ಕಳ್ಳ ಬೇಟೆಗಾರರೆಂದು ಶಂಕಿಸಿ ನಾಗಾನ್ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಂ ಸಹೋದರರನ್ನು ಅರಣ್ಯ ಇಲಾಖೆ ಗಾರ್ಡ್‌ಗಳು ಹತ್ಯೆ ಮಾಡಿರುವ ಘಟನೆ ಅಸ್ಸಾಂನ ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಅಧಿಕಾರಕ್ಕೇರಿದಾಗಿನಿಂದ ಸಿಎಂ ಶರ್ಮಾ ಮತ್ತು ಅವರ ಸರ್ಕಾರ ಮಾನವ ಹಕ್ಕುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿರುವುದು ಮತ್ತು ಕೋಮುವಾದ ಮಾಡುತ್ತಿರುವುದು ಗೊತ್ತೇ ಇದೆ. ಈ ಹತ್ಯೆಯ ಬಳಿಕ ರಾಜ್ಯದ ಹೋರಾಟಗಾರರು, ರಾಜಕಾರಣಿಗಳು ಮತ್ತು ಪ್ರತಿಪಕ್ಷಗಳಲ್ಲಿ ಕಳವಳ ಹೆಚ್ಚಾಗಿದೆ.
ನಾಗಾನ್ ಜಿಲ್ಲೆ ಲಾಖೋವಾ ಬುರ್ಹಾಚಪೋರಿ ವನ್ಯಜೀವಿ ಅಭಯಾರಣ್ಯದ ಗೋರಾಜನ್ ಅರಣ್ಯ ಪ್ರದೇಶದ ರೌಮರಿ ಬೀಲ್ ಬಳಿ ಜೂನ್ 22ರಂದು ಇಬ್ಬರು ಸಹೋದರರಾದ ಸೋಮರ್ ಉದ್ದೀನ್ (36) ಮತ್ತು ಅಬ್ದುಲ್ ಜಲೀಲ್ (44) ಎಂಬವರು ಹತ್ಯೆ ಮಾಡಲಾಗಿದೆ. ಸ್ಥಳೀಯ ಧಿಂಗ್ಬೋರಿ ಚಪೋರಿ ಗ್ರಾಮದ ನಿವಾಸಿಗಳಾದ ಇವರನ್ನು ಕಳ್ಳ ಬೇಟೆಗಾರರು ಎಂದು ಭಾವಿಸಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಕ್ಕಿ ಕೊಂದಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಆಲ್-ಅಸ್ಸಾಂ ಮೈನಾರಿಟಿ ಸ್ಟೂಡೆಂಟ್ಸ್ ಯೂನಿಯನ್ (ಎಎಎಂಎಸ್‌ಯು) ಗುರುವಾರ (ಜೂನ್ 27) ಸಿಎಂ ಶರ್ಮಾ ಅವರಿಗೆ ಮನವಿ ಪತ್ರ ಕಳುಹಿಸಿದ್ದು, ಇಬ್ಬರು ಮೃತ ಸಹೋದರರಿಗೆ ನ್ಯಾಯ ಕೊಡಿಸಬೇಕು ಮತ್ತು ಅವರ ಕುಟುಂಬಸ್ಥರಿಗೆ ನಗದು ಪರಿಹಾರ ನೀಡಬೇಕು ಎಂದು ಆಗ್ರಹಿಸಿದೆ.
ಎಎಎಂಎಸ್‌ಯು ಈ ಸಂಬಂಧ ಜೂನ್ 24 ರಂದು ನಾಗಾನ್ ಜಿಲ್ಲೆಯ ಜುರಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದೆ. ಎಫ್‌ಐಆರ್‌ನಲ್ಲಿ ಎಎಎಂಎಸ್‌ಯು ಅರಣ್ಯ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಹೆಸರಿಸಿದ್ದು, ಅವರು ಇಬ್ಬರು ಸಹೋದರರನ್ನು ‘ಸಾಮಾನ್ಯ ಉದ್ದೇಶದಿಂದ’ ಕೊಂದಿದ್ದಾರೆ ಎಂದು ಆರೋಪಿಸಿದೆ.
ಎಎಎಂಎಸ್‌ಯುನ ಸಲಹೆಗಾರ ಐನುದ್ದೀನ್ ಅಹ್ಮದ್, “ಇಬ್ಬರು ಸಹೋದರರು ನಿರಾಯುಧರಾಗಿದ್ದರು. ಅವರ ಎದೆಗೆ ಗುಂಡಿಕ್ಕಿದ್ದಾರೆ. ಮೃತರು ಹತ್ತಿರದ ಹಳ್ಳಿಯ ರೈತರು, ಕಳ್ಳ ಬೇಟೆಗಾರರಲ್ಲ. ಇದು ಬಡ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆದ ಹತ್ಯೆ. ಸಿಎಂ ಶರ್ಮಾ ಅವರು ಬಹಳಷ್ಟು ವಿಷಯಗಳಿಗೆ ಉತ್ತರಿಸಬೇಕಿದೆ” ಎಂದಿದ್ದಾರೆ.
“ಇಬ್ಬರು ಸಹೋದರರು ಮಧ್ಯರಾತ್ರಿ ಅಕ್ರಮವಾಗಿ ಮೀನು ಹಿಡಿಯಲು ಅರಣ್ಯ ಪ್ರದೇಶ ಪ್ರವೇಶಿಸಿದ್ದರು. ಅರಣ್ಯ ಸಿಬ್ಬಂದಿ ಅವರನ್ನು ಗುರುತಿಸಿದಾಗ, ಸ್ಥಳದಿಂದ ಪಲಾಯನ ಮಾಡಲು ಪ್ರಯತ್ನಿಸಿದ್ದರು. ಈ ವೇಳೆ ಸಿಬ್ಬಂದಿ ಗುಂಡು ಹಾರಿಸಿದ್ದು, ಇಬ್ಬರೂ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರ ಎರಡು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಘಟನೆಯ ಕುರಿತು ತನಿಖೆ ನಡೆಸುವಂತೆ ಅಸ್ಸಾಂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ನೀಟ್ ಮಾತ್ರವಲ್ಲ, ಯುಪಿ ಶಾಸಕ ಬೇಡಿ ರಾಮ್ ಮೇಲಿವೆ ಎಂಟು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳು!


