Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾಸನ: ಒಕ್ಕಲಿಗರ ಮೇಲಾಟದ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಫೈಟ್

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾಸನ: ಒಕ್ಕಲಿಗರ ಮೇಲಾಟದ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಫೈಟ್

- Advertisement -
- Advertisement -

ಬಡವರ ಊಟಿ ಎಂದೇ ಹೆಸರಾದ ಹಾಸನದಲ್ಲಿ ಈಗ ರಾಜಕೀಯ ಜಿದ್ದಾಜಿದ್ದಿ ಜೋರಾಗಿದೆ. ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಸೃಷ್ಟಿಸಿದ್ದ ಜೆಡಿಎಸ್ ಎರಡನೇ ಪಟ್ಟಿ ಪ್ರಕಟಗೊಂಡಿದೆ. ಹೆಚ್ಚು ಚರ್ಚೆಗೆ ಕಾರಣವಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಎಚ್.ಪಿ ಸ್ವರೂಪ್ ಅವರಿಗೆ ಟಿಕೆಟ್ ನೀಡಿದ್ದು, ಇಲ್ಲಿ ಅಭ್ಯರ್ಥಿಯಾಗಲು ತೀವ್ರ ಹೋರಾಟ ನಡೆಸಿದ್ದ ಭವಾನಿ ರೇವಣ್ಣ ಅವರಿಗೆ ಹಿನ್ನಡೆಯಾಗಿದೆ.

2018ರಲ್ಲಿ ಹಾಸನ ಜಿಲ್ಲೆಯ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ, ಹಾಸನ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ಕಂಡಿತ್ತು. ಆದರೆ ಬದಲಾದ ರಾಜಕೀಯದಲ್ಲಿ ಜೆಡಿಎಸ್‌ನ ಇಬ್ಬರು ಶಾಸಕರು ಈ ಬಾರಿ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಅರಸೀಕೆರೆಯ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ಸಿನ ಕೈಹಿಡಿದಿದ್ದರೆ, ಅರಕಲಗೂಡು ಎ.ಟಿ.ರಾಮಸ್ವಾಮಿ ಬಿಜೆಪಿಯ ಕಮಲವನ್ನು ಮುಡಿಗೇರಿಸಿಕೊಂಡಿದ್ದಾರೆ.

ರಾಜ್ಯದ ಬೇರೆ ಭಾಗಗಳಿಂದ ಪ್ರವಾಸಕ್ಕೆಂದೋ ಅಥವಾ ತಮ್ಮ ಯಾವುದೋ ಕೆಲಸದ ಭಾಗವಾಗಿ ಹಾಸನಕ್ಕೆ ಬಂದರೆ ಬಹುಸಂಖ್ಯಾತರಿಂದ ತಕ್ಷಣಕ್ಕೆ ಹೇಳುವ ಮಾತೆಂದರೆ ’ಹಾಸ್ನ ಎಂದರೆ ಗೌಡ್ರು, ಗೌಡ್ರು ಎಂದ್ರೆ ಹಾಸ್ನ’. ಹಾಸನದಲ್ಲಿ ಏನೇ ಘಟನೆ ಮತ್ತು ವಿಘಟನೆಗಳು ನಡೆದರೂ ಅದಕ್ಕೆ ಅನ್ವರ್ಥವಾಗಿ ಗೌಡ್ರ ಹೆಸರು ಚಾಲ್ತಿಯಲ್ಲಿರುತ್ತದೆ. ಇದಕ್ಕೆ ಒಂದು ಕಾರಣ ದೇವೇಗೌಡ ಪ್ರಧಾನಿ ಆಗಿದ್ದರು ಎಂಬುದಾಗಿದ್ದರೆ, ರಾಜಕೀಯವಾಗಿಯೂ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿರುವುದರಿಂದ ಈ ಗೌಡ ಎಂಬುದು ಹಾಸನಕ್ಕೆ ಅನ್ವರ್ಥನಾಮವಾಗಿ ಉಳಿದಿದೆ. ಗೌಡ ಎಂದರೆ ಪಾಳೇಗಾರಿ ವ್ಯವಸ್ಥೆಯ ಮತ್ತೊಂದು ಮುಖವೂ ಹೌದು.

ರಾಜಕೀಯ ಇತಿಹಾಸ

1952ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಿ.ಆರ್.ಕರಿಗೌಡ ವಿಧಾನಸಭೆಗೆ ಪ್ರವೇಶ ಪಡೆದಿದ್ದರೆ 1957ರಲ್ಲಿ ನಡೆದ ಚುನಾವಣೆಯಲ್ಲಿ ಕೆ.ಟಿ.ದಾಸಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿದ್ದರು. ನಂತರ 1962ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಶೋದರಮ್ಮ ಅವರ ಗೆಲುವಿನ ಮೂಲಕ ಕಾಂಗ್ರೆಸ್ ಹಾಸನದಲ್ಲಿ ಖಾತೆ ತೆರೆದಿತ್ತು. 62ರಲ್ಲಿ ಪಕ್ಷೇತರನಾಗಿ ನಿಂತು ಎರಡನೇ ಸ್ಥಾನ ಗಳಿಸಿದ್ದ ಎಚ್.ಬಿ ಜ್ವಾಲನಯ್ಯ 1967ರಲ್ಲಿ ಸ್ವತಂತ್ರ ಪಕ್ಷದಿಂದ ಕಣಕ್ಕೆ ಇಳಿದು ಕಾಂಗ್ರೆಸ್ ಅಭ್ಯರ್ಥಿ ಎಲ್.ಟಿ.ಕಾರ್ಲೆ ವಿರುದ್ದ 279 ಮತಗಳ ಕೂದಲಂತರದ ಗೆಲುವನ್ನು ಪಡೆದಿದ್ದರು.

ಕೆ.ಎಚ್.ಹನುಮೇಗೌಡ

1972ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಎಚ್.ಹನುಮೇಗೌಡ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರೆ, 1978ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1983 ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಎಚ್.ಹನುಮೇಗೌಡ ಜನತಾ ಪಾರ್ಟಿಯಿಂದ ಅಭ್ಯರ್ಥಿಯಾಗಿದ್ದ ಬಿ.ವಿ.ಕರೀಗೌಡ ವಿರುದ್ಧ 3959 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. ಪುನಃ ಎರಡು ವರ್ಷಗಳಲ್ಲಿ ಅಂದರೆ 1985ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಜನತಾ ಪಾರ್ಟಿಯಿಂದ ಸ್ಪರ್ಧಿಸಿ ಬಿ.ವಿ.ಕರೀಗೌಡ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಜಿ.ಎಲ್ ನಲ್ಲೂರೇಗೌಡ 10881 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

1989ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಅಖಾಡಕ್ಕೆ ಇಳಿದಿದ್ದ ಕೆ.ಎಚ್.ಹನುಮೇಗೌಡ 68210 ಮತಗಳನ್ನು ಪಡೆದು ಎದುರಾಳಿ ಬಿ.ವಿ.ಕರೀಗೌಡ ವಿರುದ್ಧ ಗೆಲುವು ಸಾಧಿಸಿದ್ದರು. 1994ರಲ್ಲಿ ಜೆಡಿಎಸ್‌ನಿಂದ ಮೊದಲ ಬಾರಿಗೆ ಪರೀಕ್ಷೆಗೆ ಇಳಿದ ಹೆಚ್.ಎಸ್ ಪ್ರಕಾಶ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಹನುಮೇಗೌಡ ವಿರುದ್ಧ ಗೆಲವು ಸಾಧಿಸಿದ್ದರು.

ಖಾತೆ ತೆರೆದ ಬಿಜೆಪಿ

1999ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾದ ಕೆ.ಎಚ್.ಹನುಮೇಗೌಡ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದರೆ, ಕಾಂಗ್ರೆಸ್‌ನಿಂದ ಕೆ.ಎಂ.ರಾಜೇಗೌಡ ಅವರು ಚುನಾವಣಾ ಕಣದಲ್ಲಿದ್ದರು. ಕೆ.ಎಂ.ರಾಜೇಗೌಡ 34774 ಮತಗಳನ್ನು ಪಡೆದರೆ, ಕೆ.ಎಚ್.ಹನುಮೇಗೌಡ 40378 ಮತಗಳನ್ನು ಪಡೆದು ಕೆ.ಎಂ.ರಾಜೇಗೌಡರ ವಿರುದ್ದ 5604 ಮತಗಳ ಅಂತರದಿಂದ 4ನೇ ಗೆಲುವು ದಾಖಲಿಸಿದ್ದರು.

ನಂತರ 2004, 2008 ಮತ್ತು 2013ರಲ್ಲಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹೆಚ್.ಎಸ್.ಪ್ರಕಾಶ್ ಜೆಡಿಎಸ್‌ಗೆ ಭದ್ರ ಬುನಾದಿ ಹಾಕಿದರು. 2008ರಲ್ಲಿ ಬಿ.ಶಿವರಾಂ ವಿರುದ್ಧ 52266 ಪಡೆದು 16804 ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಬಿ.ಶಿವರಾಂ 35462 ಮತಗಳಿಗೆ ತೃಪ್ತರಾಗಿದ್ದರು. 2013ರಲ್ಲಿ ಕಾಂಗ್ರೆಸ್‌ನ ಎಚ್.ಕೆ.ಮಹೇಶ್ ವಿರುದ್ದ ಕೇವಲ 4196 ಅಂತರದಲ್ಲಿ ಜಯಸಾಧಿಸಿದ್ದ ಪ್ರಕಾಶ್ 61306 ಮತಗಳನ್ನು ಪಡೆದರೆ, ಮಹೇಶ್ 57110 ಮತಗಳನ್ನು ಪಡೆದು ಸೋತಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಡೂರು: ಲಿಂಗಾಯತ-ಕುರುಬ ಸಮುದಾಯಗಳ ಮೇಲಾಟದ ಅಖಾಡದಲ್ಲಿ ಕೈ-ಕಮಲ ಕದನ…

2018ರ ಅಸೆಂಬ್ಲಿ ಚುನಾವಣೆಯಲ್ಲಿ ಹೆಚ್.ಎಸ್.ಪ್ರಕಾಶ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದ ಪ್ರೀತಮ್ ಗೌಡ ಜಯಗಳಿಸಿ ಜೆಡಿಎಸ್ ಓಟಕ್ಕೆ ಬ್ರೇಕ್ ಹಾಕಿದ್ದರು. ಪ್ರೀತಂ ಗೌಡ 63348 ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದರು. ಹೆಚ್.ಎಸ್.ಪ್ರಕಾಶ್ 50342 ಮತಗಳನ್ನು ಗಳಿಸಿ ಸೋಲನುಭವಿಸಿದ್ದರು. ಕಾಂಗ್ರೆಸ್‌ನ ಹೆಚ್.ಕೆ.ಮಹೇಶ್ ಮೂರನೇ ಸ್ಥಾನಕ್ಕೆ ಕುಸಿದಿದ್ದರು.

ಅಂದಾಜು ಜಾತಿವಾರು ಮತಗಳು

ಒಟ್ಟು ಮತದಾರರು: 2,30,000; ಒಕ್ಕಲಿಗರು: 1,05,000; ಮುಸ್ಲಿಂ: 36,000; ಪರಿಶಿಷ್ಟ ಜಾತಿ: 27,000; ಲಿಂಗಾಯಿತ: 25,000; ಕುರುಬ: 6,000; ಇತರೆ: 31,000

ಪ್ರೀತಂ ಗೌಡ ಗೆದ್ದದ್ದು ಹೇಗೆ?

2018ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹಾಸನ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಜೆ. ಪ್ರೀತಂ ಗೌಡ, ಅದಕ್ಕೂ ಮುಂಚಿನಿಂದಲೇ ಕುಡಿಯುವ ನೀರು ಪೂರೈಕೆ ಮತ್ತು ಕಸದ ಗಾಡಿಗಳನ್ನು ನಗರಸಭಾ ವ್ಯಾಪ್ತಿಯಲ್ಲಿ ನಿಯೋಜಿಸುವ ಮೂಲಕ ಸಮಾಜಸೇವೆ ಹೆಸರಿನಲ್ಲಿ ಚುನಾವಣಾ ಅಖಾಡವನ್ನು ಸಜ್ಜು ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ದಿನಗಳಲ್ಲಿ ಪರಿಸ್ಥಿತಿ ಹೇಗಿತ್ತೆಂದರೆ ನಗರಸಭೆಯ ಕಸದ ಗಾಡಿ ಬರಲಿ ಬರದೇ ಇರಲಿ, ಪ್ರೀತಂಗೌಡ ಅವರ ಕಸದ ಗಾಡಿಗಳು ಒಂದೂ ದಿನವೂ ತಪ್ಪದೆ ಬರುತ್ತಿದ್ದವು. ಪ್ರತಿ ವಾರ್ಡ್‌ಗಳಿಗೂ ಈ ಸೇವೆಯನ್ನು ತಲುಪಿಸುತ್ತಿದ್ದ ಪ್ರೀತಮ್ ಗೌಡ ಬಹುಬೇಗ ಹಾಸನ ನಗರ ವ್ಯಾಪ್ತಿಯಲ್ಲಿ ಹೆಚ್ಚು ಪ್ರಚಾರಕ್ಕೆ ಬಂದರು.

ಹೆಚ್.ಎಸ್.ಪ್ರಕಾಶ್

ಹಳ್ಳಿಗಳಲ್ಲಿ ಯುವಜನರನ್ನು ಭೇಟಿಯಾಗಿ ಯುವಕರ ಸಂಘಗಳಿಗೆ ಇಂತಿಷ್ಟು ಹಣವನ್ನು ನೀಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಟೂರ್ನಮೆಂಟ್‌ಗಳಿಗೆ ಹಣ ಸಹಾಯ ಮಾಡುವುದು, ಮಹಿಳಾ ಸಂಘ ಮತ್ತು ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ಸಹಾಯ ಮಾಡುವುದರ ಜೊತೆಗೆ, ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲು ಕೇಳಿದಷ್ಟು ಹಣ ನೀಡುತ್ತ ಜನರ ಮನವೊಲಿಸಿಕೊಂಡರು. ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕರಾಗಿದ್ದ ಹೆಚ್.ಎಸ್.ಪ್ರಕಾಶ್ ಅನಾರೋಗ್ಯದಿಂದ ಬಳಲುತ್ತಿದ್ದರು; 2018ರ ಚುನಾವಣೆಯ ವೇಳೆಯಲ್ಲಿ ಜೆಡಿಎಸ್ ಟಿಕೆಟ್‌ಗೆ ಅವರ ತಮ್ಮ ಅನಿಲ್ ಅವರ ಹೆಸರು ಕೇಳಿಬಂದಿತ್ತಾದರೂ, ಕೊನೆಗೆ ಪ್ರಕಾಶ್ ಅವರನ್ನೇ ಅಭ್ಯರ್ಥಿಯನ್ನಾಗಿಸಲಾಯಿತು. ಇದಕ್ಕೆ ಮುಖ್ಯಕಾರಣ ಎಂದರೆ ಪ್ರಕಾಶ್ ರೇವಣ್ಣನವರ ಮಾತನ್ನು ಮೀರುವುದಿಲ್ಲ ಮತ್ತು ಅವರಿಗಿಂತ ಸಮರ್ಥ ಅಭ್ಯರ್ಥಿ ಇರಲಿಲ್ಲವೆನ್ನುವುದು. ಆಗ ನಗರಸಭೆ ಅಧ್ಯಕ್ಷನಾಗಿದ್ದ ಅವರ ಕಿರಿಯ ಸಹೋದರ ಅನಿಲ್ ಕುಮಾರ್ ಅವರ ದರ್ಪದ ವರ್ತನೆಗಳಿಂದಾಗಿ ಜನರಿಗೆ ಸಹಜವಾಗಿ ಪ್ರಕಾಶ್ ಮತ್ತು ಜೆಡಿಎಸ್ ಮೇಲೆ ಅಸಮಾಧಾನ ಉಂಟಾಗಿತ್ತು. ಇನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿದ್ದ ಹೆಚ್.ಕೆ.ಮಹೇಶ್ ’ಯುದ್ದ ಭೂಮಿಯಲ್ಲಿ ಶಸ್ತ್ರತ್ಯಾಗ ಮಾಡಿ ಶರಣಾದವರಂತೆ’ ಜನರಿಂದ ದೂರ ಇದ್ದು ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿದ್ದರು. ಇದರಿಂದಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೇ ನೇರ ಹಣಾಹಣೆ ಏರ್ಪಟ್ಟಿತ್ತು. ಹಾಗಾಗಿ ಪ್ರೀತಂ ಗೌಡ ಗೆಲುವು ಸಾಧಿಸಲು ಸಾಧ್ಯವಾಯಿತು.

ಹಾಲಿ ಪರಿಸ್ಥಿತಿ

ಕಳೆದ 5 ವರ್ಷದ ಅವಧಿಯಲ್ಲಿ ಪ್ರೀತಮ್ ಗೌಡ ಅಂತಹ ಹೇಳಿಕೊಳ್ಳುವ ಕೆಲಸವನ್ನೇನು ಮಾಡಿಲ್ಲ; ನಗರ ಪ್ರದೇಶಗಳಲ್ಲಿ ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲದಿರುವುದು, ಕೆಲಸಗಳ ವಿಳಂಬ, ಕುಡಿಯುವ ನೀರಿನ ಸಮಸ್ಯೆಗಳು ನಿವಾರಣೆಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಕಾಂಕ್ರಿಟ್ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಉಳಿದಂತೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ನಶಿಸಿಹೊಗುತ್ತಿದ್ದು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು, ಖಾಸಗಿ ಆಸ್ಪತ್ರೆಗಳ ಹಾವಳಿ ಹೆಚ್ಚಿರುವುದು, ಬಡಜನರ ಆರೋಗ್ಯವನ್ನು ಕೇಳುವವರೇ ಇಲ್ಲದಂತಾಗಿರುವುದು ಪ್ರಮುಖ ಸಮಸ್ಯೆಗಳಾಗಿವೆ. ಬೆಂಗಳೂರಿನಿಂದ ಹಾಸನ ಹತ್ತಿರದಲ್ಲಿದ್ದರೂ ಕೈಗಾರಿಕೋದ್ಯಮವನ್ನು ಅಭಿವೃದ್ಧಿಪಡಿಸಲಾಗಿಲ್ಲ. ಇನ್ನು ಯುವಕರು ಉದ್ಯೋಗವನ್ನರಸಿ ಬೆಂಗಳೂರು ಕಡೆ ಮುಖ ಮಾಡಿದ್ದಾರೆ. ಪ್ರೀತಮ್ ಗೌಡ ಅವರು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದ್ದೆ. ಪ್ರೀತಮ್ ಗೌಡ ಮತದಾರರನ್ನು ಸೆಳೆಯಲು ಉಡುಗೊರೆಗಳನ್ನು ನೀಡುತ್ತಿದ್ದಾರೆ ಎಂಬ ಆರೋಪವಿದೆ. ಬೆಳ್ಳಿ ದೇವರು ಎಂದು ನಕಲಿ ಫೋಟೊ ನೀಡಿದ್ದಾರೆ ಎಂಬ ವಿವಾದ ಕೂಡ ಎದ್ದಿತ್ತು.

ರೇವಣ್ಣ ವರ್ಸಸ್ ಪ್ರೀತಮ್ ಗೌಡ

2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರಕಾಶ್ ಅವರನ್ನು ಮಣಿಸಿ ಶಾಸಕನಾಗಿ ಆಯ್ಕೆಯಾದ ಬಿಜೆಪಿಯ ಪ್ರೀತಮ್ ಗೌಡ ಅವರನ್ನು ಪ್ರಾರಂಭದಲ್ಲಿ ರೇವಣ್ಣ ನೆಗ್ಲೆಕ್ಟ್ ಮಾಡಿದ್ದರು. ಆದರೆ ಸಚಿವ ಸಿ.ಟಿ.ರವಿ ಗರಡಿಯಲ್ಲಿ ಪಳಗಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶೀರ್ವಾದದೊಂದಿಗೆ ರಾಜಕೀಯ ಪ್ರವೇಶ ಪಡೆದಿದ್ದ ಪ್ರೀತಮ್ ಗೌಡ ನಿಧಾನವಾಗಿ ಹಾಸನ ಕ್ಷೇತ್ರದ ಅಭಿವೃದ್ಧಿ ಹೆಸರಿನಲ್ಲಿ ನಡೆದ ಗುತ್ತಿಗೆಗಳನ್ನು ತನಗೆ ಬೇಕಾದವರಿಗೆ ನೀಡಲು ಪ್ರಾರಂಭಿಸಿದ್ದು, ಸಹಜವಾಗಿ ರೇವಣ್ಣನವರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಹೋಯಿತು ಎನ್ನಲಾಗುತ್ತದೆ. ಇದೇ ಸಂದರ್ಭದಲ್ಲಿ ಪ್ರೀತಂ ಗೌಡ, “ಹಾಸನ ಕ್ಷೇತ್ರಕ್ಕೆ ಬಂದು ಚುನಾವಣೆಗೆ ನಿಲ್ಲಲಿ. ರೇವಣ್ಣನಾದರೂ ಬರಲಿ ಭೀಮಣ್ಣನಾದರೂ ಬಂದು ಸ್ಪರ್ಧಿಸಲಿ, ನಾನು ಸ್ಪರ್ಧಿಸುತ್ತೇನೆ” ಎಂದು ಸವಾಲೆಸೆದಿದ್ದರು.

ರೇವಣ್ಣ ಹೊಳೆನರಸೀಪುರ ಕ್ಷೇತ್ರದ ಶಾಸಕನಾಗಿದ್ದರೂ ಹಾಸನ ಕ್ಷೇತ್ರದ ಮೇಲಿನ ತನ್ನ ಹಿಡಿತವನ್ನು ಎಂದೂ ಬಿಟ್ಟುಕೊಟ್ಟಿರಲಿಲ್ಲ; ಏಕೆಂದರೆ 4 ಬಾರಿ ಶಾಸಕರಾಗಿದ್ದ ಹೆಚ್.ಎಸ್. ಪ್ರಕಾಶ್ ದೇವೇಗೌಡ ಕುಟುಂಬದವರು ಹಾಕುತ್ತಿದ್ದ ಗೆರೆಯನ್ನು ದಾಟುತ್ತಿರಲಿಲ್ಲ. ಈ ಕಾರಣಕ್ಕೆ ಹಾಸನದಲ್ಲಿ ಯಾವುದೇ ಯೋಜನೆಗಳು ಜಾರಿಯಾದರೂ ಅದರಲ್ಲಿ ರೇವಣ್ಣನವರ ಹೆಸರು ಮುಂದಿರುತ್ತಿತ್ತು. ವಿಮಾನ ನಿಲ್ದಾಣವನ್ನು ಹಾಸನಕ್ಕೆ ಮಂಜೂರು ಮಾಡಿಸುವಲ್ಲಿ ದೇವೇಗೌಡರ ಪಾತ್ರ ಮುಂಚೂಣಿಯಲ್ಲಿತ್ತು. (ವಿ.ನಿಲ್ದಾಣದ ಕೆಲಸ ಕುಂಟುತ್ತಾ ಸಾಗಿದೆ) ಇನ್ನು ಹಾಸನದ ಮೆಡಿಕಲ್ ಕಾಲೇಜು (ಹಿಮ್ಸ್), ಸರ್ಕಾರಿ ಪಶು ವೈದ್ಯಕೀಯ ಶಿಕ್ಷಣ ಸಂಸ್ಥೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೀಗೆ ಹತ್ತಾರು ಯೋಜನೆಗಳನ್ನು ರೇವಣ್ಣ ತನ್ನ ಪ್ರಭಾವ ಬಳಸಿ ಹಾಸನಕ್ಕೆ ಮಂಜೂರು ಮಾಡಿಸಿಕೊಂಡಿದ್ದರು.

ಆದರೆ ಪ್ರೀತಮ್ ಗೌಡ ಶಾಸಕನಾಗಿ ಅಧಿಕಾರಕ್ಕೆ ಬಂದ ನಂತರ ಹಾಸನ ಜಿಲ್ಲಾ ಕೇಂದ್ರದ ಪ್ರತಿ ಯೋಜನೆಗಳೂ ತನ್ನ ಅಣತಿಯ ಮೇರೆಗೆ ನಡೆಯುವಂತೆ ನೋಡಿಕೊಳ್ಳಲು ಪ್ರಾರಂಭಿಸಿದರು. ಇದು ರೇವಣ್ಣ ಅವರಿಗೆ ಬಿಸಿತುಪ್ಪವಾಗಿ ಪರಿಣಮಿಸಿತು. ಹಾಸನ ಕ್ಷೇತ್ರವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿ, ಪ್ರೀತಮ್ ಗೌಡ ಅವರನ್ನು ಸೋಲಿಸಬೇಕೆಂದರೆ ಜೆಡಿಎಸ್ ಅಭ್ಯರ್ಥಿಯಾಗಿ 2023ರ ವಿಧಾನಸಭಾ ಚುನಾವಣೆಗೆ ತಮ್ಮ ಪತ್ನಿ ಭವಾನಿಯವರನ್ನು ಕಣಕ್ಕೆ ಇಳಿಸಬೇಕೆಂದು ತೀರ್ಮಾನಿಸಿ ಪ್ರಚಾರವನ್ನೂ ಮಾಡಿದ್ದರು. ಆದರೆ ಇದನ್ನು ಒಪ್ಪದ ದೇವೇಗೌಡ ಮತ್ತು ಕುಮಾರಸ್ವಾಮಿ, ಒಂದು ವೇಳೆ ಭವಾನಿ ರೇವಣ್ಣ ಚುನಾವಣೆಗೆ ನಿಂತರೆ ಕುಟುಂಬ ರಾಜಕಾರಣದ ಚರ್ಚೆ ಮುನ್ನಲೆಗೆ ಬರುತ್ತದೆ ಮತ್ತು ಅದು ಚುನಾವಣೆಯಲ್ಲಿ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂಬ ಕಾರಣ ನೀಡಿ, ಮಾಜಿ ಶಾಸಕ ಪ್ರಕಾಶ್ ಅವರ ಮಗ ಹೆಚ್.ಪಿ.ಸ್ವರೂಪ್ ಅವರಿಗೆ ಜೆಡಿಎಸ್ ಟಿಕೆಟ್ ಸಿಗುವಂತೆ ನೋಡಿಕೊಂಡಿದ್ದಾರೆ.

ಮುಸ್ಲಿಮರಿಗೆ ವಾರ್ನ್ ಮಾಡಿದ್ದ ಪ್ರೀತಮ್ ಗೌಡ

ಕಳೆದ ವರ್ಷ ಶಾಸಕ ಪ್ರೀತಮ್ ಗೌಡ ಮುಸ್ಲಿಂ ಮತದಾರರು ಹೆಚ್ಚಾಗಿರುವ ವಾರ್ಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುವ ವೇಳೆ ಮುಂದಿನ ಚುನಾವಣೆಯಲ್ಲಿ ತನಗೇ ಓಟ್ ಹಾಕುವಂತೆ ಮುಸ್ಲಿಂ ಸಮುದಾಯದ ಮತದಾರರಿಗೆ ಧಮಕಿ ಹಾಕಿದ್ದರು ಎಂಬ ಆರೋಪಗಳು ಕೇಳಿ ಬಂದಿತ್ತು. ಇದರ ವಿಡಿಯೋ ಕೂಡ ವೈರಲ್ ಆಗಿತ್ತು.

“ಯಾರು ಕೆಲಸ ಮಾಡಿರುತ್ತಾರೆ ಅವರಿಗೆ ವೋಟು ಹಾಕಬೇಕು. ಬಾಯಲ್ಲಿ ಅಣ್ಣಾ ಅಂತ ಹೇಳಿ, ಕೊನೆಗೆ ನಾವು ಬಿಜೆಪಿಗೆ ವೋಟು ಹಾಕಲ್ಲ ಅಂತ ಹೇಳಿದರೆ ಕೆಲಸ ಮಾಡಿದವರಿಗೆ ಉರಿ ಹತ್ತುತ್ತೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

’ಮೂರು ಸಾರಿ ನಮಗೆ ಕೈಕೊಟ್ಟಿದೀರಿ, ಬಿಜೆಪಿಗೆ ಎಂಎಲ್‌ಎ ಚುನಾವಣೆಯಲ್ಲಿ ವೋಟು ಹಾಕಿಲ್ಲ, ಕೌನ್ಸಿಲರ್ ಚುನಾವಣೆಯಲ್ಲಿ ವೋಟು ಹಾಕಿಲ್ಲ. ಎಂಪಿ ಚುನಾವಣೆಯಲ್ಲಿ ವೋಟು ಹಾಕಿಲ್ಲ. ಈಗ ಮತ್ತೆ ಐದು ವರ್ಷ ಆದ್ಮೇಲೆ ಚುನಾವಣೆ ಬರುತ್ತೆ. ಆ ಸಂದರ್ಭದಲ್ಲಿ ನೀವೇನಾದರು ಕೈಕೊಟ್ಟರೇ, ನಾನು ಕೈ, ಕಾಲು ಕೊಡುತ್ತೇನೆ. ನನ್ನ ಮನೆಗೆ ಬಂದರೆ ಕಾಫಿ ಕುಡಿಸಿ ಕಳಿಸುತ್ತೇನೆ. ಇಷ್ಟಾದರೂ ವೋಟ್ ಹಾಕಲಿಲ್ಲ ಅಂದರೇ ಯಾವ ಕೆಲಸವನ್ನು ಮಾಡಿಕೊಡೋದಿಲ್ಲ’ ಎಂದು ನೇರವಾಗಿ ಹೇಳಿದ್ದರು.

ಗೆಲುವಿನ ಲೆಕ್ಕಾಚಾರ

ಈಗಾಗಲೇ ಪ್ರೀತಮ್ ಗೌಡ ಒಂದು ಸುತ್ತಿನ ಚುನಾವಣಾ ಪ್ರಚಾರವನ್ನು ಮುಗಿಸಿ ಹೆಚ್ಚು ಜನರು ಸೇರುವಂತೆ ನೋಡಿಕೊಂಡು ರ್‍ಯಾಲಿ ನಡೆಸಿ ನಾಮಪತ್ರ ಕೂಡ ಸಲ್ಲಿಸಿದ್ದಾರೆ.

ಈ ಬಾರಿ ಕಾಂಗ್ರೆಸ್ ಪಕ್ಷವು ಉದ್ಯಮಿ ಬನವಾಸೆ ರಂಗಸ್ವಾಮಿ ಅವರನ್ನು ಕಣಕ್ಕಿಳಿಸಿದೆ. ಆದರೂ ಹಾಸನದಲ್ಲಿ ಬಿಜೆಪಿ, ಜೆಡಿಎಸ್ ನಡುವೆ ನೇರ ಹಣಾಹಣೆ ನಡೆಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಸ್ವರೂಪ್ ಪ್ರಕಾಶ್ ಅವರು ಜೆಡಿಎಸ್‌ನಿಂದ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದು, ಜಿಲ್ಲಾ ಪಂಚಾಯತ್ ಸದಸ್ಯನಾಗಿ ಕೆಲಸ ಮಾಡಿದ ಅನುಭವ, ಅವರ ತಂದೆ ಹೆಚ್.ಎಸ್.ಪ್ರಕಾಶ್ ಅವರಿಂದ ಕಲಿತಿರುವ ರಾಜಕೀಯ ವಿದ್ಯೆಯ ಜೊತೆಗೆ ದೇವೇಗೌಡ ಕುಟುಂಬ ಸ್ವರೂಪ್ ಬೆನ್ನಿಗೆ ನಿಂತರೆ ಪ್ರೀತಮ್‌ಗೌಡ ವಿರುದ್ಧ ಗೆಲುವಿನ ದಡ ಸೇರಲು ಸಾಧ್ಯವಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಒಟ್ಟಿನಲ್ಲಿ ದೇವೇಗೌಡರ ಕುಟುಂಬದಲ್ಲಿದ್ದ ಸಂಘರ್ಷ ಹಿನ್ನೆಲೆಗೆ ಸರಿದು ಈಗ ಬಿಜೆಪಿ-ಜೆಡಿಎಸ್ ರಾಜಕೀಯ ಗುದ್ದಾಟ ಮುನ್ನಲೆಗೆ ಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...