PC: ANI

“ಲಖಿಂಪುರ್‌ ಖೇರಿ ರೈತರ ಹತ್ಯೆಯ ಪ್ರಮುಖ ಆರೋಪಿ ಆಶೀಶ್‌ ಮಿಶ್ರಾ (ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ) ಬಂಧನಕ್ಕೆ ಒತ್ತಾಯ ಕೇಳಿಬಂದಿದ್ದು, ಆಶೀಶ್‌‌ ಮಿಶ್ರಾ ಶನಿವಾರ ವಿಚಾರಣೆಗೆ ಹಾಜರಾಗಿದ್ದರು.

ಸುಪ್ರೀಂ ಕೋರ್ಟ್ ಕೂಡ ಆರೋಪಿಗಳ ಬಂಧನಕ್ಕೆ ವಿಳಂಬ ಯಾಕೆ ಆಗುತ್ತಿದೆ ಎಂದು ಎರಡು ಬಾರಿ ಎಚ್ಚರಿಸಿದೆ. ಆದರೂ ಪ್ರಕರಣವನ್ನು ವಿಳಂಬ ಮಾಡುತ್ತಿರುವ ಉತ್ತರ ಪ್ರದೇಶದ ಪೊಲೀಸರು, “ವಿಳಂಬಕ್ಕೆ ಮತ್ತೊಂದು ಕಾರಣವನ್ನು ಶೋಧಿಸಿದ್ದಾರೆ.”

“ಮರಣೋತ್ತರ ಪರೀಕ್ಷೆ, ಶವಸಂಸ್ಕಾರದಲ್ಲಿ ಭಾಗಿಯಾದ್ದರಿಂದ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ” ಎಂದು ಪೊಲೀಸರು ಈ ಮೊದಲು ಹೇಳಿದ್ದರು. ಆದಾಗ್ಯೂ ವಿಳಂಬ ಆಗುತ್ತಿರುವುದು ಏತಕ್ಕೆ ಎಂದು ಕೇಳಿದರೆ ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಮತ್ತೊಂದು ಕಾರಣವನ್ನು ಹೇಳಿದ್ದಾರೆ. “ವಿವಿಐಪಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರಿಂದ ನಮ್ಮ ಸಮಯ ವ್ಯರ್ಥವಾಗಿದೆ” ಎಂದು ಎಡಿಜಿ ಪ್ರಶಾಂತ್‌ಕುಮಾರ್‌ ತಿಳಿಸಿರುವುದಾಗಿ ‘ದಿ ವೈರ್‌’ ಸುದ್ದಿಜಾಲತಾಣ ವಿಶೇಷ ವರದಿ ಮಾಡಿದೆ.

ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಅತ್ಯುನ್ನತ ಸ್ಥಾನದಲ್ಲಿ ಕುಳಿತಿರುವ ಪ್ರಶಾಂತ್‌ಕುಮಾರ್‌‌ ದಿ ವೈರ್‌ನೊಂದಿಗೆ ಮಾತನಾಡುತ್ತಾ, “ಲಖಿಂಪುರ್‌ ಘಟನೆಯ ನಂತರ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಯುಪಿ ಪೊಲೀಸರು ತಮ್ಮ ಕೈಲಾದಷ್ಟು ಕೆಲಸ ಮಾಡಿದ್ದಾರೆ. ರಾಜಕೀಯ ಮೈಲೇಜ್‌‌ ಪಡೆಯಲು ಬಂದ ಪಕ್ಷಗಳು ಹಾಗೂ ವಿವಿಐಪಿಗಳ ಭೇಟಿಯಿಂದಾಗಿ ಸಮಯ ವ್ಯರ್ಥವಾಗಿದೆ” ಎಂದಿದ್ದಾರೆ.

ಇದನ್ನೂ ಓದಿರಿ: ರೈತರ ಹತ್ಯಾಕಾಂಡಕ್ಕೆ ಪ್ರತಿರೋಧ: ಅ.18ಕ್ಕೆ ರೈಲ್ ರೋಕೋ, 26ಕ್ಕೆ ಲಕ್ನೋದಲ್ಲಿ ಮಹಾಪಂಚಾಯತ್

ಲಖಿಂಪುರ್ ಖೇರಿ ಹತ್ಯಾಕಾಂಡ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ಕಡೆಗಳಿಂದ ಒತ್ತಡ ಹೆಚ್ಚಾದ ಕಾರಣದಿಂದಾಗ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ, ಶನಿವಾರ ಉತ್ತರ ಪ್ರದೇಶ ಪೊಲೀಸರ ಅಪರಾಧ ವಿಭಾಗದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಅಕ್ಟೋಬರ್‌ 03 ರಂದು (ಭಾನುವಾರ) ನಡೆದ ರೈತರ ಹತ್ಯಾಕಾಂಡ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ದೇಶದಾದ್ಯಂತ ಪ್ರತಿಭಟನೆ ನಡೆದಿತ್ತ. ಬಳಿಕ ಸೋಮವಾರ ಉತ್ತರ ಪ್ರದೇಶ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.

ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಿಗೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಬಹಿರಂಗ ಬೆದರಿಕೆ ಹಾಕಿದ್ದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು, ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಹೆಲಿಪ್ಯಾಡ್ ಅನ್ನು ಆಕ್ರಮಿಸಿಕೊಂಡಿದ್ದರು. ಈ ವೇಳೆ ಪ್ರತಿಭಟನೆ ನಡೆಸಿ ವಾಪಸ್ ತೆರಳುತ್ತಿದ್ದ ರೈತರ ಮೇಲೆ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ರೈತರ ಮೇಳೆ ಕಾರು ಹರಿಸಿ ನಾಲ್ವರ ರೈತರ ಹತ್ಯೆಗೆ ಕಾರಣರಾಗಿದ್ದಾರೆ ಎಂದು ರೈತರು ಆರೋಪಿಸಿದ್ದರು.

ರೈತರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆಶಿಶ್ ಮಿಶ್ರಾ ಮತ್ತು 15 ರಿಂದ 20 ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಗಲಭೆ ಇತ್ಯಾದಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಐದು ದಿನಗಳ ನಂತರವೂ ಆಶಿಶ್‌ನನ್ನು ಬಂಧಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಯುಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಯುಪಿ ಪೊಲೀಸರು ಗುರುವಾರ ಆಶಿಶ್ ಮಿಶ್ರಾಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಆದರೆ, ಆವರು ಹಾಜರಾಗಿರಲಿಲ್ಲ.

ನಂತರ ಪೊಲೀಸ್ ಅಧಿಕಾರಿಗಳು ಶುಕ್ರವಾರ ಎರಡನೇ ಬಾರಿ ಸಮನ್ಸ್ ನೀಡಿದ್ದರು. ಆರೋಪಿ ಆಶಿಶ್ ಲಖಿಂಪುರದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಯೊಳಗೆ ವಿಚಾರಣೆಗಾಗಿ ಅಪರಾಧ ವಿಭಾಗದ ಮುಂದೆ ಹಾಜರುಪಡಿಸುವಂತೆ ಹೇಳಿದ್ದರು.

ಆಶಿಶ್ ನೇಪಾಳಕ್ಕೆ ಪರಾರಿಯಾಗಿದ್ದಾರೆ ಮತ್ತು ತಾನಿರುವ ಸ್ಥಳವನ್ನು ಪದೇ ಪದೇ ಬದಲಾಯಿಸುತ್ತಿದ್ದನೆಂಬ ಮಾಧ್ಯಮದ ವರದಿಗಳನ್ನು ನಿರಾಕರಿಸಿದ್ದ ಸಚಿವ ಅಜಯ್ ಮಿಶ್ರಾ, ತನ್ನ ಮಗ ಲಖಿಂಪುರದ ಮನೆಯಲ್ಲಿದ್ದಾನೆ. ಆತ ಶನಿವಾರ ಪೊಲೀಸರ ಮುಂದೆ ಹಾಜರಾಗುತ್ತಾನೆ ಎಂದು ಹೇಳಿದ್ದರು.

ಇದನ್ನೂ ಓದಿರಿ: ನಾವು ಕೂಡ ರೈತರು, ಪ್ರಿಯಾಂಕ, ರಾಹುಲ್ ಅವರನ್ನು ಸ್ವಾಗತಿಸುತ್ತೇವೆ: ಬಿಜೆಪಿ ಕಾರ್ಯಕರ್ತನ ಕುಟುಂಬ

LEAVE A REPLY

Please enter your comment!
Please enter your name here