ನಾಗಾಂವ್ ಜಿಲ್ಲೆಯಲ್ಲಿ 2022ರಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ಐದು ಮುಸ್ಲಿಂ ಕುಟುಂಬಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಸರ್ಕಾರ ಧ್ವಂಸಗೊಳಿಸಿತ್ತು. ಇದೀಗ ಮನೆ ಕಳೆದುಕೊಂಡವರಿಗೆ ಪರಿಹಾರವಾಗಿ 30 ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ಗುವಾಹಟಿ ಹೈಕೋರ್ಟ್‌ಗೆ ತಿಳಿಸಿದೆ.
ಮೇ 21, 2022ರಂದು, ಮೀನು ವ್ಯಾಪಾರಿ ಶಫೀಕುಲ್ ಇಸ್ಲಾಂ ಎಂಬವರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು. ಇದಾಗಿ ಒಂದು ದಿನದ ನಂತರ, ನಾಗಾಂವ್ ಜಿಲ್ಲೆಯ ಬಟದ್ರವಾ ಪೊಲೀಸ್ ಠಾಣೆಗೆ ಗುಂಪೊಂದು ಬೆಂಕಿ ಹಚ್ಚಿತ್ತು. ಶಫೀಕುಲ್ ಇಸ್ಲಾಂ ಅವರನ್ನು ಬಿಡುಗಡೆ ಮಾಡಲು ಪೊಲೀಸರು 10,000 ರೂಪಾಯಿ ಹಣ ಮತ್ತು ಬಾತುಕೋಳಿಯನ್ನು ಲಂಚವಾಗಿ ಕೇಳಿದ್ದರು ಎಂದು ಇಸ್ಲಾಂನ ಕುಟುಂಬ ಆರೋಪಿಸಿತ್ತು.
ಉದ್ರಿಕ್ತರ ಗುಂಪು ಪೊಲೀಸ್ ಠಾಣೆಯನ್ನು ಸುಟ್ಟು ಹಾಕಿದ ಒಂದು ದಿನದ ನಂತರ, ಐದು ಕುಟುಂಬಗಳ ಮನೆಗಳನ್ನು ಬುಲ್ಡೋಝರ್ ಮೂಲಕ ಕೆಡವಿದ್ದರು. ಮನೆ ಕೆಡವಲು ಭಾರತೀಯ ಕಾನೂನಿನಡಿಯಲ್ಲಿ ಯಾವುದೇ ನಿಬಂಧನೆಗಳಿಲ್ಲ. ಆದರೆ, ಇದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ವಾಡಿಕೆಯಾಗಿಬಿಟ್ಟಿದೆ.
ಬುಧವಾರ, ಅಸ್ಸಾಂ ಸರ್ಕಾರದ ಪರವಾಗಿ ಗುವಾಹಟಿ ಹೈಕೋರ್ಟ್‌ಗೆ ಹಾಜರಾದ ಹಿರಿಯ ವಕೀಲ ಡಿ ನಾಥ್ ಅವರು, ನಾಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಸೋಮವಾರ ಐದು ಕುಟುಂಬಗಳಿಗೆ ಪರಿಹಾರದ ಹಣವನ್ನು ಪಾವತಿಸಿದ್ದಾರೆ ಎಂದು ತಿಳಿಸಿದ್ದಾರೆ. ಎರಡು ಕಾಂಕ್ರೀಟ್ ಮನೆಗಳು ಮತ್ತು ನಾಲ್ಕು ತಾತ್ಕಾಲಿಕ ಮನೆಗಳನ್ನು ಕೆಡವಿದ್ದಕ್ಕಾಗಿ ಪರಿಹಾರ ನೀಡಲಾಗಿದೆ ಎಂದಿದ್ದಾರೆ.
ಇಮಾಮುಲ್ ಹಕ್ ಮತ್ತು ಮುಜೀಬುರಹ್ಮಾನ್ ಎಂಬವರ ಕಾಂಕ್ರೀಟ್ ಮನೆಗಳನ್ನು ಕಡೆವಿದ್ದಕ್ಕೆ ತಲಾ 10 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ. ನೆಲಸಮಗೊಂಡ ಪ್ರತಿ ತಾತ್ಕಾಲಿಕ ಮನೆಗೆ 2.5 ಲಕ್ಷ ರೂ. ನೀಡಲಾಗಿದೆ ಎಂದು ಅಸ್ಸಾಂನ ಬಿಜೆಪಿ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಮುಜೀಬುರಹ್ಮಾನ್ ಅವರು ಕಾಂಕ್ರೀಟ್ ಮತ್ತು ತಾತ್ಕಾಲಿಕ ಮನೆ ಎರಡನ್ನೂ ಕಳೆದುಕೊಂಡಿದ್ದರಿಂದ 12.5 ಲಕ್ಷ ರೂ.ನೀಡಲಾಗಿದೆ ಎಂದು ಹೇಳಿದೆ.
ಮೃತ ಇಸ್ಲಾಂ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 2.5 ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಿದೆ. ಆದರೆ, ಕುಟುಂಬವು ಉತ್ತರಾಧಿಕಾರದ ಪ್ರಮಾಣಪತ್ರವನ್ನು ನೀಡಿಲ್ಲ. ಅವರು ದಾಖಲೆಯನ್ನು ನೀಡಿದ ನಂತರ ಅಧಿಕಾರಿಗಳು ಪರಿಹಾರ ಪಾವತಿಸಲಿದ್ದಾರೆ ಎಂದು ವಕೀಲ ನಾಥ್ ತಿಳಿಸಿದ್ದಾರೆ.
ಸರ್ಕಾತದ ಆದೇಶದಂತೆ ನಡೆಸಲಾದ ವಿಚಾರಣೆಯು ಇಸ್ಲಾಂ ಪೋಲಿಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದನ್ನು ದೃಢಪಡಿಸಿದೆ. ಇದು ಸರ್ಕಾರದ ಪ್ರಾತಿನಿಧಿಕ ಹೊಣೆಗಾರಿಕೆಯ ಸ್ಪಷ್ಟ ಪ್ರಕರಣವಾಗಿದೆ ಎಂದು ಗುವಾಹಟಿ ಹೈಕೋರ್ಟ್ ಮೇ 3ರಂದು ಹೇಳಿತ್ತು.
ಅಸ್ಸಾಂ ಸರ್ಕಾರ ಶಫೀಕುಲ್ ಇಸ್ಲಾಂ ಅವರ ಕಸ್ಟಡಿ ಸಾವು ನಿರ್ಲಕ್ಷ್ಯ ಅಥವಾ ಜವಬ್ದಾರಿಯ ಲೋಪವಲ್ಲ. ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಮೇ 21, 2023ರಂದು ತಿಳಿಸಿತ್ತು.
ಅಸಲಿಗೆ ಶಫೀಕುಲ್ ಇಸ್ಲಾಂ ಅವರನ್ನು ಪೊಲೀಸರು ಬಂಧಿಸಿಯೇ ಇಲ್ಲ. ಕುಡಿದು ಅಮಲಿನಲ್ಲಿದ್ದ ಅವರನ್ನು ಪೊಲೀಸರು ರಕ್ಷಿಸಿ ಕರೆ ತಂದಿದ್ದರು. ಬಟದ್ರವಾ ಪಾಲಿಕೆ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ್ದರು. ಬಳಿಕ ಮೇ 21ರಂದು ದೂರವಾಣಿ ಮೂಲಕ ಮಾಹಿತಿ ನೀಡಿದರೂ ಶಫೀಕುಲ್ ಇಸ್ಲಾಂ ಅವರ ಕುಟುಂಬ ಪೊಲೀಸ್ ಠಾಣೆಗೆ ಬರಲೇ ಇಲ್ಲ ಎಂದು ಸರ್ಕಾರ ಹೇಳಿತ್ತು.
ಶಫೀಕುಲ್ ಇಸ್ಲಾಂ ಅವರ ರಕ್ತದೊತ್ತಡ ಹೆಚ್ಚಾಗಿತ್ತು. ಅವರ ಪರಿಸ್ಥಿತಿ ಗಂಭೀರವಾಗಿತ್ತು. ಹಾಗಾಗಿ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು ಎಂದು ಪೊಲೀಸರು ಹೇಳಿದ್ದರು. ಇಸ್ಲಾಂ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ ಚಿತ್ರ ಹಿಂಸೆ ನೀಡಲಾಗಿದೆ ಎಂಬುವುದನ್ನು ನಿರಾಕರಿಸಿದ್ದರು.
ಇದನ್ನೂ ಓದಿ : ತನ್ನದೇ ಕೈಪಿಡಿ ಮರೆತ ಚುನಾವಣಾ ಆಯೋಗ, ನ್ಯಾಯಾಲಯಕ್ಕೆ ಸುಳ್ಳು ಹೇಳಿತಾ?


