ರಾಮನಗರ ಜಿಲ್ಲೆ ಕನಕಪುರದಲ್ಲಿ ಭಿನ್ನ ಧರ್ಮೀಯ ಜೋಡಿ ಮೇಲೆ ಗುಂಪೊಂದು ಚಪ್ಪಲಿಯಿಂದ ಹಲ್ಲೆ ನಡೆಸಿ, ಇಬ್ಬರ ತಲೆಯನ್ನು ಅರ್ಧ ಬೋಳಿಸಿದ ಬಗ್ಗೆ ವರದಿಯಾಗಿದೆ.
ಪಟ್ಟಣದ ಇಂದಿರಾನಗರದಲ್ಲಿ ಶನಿವಾರ (ಸೆ.20) ಈ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.
ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ನಂತರ ಏಳು ಆರೋಪಿಗಳ ಮೇಲೆ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಪೈಕಿ ಐವರನ್ನು ಬಂಧಿಸಿದ್ದಾರೆ.
ಭಿನ್ನ ಧರ್ಮೀಯ ಜೋಡಿಗಳಾದ ಮಹೇಶ್ ಮತ್ತು ಆಸಿನ್ ನೀಡಿರುವ ಪ್ರತ್ಯೇಕ ದೂರಿನ ಮೇರೆಗೆ ಆಸಿನ್ ಕಡೆಯವರಾದ ಶೇಕ್ ಕಬೀರ್, ಸುಹೇಲ್ ಷರೀಫ್, ಸೈಯದ್ ನಯಾಝ್, ನವಾಝ್ ಖಾನ್, ಸಾಜಿದಾ ಬೇಗಂ, ಸಯಿದಾ ಸೇರಿ 7 ಮಂದಿ ವಿರುದ್ದ ಕನಕಪುರ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಐವರನ್ನು ಬಂಧಿಸಿ, ಉಳಿದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವರದಿಗಳ ಪ್ರಕಾರ, ಸೆ.18ರಂದು ತಾಮಸಂದ್ರದಲ್ಲಿರುವ ಮಹೇಶ್ ಸ್ನೇಹಿತನ ಮನೆಗೆ ಇಬ್ಬರೂ ಹೋಗಿ ಉಳಿದಿದ್ದರು. ಈ ವಿಷಯ ತಿಳಿದ ಆರೋಪಿಗಳು, ಮಾರನೇ ದಿನ ಸಂಜೆ 4.30ರ ಸುಮಾರಿಗೆ ತಾಮಸಂದ್ರಕ್ಕೆ ಕಾರಿನಲ್ಲಿ ಹೋಗಿ ಇಬ್ಬರನ್ನೂ ಕನಕಪುರಕ್ಕೆ ಕರೆ ತಂದು ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ನಂತರ ಇಂದಿರಾನಗರದ ಕರಿಯಪ್ಪ ರಸ್ತೆಯಲ್ಲಿರುವ ವಿದ್ಯುತ್ ಕಂಬದ ಬಳಿ ಇಬ್ಬರನ್ನೂ ಕೂರಿಸಿ, ಚಪ್ಪಲಿಯಿಂದ ಹೊಡೆದಿದ್ದಾರೆ. ಬಿಡಿಸಿಕೊಳ್ಳಲು ಬಂದ ಮಹೇಶ್ ಕುಟುಂಬದವರ ಮೇಲೂ ಹಲ್ಲೆ ನಡೆಸಲಾಗಿದೆ. ಆರೋಪಿಗಳ ಪೈಕಿ ಕಬೀರ್, ಟ್ರಿಮ್ಮರ್‌ನಿಂದ ಇಬ್ಬರ ತಲೆಯನ್ನು ಅರ್ಧ ಬೋಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, 15 ವರ್ಷಗಳ ಹಿಂದೆಯೇ ಮದುವೆಯಾಗಿರುವ ಆಸಿನ್ ತಾಜ್‌ಗೆ ಮಗನಿದ್ದು, ಗಂಡ ಆರು ತಿಂಗಳ ಹಿಂದೆ ಬಿಟ್ಟು ಹೋಗಿದ್ದಾರೆ. ಇವರು ಇಂದಿರಾನಗರದ ಮಹೇಶ್ ಅವರನ್ನು ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಮಹೇಶ್ ಕೂಡ ವಿವಾಹಿತರಾಗಿದ್ದು ಹೆಂಡತಿ ತೀರಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಜೋಡಿಯನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಮಹಿಳೆಯನ್ನು ಕೌನ್ಸೆಲಿಂಗ್‌ಗಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಪೊಲೀಸರು ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ, ಕಾನೂನು, ಸುವ್ಯವಸ್ಥೆ ಕಾಪಾಡಲು ಘಟನಾ ಸ್ಥಳದಲ್ಲಿ ಪೊಲೀಸರು ಹೆಚ್ಚುವರಿ ಪಡೆಯನ್ನು ನಿಯೋಜಿಸಿದ್ದಾರೆ. ಎರಡೂ ಕುಟುಂಬಗಳು ಮತ್ತು ಸಮುದಾಯದ ಸದಸ್ಯರನ್ನು ಒಳಗೊಂಡ ಶಾಂತಿ ಸಭೆಯನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ.


