ಲಖಿಂಪುರ್‌ ಖೇರಿ ಹತ್ಯಾಕಾಂಡ: ಬಂಧಿತ ಆರೋಪಿ ಆಶಿಶ್ ಮಿಶ್ರಾಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು

ಉತ್ತರಪ್ರದೇಶದ ಲಖಿಂಪುರ್‌ ಖೇರಿಯಲ್ಲಿ ರೈತರ ಮೇಲೆ ವಾಹನ ಚಲಾಯಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಆಶೀಶ್‌ ಮಿಶ್ರಾ (ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ) ಅವರನ್ನು ಶನಿವಾರ 12 ಗಂಟೆಗಳ ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದು, “ಆತ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ, ವಿಚಾರಣೆಗೆ ಸಹಕರಿಸುತ್ತಿಲ್ಲ” ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ ಪ್ರಕರಣದಲ್ಲಿ ಆಶೀಶ್‌ ಮಿಶ್ರಾ ಹೆಸರು ದಾಖಲಾದ ಐದು ದಿನಗಳ ಬಳಿಕ ಆತನನ್ನು ಬಂಧಿಸಲಾಗಿದೆ. ಕೊಲೆ ಆರೋಪಿಗಳನ್ನು ಸಾಮಾನ್ಯವಾಗಿ ತಕ್ಷಣ ಬಂಧಿಸಲಾಗುತ್ತದೆ. ಆದರೆ ಆಶೀಶ್‌ನ ತಂದೆ ಸಚಿವನಾದ ಕಾರಣಕ್ಕೆ ಇಷ್ಟು ದಿನವಾದರೂ ಬಂಧನವಾಗಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಸುಪ್ರೀಂ ಕೋರ್ಟ್‌ ‘ಏಕೆ ಇನ್ನೂ ಆರೋಪಿಯನ್ನು ಬಂಧಿಸಿಲ್ಲ’ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು.

ಆಶೀಶ್‌ ಮಿಶ್ರಾ

“ಕಳೆದ ಭಾನುವಾರ ನಡೆದ ಘಟನೆಯ ವೇಳೆ ಸಚಿವರ ಮಗ ಸ್ಥಳದಲ್ಲಿ ಇದ್ದ ಕುರಿತು ಹಲವು ಅಂಶಗಳನ್ನು ವಿವರಿಸಲು ಸಾಧ್ಯವಾಗಿಲ್ಲ. ಆತ ಅಂದು ಮಧ್ಯಾಹ್ನ 2ರಿಂದ 4 ಗಂಟೆಗಳ ನಡುವೆ ಘಟನಾ ಸ್ಥಳದಲ್ಲಿ ಇದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆತನ ಫೋನ್ ಸಿಗ್ನಲ್‌ ಕೂಡ ಘಟನಾ ಸ್ಥಳದ ಹತ್ತಿರಕ್ಕೆ ತೋರಿಸಿದೆ. ರೈತರನ್ನು ಮೇಲೆ ಹತ್ತಿದ ಎಸ್‌ಯುವಿ ಚಾಲನೆ ಕುರಿತು ಆತ ಹೇಳುತ್ತಿರುವ ವಿವರಣೆಗಳು ಹೊಂದಿಕೆಯಾಗುತ್ತಿಲ್ಲ” ಎಂದು ಉತ್ತರ ಪ್ರದೇಶ ಪೊಲೀಸ್‌ ಉತ್ನತ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿರಿ: ರೈತರ ಹತ್ಯಾಕಾಂಡಕ್ಕೆ ಪ್ರತಿರೋಧ: ಅ.18ಕ್ಕೆ ರೈಲ್ ರೋಕೋ, 26ಕ್ಕೆ ಲಕ್ನೋದಲ್ಲಿ ಮಹಾಪಂಚಾಯತ್

ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಪ್ರಕರಣದಲ್ಲಿ ಸಾವನ್ನಪ್ಪಿದ್ದಾರೆ. “ಉತ್ತರ ಪ್ರದೇಶ ಸರ್ಕಾರ ಸಾಕಷ್ಟು ಕೆಲಸ ಮಾಡಿಲ್ಲ” ಎಂದು ಸುಪ್ರೀಂಕೋರ್ಟ್ ಹೇಳಿತ್ತು. “ಉತ್ತರ ಪ್ರದೇಶ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ನಾವು ತೃಪ್ತರಾಗಿಲ್ಲ. ಜವಾಬ್ದಾರಿಯುತ ಸರ್ಕಾರ ಹಾಗೂ ಪೊಲೀಸ್‌ ವ್ಯವಸ್ಥೆಯನ್ನು ನಾವು ನಿರೀಕ್ಷಿಸುತ್ತೇವೆ. ಬಂದೂಕನ್ನು ಬಳಸಿ ಕೊಲ್ಲಲಾಗಿದೆ ಎಂಬುದನ್ನು ಒಳಗೊಂಡಂತೆ ಈಗ ಕೇಳಿ ಬಂದಿರುವ ಆರೋಪಗಳು ತೀವ್ರ ಗಂಭೀರವಾಗಿವೆ” ಎಂದು ಸುಪ್ರೀಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಆತಂಕ ವ್ಯಕ್ತಪಡಿಸಿದ್ದರು.

“ಯಾವ ಸಂದೇಶವನ್ನು ನೀವು ಕಳುಹಿಸುತ್ತಿದ್ದೀರಿ? ಸಾಮಾನ್ಯ ಸಂದರ್ಭಗಳಲ್ಲಿ ಕೂಡ ಪೊಲೀಸರು ತಕ್ಷಣ ಹೋಗಿ ಆರೋಪಿಗಳನ್ನು ಬಂಧಿಸುವುದಿಲ್ಲ. ಇರಬೇಕಾದ ರೀತಿಯಲ್ಲಿ ಕೆಲಸಗಳು ಆಗುತ್ತಿಲ್ಲ. ಇದು ಕೇವಲ ಮಾತಿಗೆ ಸೀಮಿತವಾಗಿದೆ ಹೊರತು ಕ್ರಿಯೆಗಳಲ್ಲಿ ಕಂಡು ಬರುತ್ತಿಲ್ಲ” ಎಂದು ಸಿಜೆಐ ತೀಕ್ಷ್ಣವಾಗಿ ಖಂಡಿಸಿದ್ದರು.

ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮೇಲೆ ಲವ್‌ಖುಷ್‌ ಹಾಗೂ ಆಶೀಶ್‌ ಪಾಂಡೆ ಎಂಬ ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದರು. ಇದರ ನಡುವೆ ಪ್ರಕರಣದ ವಿಳಂಬದಿಂದಾಗಿ ಉತ್ತರ ಪ್ರದೇಶ ಸರ್ಕಾರ ತೀವ್ರ ಟೀಕೆಗೆ ಒಳಗಾಗಿತ್ತು. “ಲಖಿಂಪುರ್ ಖೇರಿ ಹತ್ಯಾಕಾಂಡ ಪ್ರಕರಣದಲ್ಲಿ ಯಾವುದೇ ಒತ್ತಡದಿಂದ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಸಾಕ್ಷಿ ಸಿಕ್ಕ ಬಳಿಕ ಕ್ರಮ ಕೈಗೊಳ್ಳುತ್ತೇವೆ” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಹೇಳಿದ್ದರು.

“ಕಾನೂನು ಪ್ರತಿಯೊಬ್ಬರಿಗೂ ಭದ್ರತೆ ನೀಡುವ ಭರವಸೆ ನೀಡುವಾಗ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ. ಅವರು ಯಾರೇ ಆಗಿರಲಿ ಕಾನೂನು ಕೈಗೆ ತೆಗೆದುಕೊಳ್ಳುವ ಅಗತ್ಯವಿಲ್ಲ” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿರಿ: ಲಖಿಂಪುರ್‌‌ ಪ್ರಕರಣ ವಿಳಂಬಕ್ಕೆ ವಿರೋಧ ಪಕ್ಷಗಳನ್ನು ದೂರಿದ ಯುಪಿ ಎಡಿಜಿ?

LEAVE A REPLY

Please enter your comment!
Please enter your name here