪಿಸಿಕೊಂಡು ಭೂಗತರಾದರು. ಕೆಲವೇ ದಿನಗಳಲ್ಲಿ ಒಬ್ಬೊಬ್ಬರನ್ನೇ ಬ್ರಿಟಿಷ್ ಪ್ರಭುತ್ವ ಹಿಡಿದು ಕಂಬಿಯೊಳಗೆ ತಳ್ಳಿತು. ಅಶ್ಫಾಕ್ ಬಿಹಾರಕ್ಕೆ ಪರಾರಿಯಾದರು.

1925 ಡಿಸೆಂಬರ್ 24ರಂದು ಅಲ್ಲಿಂದ ದೆಹಲಿಗೆ ಹೋದರು. ಅಲ್ಲಿ ಸಹಾಯಕ್ಕಾಗಿ ಗೆಳೆಯನೊಬ್ಬನನ್ನು ಸಂಪರ್ಕಿಸಿದರು. ಅಶ್ಫಾಕ್ ವಿದೇಶಕ್ಕೆ ಪರಾರಿಯಾಗಿ ಅಲ್ಲಿ ಇಂಜಿನಿಯರಿಂಗ್ ಓದಿ ಶಸ್ತ್ರಾಸ್ತ್ರ ತಯಾರಿಕೆಯನ್ನು ಕಲಿಯಬೇಕೆಂದಿದ್ದರು. ಆದರೆ ಅಶ್ಫಾಕ್ ಸಹಾಯಕ್ಕೆಂದು ಯಾವ ಗೆಳೆಯನನ್ನು ಸಂಪರ್ಕಿಸಿದ್ದರೋ ಆತ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದ. ಅಂದರೆ ಬ್ರಿಟಿಷ್ ಪ್ರಭುತ್ವ ಹುಡುಕುತ್ತಿದ್ದ “ಮೋಸ್ಟ್ ವಾಂಟೆಡ್” ಅಶ್ಫಾಕ್ ರನ್ನು ಹಿಡಿಸಿದ.

ಕಾಕೋರಿ ದರೋಡೆಯ ಎಲ್ಲಾ ಆರೋಪಿಗಳೂ ಜೈಲು ಪಾಲಾದರು. ಅದರಲ್ಲಿ ಅಶ್ಫಾಕ್ ರನ್ನು ಪ್ರಮುಖ ಆರೋಪಿಯಾಗಿಸಲಾಯಿತು. ಅಶ್ಫಾಕ್ ರ ಸಹೋದರ ಅಡ್ವಕೇಟ್ ರಿಯಾಸತುಲ್ಲಾ ಖಾನ್ ಕ್ರಾಂತಿಕಾರಿಗಳ ಪರವಾಗಿ ನ್ಯಾಯಾಲಯಗಳಲ್ಲಿ ವಾದಿಸಿದರು. ಆದರೆ ಬ್ರಿಟಿಷ್ ಪ್ರಭುತ್ವ ಅದಾಗಲೇ ಅಶ್ಫಾಕ್, ಬಿಸ್ಮಿಲ್ ಮತ್ತಿತರರನ್ನು ಗಲ್ಲಿಗೇರಿಸುವ ತೀರ್ಮಾನ ಮಾಡಿಯಾಗಿತ್ತು. ಆದರೂ ಬಿಡುಗಡೆಗೊಳಿಸುವ ಪ್ರಯತ್ನ ಭರದಿಂದ ಸಾಗಿತ್ತು. ತನ್ನ ಕಿರಿಯ ಮಗನಿಗೆ ಗಲ್ಲಾಗುತ್ತದೆಂದು ತಾಯಿ ಮಝ್ ಹರುನ್ನಿಸಾ ತೀವ್ರ ಚಿಂತಿತರಾದರು.

ಅಶ್ಫಾಕ್ ಜೈಲಿನಿಂದ ಅಮ್ಮನಿಗೆ ಬರೆದ ಪತ್ರದಲ್ಲೂ ಸಾವಿನ ಬಗ್ಗೆ ನಿರ್ಭೀತರಾಗಿ ಬರೆದಿದ್ದರು ಮತ್ತು ತನಗಾಗಿ ದುಆ ಮಾಡುವಂತೆ ತಾಯಿಗೆ ಕೋರಿದ್ದರು. ಅಶ್ಫಾಕ್ ರ ಕುಟುಂಬಿಕರು ಮತ್ತಿತರ ಹಿರಿಯ ಹೋರಾಟಗಾರರು ಬ್ರಿಟಿಷ್ ಪ್ರಭುತ್ವಕ್ಕೆ ಪರಿ ಪರಿಯಾಗಿ ಬೇಡಿಕೊಂಡರು. ಕೊನೆಯಲ್ಲಿ ಅಶ್ಫಾಕ್ ಕುಟುಂಬ ಸ್ನೇಹಿತ ವಕೀಲರೊಬ್ಬರು ಜೈಲಿನಲ್ಲಿ ಅವರನ್ನು ಭೇಟಿಯಾಗಿ ಮಾಫಿನಾಮಾ ಬರೆಯುವಂತೆ ಕೋರಿದರು. ಕ್ರುದ್ಧರಾದ ಅಶ್ಫಾಕ್ “ನಾನು ಬ್ರಿಟಿಷ್ ಪ್ರಭುತ್ವದೊಂದಿಗೆ ಕ್ಷಮೆ ಯಾಚಿಸಬೇಕೇ…?, ಕ್ಷಮೆಯಾಚಿಸುವುದರ ಅರ್ಥವೇನು..?, ನಾನು ತಪ್ಪು ಮಾಡಿದ್ದೇನೆಂದಲ್ಲವೇ…?, ನನ್ನ ಮಾತೃಭೂಮಿಯ ವಿಮೋಚನೆಗಾಗಿ ನಾನು ಮತ್ತು ನನ್ನ ಸ್ನೇಹಿತರು ಮಾಡಿದ ಕೆಲಸ ಅಪರಾಧವೇ…?, ಅವರೊಂದಿಗೆ ಮಾಫಿ ಕೇಳಿ ಪ್ರಾಣಬಿಕ್ಷೆ ಪಡೆಯುವುದಕ್ಕಿಂತ ಓರ್ವ ಕ್ರಾಂತಿಕಾರಿಗೆ ವೀರ ಮರಣವೇ ಲೇಸು…” ಎಂದು ಅವರನ್ನು ಅಲ್ಲಿಂದ ವಾಪಾಸು ಕಳುಹಿಸಿದರು.

1927 ಡಿಸೆಂಬರ್ ಹತ್ತೊಂಬತ್ತರಂದು ಅಶ್ಫಾಕುಲ್ಲಾಹ್ ಖಾನ್, ರಾಂ ಪ್ರಸಾದ್ ಬಿಸ್ಮಿಲ್, ರಾಜೇಂದ್ರ ಲಾಹಿರಿ, ಠಾಕೂರ್ ರೋಶನ್ ಸಿಂಗರನ್ನು ಗಲ್ಲಿಗೇರಿಸಲಾಯಿತು. ಇತರ ಕ್ರಾಂತಿಕಾರಿಗಳಲ್ಲಿ ಕೆಲವರಿಗೆ ಕಾಲಾಪಾನಿ, ಮತ್ತೆ ಕೆಲವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
1925 ಆಗಸ್ಟ್ ಎಂಟರಂದು ಕ್ರಾಂತಿಕಾರಿಗಳ ಗುಪ್ತ ಸಭೆಯಲ್ಲಿ ಗರ್ಜಿಸಿದಂತೆ ಆ ತಂಡದ ಮೊದಲ ಹುತಾತ್ಮ ಅಶ್ಫಾಕುಲ್ಲಾಹ್ ಖಾನ್ ಅವರೇ ಆಗಿಬಿಟ್ಟರು.

ಗಲ್ಲಿಗೇರಿಸಲು ಕರೆತಂದು ಗಲ್ಲು ಪೀಠದಲ್ಲಿ ನಿಲ್ಲಿಸಿದಾಗ ಕೇವಲ ಇಪ್ಪತ್ತೇಳರ ಹರೆಯದ ಆ ಕ್ರಾಂತಿಕಾರಿ ಅಶ್ಪಾಕ್ ನಗು ನಗುತ್ತಾ ನೇಣಿನ ಹಗ್ಗವನ್ನು ಮುತ್ತಿಕ್ಕಿ ‘ಲಾ ಇಲಾಹ ಇಲ್ಲಲ್ಲಾಹ್.. ಮುಹಮ್ಮದುರ್ರಸೂಲುಲ್ಲಾಹ್ ಎಂದು ನೇಣುಗಂಬ ಏರಿದರು.
****

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ಇದನ್ನೂ ಓದಿ: ಸರ್ದಾರ್ ಉದಮ್: ಇದು ಶೂಜಿತ್ ನ ಗೆಲುವು ಮತ್ತು ಪ್ರಜಾಪ್ರಭುತ್ವದ ಗೆಲುವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...