ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಹರಸಾಹಸ ಮಾಡುತ್ತಿದ್ದ ಬಿಜೆಪಿಗೆ ಅದು ಸಾಧ್ಯವಾಗದಿದ್ದಾಗ ಸಮಾಧಾನ ನೀಡಿರುವುದು ಅಸ್ಸಾಂನಲ್ಲಿನ ಭರ್ಜರಿ ವಿಜಯವಾಗಿದೆ. ಇದುವರೆಗಿನ ಮತ ಎಣಿಕೆಯ ಪ್ರಕಾರ 84 ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿರುವ ಎನ್‌ಡಿಎ ಮೈತ್ರಿಕೂಟ ಸತತ ಎರಡನೇ ಬಾರಿ ಅಧಿಕಾರದತ್ತ ದಾಪುಗಾಲಿಟ್ಟಿದೆ.
ಒಟ್ಟು 126 ಕ್ಷೇತ್ರಗಳ ಅಸ್ಸಾಂನಲ್ಲಿ ಸರಳ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದೆ. ಸದ್ಯ 84 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಆಡಳಿತದ ಗದ್ದುಗೆ ಏರಲಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಈ ಬಾರಿ ತಮ್ಮ ಹಳೆಯ ಭದ್ರಕೋಟೆ ಅಸ್ಸಾಂನಲ್ಲಿ ಅಧಿಕಾರ ಮರಳ ಪಡೆಯಲು ತೀವ್ರ ಪ್ರಯತ್ನ ನಡೆಸಿತ್ತು. ಅದೆಲ್ಲದರ ಹೊರತಾಗಿಯೂ ಅದು 40 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸುತ್ತಿದೆ.
ಸಿಎಎ, ಎನ್‌ಆರ್‌ಸಿ ವಿರೋಧಿ ಹೋರಾಟಗಳಿಗೆ ಸಾಕ್ಷಿಯಾಗಿದ್ದ ಅಸ್ಸಾಂನಲ್ಲಿ ಯಾವುದೇ ಮಹತ್ವದ ಬದಲಾಣವೆಗಳು ಕಂಡುಬಂದಿಲ್ಲ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ರವರ ಆಡಳಿತಕ್ಕೆ ಜೈ ಎಂದಿರುವ ಮತದಾರರು ಮತ್ತೊಮ್ಮೆ ಅವಕಾಶ ನೀಡಿದ್ದಾರೆ.
ಇದನ್ನೂ ಓದಿ: ಕೇರಳ: ಎಡಪಕ್ಷಗಳ ಆಡಳಿತಕ್ಕೆ ಮಣೆ ಹಾಕಿದ ಜನ – ಮತ್ತೊಮ್ಮೆ ಅಧಿಕಾರದತ್ತ ಎಲ್‌ಡಿಎಫ್


