ಅಸ್ಸಾಂನಲ್ಲಿ ಸೋಮವಾರ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ರಾಜ್ಯದ 33 ಜಿಲ್ಲೆಗಳಲ್ಲಿ ಸುಮಾರು 43 ಲಕ್ಷ ಜನಸಂಖ್ಯೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಪ್ರವಾಹ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ ಸೋಮವಾರ 73 ಕ್ಕೆ ಏರಿದೆ.
ಹೆಚ್ಚು ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಆಹಾರ ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಹೆಲಿಕಾಫ್ಟರ್‌ಗಳ ಮೂಲಕ ತಲುಪಿಸಲು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹ ಪರಿಹಾರದ ಕ್ರಮಗಳ ಕುರಿತು ಸಿಎತಮ್ಮ ಸಚಿವರು ಮತ್ತು ಹಿರಿಯ ಜಿಲ್ಲಾ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ.
ರಾಜ್ಯದಲ್ಲಿ ಈವರೆಗೆ 73 ಜನ ಪ್ರಾಣ ಕಳೆದುಕೊಂಡಿದ್ದು, ಮೃತಪಟ್ಟವರಲ್ಲಿ ನಾಗಾವ್ ಜಿಲ್ಲೆಯ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸರು ಸೇರಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ಜನರಿಗೆ ಸಹಾಯ ಮಾಡಲು ಹೋಗಿದ್ದ ಇಬ್ಬರೂ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಸೋಮವಾರ (ಜೂನ್ 20) ಮುಂಜಾನೆ ಅವರ ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸಾಯಿ ಪಲ್ಲವಿಯವರಿಂದ ಮಾಧ್ಯಮಗಳು ಕಲಿಯುವುದು ಬಹಳಷ್ಟಿದೆ: ಬೆಂಬಲಕ್ಕೆ ನಿಂತ ನಟ ಕಿಶೋರ್
ಸಚಿವರು, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಯಾವುದೇ ವಿಳಂಬ ಮಾಡಬಾರದು ಎಂದು ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
”ಭಾರೀ ಪ್ರವಾಹವಿರುವ ಪ್ರದೇಶಗಳಲ್ಲಿ ಮತ್ತು ಸೇನೆ, ಎನ್‌ಡಿಆರ್‌ಎಫ್ ಅಥವಾ ಎಸ್‌ಡಿಆರ್‌ಎಫ್ ದೋಣಿಗಳು ತಲುಪಲು ಸಾಧ್ಯವಾಗದ ಪ್ರದೇಶಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಏರ್ ಡ್ರಾಪ್ ಮಾಡಬೇಕು. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಆಂಬ್ಯುಲೆನ್ಸ್‌ಗಳನ್ನು ಇರಿಸಿರಬೇಕು. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿ ಹೆಚ್ಚಿಸಬೇಕು. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು” ಎಂದು ಸೂಚನೆ ನೀಡಲಾಗಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಪ್ರಕಾರ, ಕಳೆದ ಒಂದು ವಾರದಿಂದ ಉಂಟಾಗಿರುವ ಪ್ರವಾಹದಿಂದ 33 ಜಿಲ್ಲೆಗಳಲ್ಲಿ 127 ಕಂದಾಯ ವಲಯಗಳು ಮತ್ತು 5,137 ಗ್ರಾಮಗಳು ಪ್ರವಾಹದಿಂದ ಬಾಧಿತವಾಗಿವೆ. ಸುಮಾರು 1.90 ಲಕ್ಷ ಜನರು 744 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಶಿಬಿರಗಳಿಗೆ ತೆರಳದ ಸಂತ್ರಸ್ತರಿಗೆ 403 ತಾತ್ಕಾಲಿಕ ಕೇಂದ್ರಗಳಿಂದ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಇತರ ಏಜೆನ್ಸಿಗಳು ಇದುವರೆಗೆ ಸುಮಾರು 30,000 ಜನರನ್ನು ಸ್ಥಳಾಂತರಿಸಿವೆ ಎಂದು ಮಾಹಿತಿ ನೀಡಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಎಂಟು ಪ್ರಾಣಿಗಳು ಸಾವನ್ನಪ್ಪಿವೆ. ಅದರಲ್ಲಿ ಏಳು ಜಿಂಕೆಗಳು ಮತ್ತು ಒಂದು ಚಿರತೆ ಸಾವನ್ನಪ್ಪಿವೆ. ಎಂಟು ಜಿಂಕೆಗಳು ಮತ್ತು ಹೆಬ್ಬಾವು ಸೇರಿದಂತೆ ಹತ್ತು ಇತರ ಪ್ರಾಣಿಗಳನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ಕೆಎನ್‌ಪಿ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ’ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್ ಕೆಲಸ’: ಬಿಜೆಪಿ ನಾಯಕ ವಿಜಯವರ್ಗಿಯ ವಿವಾದಿತ ಹೇಳಿಕೆಗೆ ಖಂಡನೆ


