ಇರಾನ್ ಮೇಲೆ ನಡೆಸುತ್ತಿರುವ ಬಾಂಬ್ ದಾಳಿ ಹಾಗೂ ಮಿಲಿಟರಿ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಭಾರತೀಯ ಕಾಲಮಾನ ಏ.8) ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಕದನ ವಿರಾಮದ ಷರತ್ತಿನಂತೆ, ಇರಾನ್ ‘ಹಾರ್ಮುಜ್ ಜಲಸಂಧಿ’ಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಲು ಒಪ್ಪಿಕೊಂಡಿದೆ. ಇರಾನ್ ಕಳುಹಿಸಿರುವ 10 ಅಂಶಗಳ ಪ್ರಸ್ತಾವನೆಯು ಶಾಂತಿ ಮಾತುಕತೆಗೆ ಸೂಕ್ತವಾದ ಆಧಾರವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಮುಂದಿನ ಎರಡು ವಾರಗಳ ಸಮಯವನ್ನು ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ, ಶಾಶ್ವತ ಶಾಂತಿ ಒಪ್ಪಂದಕ್ಕೆ ಬರಲು ಬಳಸಿಕೊಳ್ಳಲಾಗುತ್ತದೆ.
ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯು ಈ ಬೆಳವಣಿಗೆಯನ್ನು ತನ್ನ ‘ಐತಿಹಾಸಿಕ ಗೆಲುವು’ ಎಂದು ಬಣ್ಣಿಸಿದೆ.


