ಡಿಸೆಂಬರ್ 08 ರಂದು ಭಾರತ್ ಬಂದ್ ನಡೆದ ದಿನ ಗೃಹ ಸಚಿವ ಅಮಿತ್ ಶಾ ಸಂಜೆ ರೈತ ಮುಖಂಡರಿಗೆ ಕರೆ ಮಾಡಿ ಸಭೆ ಕರೆದಿದ್ದರು. ಆಗ ಕೆಲ ರೈತ ಮುಖಂಡರು ತಡವಾಗಿ ಸಭೆಗೆ ಆಗಮಿಸಿದರು. ಹಾಗಾಗಿ ‘ರೈತ ಹೋರಾಟದಲ್ಲಿ ಬಿರುಕುಂಟಾಗಿದೆ, 32 ಜನರ ಸಮಿತಿಯಲ್ಲಿ ಕೆಲವರು ಸಭೆ ಬಾಯ್ಕಾಟ್ ಮಾಡಿದ್ದಾರೆ’ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದರು. ಈ ವಿವಾದಗಳಿಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸಚಿವರೊಂದಿಗಿನ ಮಾತುಕತೆಯ ಸಮಿತಿಯ ಭಾಗವಾಗಿರುವ ರೈತ ಮುಖಂಡ ಡಾ.ದರ್ಶನ್ ಪಾಲ್, “ದೆಹಲಿ ಚಲೋ ರೈತ ಮುಖಂಡರು ಒಗ್ಗಟ್ಟಾಗಿದ್ದೇವೆ, ನಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ಕಳೆದ 15 ದಿನಗಳಿಂದ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮಂಗಳವಾರ ಮಾತುಕತೆಗೆ ಆಹ್ವಾನಿಸಿದ್ದರು. ಸುಮಾರು 32 ರೈತ ಸಮಿತಿಗಳ ಪ್ರತಿನಿಧಿಗಳು ಅಮಿತ್ ಶಾ ಅವರನ್ನು ಭೇಟಿಯಾದರು. ಆದರೆ ಸಭೆ ಯಶಸ್ವಿಯಾಗಲಿಲ್ಲ.
ಇದನ್ನೂ ಓದಿ: ದಲಿತನೆಂಬ ಕಾರಣಕ್ಕೆ ಮಧುಮಗನನ್ನು ಕುದುರೆಯಿಂದ ಕೆಳಗಿಳಿಸಿ ಹಲ್ಲೆ!
“ನಾವು ಸಭೆಗೆ ಹೋಗುವ ಮೊದಲು ನಮ್ಮ ಎಲ್ಲಾ ಪ್ರತಿನಿಧಿ ಸಮಿತಿಗಳೊಟ್ಟಿಗೂ ‘ಸಭೆಯಲ್ಲಿ ಭಾಗವಹಿಸಬೇಕೇ ಬೇಡವೇ’ ಎಂಬುದನ್ನು ಸವಿವರವಾಗಿ ಚರ್ಚಿಸಿದ್ದೇವೆ. ಸಭೆಯಲ್ಲಿ ಭಾಗವಹಿಸಲು ಸರ್ವಾನುಮತದಿಂದ ಒಪ್ಪಿ, ಹೊರಟೆವು. ಆದರೆ ಪಂಜಾಬ್ ಕಿಸಾನ್ ಯೂನಿಯನ್ ಮತ್ತು ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಗಳ ಪ್ರತಿನಿಧಿಗಳು ಸರಿಯಾದ ಸಮಯಕ್ಕೆ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಅವರ ಕಾರನ್ನು ತಡೆದು ಅಡಚಣೆ ಮಾಡಿದ್ದರು. ಅವರು ತೀವ್ರ ವಾದ-ವಿವಾದದ ನಂತರ ಪ್ರ 40- 45 ನಿಮಿಷಗಳ ತಡವಾಗಿ ಸಭೆಗೆ ಬಂದರು. ಅವರು ಬರುವವರೆಗೂ ಮಾತುಕತೆ ಆರಂಭವಾಗಿರಲಿಲ್ಲ” ಎಂದು ದರ್ಶನ್ ಪಾಲ್ ಮಾಹಿತಿ ನೀಡಿದ್ದಾರೆ.
“ನಾವು ಕೇಂದ್ರದೊಂದಿಗೆ ಮಾತನಾಡಲು ಸಂಯುಕ್ತ ಕಿಸಾನ್ ಮೋರ್ಚಾ ಎಂಬ 13 ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ. ಇದರಲ್ಲಿ 7 ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಮತ್ತು ಇತರೆ 6 ಮಂದಿ ಸಣ್ಣ ರೈತರ ಗುಂಪುಗಳ ಪ್ರತಿನಿಧಿಗಳಿದ್ದಾರೆ” ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹಾಗಾಗಿ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಎಲ್ಲರೂ ಸಭೆ ಸೇರಿದ ನಂತರ, ಈ ಕಾನೂನುಗಳಲ್ಲಿ ನಾವು ಯಾವ ತಿದ್ದುಪಡಿಗಳನ್ನು ಮಾಡಬೇಕು ಎಂದು ಅವರು ಕೇಳಿದರು. ಆದರೆ ಕಾನೂನನ್ನು ಸಂಪೂರ್ಣ ರದ್ದುಗೊಳಿಸುವಂತೆ ಒತ್ತಾಯಿಸಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ನಾವು ನೇರವಾಗಿ ನಮ್ಮ ನಿಲುವನ್ನು ಹೇಳಿದೆವು. ಇದಕ್ಕೆ ನೀವು ಸಿದ್ದರಿದ್ದೀರಾ ಅಥವಾ ಇಲ್ಲವೇ ಎಂಬುದನ್ನಷ್ಟೆ ಹೇಳಿ ಎಂದು ಒತ್ತಾಯಿಸಿದೆವು. ಸುದೀರ್ಘ ಚರ್ಚೆಯ ನಂತರ ಅಮಿತ್ ಶಾ, “ನಮ್ಮ ನಿರ್ಧಾರವನ್ನು ಬೆಳಿಗ್ಗೆ ಹನ್ನೊಂದು ಗಂಟೆಯ ಒಳಗೆ ನಿಮಗೆ ಲಿಖಿತವಾಗಿ ಕಳುಹಿಸುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: ಗೋಮಾತೆಯ ಮೇಲೆ ಪ್ರಮಾಣ ಮಾಡಿ, ಸಚಿವರ ಬಳಿ ಆ ವಿಧೇಯಕದ ಪ್ರತಿ ಇತ್ತೇ –…
ಸರ್ಕಾರದೊಂದಿಗೆ ನಿಗಧಿಯಾಗಿದ್ದ ಆರನೇ ಸುತ್ತಿನ ಮಾತುಕತೆಯನ್ನು ರದ್ದುಗೊಳಿಸಿ, ಅವರು ಎರಡನೇ ಸಭೆಯನ್ನು ಪ್ರಸ್ತಾಪಿಸಿದರು. ಆದರೆ ನಾವು ಅದನ್ನು ನಿರಾಕರಿಸಿ, ಈ ಸಭೆಯಲ್ಲಿನ ನಿಮ್ಮ ಲಿಖಿತ ನಿರ್ಧಾರಗಳನ್ನು ಆಧರಿಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೇವೆ.
ಇದನ್ನೂ ಓದಿ: ಕೇಂದ್ರದ ಪ್ರಸ್ತಾಪ ತಿರಸ್ಕರಿಸಿದ ರೈತರು, ಪ್ರತಿಭಟನೆ ಮುಂದುವರೆಸಲು ನಿರ್ಧಾರ
“ಇಂದೂ ಕೂಡ ಪಂಜಾಬಿನ ಹಲವು ರೈತ ಸಂಘಟನೆಗಳ ಜೊತೆ ಸಭೆ ಏರ್ಪಡಿಸಿದ್ದೇವೆ. ಈ ಸಭೆಯಲ್ಲಿ ಲಿಖಿತ ಸಲಹೆಗಳನ್ನು ಯಾರೇ ನೀಡಿದರೂ ನಾವು ಪರಿಗಣಿಸುತ್ತೇವೆ. ನಮ್ಮ ಕಾರ್ಯತಂತ್ರ ಮತ್ತು ನಮ್ಮ ಮುಂದಿನ ನಡೆ ಏನೆಂಬುದನ್ನು ಶೀಘ್ರದಲ್ಲೇ ತಿಳಿಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಚಿಹ್ನೆಯ ಟವೆಲ್‌ಗೂ ಈಗ ವ್ಯಾಲ್ಯೂ ಇಲ್ಲ-ಎಚ್.ಡಿ ಕುಮಾರಸ್ವಾಮಿ


