ಟಿಪ್ಪುಸುಲ್ತಾನರ ವಂಶಜರಾದ ನೂರ್ ಇನಾಯತ್‍ಖಾನಳ ಸಾಹಸಗಾಥೆ ನಿಮಗೆ ಗೊತ್ತೆ?

ವೈಚಾರಿಕ ಚರಿತ್ರೆ ಕೆಲವೊಮ್ಮೆ ಊಹಾತೀತವಾಗಿ ಚಲಿಸಿಬಿಡುತ್ತದೆ. ಇದಕ್ಕೆ ನೂರ್ ಇನಾಯತ್‍ಖಾನಳ (1914-1944) ಬಾಳುವೆ ಸಾಕ್ಷಿ. ಟಿಪ್ಪುಸುಲ್ತಾನರ ವಂಶಜರಾದ ಸೂಫಿದಾರ್ಶನಿಕನ ಮಗಳಾದ ಈಕೆ, ರಷ್ಯಾದಲ್ಲಿ ಹುಟ್ಟಿದವಳು; ಎರಡನೇ ಮಹಾಯುದ್ಧದಲ್ಲಿ ಇಂಗ್ಲೆಂಡಿನ ಗೂಢಚಾರಿಣಿಯಾಗಿ ಫ್ರಾನ್ಸಿಗೆ ಹೋಗಿ, ಜರ್ಮನಿಯ ನಾಜಿಗಳ ಕೈಯಲ್ಲಿ ಸಿಕ್ಕು, ಡಕಾವ್ ಕಾನ್ಸಂಟ್ರೇಶನ್ ಕ್ಯಾಂಪಿನಲ್ಲಿ ಜೀವಂತ ಸುಟ್ಟುಹೋದವಳು.

ಅವಳ ಪೂರ್ವಜ ಟಿಪ್ಪು, ಬ್ರಿಟಿಷರನ್ನು ಆಜನ್ಮವೈರಿಗಳೆಂದು ಪರಿಭಾವಿಸಿ ಜೀವನವಿಡೀ ಅವರ ವಿರುದ್ಧ ಹೋರಾಡುತ್ತ, ರಣರಂಗದಲ್ಲಿ ನೆತ್ತರು ಹರಿಸುತ್ತ ಪ್ರಾಣಬಿಟ್ಟಿದ್ದನು. ಅವನ ವಂಶದ ಕುಡಿಯೊಂದು ಒಂದೂವರೆ ಶತಮಾನದ ನಂತರ, ಇದೇ ಬ್ರಿಟಿಷರ ಪ್ರತಿನಿಧಿಯಾಗಿ ಹೋಗಿ, ಸಜೀವ ದಹನವಾಯಿತು. ಟಿಪ್ಪುವನ್ನು ಕೊಂದು ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ರಹದಾರಿ ಮಾಡಿಕೊಂಡ ಬ್ರಿಟಿಷರೇ, ಟಿಪ್ಪುವಿನ ವಂಶದ ಕುಡಿಯನ್ನು ತಮ್ಮ ಯುದ್ಧದಲ್ಲಿ ಉಪಕರಣವಾಗಿ ಬಳಸಿದರು. ಚರಿತ್ರೆಯ ವೈರುಧ್ಯವೆಂದರೆ ಇದೇ ಇರಬೇಕು. ಈ ವೈರುಧ್ಯವನ್ನು ಕೊಲ್ಕತ್ತೆಯಲ್ಲಿರುವ ಟಿಪ್ಪುಸುಲ್ತಾನ ಮಸೀದಿಯಲ್ಲಿ ಕೂಡ ಕಾಣಬಹುದು. ಈ ಮಸೀದಿಯನ್ನು ಬ್ರಿಟಿಷರು ಟಿಪ್ಪು ವಂಶಜರಿಗೆ ಕೊಟ್ಟ ಪರಿಹಾರದ ಹಣದಲ್ಲಿ ಕಟ್ಟಲಾಯಿತು. ಅದೂ ಬ್ರಿಟಿಷ್ ವಾಸ್ತುಶಿಲ್ಪದ ವಿನ್ಯಾಸದಲ್ಲಿ!

ಒಂದೇ ಕುಟುಂಬದಲ್ಲಿ ಹುಟ್ಟಿದ ಆದರೆ ಬೇರೆಬೇರೆ ಕಾಲಘಟ್ಟಕ್ಕೆ ಸೇರಿದ ಟಿಪ್ಪು ಮತ್ತು ನೂರ್ ಇಬ್ಬರಲ್ಲೂ ಒಂದು ವಿಷಯದಲ್ಲಿ ಸಮಾನತೆಯಿದೆ. ಅದೆಂದರೆ, ಟಿಪ್ಪು ಹಾಗೂ ನೂರ್, ವಸಾಹತುಶಾಹಿ ಮತ್ತು ಫ್ಯಾಸಿಸಂ ಎಂಬ ನಾಗರಿಕ ಸಮಾಜ ಕಂಡ ಎರಡು ರೋಗಗ್ರಸ್ತ ರಾಜಕೀಯ ವ್ಯವಸ್ಥೆಗಳ ವಿರುದ್ಧ ಸೆಣಸಾಡಿದವರು. ಮನುಕುಲಕ್ಕೆ ಮಹಾಕಂಟಕವಾಗಿದ್ದ ಫ್ಯಾಸಿಸಂ ಮುಂದೆ ವಸಾಹತುಶಾಹಿಯು ಆಮೇಲೆ ವಿಚಾರಿಸಿಕೊಳ್ಳಬಹುದಾದ, ಚಿಕ್ಕಶತ್ರುವಾಗಿ ಕಾಣಿಸಿತು. ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಕಾಂಗ್ರೆಸ್, ಸ್ವತಃ ಫ್ಯಾಸಿಸಂ ವಿರುದ್ಧ ಹೋರಾಡಲು ಬ್ರಿಟಿಷರ ಜತೆ ಕೈಜೋಡಿಸಬೇಕೆಂದು ಕರೆಗೊಟ್ಟಿದ್ದು ಇದೇ ಹಿನ್ನೆಲೆಯಲ್ಲಿ. ಇದರ ಭಾಗವಾಗಿ ನೂರಳ ಸೈನಿಕ ಸೇವೆಯನ್ನು ಗಮನಿಸಬೇಕು.

ಇಂತಹ ಅಪರೂಪದ ಮತ್ತು ಬಹಳ ಜನರಿಗೆ ತಿಳಿಯದ ವ್ಯಕ್ತಿಯಾದ ನೂರ್ ಬಗ್ಗೆ, ಕನ್ನಡದ ಯುವಲೇಖಕರಾದ ಚಂದ್ರಶೇಖರ ಮಂಡೆಕೋಲು ಅವರು ವ್ಯಾಪಕವಾದ ಹುಡುಕಾಟ ಮಾಡಿ ಜೀವನಚರಿತ್ರೆಯನ್ನು ರಚಿಸಿದ್ದಾರೆ. ಅದರ ಹಸ್ತಪ್ರತಿಯನ್ನು ಓದುತ್ತ ಅದರ ವಿಶಿಷ್ಟತೆಗಳನ್ನು ಓದುಗರಿಗೆ ಹಂಚಿಕೊಳ್ಳಬೇಕು ಅನಿಸಿತು. ನನಗೆ ನೂರಳ ತಂದೆ ಹಜರತ್ ಇನಾಯತ್ ಖಾನರ ಬಗ್ಗೆ ತುಸು ಗೊತ್ತಿತ್ತು. ಪಂಡಿತ ರವಿಶಂಕರರ ಹಾಗೆ, ನುಸ್ರತ್‍ಫತೇ ಅಲಿಖಾನರ ಹಾಗೆ ಇನಾಯತ್ ಖಾನ್ (1882-1927) ಭಾರತದ ಉಪಖಂಡದ ಸಂಗೀತವನ್ನು ಪಶ್ಚಿಮದ ಜತೆ ಸಮ್ಮಿಲನಗೊಳಿಸುವ ಕಾರ್ಯ ಮಾಡಿದವರು. ಅವರಿಗೆ ಸೂಫೀ ದೀಕ್ಷೆ ಕೊಟ್ಟವರು ಹೈದರಾಬಾದಿನ ಇಬ್ಬರು ಸೂಫಿಸಂತರು.

ಹಜರತ್ ಇನಾಯತ್ ಖಾನ್

ಹುಮನಾಬಾದಿನ ಮಾಣಿಕಪ್ರಭುಗಳ ಗದ್ದಿಗೆಗೆ ಇನಾಯತ್ ಖಾನರು ಬಂದುಹೋಗುತ್ತಿದ್ದರು. ನಾನು ದೆಹಲಿಗೆ ಹೋದಾಗಲೆಲ್ಲ ಹಜರತ್ ನಿಜಾಮುದ್ದೀನ್ ದರ್ಗಾದ ಹಿಂಬದಿಯಲ್ಲಿರುವ ಅವರ ದರ್ಗಾಕ್ಕೆ ಹೋಗುವುದುಂಟು. ಅವರ ಮೇಲೆ ಲೇಖನವನ್ನೂ ಪ್ರಕಟಿಸಿದ್ದುಂಟು. ಆದರೆ ಅವರ ಮಗಳು ನೂರ್ ಇನಾಯತ್ ಖಾನರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಮಂಡೆಕೋಲು ಅವರ ವಿಸ್ತಾರವಾದ ಸಂಶೋಧನೆಯ ಫಲಶೃತಿಯಾಗಿರುವ ಈ ಕೃತಿ, ನೂರಳ ಚರಿತ್ರೆಯನ್ನು ತಿಳಿಸಿಕೊಟ್ಟಿತು. ನೂರಳ ಈ ಜೀವನ ಚರಿತ್ರೆಯು ನಾಲ್ಕು ಆಯಾಮಗಳನ್ನು ಒಳಗೊಂಡಿದೆ.

ಮೊದಲನೆಯದು- ಕುಟುಂಬಕೇಂದ್ರಿತ ಆಯಾಮ. ಈ ಭಾಗವು ನೂರ್ ಇನಾಯತ್ ಖಾನರ ಕುಟುಂಬ, ಖಾನರು ಸೂಫಿ ದಾರ್ಶನಿಕರೂ ಸಂಗೀತಗಾರರೂ ಆಗಿ ರೂಪುಗೊಂಡ ಬಗೆ, ಮಾಡಿದ ದೇಶಾಂತರಗಳ ತಿರುಗಾಟ, ಮಕ್ಕಳನ್ನು ಸರ್ವಧರ್ಮದ ಸಮಭಾವದಲ್ಲಿ ಬೆಳೆಸುವ ಕಥನವನ್ನು ಒಳಗೊಂಡಿದೆ.

ಎರಡನೆಯದು- 20ನೇ ಶತಮಾನದ ಮೊದಲ ಭಾಗದಲ್ಲಿ ಸಂಭವಿಸಿದ ವಸಾಹತುಶಾಹಿ ಕಾಲಘಟ್ಟದ ಯುದ್ಧಗಳ ಕಥೆ. ಇಲ್ಲಿ ಫ್ಯಾಸಿಸಂ ವಿರೋಧಿಸುವ ಜಾಗತಿಕ ಚಳುವಳಿಯಲ್ಲಿ ಭಾಗವಹಿಸುವ ಇಂಗ್ಲೆಂಡಿನ ಪ್ರಜೆಯಾದ ನೂರ್ ದಾರುಣವಾಗಿ ಕೊಲೆಯಾಗುವ ಭಾಗ ಬರುತ್ತದೆ. ಇಲ್ಲಿ ನೂರಳ ಜೀವನಚರಿತ್ರೆಯು ದಾರುಣವೂ ಮೈನವಿರೇಳಿಸುವ ಘಟನೆಗಳಿಂದಲೂ ಕೂಡಿದ್ದು, ಪತ್ತೇದಾರಿ ಕಥೆಯಿದ್ದಂತಿದೆ. ಇದಕ್ಕೆ ಕಾರಣ, ಆಕೆ ಗೂಢಚಾರಿಣಿಯಾಗಿ ಅಪಾಯಕರವಾದ ನಾಜಿಗಳ ನಡುವೆ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದು. ಅದು ಯಾವುದೇ ಕ್ಷಣದಲ್ಲಿ ಪ್ರಾಣಹೋಗುವ ಕಾರ್ಯದಲ್ಲಿ ಮೂವತ್ತು ವರ್ಷದ ಈ ಸುಂದರಿ ಪ್ರಾಣತೆತ್ತಳು.

ಈಚೆಗೆ ಇಂಗ್ಲೆಂಡು ಆಕೆಯನ್ನು ಹುತಾತ್ಮಳೆಂದು ಕರೆದು ಗೌರವಿಸಿತು. ಆಕೆಯ ಹೆಸರಲ್ಲಿ ಸ್ಮಾರಕವನ್ನೂ ನಿರ್ಮಿಸಿತು. ಈ ಗೌರವವನ್ನು ಬ್ರಿಟಿಷರು ಹೂಡಿದ ಯುದ್ಧಗಳಲ್ಲಿ ಹಲವಾರು ದೇಶಗಳಿಗೆ ಹೋಗಿ ಮಡಿದ ಭಾರತೀಯ ಸೈನಿಕರಿಗೆ ಸಿಕ್ಕಿಲ್ಲ. ಗೌರವ ಸಿಕ್ಕಿರಲಿ ಸಿಗದಿರಲಿ, ವಸಾಹತುಗಳಿಗೆ ಸೇರಿದ ಜನ ವಸಾಹತುಶಾಹಿ ಹೂಡುವ ಯುದ್ಧಗಳಲ್ಲಿ ಉಪಕರಣವಾಗಿ ಬಳಕೆಯಾದ ವಾಸ್ತವವನ್ನು ಅಲ್ಲಗಳೆಯುವಂತಿಲ್ಲ.

ನೂರ್ ಫ್ಯಾಸಿಸಂ ವಿರುದ್ಧ ಹೋರಾಡುವ ದಿಟ್ಟತನ ತೋರಿದಳು. ಆದರೆ ಅವಳು ಬ್ರಿಟಿಷರಿಗೆ ಉಪಕರಣವಾಗಿ ಕೂಡ ಬಳಕೆಯಾದವಳು. ಅವಳ ಕೌಟುಂಬಿಕ ತಬ್ಬಲಿತನ ಬಡತನ ವಲಸೆ ಅಭದ್ರತೆಗಳು ಕೂಡ ಈ ಅಪಾಯಕಾರಿ ಕೆಲಸಕ್ಕೆ ಆಕೆಯನ್ನು ದೂಡಿದವು. ಹೀಗಾಗಿ ನೂರಳ ಜೀವನ ಚರಿತ್ರೆಯು, ಸೂಫಿ ಸಂಗೀತಗಾರನ ಕುಟುಂಬವೊಂದರ ಏಳುಬೀಳುಗಳನ್ನು 19-20ನೇ ಶತಮಾನದ ಜಗತ್ತಿನ ಏಳುಬೀಳಿನ ವಿದ್ಯಮಾನಗಳೊಂದಿಗೆ ಬೆಸೆದುಕೊಂಡಿದೆ. ಈ ಏಳುಬೀಳುಗಳಲ್ಲಿ ಮೈಸೂರು ಒಡೆಯರ ಹಾಗೂ ರಾಜಸ್ಥಾನದ ರಾಜರ ದೇಶೀಚರಿತ್ರೆಯೂ ಸೇರಿಕೊಳ್ಳುತ್ತದೆ. ಮೈಸೂರಿನಿಂದ ಶುರುವಾಗಿ ಅಮೆರಿಕ ರಷ್ಯ ಇಂಗ್ಲೆಂಡ್ ಫ್ರಾನ್ಸ್ ಹೀಗೆ ಸುತ್ತಾಡುವ ಈ ಚರಿತ್ರೆಯು, ಅಂತಾರಾಷ್ಟ್ರೀಯ ಆಯಾಮವುಳ್ಳ ಕರ್ನಾಟಕದ ಚರಿತ್ರೆಯನ್ನು ಕಟ್ಟಿಕೊಡುತ್ತದೆ.

ಮೂರನೆಯದು- ದಾರ್ಶನಿಕವಾಗಿ ಸೂಫಿಸಂ ಹಾಗೂ ಕಲೆಯಾದ ಸಂಗೀತಗಳು ಭಾರತದಲ್ಲಿ ಪರಸ್ಪರ ಕೂಡಿಬೆರೆತು ರೂಪುಗೊಂಡ ಸಾಂಸ್ಕೃತಿಕ ಕಥನ. ಅದು ರೂಪಿಸುವ ಅಂತಾರಾಷ್ಟ್ರೀಯ ಪ್ರಜ್ಞೆ, ಮಾನವತಾವಾದ ಹಾಗೂ ವಿಶ್ವಮಾನವ ಪ್ರಜ್ಞೆಗಳು. ಚರಿತ್ರೆ ಸಂಗೀತ ಮತ್ತು ದರ್ಶನಗಳನ್ನು ವಸಾಹತುಶಾಹಿ ಆಳ್ವಿಕೆಯ ವಿದ್ಯಮಾನಗಳ ಚೌಕಟ್ಟಿನಲ್ಲಿಟ್ಟು ಕಾಣಿಸುವುದರಿಂದ, ಕೃತಿಯು ಏಕಕಾಲಕ್ಕೆ ಕಲೆ ತತ್ವಶಾಸ್ತ್ರ ರಾಜಕಾರಣ ಹಾಗೂ ಚರಿತ್ರೆಯ ಕೃತಿಯಾಗಿದೆ. ಗಂಡುಹೆಣ್ಣಿನ ಪ್ರೇಮವನ್ನು, ವ್ಯಕ್ತಿಗಳ ಅನುಭಾವದ ಸಾಧನೆಯನ್ನು, ಸಂಗೀತದ ಅಭಿರುಚಿಯನ್ನು ಒಂದು ಕೇಂದ್ರಕ್ಕೆ ತರುತ್ತದೆ. ಈ ಮೂಲಕ ಭಾರತದ ಧಾರ್ಮಿಕ ಸಾಮರಸ್ಯದ ಅಪೂರ್ವ ಪರಂಪರೆಯನ್ನು ಕಾಣಿಸುತ್ತದೆ. ಈ ಪರಂಪರೆಯ ಒಳಗಿನ ಮಾನವೀಯ ಸಂಬಂಧಗಳನ್ನು ಶೋಧಿಸುತ್ತದೆ. ಈ ಕಾರಣಕ್ಕಾಗಿ ಇದು ಸಾಂಸ್ಕೃತಿಕ ಪಠ್ಯವೂ ಆಗಿದೆ.

ನಾಲ್ಕನೆಯದು-ಮಹಿಳೆಯರ ಚೈತನ್ಯಶೋಧಕ ಕೃತಿಯಾಗಿರುವುದು. ಇಲ್ಲಿ ನೂರಳ ಸಾಹಸಗಾಥೆಯ ಜತೆಗೆ ಎಲೆಮರೆಯ ಪಾತ್ರದಂತಿರುವ ನೂರಳ ತಾಯಿ ನೋರಾ ಬೇಕರ್ ಉರುಫ್ ಶಾರದಾ ಅಮೀನಾಬೇಗಮರ ಕತೆ ಸೆಳೆಯುತ್ತದೆ. ತಾನು ಪ್ರೀತಿಸಿದ ಇನಾಯತ್‍ಖಾನರ ಜತೆ ಬದುಕಲು, ತನ್ನ ಕುಟುಂಬದವರ ಪ್ರತಿರೋಧವನ್ನು ಲೆಕ್ಕಿಸದೆ, ಸಿರಿವಂತ ಬದುಕನ್ನು ತೊರೆದು ಆಕೆ ಬಂದವರು. ಬಂದಬಳಿಕ ಅಲೆಮಾರಿಯಾಗಿದ್ದ ಇನಾಯತ್ ಖಾನರ ಜತೆ ನಿಂತು, ದೇಶಾಂತರ ತಿರುಗುವ, ನಿರಂತರ ಕಷ್ಟಗಳನ್ನು ಹಂಚಿಕೊಂಡು ಬದುಕುವ ಕಠೋರದಾರಿಗೆ ಮೈಯೊಡ್ಡಿದವರು. ಬದುಕಿನ ಯಾವುದೊ ಒಂದು ಘಟ್ಟದಲ್ಲಿ ಗಂಡಸರು ಸಂಸಾರ ವಿಮುಖರಾಗಿ ತಮ್ಮ ಕಲೆಯಲ್ಲೊ ಅನುಭಾವದಲ್ಲೊ ತಲೆಮರೆಸಿಕೊಂಡಾಗ, ಸಂತಾನವನ್ನು ಪೋಷಿಸುವ ಹಾಗೂ ಕುಟುಂಬವು ಕುಸಿಯದಂತೆ ಹಿಡಿದುಕೊಳ್ಳುವ ಹೊಣೆಯನ್ನು ಮಹಿಳೆಯರು ಹೊರುತ್ತಾರೆ. ಅದು ಫ್ಯಾಸಿಸಂ ವಿರುದ್ಧದ ಯುದ್ಧಕ್ಕಿಂತ ಯಾವ ಬಗೆಯಲ್ಲೂ ಕಡಿಮೆಯಿಲ್ಲ. ಹೀಗಾಗಿ ಈ ಕೃತಿಯ ಅದೃಶ್ಯ ನಾಯಕಿ ನೂರಳ ತಾಯಿ. ಈಕೆ ಗಾರ್ಕಿಯ ‘ಮದರ್’ ಕಾದಂಬರಿಯ ತಾಯಿಯನ್ನು ನೆನಪಿಸುವರು.

ಚಂದ್ರಶೇಖರ ಮಂಡೆಕೋಲು

ಚಂದ್ರಶೇಖರ ಮಂಡೆಕೋಲು ಅವರು ಈಗಾಗಲೇ ಭಾರತದ ಮೊದಲ ವೈದ್ಯೆ ಆನಂದಿಬಾಯಿ ಮೇಲೆ ಕೃತಿ ರಚಿಸಿದವರು. ಕನ್ನಡದಲ್ಲಿ ಮಂಡೆಕೋಲು, ಎಂ.ಆರ್.ಕಮಲಾ, ಜಗದೀಶ ಕೊಪ್ಪ, ವೇಣುಗೋಪಾಲ-ಶೈಲಜ ಅವರು, ಕಳೆದ ಕೆಲವು ವರ್ಷಗಳಿಂದ ಮಹಿಳಾ ಸಾಧಕಿಯರ ಮೇಲೆ ಕೃತಿ ರಚಿಸಿದರು. ವೃತ್ತಿಪರ ಇತಿಹಾಸಕಾರರಲ್ಲದ ಇವರು, ರಾಜಮಹಾರಾಜರ ಕ್ಲಾಸಿಕಲ್ ಚರಿತ್ರೆಯು ಅವಗಣಿಸಿರುವ ಅಜ್ಞಾತರೂ ಮಹತ್ವದವರೂ ಆದ ವ್ಯಕ್ತಿಗಳ ಮೇಲೆ ಚರಿತ್ರೆ ಕಟ್ಟುತ್ತಿರುವರು. ಇದು ಸಾಂಪ್ರದಾಯಿಕ ಚರಿತ್ರೆಯನ್ನು ಬೇರೊಂದೇ ಬಗೆಯಲ್ಲಿ ನೋಡಲು ನಮ್ಮನ್ನು ಒತ್ತಾಯಿಸಬಲ್ಲದಾಗಿದೆ.

ಹೀಗೆ ವ್ಯಕ್ತಿ, ಕುಟುಂಬ, ದೇಶ ಮತ್ತು ಪರಂಪರೆಗಳ ನಾಲ್ಕು ಆಯಾಮಗಳನ್ನು ಒಳಗೊಂಡಿರುವ, ಒಬ್ಬ ಮಹಿಳೆಯ ಮೇಲೆ ಜೀವನಚರಿತ್ರೆಯನ್ನು ಶ್ರದ್ಧೆಯಿಂದ ರಚಿಸಿರುವುದಕ್ಕಾಗಿ ಚಂದ್ರಶೇಖರ ಮಂಡೆಕೋಲು ಅವರಿಗೆ ಕನ್ನಡದ ಓದುಗರ ವತಿಯಿಂದ ಕೃತಜ್ಞತೆ ಸಲ್ಲಬೇಕು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here