Homeಮುಖಪುಟಪಿ. ಲಂಕೇಶ್‌ ಜನ್ಮದಿನ: ಅವರ ಬರೆಹಗಳ ಆಯ್ದ ಭಾಗಗಳು

ಪಿ. ಲಂಕೇಶ್‌ ಜನ್ಮದಿನ: ಅವರ ಬರೆಹಗಳ ಆಯ್ದ ಭಾಗಗಳು

ನನ್ನಂತೆಯೇ ಮಾರ್ಚ್ 8ರಂದು ಲಕ್ಷಾಂತರ, ಕೋಟ್ಯಂತರ ಜನ ಹುಟ್ಟಿ ವಿವಿಧ ಕರ್ಮಗಳಲ್ಲಿ ತೊಡಗಿರಬಹುದು. ಅವರು ನನಗಿಂತಲೂ ಬುದ್ಧಿವಂತರೂ, ವಿಚಾರವಂತರೂ ಆಗಿರಬಹುದು.

- Advertisement -
- Advertisement -

ಕನ್ನಡದ ಕೆಲವು ತಲೆಮಾರುಗಳನ್ನು ಪ್ರಭಾವಿಸಿದ ಪ್ರತಿಭಾನ್ವಿತ ಲೇಖಕ, ಚಿಂತಕ, ಪತ್ರಕರ್ತ ಪಿ.ಲಂಕೇಶ್‌ರವರ ಜನ್ಮದಿನ ಇಂದು. ಅವರ ನೆನಪಿನಲ್ಲಿ ಅವರ ಟೀಕೆಟಿಪ್ಪಣಿ ಪುಸ್ತಕದಿಂದ ಕೆಲ ಬರಹಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಈಗ ಯಾವುದನ್ನು ನೆನೆಯಲಿ? ಯಾವುದು ಮೊದಲು? ಯಾವುದು ಆಮೇಲೆ?

ನೀವು ನನ್ನನ್ನು ದಯವಿಟ್ಟು ಕ್ಷಮಿಸಿ. ನನ್ನಂತೆಯೇ ಮಾರ್ಚ್ 8ರಂದು ಲಕ್ಷಾಂತರ, ಕೋಟ್ಯಂತರ ಜನ ಹುಟ್ಟಿ ವಿವಿಧ ಕರ್ಮಗಳಲ್ಲಿ ತೊಡಗಿರಬಹುದು. ಅವರು ನನಗಿಂತಲೂ ಬುದ್ಧಿವಂತರೂ, ವಿಚಾರವಂತರೂ ಆಗಿರಬಹುದು ಅಥವಾ ನನಗಿಂತಲೂ ಅನಾಮಿಕರಾಗಿದ್ದು ನೆಮ್ಮೆದಿ, ಆತಂಕ ಎರಡನ್ನೂ ಅರಿಯದೇ ಜೀವಿಸುತ್ತಿರಬಹುದು.ಆದ್ದರಿಂದ ಈ ಹುಟ್ಟುಹಬ್ಬದ ಬಗ್ಗೆಯಾಗಲೀ, ನನ್ನ ಕಳೆದುಹೋದ ಮತ್ತು ಎಂದೆಂದಿಗೂ ನನಗೆ ಅಂಟಿಕೊಂಡೇ ಇರುವ ಐವತ್ತು ವರ್ಷದ ಬಗ್ಗೆಯಾಗಲೀ ಧ್ವನಿ ಎತ್ತರಿಸಿ ಮಾತಾಡಿದೊಡನೆ, ಬೊಬ್ಬೆ ಹಾಕೊದೊಡನೆ ಎಲ್ಲ ಅಸಹಜವಾಗುತ್ತದೆ.

ಅಹಂಕಾರಕ್ಕೆ ಅನೇಕ ರೂಪಗಳಿರುತ್ತವೆ. ನನ್ನ ನೆಮ್ಮೆದಿಯನ್ನು ನಾನೇ ಕಲಕುವ ಮತ್ತು ಹೊಸ ಬಗೆಯ ವಿಶ್ವಾಸ ಹುಡುಕುವ ಚಟ ಮತ್ತು ಛಲ ನನ್ನಿಂದ ಮರೆಯಾಗದಿರಲಿ.

***

ಆ ಓಲಗದ ಸದ್ದು ಯಾವ ನೋವನ್ನು, ಯಾರ ಸಾವನ್ನು, ಎಷ್ಟು ಹೃದಯಗಳ ಆಕ್ರಂದನವನ್ನು ಸೂಚಿಸುತ್ತಿದೆ? ಅದು ದುಃಖದ ಓಲಗ ಎಷ್ಟು ಜನರ ಸಂತೋಷವನ್ನು ಸಾವಿನ ಬಗ್ಗೆ ಅಟ್ಟಹಾಸವನು, ರೋಷದ ಅಂತಿಮವನ್ನು, ಸೇಡಿನ ಪ್ರತಿಫಲನವನ್ನು ಮಂಡಿಸುತ್ತಿದೆ?

ಆ ಓಲಗದ ಸದ್ದು ಯಾವ ಮಾಯವಾದ ಕ್ರಿಯಾಶೀಲತೆಯನ್ನು, ಕೊನೆಗೊಂಡ ಕನಸನ್ನು ಸೂಚಿಸುತ್ತಿದೆ?

***

ಗಾಂಧೀಜಿಗೆ ಗೊತ್ತಿತ್ತು. ಆತ್ಮವನ್ನು ಕಳೆದುಕೊಂಡ ರಾಜಕಾರಣಿ ತನ್ನನ್ನು ರಕ್ಷಿಸಲು ಪೋಲೀಸು ಪಡೆಯನ್ನು ಹೊಂದಿರಬೇಕಾಗುತ್ತದೆ.

ಬಾಪೂಜಿ ಎಂದೂ ಅಂಗ ರಕ್ಷಕರನ್ನು ಹೊಂದಲಿಲ್ಲ.

ಸಿದ್ಧಾರ್ಥನನ್ನು ಚಿಂತೆಗೀಡು ಮಾಡಿ, ಬುದ್ಧನನ್ನಾಗಿಸಿದ ಆ ಸದ್ದು ಇವರಿಗೆ ಯಾವುದಾದರೂ ಅರ್ಥವನ್ನು ತಲುಪಿಸುತ್ತಿದೆಯೇ? ಬಾಪೂಜಿಯನ್ನು ಮಹಾತ್ಮನನ್ನಾಗಿ ಮಾಡುವಲ್ಲಿ ಯಶಸ್ವಿಯಾದ ಆ ಸದ್ದು ಕಿಂಚಿತ್ತಾದರೂ ನಮ್ಮನ್ನು ಸ್ಪರ್ಶಿಸಬೇಡವೇ?

ಆ ಓಲಗ ಯಾರ ಸಾವನ್ನು, ನೋವನ್ನು, ಅನ್ಯಾಯವನ್ನು, ಯಾವ ಮಾಯವಾದ ಕನಸು, ಕ್ರಿಯಾಶೀಲತೆಯನ್ನು, ಯಾವ ಭ್ರಷ್ಟತೆ, ಹುಂಬತನವನ್ನು , ಯಾವ ದ್ವೀಪವನ್ನು, ಸ್ವಾರ್ಥದ ಪರಿಣಾಮವನ್ನು ವ್ಯಕ್ತಪಡಿಸುತ್ತಿವೆ?

ಯೋಚಿಸೋಣ.

***

ಇಲ್ಲಿಯ ರೈತ, ಗುಡಿಗಾರ, ಕಮ್ಮಾರ, ಕುಂಬಾರ ಎಲ್ಲರೂ ಜಾತಿಪದ್ಧತಿಯ ನರಕದಲ್ಲಿ ಬಿದ್ದು ಬಡತನ, ನಿರುದ್ಯೊಗದಲ್ಲಿ ನಶಿಸಿ ಹೋಗುತ್ತಿದ್ದಾರೆ. ಅಕ್ಷರ ಜ್ಞಾನವಿದ್ದ ಒಂದೇ ಒಂದು ಗುಂಪು ಇಲ್ಲಿಯ ರೈತನ ನೇಗಿಲು, ಕಮ್ಮಾರರ ತಿದಿ, ಗೃಹಿಣಿಯ ಬೀಸುವ ಕಲ್ಲು, ಕೊಟ್ಟಣ ಮುಂತಾದುವನ್ನು ಉತ್ತಮಪಡಿಸಲು ಬಡವನ ಶ್ರಮವನ್ನು ಕಮ್ಮಿ ಮಾಡಲು ಯತ್ನಿಸಲಿಲ್ಲ. ಅಷ್ಟೇ ಏಕೆ, ಇವೆಲ್ಲವನ್ನೂ ಮೀರಿ ಇಡೀ ದೇಶಕ್ಕೆ ಕ್ರಾಂತಿಕಾರಿ ಎನ್ನಿಸಬಹುದಾದ ಪೆನ್ನು, ಪೇಪರ್, ಸ್ಲೇಟನ್ನು ಕಂಡುಹಿಡಿಯಲಿಲ್ಲ. ಕೆಲವರ ಮೇಲುಜಾತಿಯ ಮಿದುಳುಗಳು ಲಕ್ಷಾಂತರ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಯತ್ನಿಸಿ, ಪೇಪರಿಗೆ ಬದಲು ದಾಖಲೆಯ ಹಾಳೆಗಳಾಗಲು ಯತ್ನಿಸಿ ಸತ್ತುಹೋದ ಒಬ್ಬ ವ್ಯಕ್ತಿಯೊಂದಿಗೆ ತಿಳಿವು ಕೂಡಾ ಸಾಯುತ್ತಾ ಹೋಯಿತು. ಕ್ರೌರ್ಯ ಮತ್ತು ಜಡತ್ವ ಮಾತ್ರ ಉಳಿಯಿತು. ಕ್ರೌರ್ಯ ಮತ್ತು ಜಡತ್ವ ಇರುವ ಮನುಷ್ಯನಲ್ಲಿ ಪ್ರೇಮ, ಸಹಾನುಭೂತಿ, ಪಾಳುದಾರಿಕೆ ಉಳಿಯುವುದಿಲ್ಲ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಭದ್ರಕೋಟೆ ಮಥುರಾದಲ್ಲಿ ಮುಸ್ಲಿಮರಿಗೆ ಮತದಾನ ನಿರಾಕರಣೆ?

0
ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಕೆಲ ಕ್ಷೇತ್ರಗಳ ಬೂತ್‌ಗಳಲ್ಲಿ ಮತದಾನದ ದಿನ ಮತಗಟ್ಟೆಗೆ ತೆರಳಿದ್ದ ನಾಗರಿಕರಿಗೆ ತಮ್ಮ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವುದು, ತಪ್ಪಾಗಿ ನಮೂದಿಸಿರುವುದು ಕಂಡುಬಂದಿದೆ. ಮಥುರಾ...