Homeಮುಖಪುಟತಾಯಂದಿರು ತಮ್ಮ ಮಕ್ಕಳಿಗಾಗಿ ಮಾಡುವ ಹೋರಾಟದಲ್ಲಿ ಸೋಲು ಎಂಬುದೆ ಇಲ್ಲ..

ತಾಯಂದಿರು ತಮ್ಮ ಮಕ್ಕಳಿಗಾಗಿ ಮಾಡುವ ಹೋರಾಟದಲ್ಲಿ ಸೋಲು ಎಂಬುದೆ ಇಲ್ಲ..

ತನ್ನ ಹೆತ್ತ ಕರುಳನ್ನು ಕಳೆದುಕೊಂಡರು ಛಲಬಿಡದೆ ಹೋರಾಟದ ಕಂದೀಲು ಹಿಡಿದು ಸಾಗುತ್ತಿರುವ ಈ ನೆಲದ ಭಾರತ ಮಾತೆಯರೆಲ್ಲರಿಗು ಮಹಿಳಾ ದಿನಾಚರಣೆಯ ಶುಭಾಶಯಗಳು.

- Advertisement -
- Advertisement -

“ತಾಯಂದಿರು ತಮ್ಮ ಮಕ್ಕಳಿಗಾಗಿ ಮಾಡುವ ಹೋರಾಟದಲ್ಲಿ ಸೋಲು ಎಂಬುದೆ ಇಲ್ಲ” ಕಣ್ಣನ್ ಗೋಪಿನಾಥ್ ಹೇಳಿದ ಈ ಸಾಲುಗಳು ಮಕ್ಕಳ ಹೊತ್ತೂಟಕ್ಕೆಂದು ಝಡಿ ಮಳೆಯು ಲೆಕ್ಕಿಸದೆ ತಂಬಾಕು ಹೊಲದಲ್ಲಿ ದುಡಿವ ನನ್ನ ಹಳ್ಳಿಯ ತಾಯಂದಿರಿಂದ ಹಿಡಿದು ದೆಲ್ಲಿಯಲ್ಲಿ ಭಾರತೀಯ ಸೌಹಾರ್ದ, ಸಾಮರಸ್ಯ, ಸಹಬಾಳ್ವೆ, ಭ್ರಾತೃತ್ವ, ಸಹಿಷ್ಣುತೆಗೆ ಎದುರಾಗಿರುವ ಗ್ರಹಣವನ್ನು ದೂರ ಮಾಡಿ ತಮ್ಮ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ಹೋರಾಡುತ್ತಿರುವ ಶಾಹೀನ್‌ಬಾಗ್ ನ ಹೆಣ್ಣುಗಳವರೆಗು ಅಕ್ಷರಶಃ‌ ಸರ್ವಕಾಲಿಕ ಸತ್ಯ.

ಸ್ವತಂತ್ರ ಭಾರತದ ಇತಿಹಾಸದಲ್ಲೆ ಬಲಿಷ್ಟ ಸರ್ಕಾರವೆಂದು ಮಾಧ್ಯಮಗಳಿಂದ ಬಿಂಬಿತವಾಗಿರುವ ಹಾಲಿ ಕೇಂದ್ರ ಸರ್ಕಾರಕ್ಕೆ ದೆಹಲಿಯಲ್ಲಿ ಅರವತ್ತನಾಲ್ಕು ದಿನಗಳಿಂದ ನಡೆಯುತ್ತಿರುವ ಶಾಂತಿಯುತ ಮಹಿಳಾ ಪ್ರತಿಭಟನೆಯು ಗೋಧಿ ಮೀಡಿಯಾದ ಅಬ್ಬರದ ಪ್ರಚಾರದ ನಡುವೆ, ವಿರೋಧ ಪಕ್ಷಗಳ ದುರ್ಬಲತೆಯ ನಡುವೆ, ಆರು ವರ್ಷಗಳಿಂದ ಎಲ್ಲಾ ಹೋರಾಟಗಳನ್ನು ದಮನಿಸಿದ್ದ ಈ ಸರ್ಕಾರವನ್ನು ಗಂಭೀರವಾಗಿ ನಿದ್ದೆಗೆಡಿಸಿ ದೆಹಲಿಯ ಚುನಾವಣೆಯ ಬಹು ಚರ್ಚಿತ ವಿಷಯವಾಗಿ, ಭಾಜಾಪ ಪಕ್ಷದ ಸೋಲಿನ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದ ನಿರ್ಣಾಯಕ ಅಂಗವಾಗಿ ಮಹಿಳಾ ಪ್ರತಿಭಟನಾ ಶಕ್ತಿಯನ್ನು ಜಗತ್ತಿಗೆ ನೆನಪಿಸಿದ ಕೀರ್ತಿ, ಪ್ರಬಲ ಕೇಂದ್ರ ಸರ್ಕಾರಕ್ಕೆ ನಾರಿ ಶಕ್ತಿಯನ್ನು ರುಜುವಾತು ಮಾಡಿದ ಹಿರಿಮೆ ಶಾಹೀನ್ ಬಾಗ್‌ ಹೆಣ್ಣುಗಳಿಗೆ ಸಲ್ಲುತ್ತದೆ.

 

ಭಾರತದಲ್ಲಿ ಸ್ವಾತಂತ್ರ್ಯಾನಂತರ 70ರ‌ ದಶಕ ಹೊರತುಪಡಿಸಿ ಬಹುಕಾಲ ಭಾರತದ ಮಹಿಳಾ ದನಿ ಮರೆಯಾಗಿದ್ದದ್ದು ಒಂದು ರೀತಿಯ ವಿಪರ್ಯಾಸ. ಭಾರತದಲ್ಲಿ ಮಹಿಳಾಪರ ಸಂಗತಿಗಳು ಮುನ್ನೆಲೆಗೆ ಬಂದದ್ದು 70ರ ದಶಕದಲ್ಲಿ. 1971ರಲ್ಲಿ ವಿಶ್ವಸಂಸ್ಥೆಯ ಸೂಚನೆಯ ಮೇರೆಗೆ ಮಹಿಳೆಯರ ಸ್ಥಿತಿಗತಿಗಳನ್ನು ಪರಿಶೀಲಿಸಲು ‘ಕಮಿಟಿ ಆನ್ ದಿ ಸ್ಟೇಟಸ್ ಆಫ್ ವಿಮೆನ್ ಇನ್ ಇಂಡಿಯಾ’ ಎಂಬ ಸಮಿತಿಯೊಂದನ್ನು ರಚಿಸಲಾಯಿತು.

ಹಿರಿಯ ಮಹಿಳಾ ಹೋರಾಟಗಾರರಿದ್ದಂತಹ ಈ ಸಮಿತಿ ಭಾರತದ ತುಂಬೆಲ್ಲಾ ಓಡಾಡಿ ಎಲ್ಲಾ ಸ್ಥರಗಳ ಮಹಿಳೆಯರ ಬದುಕಿನ ಸ್ಥಿತಿಗತಿಗಳನ್ನು ಖುದ್ದಾಗಿ ಅವಲೋಕಿಸಿದಾಗ ಕಂಡಂತಹ ಆಘಾತಕಾರಿ‌ ವಿಚಾರಗಳನ್ನು ಆಧಾರವಾಗಿಟ್ಟುಕೊಂಡು ‘ಸಮಾನತೆಯೆಡೆಗೆ’ ಎಂಬ ವರದಿಯನ್ನು ಈ ಸಮಿತು ಬಿಡುಗಡೆ ಮಾಡಿತು. ಈ ವರದಿ ಭಾರತದ ಮಹಿಳಾಪರ ಮತ್ತು ಪ್ರಜಾತಾಂತ್ರಿಕ ವಲಯಗಳಲ್ಲಿ ಬಹುಚರ್ಚಿತ ವಿಚಾರವಾಯಿತು. ಅನೇಕ ಸ್ವಾಯತ್ತ ಮಹಿಳಾ ಸಂಘಟನೆಗಳು ಆರಂಭವಾದವು. ಶಿಕ್ಷಣ, ಉದ್ಯೋಗಾವಕಾಶ, ಲೈಂಗಿಕ ಕಿರುಕುಳ ಮುಕ್ತ ಔದ್ಯೋಗಿಕ ವಾತಾರವಣ ಮೊದಲಾದ ಅನೇಕ ಅಂಶಗಳು ಧ್ವನಿಸಲು ಶುರುವಾದವು.

ಆರ್ಥಿಕ ಸಧೃಡತೆ ಮಹಿಳಾ ಸಬಲೀಕರಣಕ್ಕೆ ಮೂಲ ಅಸ್ತ್ರ ಎಂಬುದನ್ನು ಸಮಾಜ ಕಂಡುಕೊಂಡಿತು.
ವರದಕ್ಷಿಣೆ ಕಿರುಕುಳ, ಅತ್ಯಾಚಾರಗಳು ಮೊದಲಾದವುಗಳ ವಿರುದ್ಧ ಯಾವುದೇ ಸಂಘಟನೆಯಲ್ಲಿರಲಿ ಅಥವಾ ಇಲ್ಲದಿರಲಿ ಮಹಿಳೆಯರು ಬೀದಿಗಿಳಿದರು. ಮಹಿಳೆಯರ ಕುರಿತ ಸಾಮಾಜಿಕ ಸಂವೇದನೆ ಹೆಚ್ಚಾಗುತ್ತ ಬಂದ ಪರಿಣಾಮ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೆಲವು ಮಹಿಳಾಪರ ಕಾಯ್ದೆಗಳು, ಮಹಿಳಾ ಅಧ್ಯಯನ ಕೇಂದ್ರಗಳು, ಮಹಿಳಾ ಪರ ಯೋಜನೆಗಳನ್ನು ಜಾರಿಗೊಳಿಸಲೇಬೇಕಾದದ್ದು ಅನಿವಾರ್ಯವಾಯಿತು. ಅಷ್ಟೆಯಲ್ಲ‌ ವಿಶ್ವಸಂಸ್ಥೆ 1975ರಲ್ಲಿ ಮಾರ್ಚ್ 08ನ್ನು ಅಂತರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಿಸಿ, ಆ ವರ್ಷವನ್ನು ಮಹಿಳಾ ವರ್ಷ, ಆ ದಶಕವನ್ನು ಮಹಿಳಾ ದಶಕ ಎಂದೂ ಘೋಷಿಸಿತು.

ಕಾಲಕ್ಕೆ ತಕ್ಕಂತೆ ಸಮಸ್ಯೆಗಳ ಸ್ವರೂಪ ಭಿನ್ನವಾಗಿರುತ್ತದೆ, ಸಮಸ್ಯೆಗೆ ತಕ್ಕಂತೆ ಹೋರಾಟದ ಸ್ವರೂಪವೂ ಭಿನ್ನವಾಗುವುದು ಅನಿವಾರ್ಯವಾಗುತ್ತದೆ. ಹೋರಾಟದ ಸ್ವರೂಪಕ್ಕೆ ತಕ್ಕಂತೆ ಪ್ರತಿಫಲಗಳು ಭಿನ್ನವಾಗುತ್ತವೆ. ಎಪ್ಪತ್ತರ ದಶಕದಲ್ಲಿ ಪ್ರಮುಖವಾಗಿ ಭಾರತ ಮತ್ತಿತರ ದೇಶಗಳಲ್ಲಿ ನಡೆದ ಮಹಿಳಾ ಹೋರಾಟದಿಂದಾಗಿ ಆ ಇಡೀ ದಶಕ ಮಹಿಳಾ ದಶಕವಾದಂತೆಯೆ ಈ ಇಡೀ ವರ್ಷ ಭಾರತದಲ್ಲಿ ಮಹಿಳಾ ವರ್ಷವೆ ಆಗಲಿದೆ.
ಈ ಮಹಿಳಾ‌‌ ವರ್ಷದ ಪ್ರತಿರೋಧ ವರ್ಷಧಾರೆ ಪ್ರಾರಂಭವಾದದ್ದು ಡಿಸೆಂಬರ್ 15, 2019ರಂದು‌ ದೆಹಲಿಯ ಜಾಮಿಯ ಮಿಲ್ಲಿಯ ವಿಶ್ವವಿದ್ಯಾಲಯದಲ್ಲಿ NPR NRC CAA ವಿರೋಧಿಸಿ ದಿಟ್ಟ ಪ್ರತಿಭಟನೆ ನಡೆಯಿತು. ನಂತರ ಪೊಲೀಸರು ಕ್ಯಾಂಪಸ್ಸಿನೊಳಗೆ ನುಗ್ಗಿ‌ ಗೂಂಡಾವರ್ತನೆಯೊಂದಿಗೆ ಕೈಗೆ ಸಿಕ್ಕ ಸಿಕ್ಕವರನ್ನು ಥಳಿಸಿದರು. ಆಗ ಒಬ್ಬ ಹುಡುಗನನ್ನು ಹೊಡೆಯುತ್ತಿದ್ದ ಪೊಲೀಸರನ್ನು ತಡೆದು ನಿಲ್ಲಿಸಿ ಎಚ್ಚರಿಕೆ ನೀಡಿದ ಜಾಮಿಯಾ ಮಿಲ್ಲಿಯಾ‌ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಾದ ಕೇರಳಾದ ಲದೀದ ಫ಼ರ್ಜ಼ಾನ ಮತ್ತು ಆಯಿಶಾ ರೆನ್ನ
ಎಂಬ ಇವರಿಬ್ಬರು ಜಾಮಿಯಾ ಹೋರಾಟದ ಚಹರೆಗಳಾದರು.

ಜಾಮಿಯಾದ ಮೇಲಾದ ಹಲ್ಲೆಯನ್ನು ವಿರೋಧಿಸಿ ಮಕ್ಕಳ ಭವಿಷ್ಯಕ್ಕಾಗಿ‌ ಎಂಬ ಧ್ಯೇಯವಾಕ್ಯದೊಂದಿಗೆ ದೆಹಲಿಯ ಸೆಕ್ಟರ್ -13ರಲ್ಲಿ ರಾತ್ರೋರಾತ್ರಿ ದೀಪ ಹಿಡಿದು ನಿಂತ ತಾಯಂದಿರ ಹೋರಾಟ ಶಾಹೀನ್ ಬಾಗ್‌ ಆಗಿ ಬೆಳೆಯಿತು. ಈ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಬಲಪಂಥೀಯ ಕೋಮುವಾದಿ ಶಕ್ತಿಗಳು ಲಾಟಿಚಾರ್ಜ್, ಗೋಲಿಬಾರ್, ಗಲಭೆಗಳನ್ನು ನಡೆಸಿದರು ಸಹ ಕುಗ್ಗದೆ ಮುನ್ನುಗಿದೆ.

ಶಾಹೀನ್ ಬಾಗ್‌ನ ಹೋರಾಟದ ಮಾದರಿಯಲ್ಲೆ ದೇಶದ ತುಂಬೆಲ್ಲಾ‌ ಶಾಹೀನ್ ಬಾಗ್‌ಗಳು ಪ್ರಾರಂಭವಾಗಿವೆ.
ದಾವಣಗೆರೆ, ರಾಯಚೂರು, ಹುಬ್ಬಳ್ಳಿ, ಬಿಜಾಪುರ, ಗುಲ್ಬರ್ಗ, ಭದ್ರಾವತಿ ಸೇರಿದಂತೆ ಬೆಂಗಳೂರಿನ ಬಿಲಾಲ್ ಬಾಗ್‌ ಕರ್ನಾಟಕ ರಾಜ್ಯದ ತುಂಬೆಲ್ಲಾ ಮಹಿಳಾ ನೇತೃತ್ವದ ಹೋರಾಟಗಳು ಮುನ್ನೆಲೆಯಲ್ಲಿವೆ.

ಒಂದು ಕಡೆ ಶಾಹೀನ್ ಬಾಗ್‌ ಹೋರಾಟವನ್ನು ಮಹಿಳೆಯರು ಮುನ್ನಡೆಸುತ್ತಿದ್ದರೆ ದೇಶದ ತುಂಬೆಲ್ಲಾ ಮಹಿಳೆಯರು ಬುರ್ಕಾ-ಬಿಂದಿ ಹೋರಾಟದ ಮೂಲಕ ಧರ್ಮಾತೀತ ರೂಪವನ್ನು ಚಳುವಳಿಗೆ ನೀಡುತ್ತಿದ್ದಾರೆ. ಮತ್ತೊಂದೆಡೆ ಬೀದಿ ತುಂಬೆಲ್ಲಾ ರಂಗೋಲಿ ಬಿಡಿಸಿ ಕೇಂದ್ರದ ಕರಾಳ ಕಾಯ್ದೆಗಳನ್ನು ವಿರೋಧಿಸುತ್ತಿರುವ ಹಳ್ಳಿಗಾಡಿನ ಹೆಣ್ಣುಮಕ್ಕಳು, ಕಿಲೋಮೀಟರುಗಟ್ಟಲೆ ಕಾಲ್ನಡಿಗೆಯ ಜಾಥಗಳನ್ನು ಹೊರಟ ಸ್ತ್ರೀಯರು, ಕವಿತೆ, ಕವನ, ಚಿತ್ರಕಲೆ ಹೀಗೆ ವಿಭಿನ್ನ ಆಯಾಮಗಳಲ್ಲಿ ಪ್ರತಿಭಟನೆಯನ್ನು ಮಹಿಳೆಯರು ತೆರೆದಿಡುತ್ತಿರುವುದು ವಿಶ್ವದ ಭವಿಷ್ಯವನ್ನು ಕಟ್ಟುಕೊಡುವ ಆಶಾದಾಯಕ ಮುನ್ನೋಟವನ್ನು ನೀಡುತ್ತಿದೆ.

ಒಂದೆಡೆ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ, ತಮ್ಮ ಮಕ್ಕಳ ಭವಿಷ್ಯಕ್ಕಾಗಿ, ಸಂವಿಧಾನ ಮತ್ತು ದೇಶದ ಉಳಿವಿಗಾಗಿ ಹೋರಾಡುತ್ತಿದ್ದರೆ ಬೇಟಿ ಬಚಾವ್ ಬೇಟಿ ಪಡಾವ್ ಎನ್ನುವ ಸರ್ಕಾರ ಓದುವ ಹಕ್ಕಿಗಾಗಿಯೆ ಶುಲ್ಕ ಕಡಿಮೆ ಮಾಡಿ ಎಂದು ಕೇಳಿದ ಜೆ.ಎನ್.ಯುವಿನ ವಿದ್ಯಾರ್ಥಿಗಳ ಮೇಲೆ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಶಿ ಘೋಷ್ ಎನ್ನುವ ಹೆಣ್ಣು ಮಗಳ ಮೇಲೆ ಮಾಡಿದ ಹಲ್ಲೆ ಮಾಡಿತು. ಆಕೆಗೆ ಸಾಂತ್ವಾನ ಹೇಳಲು ಹೋದ ದೀಪಿಕಾ ಪಡುಕೋಣೆಯ ಬಗ್ಗೆ ಆಡಿದ ಮಾತುಗಳು ಈ ಸಂಸ್ಕೃತಿ ರಕ್ಷಕರ ಮುಖವಾಡದ ಅನಾವರಣವನ್ನು ಮಾಡಿದ್ದು ಒಂದೆಡೆಯಾದರೆ ಆಯಿಶಿ ಘೋಷ್, ದೀಪಿಕಾ ಪಡುಕೋಣೆಯಂತಹ ಹೆಣ್ಣುಗಳು ಪ್ರಭುತ್ವದ ಎದುರಿಗೆ ತೋರಿದ ಧೈರ್ಯ ನಿಜಕ್ಕೂ ಭರವಸೆಯ ಕಿರಣ.

ಇಷ್ಟೆಲ್ಲದರ ನಡುವೆ ಮಹಿಳಾ ಹೋರಾಟಗಳು ಸಿಂಪತಿಯ ಕಾರಣದಿಂದ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತವೆ ಎಂಬುದಕ್ಕಿಂತ ಹಸಿ ಹಸಿ ಸುಳ್ಳು ಮತ್ತೊಂದಿಲ್ಲ. ಮಹಿಳಾ ಪ್ರತಿಭಟನೆ, ಹೋರಾಟ ಈ ಮಟ್ಟಿಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾರಣ ಹೆಣ್ಣೊಳಗಿನ ನೈಜ ಕಾಳಜಿ, ಧೃಡತೆ, ಸ್ಥೈರ್ಯ ಮತ್ತು ಗೆದ್ದೆ ಗೆಲ್ಲುವೆವೆಂಬ ಅಚಲ ನಂಬಿಕೆ. ತಿಂಗಳಾನುಗಟ್ಟಲೆ ಅಲುಗಾಡದೆ ಕೂತಲ್ಲೆ ಕೂರುವ ಮನೋಸ್ಥೈರ್ಯ, ಹೋರಾಟದ ಕಿಚ್ಚು ಹೆಣ್ಣಿನಲ್ಲಿ ಮಾತ್ರ ಕಾಣಲು ಸಾಧ್ಯ.

ನಾಲ್ಕುನೂರು ವರ್ಷದ ಇತಿಹಾಸದಲ್ಲೆ ಕಂಡು ಕೇಳರಿಯದ ಐದು ಡಿಗ್ರಿ ಸೆನ್ಸಸ್ ಚಳಿಯಲ್ಲು ವಯಸ್ಸಿನ ಪರಿಮಿತಿಯಿಲ್ಲದೆ, ಯಾವ ಬೆದರಿಕೆಗೂ ಕುಗ್ಗದೆ ಜಗ್ಗದೆ ಹೋರಾಡುತ್ತಿರುವ, ತನ್ನ ಹೆತ್ತ ಕರುಳನ್ನು ಕಳೆದುಕೊಂಡರು ಛಲಬಿಡದೆ ಹೋರಾಟದ ಕಂದೀಲು ಹಿಡಿದು ಸಾಗುತ್ತಿರುವ ಈ ನೆಲದ ಭಾರತ ಮಾತೆಯರೆಲ್ಲರಿಗು ಮಹಿಳಾ ದಿನಾಚರಣೆಯ ಶುಭಾಶಯಗಳು.

(ಲೇಖಕಿ ಕವಯತ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಅಭಿಪ್ರಾಯಗಳು ವಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...