Homeಮುಖಪುಟಎನ್‌ಪಿಆರ್, ಜನಗಣತಿ ಕುರಿತು ಜನರ ಆತಂಕ ನಿವಾರಿಸುವಂತೆ ಸರಕಾರಕ್ಕೆ ಸಂಸದೀಯ ಸಮಿತಿ ಸೂಚನೆ

ಎನ್‌ಪಿಆರ್, ಜನಗಣತಿ ಕುರಿತು ಜನರ ಆತಂಕ ನಿವಾರಿಸುವಂತೆ ಸರಕಾರಕ್ಕೆ ಸಂಸದೀಯ ಸಮಿತಿ ಸೂಚನೆ

ಜನಗಣತಿಯು ಸರಾಗವಾಗಿ ನಡೆಯುವಂತೆ ಒಂದು ದಾರಿಯನ್ನು ಕೇಂದ್ರ ಗೃಹ ಸಚಿವಾಲಯ ಕಂಡುಕೊಳ್ಳಬೇಕು; ಇಲ್ಲವಾದರೆ ಹಲವಾರು ರಾಜ್ಯಗಳಲ್ಲಿ ಇಡೀ ಪ್ರಕ್ರಿಯೆಯೇ ಬುಡಮೇಲಾಗಬಹುದು.

- Advertisement -
- Advertisement -

ಎನ್‌ಪಿಆರ್ ಮತ್ತು ಜನಗಣತಿಯ ಪ್ರಕ್ರಿಯೆ ಆರಂಭಿಸುವ ಮೊದಲು ಸಾರ್ವಜನಿಕರ ಆತಂಕ ನಿವಾರಣೆಗೆ ಸೂಕ್ತ ಯೋಜನೆಯೊಂದನ್ನು ರೂಪಿಸುವಂತೆ ಸಂಸದೀಯ ಸಮಿತಿಯೊಂದು ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚನೆ ನೀಡಿದೆ.

ಮುಂಬರಲಿರುವ ಎನ್‌ಪಿಆರ್ ಮತ್ತು ಜನಗಣತಿಯ ಕುರಿತು ಜನರಿಗೆ ಅತೃಪ್ತಿ ಮತ್ತು ಭಯವಿದ್ದು, ಯಾವುದೇ ಮಾಹಿತಿ ಸಂಗ್ರಹ ಆರಂಭಿಸುವ ಮೊದಲು ಈ ಭಯವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದೀಯ ಸಮಿತಿಯು ಸರಕಾರಕ್ಕೆ ಸಲಹೆ ಮಾಡಿದೆ. ಈ ಸಲಹೆಯನ್ನು ಮಾಡಿರುವುದು ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ.

ಜನಗಣತಿಯು ಸರಾಗವಾಗಿ ನಡೆಯುವಂತೆ ಒಂದು ದಾರಿಯನ್ನು ಕೇಂದ್ರ ಗೃಹ ಸಚಿವಾಲಯ ಕಂಡುಕೊಳ್ಳಬೇಕು; ಇಲ್ಲವಾದರೆ ಹಲವಾರು ರಾಜ್ಯಗಳಲ್ಲಿ ಇಡೀ ಪ್ರಕ್ರಿಯೆಯೇ ಬುಡಮೇಲಾಗಬಹುದು ಎಂದು ಸಮಿತಿಯು ಎಚ್ಚರಿಕೆ ನೀಡಿದೆ.

ಎನ್‌ಪಿಆರ್ ಎಂದರೇನು?: ಗೃಹ ಸಚಿವಾಲಯದ ವಾದ

ರಾಷ್ಟ್ರೀಯ ಒಮ್ಮತಕ್ಕೆ ಬರುವ ಸಲುವಾಗಿ ಎನ್‌ಪಿ‌ಆರ್‌ಗೆ ಸಂಬಂಧಿಸಿದಂತೆ ಇರುವ ವಿವಿಧ ವಿಷಯಗಳ ಬಗ್ಗೆ ಎಲ್ಲಾ ರಾಜ್ಯಗಳಿಗೆ ಸಂಪೂರ್ಣವಾಗಿ ಮನವರಿಕೆ ಮಾಡಬೇಕು ಎಂದು ಈ ಬಹುಪಕ್ಷೀಯ ಸಮಿತಿ ಹೇಳಿದೆ. ಈ ರೀತಿಯ ಒಮ್ಮತವು ದೇಶಾದ್ಯಂತ ಜನರಲ್ಲಿ ಇರುವ ಭಯವನ್ನು ನಿವಾರಿಸಿ, ಸಂಪೂರ್ಣ ಸ್ಪಷ್ಟತೆ ಮೂಡಿಸುವುದರಿಂದ ಸರಾಗವಾಗಿ ಈ ಪ್ರಕ್ರಿಯೆ ನಡೆಯಲು ಅನುಕೂಲವಾಗುವುದು ಎಂದು ಸಮಿತಿಯು ಹೇಳಿದೆ.

ಹೊಸದಾಗಿ ಮಾಹಿತಿ ಸಂಗ್ರಹ ಕಾರ್ಯಕ್ರಮಕ್ಕೆ ತಗಲುವ ಶ್ರಮ ಮತ್ತು ವೆಚ್ಚ ಮರುಕಳಿಸದಂತೆ ಮಾಡಲು ಆಧಾರ್ ಮಾಹಿತಿಗಳನ್ನೇ ಎನ್‌ಪಿಆರ್ ನವೀಕರಣಕ್ಕೆ ಬಳಸಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸಮಿತಿ ಹೇಳಿದೆ.

1955ರ ಪೌರತ್ವ ಕಾಯಿದೆಯ ಆಧಾರದಲ್ಲಿ- 2003ರ ಪೌರತ್ವ ನಿಯಮಗಳ ಅನ್ವಯ 2010ರಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಥವಾ ಎನ್‌ಪಿಆರ್ ಮಾಡಲಾಗಿತ್ತು ಮತ್ತು 2015ರಲ್ಲಿ ಅದನ್ನು ನವೀಕರಣ ಮಾಡಲಾಗಿತ್ತು.

“ಹುಟ್ಟು, ಸಾವು ಮತ್ತು ವಲಸೆ ಇತ್ಯಾದಿ ಕಾರಣಗಳಿಂದ ರಾಷ್ಟ್ರೀಯ ಅಂಕಿಅಂಶಗಳನ್ನು ಮತ್ತೊಮ್ಮೆ ನವೀಕರಣ ಮಾಡಬೇಕಾದ ಅಗತ್ಯವಿದ್ದು, ಸರಕಾರ ಎನ್‌ಪಿಆರ್ ನವೀಕರಣದ ನಿರ್ಧಾರ ಕೈಗೊಂಡಿದೆ” ಎಂದು ಗೃಹ ಸಚಿವಾಲಯ ವಾದಿಸಿತು.

ಎನ್‌ಪಿಆರ್ ನವೀಕರಣ ನಡೆಯುತ್ತಿದ್ದು, ಅದನ್ನು ಹೊಸದಾಗಿ ಮಾಡುತ್ತಿಲ್ಲವಾದುದರಿಂದ, ಆಧಾರ್ ಮಾಹಿತಿ ಸಂಗ್ರಹ ( ಡಾಟಾ ಬೇಸ್) ಪ್ರಯೋಜನಕ್ಕೆ ಬರುವುದಿಲ್ಲ ಮತ್ತು ಯಾವುದೇ ಮರುಕಳಿಕೆಯ ಪ್ರಶ್ನೆಯೇ ಬರುವುದಿಲ್ಲ ಎಂದು ಗೃಹ ಸಚಿವಾಲಯ ವಾದಿಸಿತು.

ಅದಲ್ಲದೇ “ಆಧಾರ್ ವೈಯಕ್ತಿಕ ಮಾಹಿತಿಯನ್ನು ಹೊಂದಿದ್ದು, ಎನ್‌ಪಿಆರ್ ಕೌಟುಂಬಿಕ ಮಾಹಿತಿಯನ್ನು ಹೊಂದಿರುತ್ತದೆ. ಆಧಾರ್ ಮಾಹಿತಿ ಸಂಗ್ರಹದಿಂದ ಕೌಟುಂಬಿಕ ಮಾಹಿತಿ ಸಂಗ್ರಹ ಸ್ಥಾಪಿಸಲು ಪ್ರತೀ ಮನೆಗೆ ಭೇಟಿ ನೀಡುವ ಅಗತ್ಯವಿದೆ” ಎಂದೂ ಗೃಹ ಸಚಿವಾಲಯ ವಾದಿಸಿತು.

ಆಧಾರ್, ಮತದಾರರ ಗುರುತುಚೀಟಿ, ಪಾಸ್‌ಪೋರ್ಟ್ ಸಂಖ್ಯೆ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳ ನಡುವೆ ಕಳೆದುಹೋಗಿರುವ ಕೊಂಡಿಯನ್ನು ಎನ್‌ಪಿಆರ್ ಮರಳಿ ಸ್ಥಾಪಿಸುವುದು, ಮತ್ತು ಮಾಹಿತಿಯ ಮರುಕಳಿಕೆಯನ್ನು ಕೂಡಾ ಅದು ನಿವಾರಿಸುವುದು ಎಂದು ಕೂಡಾ ಗೃಹ ಸಚಿವಾಲಯ ವಾದಿಸಿತು. ಎನ್‌ಪಿಆರ್ ಮಾಹಿತಿಯನ್ನು ಇನ್ನಷ್ಟು ವಿಶ್ವಾಸಾರ್ಹಗೊಳಿಸಿ, ಭವಿಷ್ಯದಲ್ಲಿ ವಿವಿಧ ಯೋಜನೆಗಳ ಅನುಷ್ಟಾನದ ವೇಳೆ ಸರಕಾರದ ಸಂಪನ್ಮೂಲಗಳನ್ನು ಉಳಿತಾಯ ಮಾಡುವುದು ಎಂದೂ ಗೃಹ ಸಚಿವಾಲಯ ವಾದಿಸಿತು.

ಜನನ ಮತ್ತು ಮರಣದ ಮಾಹಿತಿಗಳನ್ನು ಸಂಪರ್ಕಿಸಿ ಪ್ರಸ್ತುತ ಕಾಲದ ಜನಸಂಖ್ಯೆಯ ಪ್ರಸ್ತುತ ಕಾಲದ ಮಾಹಿತಿ ಸಂಗ್ರಹ ಸರಕಾರದ ಆಶಯವಾಗಿದೆ ಎಂದೂ ಗೃಹ ಸಚಿವಾಲಯ ವಾದಿಸಿದೆ.

ದೇಶದಾದ್ಯಂತ ಎಪ್ರಿಲ್ 1ರಿಂದ ಜನಗಣತಿಯ ಜೊತೆಯಲ್ಲಿ ಎನ್‌ಪಿಆರ್ ನಡೆಸುವ ಯೋಜನೆಯೇನೋ ಇದೆ. ಆದರೆ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ ಮುಂತಾದ ಪ್ರತಿಪಕ್ಷಗಳಿರುವ ರಾಜ್ಯಗಳು ತಾವು ಎನ್‌ಪಿಆರ್ ಮಾಹಿತಿ ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ.

ಎನ್‌ಪಿಆರ್ ಎಂಬುದು ಎನ್‌ಆರ್‌ಸಿಯ ಪೂರ್ವಭಾವಿ ಕಾರ್ಯಕ್ರಮ ಎಂದು ಪ್ರತಿಪಕ್ಷಗಳ ಆರೋಪವಾದರೆ, ರಾಷ್ಟ್ರೀಯ ಪೌರತ್ವ ದಾಖಲಾತಿ ಕುರಿತು ಯಾವುದೇ ನಿರ್ಧಾರವನ್ನು ಈ ತನಕ ತೆಗೆದುಕೊಳ್ಳಲಾಗಿಲ್ಲ ಎಂದು ಬಿಜೆಪಿ ನೇತೃತ್ವದ ಸರಕಾರ ಹೇಳುತ್ತಿದೆ.

ಕೇಳಲಾಗಲಿರುವ ಪ್ರಶ್ನಾವಳಿಯಲ್ಲಿ ಹೆತ್ತವರ ಜನನ ಸ್ಥಳ, ಜನನ ದಿನಾಂಕ ಇತ್ಯಾದಿ ಮಾಹಿತಿಗಳ ಕುರಿತು ಪ್ರಶ್ನೆಗಳನ್ನು ಹೊಸದಾಗಿ ಸೇರಿಸಿರುವುದಕ್ಕೆ ಹಲವಾರು ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ಕೃಪೆ: ಕಮಲ್‌ಜಿತ್‌ ಕೌರ್‌ ಸಂಧು, ಇಂಡಿಯಾ ಟುಡೆ
ಕನ್ನಡಕ್ಕೆ : ನಿಖಿಲ್‌ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...