Homeಮುಖಪುಟಅಸ್ಸಾಂ ವಿಧಾನಸಭಾ ಚುನಾವಣೆ: ಮೈತ್ರಿಗಳ ಕದನ

ಅಸ್ಸಾಂ ವಿಧಾನಸಭಾ ಚುನಾವಣೆ: ಮೈತ್ರಿಗಳ ಕದನ

- Advertisement -
- Advertisement -

ಪ್ರತಿ ಮಾನ್ಸೂನ್‌ಗೆ ಬದಲಾಗುವ ಅಸ್ಸಾಂನ ಕ್ರಿಯಾಶೀಲ ನದಿಪಾತ್ರದ ಭೂಪ್ರದೇಶದಂತೆ, ಅಸ್ಸಾಂ ತನ್ನ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪ್ರತಿದಿನ ವಿಭಿನ್ನ ಸನ್ನಿವೇಶವನ್ನು ಪ್ರಸ್ತುತಪಡಿಸುತ್ತಿದೆ. ಮಾರ್ಚ್ 10 ರಂದು ಮೊದಲ ಸುತ್ತಿನ ನಾಮಪತ್ರಗಳನ್ನು ಸಲ್ಲಿಸುತ್ತಿದ್ದಂತೆ, 126 ಕ್ಷೇತ್ರಗಳ ರಾಜಕೀಯ ಚಿತ್ರಣದಲ್ಲಿ, ಸ್ನೇಹಪರ ಸ್ಪರ್ಧೆಗಳೊಂದಿಗೆ ಮೂರು ವಿಭಿನ್ನ ರಾಜಕೀಯ ಶಿಬಿರಗಳು ಹೊರಹೊಮ್ಮಿವೆ. ಮಾರ್ಚ್ 27 ರಿಂದ ಏಪ್ರಿಲ್ 6 ರವರೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಭಾರತದ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಅಸ್ಸಾಂ ಸರ್ಕಾರವು ನಡೆಸಿದ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ಇತ್ತೀಚೆಗೆ ರಾಜ್ಯದ ಜನರು ಪ್ರಕ್ಷುಬ್ಧ ಸಮಯವನ್ನು ಎದುರಿಸುವಂತೆ ಮಾಡಿತು. ಒಂದು ವರ್ಷ ನಡೆದ ಈ ಪ್ರಕ್ರಿಯೆಯಲ್ಲಿ 19 ಲಕ್ಷ ಜನರ ಪಟ್ಟಿಯನ್ನು ಸಿದ್ಧಪಡಿಸಿ, ಅವರನ್ನು ಭಾರತೀಯ ನಾಗರಿಕರಲ್ಲದವರು ಎಂದು ಪರಿಗಣಿಸಲಾಯಿತು. ಇದರ ನಂತರ ರಾಜ್ಯಾದ್ಯಂತ ವ್ಯಾಪಕವಾಗಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಆಂದೋಲನವು ಕನಿಷ್ಠ ಐದು ಯುವ ಪ್ರತಿಭಟನಾಕಾರರ ಸಾವಿಗೆ ಕಾರಣವಾಯಿತು ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಖಿಲ್ ಗೊಗೊಯ್ ಅವರಂತಹ ರೈತ ಮುಖಂಡರನ್ನು ಬಂಧಿಸಿತು.

PC : The Economic Times

ಸಿಎಎ ವಿರೋಧಿ ಆಂದೋಲನವು ರಾಜ್ಯದ ರಾಜಕೀಯ ಚಿತ್ರಣದಲ್ಲಿ ತನ್ನ ಛಾಪು ಮೂಡಿಸಿದೆ. ದೇಶದ ಮೇಲೆ ಆತುರದಿಂದ ಹೇರಿದ ಲಾಕ್‌ಡೌನ್ ಹಿನ್ನೆಲೆಯಲ್ಲಿ, ರೈಜೋರ್ ದಳ ಮತ್ತು ಅಸೋಮ್ ಜಾತೀಯ ಪರಿಷತ್ (ಎಜೆಪಿ) ಎಂಬ ಎರಡು ರಾಜಕೀಯ ಸಂಘಟನೆಗಳು ಹೊರಹೊಮ್ಮಿದವು. ಅವು ಸಿಎಎ ವಿರೋಧಿ ಆಂದೋಲನದ ಕೋಪವನ್ನು ಬಳಸಿಕೊಂಡು ಬಿಜೆಪಿ-ಎಜಿಪಿ ಮೈತ್ರಿಯನ್ನು ಉರುಳಿಸಲು ಯತ್ನಿಸಿದವು. ರೈಜೋರ್ ದಳ ರಾಜ್ಯಾದ್ಯಂತ ರೈತ ಮತ್ತು ಭೂ ಹಕ್ಕುಗಳ ಆಂದೋಲನವನ್ನು ಮುನ್ನಡೆಸಿದ ಅಂಚಿನಲ್ಲಿರುವ ಸಮುದಾಯಗಳೊಂದಿಗೆ ಕೆಲಸ ಮಾಡುವ 70 ಸಂಘಟನೆಗಳ ಸಂಯೋಜನೆಯಿಂದ ಹೊರಹೊಮ್ಮಿತು. ಮತ್ತೊಂದೆಡೆ, ಸಿಎಎ ವಿರೋಧಿ ಆಂದೋಲನದ ಹಿನ್ನೆಲೆಯಲ್ಲಿ ಪಕ್ಷವನ್ನು ತೊರೆದ ಮಾಜಿ ಅಸೋಮ್ ಗಣ ಪರಿಷತ್ ನಾಯಕರ ಸಹಾಯದಿಂದ ಅಸ್ಸಾಂನ ಪ್ರಮುಖ ವಿದ್ಯಾರ್ಥಿ ಸಂಘಟನೆ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್‌ನ ಮಾಜಿ ಕಾರ್ಯದರ್ಶಿ ಲುರಿನ್ ಜ್ಯೋತಿ ಗೊಗೊಯ್ ಎಜೆಪಿ ಸ್ಥಾಪಿಸಿದರು.

ರೈಜೋರ್ ದಳವನ್ನು ಮುನ್ನಡೆಸುವ ಅಖಿಲ್ ಗೊಗೊಯ್ ಅವರು ಗೌಹಾಟಿ ಕೇಂದ್ರ ಕಾರಾಗೃಹದಿಂದಲೇ ಅಸ್ಸಾಂನ ಶಿವಸಾಗರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಮತದಾನದ ನಾಮಪತ್ರಗಳ ಸಲ್ಲಿಕೆ ಪ್ರಾರಂಭವಾಗುವ ಮೊದಲು ಪಕ್ಷವನ್ನು ನೋಂದಾಯಿಸಲು ಸಾಧ್ಯವಾಗದಿದ್ದರೂ ಸಹ, ಅಖಿಲ್ ಅವರ ಕಾರ್ಯಕರ್ತರು ರಾಜ್ಯದಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ದೇಣಿಗೆ ಸಂಗ್ರಹಿಸಿದರು. ರೈಜೋರ್ ದಳದ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ. ರೈಜೋರ್ ದಳಕ್ಕೆ ಹೋಲಿಸಿದರೆ, ಎಜೆಪಿ ಅಸ್ಸಾಂನಾದ್ಯಂತ ಚುನಾವಣೆಗೆ ಮುಂಚೆಯೇ ದೊಡ್ಡ ಜಾಹೀರಾತುಗಳನ್ನು ಹಾಕಲು ಪ್ರಾರಂಭಿಸಿತು.

ಆದರೂ, ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಂದ ನಂತರ ಬಿಜೆಪಿಗೆ ಸವಾಲು ಹಾಕಲು ಒಂದು ಏಕೀಕೃತ ವಿರೋಧವನ್ನು ಹೊಂದಬೇಕೆಂದು ಅಸ್ಸಾಮಿಗಳ ನಾಗರಿಕ ಸಮಾಜದ ವಿವಿಧ ವರ್ಗಗಳ ಹಲವಾರು ಮನವಿಗಳ ಹೊರತಾಗಿಯೂ ಕಾಂಗ್ರೆಸ್ (ಐ) ನೇತೃತ್ವದ ಅಂಚಲಿಕ್ ಗಣ ಮೋರ್ಚಾ (ಪ್ರಾದೇಶಿಕ ಪ್ರಜಾಪ್ರಭುತ್ವ ಮೈತ್ರಿ) ಒಕ್ಕೂಟದೊಂದಿಗೆ ಈ ಎರಡು ಹೊಸ ಪಕ್ಷಗಳು ಸೇರಲಿಲ್ಲ. ರೈಜೋರ್ ದಳ ಮತ್ತು ಎಜೆಪಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಿಂದ ದೂರ ಉಳಿದಿದ್ದರಿಂದ, ಪ್ರಬಲ ಉದ್ಯಮಿ ಮತ್ತು ಧುಬ್ರಿಯ ಲೋಕಸಭಾ ಸದಸ್ಯ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಜೊತೆಗೆ, ಎಡ ಪಕ್ಷಗಳು ಸಹ ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ಸೇರಿಕೊಂಡವು.

ಮತ್ತೊಂದೆಡೆ, ಆಡಳಿತ ವಿರೋಧಿ ಅಲೆ ಹೊಂದಿರುವ ಪ್ರಸ್ತುತ ಬಿಜೆಪಿ-ಎಜೆಪಿ ಮೈತ್ರಿ, ಬಂಗಾಳಿ ಮುಸ್ಲಿಂ ಜನರ ವ್ಯಾಪಕ ಬೆಂಬಲ ಹೊಂದಿರುವ, ಅಸ್ಸಾಂ ರಾಜಕೀಯದಲ್ಲಿ ಹೊರಗಿನವನೆಂದು ಪರಿಗಣಿಸಲಾಗಿದ ಎಐಯುಡಿಎಫ್ ಜೊತೆ ಕೈಜೋಡಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ವಿರುದ್ಧ ಆರೋಪಗಳ ಆಕ್ರಮಣ ನಡೆಸಿತು. ಎಐಯುಡಿಎಫ್ ಎನ್‌ಆರ್‌ಸಿ ಪ್ರಕ್ರಿಯೆ ಮತ್ತು ಅದರ ವಿರುದ್ಧದ ಅಸಮಾಧಾನಗಳನ್ನು ತನ್ನ ಅಭಿಯಾನದ ಮೂಲಾಧಾರವಾಗಿ ಬಳಸಿದೆ ಮತ್ತು ಇದು ಅಸ್ಸಾಂನ ಕೆಳಭಾಗದ ದ್ವೀಪದ ಆವಾಸಸ್ಥಾನಗಳಲ್ಲಿನ ನದಿಪ್ರದೇಶದ ಪಾತ್ರಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದು ಮಾಡಿದೆ. ಹಿಂದಿನ ವಿಧಾನಸಭಾ ಚುನಾವಣೆಗೆ ಮುನ್ನ 2015 ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಬಿಜೆಪಿ-ಎಜಿಪಿ ಸರ್ಕಾರದ ಹಿರಿಯ ಮುಖಂಡ ಮತ್ತು ಕ್ಯಾಬಿನೆಟ್ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು ಎಐಯುಡಿಎಫ್‌ಅನ್ನು ಆಯ್ಕೆ ಮಾಡದಂತೆ ಮತದಾರರಿಗೆ ಹಲವಾರು ಮನವಿಗಳನ್ನು ಮಾಡಿದ್ದಾರೆ. ಹಲವಾರು ಪ್ರಚಾರಸಭೆಗಳಲ್ಲಿ ಅವರು, ಕಾಂಗ್ರೆಸ್ ನೇತೃತ್ವದ ಒಕ್ಕೂಟವು ಅಧಿಕಾರಕ್ಕೆ ಬಂದರೆ, ಅಸ್ಸಾಂ ಅನ್ನು ’ವಿದೇಶಿಯರು’ ಮತ್ತು ’ಬಾಂಗ್ಲಾದೇಶಿಗಳು’ ನಡೆಸುತ್ತಾರೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದೇ ಶರ್ಮಾ ಮತ್ತು ಎಜಿಪಿಯಲ್ಲಿನ ಅವರ ಸಹೋದ್ಯೋಗಿಗಳು ಸಿಎಎ ಅಥವಾ ಎನ್‌ಆರ್‌ಸಿ ಪ್ರಕ್ರಿಯೆ ಒಂದು ಸಮಸ್ಯೆಯೇ ಅಲ್ಲ ಎಂದು ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ.

ಕುತೂಹಲಕಾರಿಯಾಗಿ, 1980ರ ದಶಕದ ಅಸ್ಸಾಂ ಚಳುವಳಿಯ ಟೀಕೆಗಳಿಗೆ ಹೆಸರುವಾಸಿಯಾದ ಹಿರೆನ್ ಗೋಹೈನ್ ಅವರಂತಹ ಬುದ್ಧಿಜೀವಿಗಳು ಕಾಂಗ್ರೆಸ್ ಮೈತ್ರಿಕೂಟಕ್ಕೆ ಸೇರದ ಕಾರಣ ರೈಜೋರ್ ದಳದ ವಿರುದ್ದವು ಟೀಕೆಗಳನ್ನು ಮಾಡಿದ್ದಾರೆ. ಗೌಹಾಟಿ ಕೇಂದ್ರ ಕಾರಾಗೃಹದಿಂದ ಬರೆದ ಪತ್ರವೊಂದರಲ್ಲಿ ಅಖಿಲ್ ಗೊಗೊಯ್ ಅವರು ಕಾಂಗ್ರೆಸ್ ನೇತೃತ್ವದ ಮೈತ್ರಿಗೆ ಸೇರದ ಮೂಲಕ ಎಜೆಪಿಯೊಂದಿಗಿನ ಮೈತ್ರಿಗೆ ಅಂಟಿಕೊಳ್ಳಲು ನಿರ್ಧರಿಸಿದ ಬೆನ್ನಲ್ಲೇ ಫೆಬ್ರವರಿಯಲ್ಲಿ ಗೋಹೈನ್ ಪಕ್ಷದ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಮತ್ತೊಂದೆಡೆ, ಬಿಜೆಪಿ-ಎಜಿಪಿ ಮತ್ತು ಎನ್‌ಡಿಎ ಪಾಲುದಾರರಾಗಿದ್ದ ಹಗ್ರಾಮಾ ಮೊಹಿಲರಿ ನೇತೃತ್ವದ ಬೋಡೋ ಪೀಪಲ್ಸ್ ಫ್ರಂಟ್ (ಬಿಪಿಎಫ್) ಬಣ ಬದಲಾಯಿಸಿ ಕಾಂಗ್ರೆಸ್ ನೇತೃತ್ವದ ಮೈತ್ರಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಬೋಡೋ ಜನರಿಗೆ ಒಂದು ನೆಲೆ ಕಲ್ಪಿಸುವ ದೀರ್ಘಕಾಲದ ಹೋರಾಟದಿಂದ ಬಿಪಿಎಫ್ ಹೊರಹೊಮ್ಮಿತು, ಬೊಡೊ ಜನಾಂಗವು ಟಿಬೆಟೊ-ಮಂಗೋಲಾಯ್ಡ್ ಬುಡಕಟ್ಟಾಗಿದ್ದು ಹೆಚ್ಚಾಗಿ ಬ್ರಹ್ಮಪುತ್ರದ ಉತ್ತರ ದಂಡೆಯ ಉದ್ದಕ್ಕೂ ಕೇಂದ್ರೀಕೃತವಾಗಿದೆ. ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ-1 ಬೊಡೊಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್‌ಗೆ ದಾರಿ ಮಾಡಿಕೊಡುವ ಹೊಸ ಒಪ್ಪಂದಕ್ಕೆ ಸಹಿ ಹಾಕುವವರೆಗೂ ಹಗ್ರಾಮ 2003 ರವರೆಗೆ ಭಾರತೀಯ ಸರ್ಕಾರದ ವಿರುದ್ಧ ತನ್ನ ಬೋಡೋಲ್ಯಾಂಡ್ ಲಿಬರೇಶನ್ ಟೈಗರ್ಸ್‌ನೊಂದಿಗೆ ಸಶಸ್ತ್ರ ಹೋರಾಟವನ್ನು ನಡೆಸಿದವರು.

ಚುನಾವಣೆಯ ನಂತರ 2003 ರಲ್ಲಿ ಹಗ್ರಾಮಾ ಹೊಸದಾಗಿ ರಚನೆಯಾದ ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗುತ್ತಿದ್ದಂತೆ, ಈ ಪ್ರದೇಶದ ಮತ್ತೊಂದು ಪ್ರಬಲ ಸಂಘಟನೆಯಾದ ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್ ಭಾರತೀಯ ಒಕ್ಕೂಟದ ಅಡಿಯಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ತಮ್ಮ ಬೇಡಿಕೆಯನ್ನು ನವೀಕರಿಸಿತು. 2020 ರಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಿರುವ ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿಗೆ ಹೆಚ್ಚಿನ ಅಧಿಕಾರ ಮತ್ತು ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುವ ಮೂಲಕ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ನಿವಾರಿಸಲು ಯತ್ನಿಸಿದರು. ಪ್ರತ್ಯೇಕವಾದಿ ಗುಂಪು ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊಡೊಲ್ಯಾಂಡ್ ಸರ್ಕಾರಕ್ಕೆ ತಮ್ಮ ಶಸಾಸ್ತ್ರಗಳನ್ನು ಮರಳಿಸಿ ಮುಖ್ಯಧಾರೆಗೆ ಬಂದ ಕಾರಣಕ್ಕೆ ಈ ಹೊಸ ಒಪ್ಪಂದವನ್ನು ಐತಿಹಾಸಿಕವೆಂದು ಪರಿಗಣಿಸಲಾಗಿದೆ.

ಎಬಿಎಸ್‌ಯು ಸಂಘಟನೆಯ ವಿದ್ಯಾರ್ಥಿಗಳ ನಾಯಕ ಪ್ರಮೋದ್ ಬೊರೊ 2020 ರ ಡಿಸೆಂಬರ್‌ನಲ್ಲಿ ನಡೆದ ಬಿಟಿಸಿ ಚುನಾವಣೆಗೆ ಮುನ್ನ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್‌ನ (ಯುಪಿಪಿಎಲ್) ಅಧ್ಯಕ್ಷರಾದರು, ಇದು ಬೊಡೊಲ್ಯಾಂಡ್‌ನ ರಾಜಕೀಯ ಚಿತ್ರಣದಲ್ಲಿ ಗಣನೀಯವಾಗಿ ಹೊಸ ರಾಜಕೀಯ ಪಕ್ಷ. ಬಿಟಿಸಿ ಚುನಾವಣೆಯಲ್ಲಿ ಮೊಹಿಲರಿ ನೇತೃತ್ವದ ಬಿಪಿಎಫ್ ಬಿಜೆಪಿಯೊಂದಿಗೆ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲು ಸಾಧ್ಯವಾಗದ ಕಾರಣ, ಬಿಜೆಪಿ ಯುಪಿಪಿಎಲ್ ಅನ್ನು ಹೊಸ ಮಿತ್ರ ಪಕ್ಷವನ್ನಾಗಿ ಸೇರಿಸಿಕೊಂಡಿತು. ರಾಜ್ಯ ಸಚಿವ ಸಂಪುಟದಲ್ಲಿ ಮೂವರು ಮಂತ್ರಿಗಳಿದ್ದರೂ, ಫೆಬ್ರವರಿ 27 ರಂದು ಮೊಹಿಲರಿ ಅವರು ಮಹಾಜೋತ್‌ಗೆ ಸೇರುವುದಾಗಿ ಘೋಷಿಸಿದರು. ಬಿಪಿಎಫ್ ಬಿಟಿಸಿಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಮುಂದುವರೆದಿದೆ ಮತ್ತು ರಾಜ್ಯ ಅಸೆಂಬ್ಲಿ ಮತ್ತು ಬಿಟಿಸಿ ಎರಡರಲ್ಲೂ ಬೋಡೋಲ್ಯಾಂಡ್‌ನ ಮತಗಳ ಹೆಚ್ಚಿನ ಪಾಲನ್ನು ಹೊಂದಿದೆ. ಹಿಂದಿನ ದಶಕಗಳಲ್ಲಿ ಬೋಡೋಗಳು ಮತ್ತು ಬಂಗಾಳಿ ಮುಸ್ಲಿಮರು ಹಿಂಸಾತ್ಮಕ ಸಂಘರ್ಷ ನಡೆಸಿದ್ದರೂ, ಎಐಯುಡಿಎಫ್ ಅನ್ನು ಒಳಗೊಂಡಿರುವ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದೊಂದಿಗೆ ಬಿಪಿಎಫ್ ಕೈಜೋಡಿಸಿರುವುದು, ಎರಡು ಧ್ರುವಗಳನ್ನು ಒಂದೆಡೆ ಸೇರಿಸಿದಂತಾಗಿದೆ.

ಇತರ ರಾಜಕೀಯ ಸಂಘಟನೆಗಳ ಪೈಕಿ, ಮೇಲ್ಭಾಗದ ಅಸ್ಸಾಂನ ಬ್ರಹ್ಮಪುತ್ರದ ಉತ್ತರ ದಂಡೆಯಲ್ಲಿ ನೆಲೆ ಹೊಂದಿರುವ ಗಣಶಕ್ತಿ, ಪಂಚಾಯತ್ ಮತ್ತು ರಾಜ್ಯ ವಿಧಾನಸಭೆ ಮಟ್ಟದಲ್ಲಿ ಬಿಜೆಪಿಗೆ ಚುನಾವಣೆಗೆ ಸಹಕರಿಸಿ ಜಯಗಳಿಸಿದ ನಂತರ ಈಗ ಸಂಪೂರ್ಣವಾಗಿ ಬಿಜೆಪಿಯೊಂದಿಗೆ ವಿಲೀನಗೊಂಡಿದೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಗಡಿಯ ಸಮೀಪವಿರುವ ಜೊನೈ ಕ್ಷೇತ್ರದ ಶಾಸಕ ಭೂಬಾನ್ ಪೆಗು ಬಿಜೆಪಿಗೆ ಸೇರಿದ್ದಾರೆ. ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ಧ್ವನಿ ನೀಡಲು ಹುಟ್ಟಿಕೊಂಡ ಗಣಶಕ್ತಿ ಸ್ಥಳೀಯ ಪಂಚಾಯತ್ ಸದಸ್ಯರನ್ನು ಆಯ್ಕೆ ಮಾಡಿದೆ, ಆದರೆ ಈ ರಚನೆಯು ರಾಜ್ಯ ವಿಧಾನಸಭಾ ಚುನಾವಣೆಗಳಿಂದ ಕಾಣೆಯಾಗಿದೆ.

PC : Times of india

ಮೂರು ಒಕ್ಕೂಟಗಳು ಕ್ಷೇತ್ರಗಳಾದ್ಯಂತ ಸ್ನೇಹಪರ ಸ್ಪರ್ಧೆಗಳಲ್ಲಿ ಹಲವಾರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಅಸ್ಸಾಂ ಸ್ವತಂತ್ರ ಮತ್ತು ಇಶ್ಯೂ ಆಧಾರಿತ ಚುನಾವಣಾ ಪ್ರಚಾರದ ಏರಿಕೆಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿ ಪ್ರಣಬ್ ಡೋಲಿಯಂತಹ ಅಭ್ಯರ್ಥಿಗಳಿಗೆ ಸಹಾಯಹಸ್ತ ಚಾಚಿದ್ದರೂ, ಅವರು ಸ್ವತಂತ್ರ ಅಭ್ಯರ್ಥಿಯಾಗಿ ಎಜಿಪಿ ಅಧ್ಯಕ್ಷ ಮತ್ತು ರಾಜ್ಯ ಕೃಷಿ ಸಚಿವ ಅತುಲ್ ಬೋರಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ದೊಡ್ಡ ಚಹಾ ತೋಟಗಳಲ್ಲಿ ಕೆಲಸ ಮಾಡುವ ದುರ್ಬಲ ಆದಿವಾಸಿ ಸಮುದಾಯಗಳ ಮತ್ತು ಪ್ರವಾಹ ಪೀಡಿತ ಸಮಸ್ಯೆಗೆ ಗುರಿಯಾಗುವ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಜನರ ಒಗ್ಗಟ್ಟನ್ನು ರೂಪಿಸುವ ಗುರಿಯೊಂದಿಗೆ, ಡೋಲೆ ಅವರ ರಾಜಕೀಯ ಅಭಿಯಾನಕ್ಕೆ ಆಹಾರ ಬೆಳೆಗಳನ್ನು ಬೆಳೆಯುವ ಹಳ್ಳಿಗಳು ಧನಸಹಾಯ ಮಾಡುತ್ತಿವೆ. ಅಸ್ಸಾಮಿಗಳ ಸಮಾಜದ ದೊಡ್ಡ ಜನಸಮೂಹಗಳು ಸಹ ರೈಜೋರ್ ದಳ ಮತ್ತು ಎಜೆಪಿ ಅಭ್ಯರ್ಥಿಗಳ ಬಗ್ಗೆ ಸಹಾನುಭೂತಿ ಹೊಂದಿದ್ದರೂ, ಇತರ ಅಭ್ಯರ್ಥಿಗಳಿಗೆ ಡೋಲಿಯವರಿಗೆ ಕಂಡುಬಂದಿರುವ ರೀತಿಯ ಬೆಂಬಲ ಕಂಡುಬಂದಿಲ್ಲ.

ತಳಮಟ್ಟದ ಸಮಸ್ಯೆಗಳು ಯಾವುದೇ ಪ್ರಾತಿನಿಧ್ಯ ಕಂಡುಕೊಳ್ಳದ ಈ ಚುನಾವಣೆಗಳಲ್ಲಿ ಸ್ಪರ್ಧಿಸುವ ಎಲ್ಲಾ ಒಕ್ಕೂಟಗಳ ಭವಿಷ್ಯವನ್ನು ಮೇ 2 ನಿರ್ಧರಿಸುತ್ತದೆ. ಪ್ರಣಾಳಿಕೆಗಳು ಭರವಸೆಗಳಿಂದ ತುಂಬಿವೆ, ಆದರೆ ರಾಜ್ಯಾದ್ಯಂತ ಆಸ್ಮಿತೆಯ ಆಧಾರದಲ್ಲಿ ಪ್ರಚಾರಗಳು ಹೆಚ್ಚಾಗಿ ನಡೆದಿವೆ. ಅಂತಹ ಧ್ರುವೀಕೃತ ವಾತಾವರಣದಲ್ಲಿ, ಭಾರತದ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ವಿವಿಧ ಪಂಚಾಯತ್, ಸ್ವಾಯತ್ತ ಮಂಡಳಿ ಮತ್ತು ಪುರಸಭೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸೇರಿ 2019 ರವರೆಗೆ ಕೇವಲ 36 ಪ್ರತಿಶತದಷ್ಟು ಮತ ಪಾಲನ್ನು ಹೊಂದಿವೆ. ಪ್ರಸ್ತುತದಲ್ಲಿ, ಕಾಂಗ್ರೆಸ್ ನೇತೃತ್ವದ ಒಕ್ಕೂಟದ ಪ್ರಸ್ತುತ ವೋಟ್‌ಶೇರ್ ಶೇಕಡಾ 48 ರಷ್ಟಿದ್ದರೆ, ಬಿಜೆಪಿ ಒಕ್ಕೂಟದ ವೋಟ್‌ಶೇರ್ ಶೇ 38 ರಷ್ಟಿದೆ.

ಅನುಪಮ್ ಚಕ್ರವರ್ತಿ

ಅನುಪಮ್ ಚಕ್ರವರ್ತಿ
ಅಸ್ಸಾಮಿನ ಗೌಹಾಟಿಯಲ್ಲಿ ನೆಲೆಸಿರುವ ಸ್ವತಂತ್ರ ಪತ್ರಕರ್ತರು.


ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆ: ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...