ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ. ಬದಲಾಗಿ, ಯುವಜನರ ಕಲ್ಯಾಣದ ಕುರಿತು ಮಾತನಾಡಲಾರಂಭಿಸಿದ್ದಾರೆ.
ಶನಿವಾರ (ಏ.4) ಗುವಾಹಟಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಪಿಜುಷ್ ಹಜಾರಿಕಾ, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನತೆಯ ಕಲ್ಯಾಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿವೆ” ಎಂದು ಹೇಳಿದ್ದಾರೆ. ತಮ್ಮ ಸರ್ಕಾರಗಳ ಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ.
ಬಿಜೆಪಿಯ ಈ ಹಠಾತ್ ಬದಲಾವಣೆಯು, ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಬಳಸುತ್ತಿದ್ದ ‘ನುಸುಳುಕೋರ’ ಎಂಬ ಹಳೆಯ ರಾಗವು ಯುವ ಮತದಾರರನ್ನು ಪ್ರಭಾವಿಸಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡಂತಿದೆ. ಅಲ್ಲದೆ, ಯುವಜನತೆಯಲ್ಲಿ ಎನ್ಡಿಎ ವಿರುದ್ಧ ಮೌನ ಅಲೆ ಇರುವ ಸಾಧ್ಯತೆಯನ್ನು ಬಿಜೆಪಿ ಅರಿತುಕೊಂಡಿದೆ. ಆದ್ದರಿಂದ, ಸರ್ಕಾರದ ಕಾರ್ಯವೈಖರಿ ಬರಿ ಭಾಷಣಕ್ಕೆ ಸೀಮಿತವಾಗಿಲ್ಲ, ಬದಲಿಗೆ ಜೀವನೋಪಾಯದ ಸಮಸ್ಯೆಗಳಿಗೂ ಸ್ಪಂದಿಸುತ್ತಿದೆ ಎಂದು ಮನವರಿಕೆ ಮಾಡಲು ಪ್ರಯತ್ನಿಸುತ್ತಿದೆ.
ಸಚಿವರು ನೀಡಿದ ಭರವಸೆಯ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಯುವಜನರಿಗೆ ಆರ್ಥಿಕ ನೆರವು ನೀಡಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ಯುವಜನರಿಗೆ ತಲಾ 5 ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡುವ ಯೋಜನೆಯನ್ನು ಬಿಜೆಪಿ ಹೊಂದಿದೆ ಎಂದು ವಿವರಿಸಿದ್ದಾರೆ.
2021ರಿಂದ 615 ಸ್ಟಾರ್ಟ್ಅಪ್ಗಳಿಗೆ ನೆರವು ನೀಡಲಾಗಿದ್ದು, ಎಂಎಸ್ಎಂಇ ವಲಯವು 82 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಮೂಲಕ ತಳಮಟ್ಟದ ಉದ್ಯಮಶೀಲತೆಯನ್ನು ವಿಸ್ತರಿಸಿದೆ ಎಂದು ಸಚಿವರು ಹೇಳಿಕೊಂಡಿದ್ದಾರೆ.
ಇದುವರೆಗೆ ಬಿಜೆಪಿ ‘ಜಾತಿ, ಮಾತಿ ಮತ್ತು ಭೇಟಿ’ (ಸಮುದಾಯ, ಭೂಮಿ ಮತ್ತು ಅಡಿಪಾಯ) ಎಂಬ ಘೋಷಣೆಯಡಿ ಧ್ರುವೀಕರಣದ ರಾಜಕಾರಣ ಮಾಡಿತ್ತು. ವಿಶೇಷವಾಗಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಸಲಾದ ಒತ್ತುವರಿ ತೆರವು ಕಾರ್ಯಾಚರಣೆಗಳ ಮೂಲಕ ಮತ ಸೆಳೆಯಲು ಪ್ರಯತ್ನಿಸಿತ್ತು.
ಶುಕ್ರವಾರ, ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಪ್ರಚಾರದಲ್ಲಿ ನುಸುಳುಕೋರರನ್ನು ಹೊರಹಾಕುವ ಮಾತನ್ನೇ ಆಡಿದ್ದರು. ಆದರೆ, ರಾಜಕೀಯ ವಿಶ್ಲೇಷಕರ ಪ್ರಕಾರ ನುಸುಳುಕೋರರ ವಿಚಾರ ಈಗ ಯುವ ಮತದಾರರನ್ನು ಹೆಚ್ಚು ಆಕರ್ಷಿಸುತ್ತಿಲ್ಲ. ಬದಲಿಗೆ, ನಾಡಿನ ಜನಪ್ರಿಯ ಗಾಯಕ ದಿ. ಜುಬೀನ್ ಗಾರ್ಗ್ ಅವರ ಸಾವಿನ ಪ್ರಕರಣದಲ್ಲಿನ ತನಿಖೆ ಮತ್ತು ನ್ಯಾಯದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಯುವಜನತೆ ಹೆಚ್ಚು ಆಕ್ರೋಶಗೊಂಡಿದ್ದಾರೆ.
ಗುವಾಹಟಿಯ ಹೊರವಲಯದಲ್ಲಿರುವ ಹಾತಿಮುರಾದಲ್ಲಿ ಜುಬೀನ್ ಅವರ ಸಮಾಧಿ ಸ್ಥಳದ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲು ರಾಜ್ಯ ಸರ್ಕಾರ ಆರು ತಿಂಗಳು ತೆಗೆದುಕೊಂಡಿದ್ದರಿಂದ ಯುವ ವರ್ಗವು ಅಸಮಾಧಾನಗೊಂಡಿದೆ. ಅಲ್ಲದೆ, ಅವರ ಸಾವಿನ ಕುರಿತ ಹೈಪ್ರೊಫೈಲ್ ಪ್ರಕರಣದ ವಿಚಾರಣೆಯು ಇತ್ತೀಚೆಗಷ್ಟೇ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ಪ್ರಾರಂಭವಾಗಿದೆ. ಇನ್ನು ಬಿಜೆಪಿಗೆ ಪರಿಸ್ಥಿತಿಯನ್ನು ಮತ್ತಷ್ಟು ಕಷ್ಟವಾಗಿಸಿರುವ ವಿಷಯವೇನೆಂದರೆ, ಜುಬೀನ್ ಗಾರ್ಗ್ ಅವರು ಬಿಜೆಪಿ ಪಕ್ಷದ ಪ್ರಬಲ ಟೀಕಾಕಾರರಾಗಿದ್ದರು.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ವಿಧಾನಸಭೆಯಲ್ಲಿ ಜುಬೀನ್ ಅವರನ್ನು ‘ಕೊಲೆ’ ಮಾಡಲಾಗಿದೆ ಎಂದು ಹೇಳಿದ ನಂತರ ‘ಜಸ್ಟೀಸ್ ಫಾರ್ ಜುಬೀನ್’ ಎಂಬ ಅಭಿಯಾನವು ತೀವ್ರಗೊಂಡಿದೆ. ಅವರ ಸಾವಿಗೆ ಸಂಬಂಧಿಸಿದಂತೆ ಬಂಧಿತರಾದ ಏಳು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆಯಾದರೂ, ಸಿಂಗಾಪುರ ಸರ್ಕಾರ ಗಾರ್ಗ್ ಅವರು ‘ಅಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ’ ಎಂದು ಹೇಳಿ ಕೊಲೆಯ ಆರೋಪವನ್ನು ತಳ್ಳಿಹಾಕಿರುವ ಹಿನ್ನೆಲೆಯಲ್ಲಿ, ಆರೋಪಿಗಳು ಶೀಘ್ರದಲ್ಲೇ ಜೈಲಿನಿಂದ ಹೊರಬರುತ್ತಾರೆ ಎಂಬ ಭಾವನೆ ಯುವಜನರಲ್ಲಿ ಮೂಡಿದೆ.
ಲಂಡನ್ನಲ್ಲಿ ಶಿಕ್ಷಣ ಪಡೆದ ಮತ್ತು ಗುವಾಹಟಿ ಸೆಂಟ್ರಲ್ ಕ್ಷೇತ್ರದ ಅಸ್ಸಾಂ ಜಾತೀಯ ಪರಿಷತ್ತಿನ (ಎಜೆಪಿ) ‘ಜೆನ್ ಝಿ’ (Gen Z) ಅಭ್ಯರ್ಥಿ ಕುಂಕಿ ಚೌಧರಿ ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಕ್ಕಾಗಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ವಿಶೇಷವಾಗಿ ಯುವಜನರು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಟೀಕಿಸಿದ್ದಾರೆ. ಇದರಿಂದ ಎಚ್ಚತ್ತ ಬಿಜೆಪಿ ಈಗ ತನ್ನ ಹಿಂದುತ್ವ ಮತ್ತು ನುಸುಳುಕೋರರ ವಿಷಯಕ್ಕಿಂತ ಉದ್ಯೋಗ ಮತ್ತು ಯುವ ಕಲ್ಯಾಣದ ಮಾತನ್ನು ಆಡಲು ಪ್ರಾರಂಭಿಸಿದೆ.


