ಬೆಳಗಾವಿಯ ವಡ್ಡರವಾಡಿ ಪ್ರದೇಶದಲ್ಲಿ ಮಹಿಳೆಯರಿಬ್ಬರನ್ನು ರಸ್ತೆಗೆ ಎಳೆದು ತಂದು ಬಟ್ಟೆ ಹರಿದು ಹಲ್ಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕಳೆದ ಸೋಮವಾರ (ನ.11) ನಡೆದ ಘಟನೆಯ ವಿಡಿಯೋ ಇಂದು (ನ.16) ವೈರಲ್ ಆಗಿದೆ ಎಂದು ತಿಳಿದು ಬಂದಿದೆ.
ವೇಶ್ಯಾವಾಟಿಕೆಯ ಆರೋಪ ಹೊರಿಸಿ ಮಹಿಳೆಯರಿಬ್ಬರ ಮೇಲೆ ಹಲ್ಲೆ ಮಾಡಿ, ಸಾರ್ವಜನಿಕವಾಗಿ ಬಟ್ಟೆ ಹರಿದು ಹಾಕಲಾಗಿದೆ. ನೆರೆ ಮನೆಯವರೇ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ವಡ್ಡರವಾಡಿಯ ಮಹಿಳೆಯೊಬ್ಬರನ್ನು ಮಹಾರಾಷ್ಟ್ರಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಮನೆಯಲ್ಲಿ ಕಿರುಕುಳ ಕಾರಣ ತವರಿಗೆ ಬಂದ ಮಹಿಳೆ, ತಾಯಿಯ ಜೊತೆ ವಾಸವಾಗಿದ್ದರು. ಅವರ ಪರಿಚಯಸ್ಥರು ಪದೇಪದೇ ಮನೆಗೆ ಬರುತ್ತಿರುವುದನ್ನು ಕಂಡು, ವೇಶ್ಯಾವಾಟಿಕೆ ನಡೆಸುತ್ತಿರುವ ಅನುಮಾನದಿಂದ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯರು ದೂರಿನಲ್ಲಿ ತಿಳಿಸಿದ್ದಾರೆ.
“ಸೋಮವಾರ ರಾತ್ರಿ ಮನೆಗೆ ನುಗ್ಗಿದ ಆರೋಪಿಗಳು ತಮ್ಮ ತಾಯಿಯ ಕೂದಲು ಹಿಡಿದು ಹೊರಗೆ ಎಳೆದು ತಂದರು. ನನ್ನನ್ನೂ ಎಳೆದಾಡಿ ಬಟ್ಟೆ ಹರಿದರು. ವಿವಸ್ತ್ರಗೊಳಿಸಿ ಹಲ್ಲೆ ಮಾಡಿದರು” ಎಂದೂ ಮಹಿಳೆ ನೀಡಿದ ದೂರಿನಲ್ಲಿದೆ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಘಟನೆ ಸಂಬಂಧ ಇಂದ್ರಾ ಅಷ್ಟೇಕರ್, ಹೂವಪ್ಪ ಅಷ್ಟೇಕರ್, ಮಣಿಕಂಠ ಅಷ್ಟೇಕರ್ ಎಂಬವರ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಎನ್ಎಸ್ ಕಾಯ್ದೆಯ ವಿಧಿ 115(2),3(5), 331, 352 ಹಾಗೂ 74 ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇಂದು ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರೋಹನ್ ಜಗದೀಶ್, ‘ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮೂವರು ಹಲ್ಲೆ ಮಾಡಿದ್ದಾರೆ. ಇಂಥ ಘಟನೆ ನಡೆಯಬಾರದಿತ್ತು. ಆರೋಪಿಗಳನ್ನು ಬಂಧಿಸಲು ಮತ್ತು ಘಟನೆಯ ಸಂಪೂರ್ಣ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ನಟ ದರ್ಶನ್‌ಗೆ ಜಾಮೀನು ನೀಡಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ: ಬೆಂಗಳೂರು ಪೊಲೀಸ್ ಕಮಿಷನರ್


