ಕೇಂದ್ರ ಸರಕಾರವು ಪ್ರಜಾಪ್ರಭುತ್ವದ ಮುಸುಕಿನಲ್ಲಿಯೇ ಸರ್ವಾಧಿಕಾರವನ್ನು ತರುವ ದಿಕ್ಕಿನಲ್ಲಿ ದಾಪುಗಾಲು ಇಡುತ್ತಿದೆ. ಸಂಸತ್ತಿನಲ್ಲಿ ದಿನಕ್ಕೊಂದರಂತೆ ವಿಷದ ಮೊಟ್ಟೆಗಳನ್ನು ಇಡುತ್ತಿದೆ. ಲೋಕಸಭೆಯಲ್ಲಿ ತನಗಿರುವ ಬಹುಮತವನ್ನು ತಣ್ಣಗೆ ಬಳಸಿಕೊಳ್ಳುತ್ತಿರುವ ನರೇಂದ್ರ ಮೋದಿ ಸರಕಾರ ಈಗಾಗಲೇ ಕೆಲವು ಕಾನೂನುಗಳಿಗೆ ತಿದ್ದುಪಡಿ ಮಾಡಿದೆ. ಈ ಸಾಲಿನಲ್ಲಿ ಜುಲೈ 15, 2019ರಂದು ಲೋಕಸಭೆಯಲ್ಲಿ ಅಂಗೀಕರಿಸಲಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದರೆ, ಜುಲೈ 24, 2019ರಂದು ಕಾನೂನುಬಾಹಿರ ಚಟುವಟಿಕೆಗಳ ತಡೆ (ತಿದ್ದುಪಡಿ) ಮಸೂದೆ (ಯುಎಪಿಎ)ಯನ್ನು ಅಂಗೀಕರಿಸಲಾಗಿದೆ. ಈ ಕಾಯಿದೆಗಳು ರಾಜ್ಯ ಸಭೆಯಲ್ಲಿಯೂ ಅಂಗೀಕಾರವಾದರೆ, ವ್ಯಕ್ತಿಗಳ ಮೇಲೆ ತನಿಖೆ ನಡೆಸಿ ವಿಚಾರಣೆಗೆ ಗುರಿಪಡಿಸುವ ಕೇಂದ್ರ ಸರಕಾರದ ಅಧಿಕಾರದ ಸ್ವರೂಪವೇ ಬದಲಾಗಲಿದೆ.

ಯುಎಪಿಎ ಕಾಯಿದೆ ಜಾರಿಗೆ ಬಂದಲ್ಲಿ ಕೇಂದ್ರ ಸರಕಾರಕ್ಕೆ ಯಾವುದೇ ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸುವ ಅಧಿಕಾರ ಬರುತ್ತದೆ. ಬೇರೆ ಕೆಲವು ದೇಶಗಳಲ್ಲಿ ಸರಕಾರಗಳಿಗೆ ಇಂತಹ ಅಧಿಕಾರ ಇದೆಯೆಂದು ಹೇಳುವ ಮೂಲಕ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಪ್ರಕಾರ “ಭಯೋತ್ಪಾದಕ ಸಾಹಿತ್ಯ”ವನ್ನು ಮತ್ತು “ಭಯೋತ್ಪಾದಕ ತತ್ವ”ಗಳನ್ನು ಪ್ರಚಾರ ಮಾಡುವ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸಬೇಕು. ಈ ಎರಡು ಪದಗಳ ವ್ಯಾಖ್ಯಾನ ಸ್ಪಷ್ಟವಾಗಿಲ್ಲ.
ಈ ತಿದ್ದುಪಡಿಯು ಯಾವುದೇ ಸಾಕ್ಷ್ಯಾಧಾರ, ವಿಚಾರಣೆ ಅಥವಾ ನ್ಯಾಯಾಂಗದ ಕಣ್ಗಾವಲಿಲ್ಲದೆ ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡುತ್ತದೆ. ಈ ತಿದ್ದುಪಡಿ ಎಷ್ಟು ಅಸ್ಪಷ್ಟವಾಗಿದೆ ಎಂದರೆ ಯಾವುದೇ ಸಾಹಿತ್ಯವನ್ನು ಬರೆಯುವುದು, ಹೊಂದಿರುವುದು, ಯಾವುದೇ ಸಂಘಟನೆಗೆ ಸೇರುವುದು, ಒಟ್ಟಿನಲ್ಲಿ ಒಂದು ಚಿಂತನಾ ಪ್ರಕ್ರಿಯೆಯನ್ನೇ ಅಪರಾಧೀಕರಣಗೊಳಿಸಬಹುದು. ಇಂತಹ ಒಂದು ಹಣೆಪಟ್ಟಿ ಕಟ್ಟಲಾದರೆ, ಆ ಕಳಂಕವನ್ನು ಅಳಿಸುವುದು ಸಾಮಾನ್ಯ ವ್ಯಕ್ತಿಗೆ ಸಾಧ್ಯವೇ ಇಲ್ಲ. ಮೇಲ್ಮನವಿ ಪ್ರಕ್ರಿಯೆ ಅಷ್ಟು ಸಂಕೀರ್ಣವಾಗಿದೆ.
ಎನ್‍ಐಎ ತಿದ್ದುಪಡಿ ಮಸೂದೆಯು ಸೈಬರ್ ಅಪರಾಧಗಳೂ ಸೇರಿದಂತೆ ಯಾವುದೇ ಪ್ರಕರಣವು ಭಯೋತ್ಪಾದನೆಗೆ ಸಂಬಂಧಿಸಿದೆ ಎಂದು ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡುತ್ತದೆ. ಅದಲ್ಲದೆ ತಾನು ಭಯೋತ್ಪಾದಕ ಎಂದು ಪರಿಗಣಿಸುವ ಯಾವುದೇ ವ್ಯಕ್ತಿಯ ಬೆನ್ನುಹತ್ತಿಹೋಗುವ ಅಧಿಕಾರವನ್ನೂ ಅದು ನೀಡುತ್ತದೆ.
ಭಾರತೀಯ ಸಂವಿಧಾನವು ವಿಧಿ 19ರ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ಸೇರುವ, ಸಂಘಟನೆಯ ಸ್ವಾತಂತ್ರ್ಯವನ್ನು ನೀಡಿದೆ. ವಿಧಿ 14 ಸಮಾನತೆಯ ಹಕ್ಕು ನೀಡುತ್ತದೆ. 19 ಮತ್ತು 21ನೇ ವಿಧಿಗಳು ಜೀವದ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳನ್ನು ನೀಡುತ್ತದೆ. ಇದನ್ನೇ ಸಂವಿಧಾನತಜ್ಞರು ‘ಸುವರ್ಣ ತ್ರಿಭುಜ’ ಎಂದು ಕರೆದಿದ್ದಾರೆ. ಈ ಮೂಲಭೂತ ಹಕ್ಕುಗಳನ್ನೇ ಕಸಿಯುವ ದಿಕ್ಕಿನಲ್ಲಿ ಇಟ್ಟ ಹೆಜ್ಜೆಗಳೇ ಈ ತಿದ್ದುಪಡಿಗಳು.
ನಮ್ಮ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಹೋರಾಟವು ನವ ಭಾರತದಷ್ಟೇ ಹಳೆಯದು. 1950ರಲ್ಲಿ, ಸಂವಿಧಾನವು ಅಂಗೀಕಾರವಾದ ಒಂದೇ ವರ್ಷದಲ್ಲಿ ಸರಕಾರವು ತನ್ನನ್ನು ಟೀಕಿಸುವ ಸಾಹಿತ್ಯವನ್ನು ನಿಷೇಧಿಸಲು ಹೊರಟಾಗ, ಸಂವಿಧಾನದ ವಿಧಿ 19, ತೀವ್ರವಾದಿ ಸಾಹಿತ್ಯಕ್ಕೂ ರಕ್ಷಣೆ ನೀಡುತ್ತದೆ ಎಂದು ನ್ಯಾಯಾಲಯಗಳು ಸೂಚಿಸಿದ್ದವು. ಅದಕ್ಕಾಗಿ ಸಂವಿಧಾನವನ್ನೇ ತಿದ್ದುಪಡಿ ಮಾಡಲಾಯಿತು. ಇದುವೇ ಸಂವಿಧಾನದ ಮೊದಲ ತಿದ್ದುಪಡಿ. ಅದು ಸಂವಿಧಾನದ ವಿಧಿ 19ರಲ್ಲಿ ನೀಡಲಾಗಿರುವ ನಾಗರಿಕ ಹಕ್ಕುಗಳಿಗೆ ‘ಸಾಧುವಾದ ಕಾರಣ’ಗಳಿಗೆ ಮಿತಿಯನ್ನು ಹೇರುವ ಹಕ್ಕನ್ನು ಸರಕಾರಕ್ಕೆ ನೀಡುತ್ತದೆ. ಈ ಕಾರಣಗಳಲ್ಲಿ ‘ಸಾರ್ವಜನಿಕ ಶಿಸ್ತಿನ ರಕ್ಷಣೆ’ಯೂ ಒಂದು.
1960ರ ದಶಕದ ಆರಂಭದಲ್ಲಿ ಡಿಎಂಕೆ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ‘ಭಾರತದಿಂದ ಸ್ವಾತಂತ್ರ್ಯ’ವನ್ನು ಸೇರಿಸಿದಾಗ ಮತ್ತು ಭಾರತ-ಚೀನಾ ಯುದ್ಧದ ವೇಳೆ ಚೀನಾದ ಗುಪ್ತಚರ ಚಟುವಟಿಕೆಗಳನ್ನು ನಿಯಂತ್ರಿಸಲು ಸರಕಾರವು ರಾಷ್ಟ್ರೀಯ ಭದ್ರತೆಯ ನಿಟ್ಟಿನಲ್ಲಿ ಸಂವಿಧಾನದ ವಿಧಿ 19ರಲ್ಲಿರುವ ಕೆಲವು ಹಕ್ಕುಗಳನ್ನು ನಿಯಂತ್ರಿಸುವ ಕುರಿತು ಪರಿಶೀಲಿಸಲು ಸಮಿತಿಯೊಂದನ್ನು ರೂಪಿಸಿತ್ತು. 1963ರಲ್ಲಿ ನಡೆದ 16ನೇ ಸಂವಿಧಾನ ತಿದ್ದುಪಡಿ 19ನೇ ವಿಧಿಯಲ್ಲಿನ ಹಕ್ಕುಗಳಿಗೆ ನಿಯಂತ್ರಣಗಳನ್ನು ಹೇರುವ ಕಾನೂನುಗಳನ್ನು ತರುವ ಅಧಿಕಾರವನ್ನು ಸಂಸತ್ತಿಗೆ ನೀಡಿತು. 1967ರ ಡಿಸೆಂಬರ್ ತಿಂಗಳಲ್ಲಿ ಯುಎಪಿಎ ಜಾರಿಗೆ ಬಂತು. ಅದು ನ್ಯಾಯಾಂಗದ ಮಧ್ಯಪ್ರವೇಶ ಇಲ್ಲದೇ ರಾಷ್ಟ್ರೀಯ ಸಾರ್ವಭೌಮತೆಗೆ ಬೆದರಿಕೆ ಒಡ್ಡುವ ಸಂಘಟನೆಗಳನ್ನು ನಿಷೇಧಿಸುವ ಅಧಿಕಾರವನ್ನು ಸರಕಾರಕ್ಕೆ ನೀಡುತ್ತದೆ.
2000ದ ದಶಕದ ಆರಂಭದಲ್ಲಿ ಮೊದಲ ಎನ್‍ಡಿಎ ಸರಕಾರವು ನ್ಯಾಯಾಂಗ ಪ್ರಕ್ರಿಯೆಯನ್ನು ಉಲ್ಲಂಘಿಸಲು ಸರಕಾರಕ್ಕೆ ಅವಕಾಶ ನೀಡುವ ಕೆಲವು ಕಾನೂನುಗಳನ್ನು ತಂದಿತು. ಅವುಗಳಲ್ಲಿ ಭಯೋತ್ಪಾದನೆ ತಡೆ ಕಾಯಿದೆ (ಪೊಟಾ POTA) ಒಂದು. ಯುಪಿಎ ಮರಳಿ ಅಧಿಕಾರಕ್ಕೆ ಬಂದಾಗ ಆ ಕಾಯಿದೆಯನ್ನು ಕಿತ್ತುಹಾಕಿದರೂ, ಅದರ ಕೆಲವು ಅಂಶಗಳನ್ನು ಯುಎಪಿಎಯಲ್ಲಿ ಸೇರಿಸಿತು. ಇದು ‘ಪೊಟಾ’ದ ಅತ್ಯಂತ ಕೆಟ್ಟ ಅಂಶಗಳಾಗಿದ್ದವು. ಅವೆಂದರೆ ಯಾವುದೇ ಆರೋಪಪಟ್ಟಿ ಇಲ್ಲದೇ, ಯಾವುದೇ ಮೇಲ್ಮನವಿ ಇಲ್ಲದೇ ಯಾವುದೇ ಸಂಘಟನೆಯನ್ನು ನಿಷೇಧಿಸುವ ಅಥವಾ ವ್ಯಕ್ತಿಗತ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಅಧಿಕಾರವನ್ನು ಸರಕಾರಕ್ಕೆ ನೀಡಿರುವುದು.
ಈ ತಿದ್ದುಪಡಿಗೆ ಮೊದಲೇ ಯುಎಪಿಎ ಒಂದು ಕರಾಳ ಕಾನೂನೆಂದು ಕುಖ್ಯಾತವಾಗಿದೆ. ಅದು ಬಂಧನ ಅಥವಾ ನಿಷೇಧವನ್ನು ಅನುಷ್ಠಾನಗೊಳಿಸಬೇಕು. ಅಥವಾ ವಿಚಾರ ಮತ್ತು ನಂಬಿಕೆಗಳನ್ನು ಯಾವ ಮಾನದಂಡದ ಮೇಲೆ ನಿರ್ಧರಿಸಬೇಕು ಎಂಬ ಕುರಿತು ಸರಕಾರಕ್ಕೆ ಯಾವುದೇ ನಿರ್ದೇಶನ ನೀಡುವುದಿಲ್ಲ. ಕಾನೂನುಬಾಹಿರ ಚಟುವಟಿಕೆ ಯಾವುದು, ಭಯೋತ್ಪಾದನೆ ಯಾವುದು ಎಂಬ ಬಗ್ಗೆ ಯಾವುದೇ ವ್ಯಾಖ್ಯಾನ ಇಲ್ಲ. ರಾಜಕೀಯ ವಿರೋಧಿಗಳನ್ನು ಜೀವನಪರ್ಯಂತ ರಾಜಕೀಯ ಕೈದಿಗಳಾಗಿ ಬಂಧಿಸಿಡಲು ಅದು ಅವಕಾಶ ಒದಗಿಸುತ್ತದೆ.
ಇಂತಹ ಕಾಯಿದೆ ಕರಾಳತನವನ್ನು ವಿವರಿಸಲು ಒಂದು ಉದಾಹರಣೆ ಸಾಕು. ‘ಪೊಟಾ’ ಅಡಿಯಲ್ಲಿ 4,349 ಮಂದಿಯನ್ನು ಬಂಧಿಸಿದ್ದರೆ, ಶಿಕ್ಷೆಯಾಗಿರುವುದು ಕೇವಲ 13 ಮಂದಿಗೆ. ಅಂದರೆ ಉಳಿದವರು ಸುಮ್ಮನೇ ಜೈಲಿನಲ್ಲಿ ಕೊಳೆಯಬೇಕಾಯಿತು. ಇದು ಸರ್ವಾಧಿಕಾರಕ್ಕೆ ತಕ್ಕ ಅಸ್ತ್ರ.
ಎನ್‍ಐಎಯನ್ನು 2008ರಲ್ಲಿ ಮುಂಬಯಿ ಭಯೋತ್ಪಾದಕ ದಾಳಿಯ ಬಳಿಕ ರೂಪಿಸಲಾಗಿತ್ತು. ಈಗಿನ ತಿದ್ದುಪಡಿ ಕಾಯಿದೆಯನ್ನು ಲೋಕಸಭೆಯಲ್ಲಿ ವಿರೋಧಿಸಿದವರು ಕೇವಲ ಎಂಟು ಮಂದಿ ಮಾತ್ರ. ಈ ತಿದ್ದುಪಡಿಯು ಅದರ ಅಧಿಕಾರ ವ್ಯಾಪ್ತಿಯನ್ನು ವಿಶೇಷವಾಗಿ ವಿಸ್ತರಿಸುತ್ತದೆ. ಅದಕ್ಕೆ ಈಗ ಮಾನವ ಕಳ್ಳಸಾಗಣೆ, ನಕಲಿ ನೋಟು, ಶಸ್ತ್ರಾಸ್ತ್ರ, ಸ್ಫೋಟಕ, ಸೈಬರ್ ಅಪರಾಧ ಇತ್ಯಾದಿಗಳ ಕುಳಿತು ತನಿಖೆ ನಡೆಸುವ ಅಧಿಕಾರ ಬರುತ್ತದೆ. ಮರಣದಂಡನೆ ವಿಧಿಸಬಹುದಾದ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬಹುದಾದ ಅಧಿಕಾರವನ್ನೂ ಈ ತಿದ್ದುಪಡಿ ಎನ್‍ಐಎಗೆ ನೀಡುತ್ತದೆ.
ಆತಂಕದ ವಿಷಯ ಎಂದರೆ, ಕೋಮುವಾದಿ, ಹುಸಿ ದೇಶಪ್ರೇಮದ ಈಗಿನ ಸರಕಾರ ಈ ಅತ್ಯಂತ ಪ್ರಬಲ ಅಸ್ತ್ರಗಳನ್ನು ಯಾರ ವಿರುದ್ಧ ಬಳಸಲಿದೆ ಎಂಬುದಾಗಿದೆ.


