Homeಅಂಕಣಗಳುಸುಲಭಕ್ಕೆ ಮುಗಿಯದ ರಾಜಧಾನಿ ಎಂಬ ಮಾಯಾಮೋಹಿನಿಯ ಗಾರುಡಿ

ಸುಲಭಕ್ಕೆ ಮುಗಿಯದ ರಾಜಧಾನಿ ಎಂಬ ಮಾಯಾಮೋಹಿನಿಯ ಗಾರುಡಿ

- Advertisement -
- Advertisement -

ಇವತ್ತು ಬೆಳಿಗ್ಗೆ ಒಂದು ಸುದ್ದಿ ಓದಿದ ಮ್ಯಾಲೆ ಎಚ್ಚರ ಆತು. ಚುಂಚುಂ ಬೆಳಕಿನೊಳಗ ಚುರಕ್ ಅನ್ನಿಸುವಂಥ ಸುದ್ದಿ ಯಾವುದಪಾ ಅಂದರ ಅದು ಆಳುವವರು ಕೊಟ್ಟ ಆಶ್ವಾಸನೆಯ ಸುದ್ದಿ.

ಬೆಂಗಳೂರಿನ ಪ್ರತಿ ವಾರ್ಡ್‌ಗೆ ಒಂದು ಆಸ್ಪತ್ರೆ ಕಟ್ಟತೇವಿ, ಪ್ರತಿ ವಿಧಾನಸಭೆ ಕ್ಷೇತ್ರದೊಳಗ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟತೇವಿ. ಅದಕ್ಕ ನೀವು ಕೊಟ್ಟ ಸುಂಕದೊಳಗ ಇಷ್ಟು ಕೋಟಿ ಖರ್ಚು ಮಾಡ್ತೇವಿ, ರೊಕ್ಕ ನಿಮ್ಮದು, ಹೆಸರು ನಮ್ಮದು, ಅದನ್ನು ಮುಗಸಲಿಕ್ಕೆ ಐದು ವರ್ಷ ಬೇಕಾಗತದ, ಅಲ್ಲಿ ತನಕ ಯಾರು ಜೀವಂತ ಇರ್ತೀರಿ, ಅವರು ಇದರ ಉಪಯೋಗ ತೊಗೋಬಹುದು, ಇತ್ಯಾದಿ ಇತ್ಯಾದಿ. ಇದು ‘ಮಹಾಮಾರಿಗೆ ಮಾತೇ ಮದ್ದು’ ಎಂದು ಬಲವಾಗಿ ನಂಬಿರುವ ನಮ್ಮ ಘನ ಸರ್ಕಾರದ ಹೇಳಿಕೆ. ಇದನ್ನ ಹೇಳಿದವರು ಸಚಿವ ಡಾ. ಕೇಶವ ರೆಡ್ಡಿ ಸುಧಾಕರ್ ಅವರು.

ಅದನ್ನು ನೋಡಿದಾಗ ಓದುಗರ ಪ್ರತಿಕ್ರಿಯೆ ಏನು ಇರಬಹುದು ಅಂತ ಅನ್ನಿಸಿ ಭಿನ್ನ ಭಾವ ಮೂಡಿತು. ಬರೆ ಬೆಂಗಳೂರು ವಾರ್ಡುಗಳಿಗೆ ಯಾಕೆ ಈ ಕ್ಲಿನಿಕ್ ಭಾಗ್ಯ? ರಾಜ್ಯದ ಇತರ ವಿಧಾನಸಭಾ ಕ್ಷೇತ್ರಗಳಿಗೆ ಯಾವಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಣಬಹುದು, ಅನ್ನುವುದು ಮೊದಲ ಅಭಿಪ್ರಾಯ. ಇದು ಬೆಂಗಳೂರಿನ ಓದುಗರಿಗೂ ಬರಬಹುದು, ಗದಗ ಬೆಟಗೇರಿಯ ಓದುಗರಿಗೂ ಬರಬಹುದು.

ಸುಮಾರು ಹತ್ತು ವರ್ಷದ ಹಿಂದ ಅಂದಿನ ಕೇಂದ್ರ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ‘ಗುಲ್ಬರ್ಗದಾಗ ಇಎಸ್‌ಐ ಆಸ್ಪತ್ರೆ ಕಟ್ಟತೇವಿ’ ಅಂತ ಅಂದಾಗ ಸ್ವಪಕ್ಷೀಯರು ಸಹಿತ ಭಿನ್ನರಾಗದ ಬಿನ್ನಹ ಮಾಡಿದರು. ‘ಆ ಮೂಲಿಯೊಳಗ ಐದಾರು ಸಾವಿರ ಹಾಸಿಗೆ ಆಸ್ಪತ್ರೆ ಯಾಕೆ ಬೇಕು?’ ‘ಬ್ಯಾಂಗ್‌ಲೋರ್-ಮೈಸೂರ್‌ಗೇ ಇಲ್ಲಾ?’ ಅನ್ನುವುದರಿಂದ ಶುರು ಆದ ಆ ಮಾತುಗಳು, ‘ಆ ಮಂತ್ರಿಗೆ ಏನು ಆಸಕ್ತಿ ಅದನೋ ಏನೋ’, ‘ಯಾರರ ಗುತ್ತಿಗೆದಾರರು ಹೇಳಿ ಕೊಟ್ಟಿರಬೇಕು’, ‘ಅದರಾಗ ಎನಾರ ಪರತ ಪಾವತಿ ಇರಬೇಕು’ ಇತ್ಯಾದಿ ಗುಸು-ಗುಸು ಪಿಸಿ-ಪಿಸಿ ಮಾಡಿದರು.

PC : Kannada News

ಆದರ ಅದು ಅದೇ ಮೊದಲು ಅಲ್ಲ. ಧಾರವಾಡದೊಳಗ ಐಐಟಿ ಬರಬೇಕಾದಾಗ, ಗುಲ್ಬರ್ಗಕ್ಕ ಕೇಂದ್ರೀಯ ವಿಶ್ವವಿದ್ಯಾಲಯ ಬಂದಾಗ, ಬೀದರದೊಳಗ ಪಶು ವಿಶ್ವವಿದ್ಯಾಲಯ ಆರಂಭವಾದಾಗ, ಹುಬ್ಬಳ್ಳಿಗೆ ರೈಲ್ವೆ ವಲಯ ಸಿಕ್ಕಾಗ, ಬಾಗಲಕೋಟೆಯೊಳಗ ಅಲಮಟ್ಟಿ, ಕೂಡಲ ಸಂಗಮ ಪ್ರಾಧಿಕಾರ ಎದ್ದು ನಿಂತಾಗ ಇದೇ ರೀತಿಯ ಮಾತು ಬಂದವು.

“ಅಲ್ರೀ, ಅಲ್ಲಿಗೆ ಯಾಕೆ? ಬ್ಯಾಂಗ್‌ಲೋರ-ಮೈಸೂರ್‌ಗೇ ಇಲ್ಲ” ಅನ್ನುವ ‘ಅಕಾರಣ ಅಭೋಗಿ ಕಾನಡಾ’ ರಾಗ – ‘ಹಳೆ ಗೋಳು’ ತಾಳ ಕೇಳಿ ಬಂದವು. ಇವತ್ತಿಗೂ ಬೆಂಗಳೂರು-ಮೈಸೂರು ರೈಲ್ವೆ ವಿಭಾಗಗಳಿಗೆ ಹುಬ್ಬಳ್ಳಿಯೇ ಕೇಂದ್ರ ಕಚೇರಿ ಅನ್ನೋದು ಅನೇಕ ರಾಜಧಾನಿಧೀಶರಿಗೆ ಗೊತ್ತಿಲ್ಲ. ಗೊತ್ತಾದರೂ ಅವರು ಒಪ್ಪಲು ತಯಾರು ಇಲ್ಲ.

ನಮ್ಮ ಆರೋಗ್ಯ ಸಚಿವರ ಮಾತು ಕೇಳಿದಾಗ ಇನ್ನೊಂದು ಸಹಜ ಸಂಶಯ ಏನು ಬರ್ತದ ಅಂದ್ರ ‘ಈ ಸದುದ್ದೇಶದ ಯೋಜನೆ ಕೇವಲ ಬೆಂಗಳೂರಿಗೆ ಯಾಕ್ ಸೀಮಿತ ಆತು?’, ‘ಬ್ಯಾರೆ ಜಿಲ್ಲೆಗಳಿಗೆ ಯಾಕ್ ಬ್ಯಾಡ?’, ‘ಬೆಂಗಳೂರಿನ ಆಳರಸರು ಕೊಡಲಿಲ್ಲವೋ ಅಥವಾ ನಮ್ಮ ವೋಟು ತೊಗೊಂಡು ರಾಜಧಾನಿಯೊಳಗ ಸೆಟಿಲ್ ಆದ ನಮ್ಮ ಮಾಂಡಲಿಕರು ಕೇಳಲಿಲ್ಲವೋ?’, ‘ಮಗು ಅಳದೆ ಹೋದರೆ ಹೆತ್ತ ತಾಯಿಯೂ ಸಹಿತ ಹಾಲು ಕೊಡೋದಿಲ್ಲ ಅನ್ನೋ ಗಾದಿಮಾತು ಅವರು ಕೇಳೇ ಇಲ್ಲ ಏನು? ಅಂತಹಾ ತಾಯೀನ ಅಂತೂ ನಾವು ನೋಡಿಲ್ಲ. ಆದರ ತನ್ನ ‘ಕ್ಷೇತ್ರ ಅಭಿವೃದ್ಧಿ ಮಾಡ್ರಿ’ ಅನ್ನುವ ಮಾತೇ ಆಡದೆ ತನ್ನ ಸಂಪೂರ್ಣ ಅವಧಿ ಮುಗಿಸುವ ಎಂಎಲ್‌ಎ ಸಾಹೇಬರನ್ನ ಬಹಳ ನೋಡೇವಿ.

ಸಜ್ಜನ ಅಧಿಕಾರಿ ಚಿರಂಜೀವಿ ಸಿಂಗ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನ ಅಭಿವೃದ್ದಿ ಆಯುಕ್ತ ಅಂತ ಬದಲಿಮಾಡಿ ಬೆಳಗಾವಿಗೆ ಬಂದಾಗ ಅವರ ಮುಂದೆ ಚಪ್ಪಾಳೆ ತಟ್ಟಿ ಹಿಂದೆ ವ್ಯಂಗ್ಯ ಮಾಡಿದವರೆ ಹೆಚ್ಚು. ‘ಹುಚ್ಚರ ಹಂಗ ಅಲ್ಲಿಗೆ ಹೋಗ್ಯಾನ. ಅಲ್ಲಿ ಕುತಗೊಂಡು ಏನು ಅಭಿವೃದ್ಧಿ ಮಾಡ್ಲಿಕ್ಕೆ ಬರ್ತದ? ಬೆಂಗಳೂರು ಆಫೀಸ್‌ದೊಳಗ ಇದ್ದಾರ ಏನಾದರೂ ಮಾಡಬಹುದು. ಅವನ ಫಸ್ಟ್, ಅವನ ಲಾಸ್ಟ್. ಆಮ್ಯಾಲೆ ಯಾರೂ ಹೋಗೋದಿಲ್ಲ, ಪಿಶ್ಯಾ!’ ಅಂತ ಅನೇಕ ವಿರಾಮ ಸೇನೆ (ಐಎಎಸ್ಸು ಮುಂತಾದ ವಿಕ್ಟೋರಿಯಾ ರಾಣಿಯ ನಾಗರಿಕ ಸೇವೆ ಅಧಿಕಾರಿಗಳು) ಮೂಗು ಮುರಿಯಿತು. ಅವರ ಭವಿಷ್ಯ ಖರೆ ಆತು. ಸಿಂಗ್ ಅವರ ನಂತರ ಅಷ್ಟು ದೊಡ್ಡ ಹುದ್ದೆಯ ಅಧಿಕಾರಿ ಯಾರೂ ಬರಲೇ ಇಲ್ಲ. ಬೆಳಗಾವಿಗೆ ಪ್ರಾದೇಶಿಕ ಆಯುಕ್ತರ ನೇಮಕನ ಕಾಯಂ ಆತು.

ಇನ್ನೊಂದು ಮಜಾ ಕತಿ ಐತಿ. ಸಣ್ಣ ವಯಸ್ಸಿನಲ್ಲೆ ರಾಷ್ಟ್ರೀಯ ಪತ್ರಿಕೆಯ ಪ್ರಾದೇಶಿಕ ಸಂಪಾದಕ ಆಗಿ, ಆನಂತರ ಟಿವಿ ಚಾನೆಲ್‌ನ ಮುಖ್ಯಸ್ಥರಾಗಿ ಹೋದ ದೊಡ್ಡ ಪತ್ರಕರ್ತರೊಬ್ಬರು ತಮ್ಮ ಪತ್ರಿಕೆಯೊಳಗ ಐಎಎಸ್ಸು ಅಧಿಕಾರಿಗಳ ಕುಟುಂಬ ಜೀವನದ ಬಗ್ಗೆ ಒಂದು ಕಾಲಂ ಶುರು ಮಾಡಿದರು. ಅವರ ಕಣ್ಣು ಕುಮಾರ್ ಅನ್ನುವ ಒಬ್ಬ ಅಧಿಕಾರಿ ಮ್ಯಾಲೆ ಬಿತ್ತು. ಅವರು ‘ಗ್ರೇಟ್ ಆಫೀಸರ್’ ಅಂತ ಬೆಂಗಳೂರಿನ ಸುತ್ತಮುತ್ತ ಎಲ್ಲಾ ಜಗತ್ ಪ್ರಸಿದ್ಧರಾಗಿದ್ದರು. ಅವರನ್ನ ಭೇಟಿ ಆಗಲಿಕ್ಕೆ ಒಬ್ಬ ಕಿರಿಯ ಪತ್ರಕರ್ತನಿಗೆ ಸಂಪಾದಕರು ಹೇಳಿದರು. ಅವರ ಸಂದರ್ಶನ ಮಾಡಲಿಕ್ಕೆ ಹೋಗುವಾಗ ‘ನಾನೂ ಬರತೇನೆ’ ಅಂತ ಹೇಳಿ ಅವರ ಸಂಗತೆ ಹೋದರು. ‘ನಾವು ಹೋದರ ಸುಡುಗಾಡು ಕೆಎಸ್‌ಆರ್‌ಟಿಸಿ ಬಸ್ಸಿನಾಗ ಹೋಗಬೇಕು. ಸಂಪಾದಕರು ಬಂದರ ಕಾರಿನೊಳಗ ಹೋಗಲಿಕ್ಕೆ ಬರತದ’ ಅಂತ ಹೇಳಿ ವರದಿಗಾರರು ಒಪ್ಪಿಕೊಂಡರು.

ಆ ಅಧಿಕಾರಿ ವಿಧಾನಸೌಧ ಎಂಬೊ ಜೇನುಗೂಡಿನೊಳಗ ಯಾವುದೋ ಒಂದು ಕೋಣೆಯೊಳಗ ಇದ್ದರು. ತಮ್ಮ ವೃತ್ತಿಜೀವನದೊಳಗ ವಿಧಾನಸೌಧದ ಒಳಗೆ ಕಾಲು ಇಡಲಾರದೇ ಮುಖ್ಯ ಸಂಪಾದಕರಾಗಿದ್ದ ಆ ಹಿರಿಯರು ಕಿರಿಯನನ್ನು ನೋಡುತ್ತಲೇ ಇದ್ದರು. ಅವರು ಕೇಳುವ ಪ್ರಶ್ನೆಗಳನ್ನು ಗಮನಿಸಿ, ಅಧಿಕಾರಿ ಕೊಡುವ ಉತ್ತರ ಕೇಳಿಸಿಕೊಂಡು ಸುಮ್ಮನೇ ಕೂತಿದ್ದರು. “ನಮ್ಮ ಮನೆಗೆ ಬಂದಿದ್ದರೆ ಸಮೋಸ ಕೊಡುತ್ತಾ ಇದ್ದೇ. ಆದರೆ ನಮ್ಮ ಕಚೇರಿಯಲ್ಲಿ ಸಿಗೋದು ಬರೇ ಸರಕಾರಿ ಚಹಾ ಅಷ್ಟೇ” ಅಂತ ‘ಜೋಕ್’ ಕುಮಾರ್ ಅವರು ನುಡಿದರು. ಸಂಪಾದಕರಿಗೆ ಅದು ಇಡೀ ಇಂಡಿಯಾದ ಕೆರ ಹಿಡಿದು ಹೋದ ಸರಕಾರಿ ವ್ಯವಸ್ಥೆಯ ಬಗ್ಗೆ ಹೇಳಿದ ಕಾಮೆಂಟ್ ಅನ್ನಿಸಿತು. ಅವರು ಗಹಗಹಿಸಿ ನಕ್ಕರು. ಆದರ “ಬೆಣ್ಣಿ ತಿಂದ ಮ್ಯಾಲೆ ಪಾತ್ರೆಯ ತಳಕ್ಕೆ ಕಿಲುಬು” ಅಂತ ಮೂಗು ಮುರಿಯುವ ಇಂಥ ಅಧಿಕಾರಿಗಳನ್ನು ದಿನಾಲು ನೋಡಿದ್ದ ವರದಿಗಾರ ನಗಲಿಲ್ಲ. ಸಂದರ್ಶನ ಮುಗಿದು ಅವರಿಬ್ಬರೂ ವಾಪಸ್ ಹೋಗಲು ಎದ್ದಾಗ ಸಂಪಾದಕರು ಅಧಿಕಾರಿಯನ್ನು ಕೇಳಿದರು “ನೀವು ಕರ್ನಾಟಕಕ್ಕೆ ಬಂದು ಎಷ್ಟು ವರ್ಷ ಆಯಿತು? ಬೆಂಗಳೂರಿಗೆ ಯಾವಾಗ ಬಂದಿರಿ? ಐಐಟಿಯಲ್ಲಿ ನಿಮ್ಮ ಬ್ಯಾಚ್ ಯಾವುದು?, ಇನ್ನೂ ಎಷ್ಟು ವರ್ಷ ಸರ್ವಿಸ್ ಇದೆ? ಇತ್ಯಾದಿ. ಅವರು ಹಳ್ಳಿಯ ದಲ್ಲಾಳಿ ಅಂಗಡಿಯ ಶೆಟ್ಟಿಯ ರೀತಿ ಗೋಳಾಡಿಕೊಂಡು ಅತ್ತುಬಿಟ್ಟರು.

“ಅಯ್ಯೋ ಅದನ್ನು ಏನು ಕೇಳ್ತೀರಾ! ನಮಗೆ ಒಟ್ಟು 30 ವರ್ಷ ಸರ್ವೀಸ್ ಇರ್ತದೆ, ಅದರಲ್ಲಿ ಹತ್ತು ವರ್ಷ ಬೆಂಗಳೂರು ಬಿಟ್ಟು ಹೊರಗೆ ಹೋಗಬೇಕು. ನಾನು ಮೊದಲು ಪೋಸ್ಟಿಂಗ್ ಸವಣೂರಿನಲ್ಲಿ ಮಾಡಿದೆ. ದ ಹೋಲ್ ಆಫ್ ಸವನುರ ಈಸ್ ಲೈಕ್ ಒರಿಸ್ಸಾ. ವೆರೀ ಬ್ಯಾಡ್ ಸ್ಟೇಟ್ ಆಫ್ ಅಫೇರ್ಸ. ಅದೆಲ್ಲ ಮುಗಿಸಿ ಇಲ್ಲಿಗೆ ಬಂದಿದ್ದೇವೆ. ಆ ನಂತರ ರಿಟೈರ್ ಆಗುವವರೆಗೂ ಗಾರ್ಡನ್ ಸಿಟಿ ವಾಸ. ಇಲ್ಲಿ ನಮ್ಮ ಮಕ್ಕಳಿಗೆ ಫ್ಯೂಚರ್ ಇದೆ. ನಾವು ಐಐಟಿಯಲ್ಲಿ ಓದಿ, ಐಎಎಸ್ಸು ಪಾಸು ಮಾಡಿದ್ದು ಸಾರ್ಥಕ ಆಯಿತು” ಅಂತ ಅವರು ನಿಟ್ಟುಸಿರುಬಿಟ್ಟರು. ತಂದೆ ತಾಯಿಯನ್ನು ದೂರದ ವೃದ್ಧಾಶ್ರಮದಲ್ಲಿ ಬಿಟ್ಟು ಅಪಾರ್ಟ್ಮೆಂಟ್‌ಗೆ ವಾಪಸ್ ಬಂದು ನಿರಾಳವಾದ ಮಧ್ಯಮವರ್ಗದ ಯುವಕನಂತೆ ಖುಷಿಪಟ್ಟರು.

“ಅಯ್ಯಯ್ಯೋ ಇದು ಏನು ಕತೆ. ಈಗಾದ್ರೂ ಬಂದಿರಲ್ಲ, ಒಳ್ಳೇದು ಆಯಿತು ಬಿಡಿ. ನಾಳೆ ಗಾಲ್ಫ್ ಕ್ಲಬ್‌ನಲ್ಲಿ ಸಿಗೋಣ” ಅಂತ ಹೇಳಿ ಸಂಪಾದಕರು ಹೊರಟರು.

ಸಂಜೆ ಕಚೇರಿಯ ಮೂಲೆಯಲ್ಲಿ ಪೈಪು ಸೇದುವಾಗ ಸಂಪಾದಕರು ವರದಿಗಾರ ನನ್ನು ಕರೆದರು. “ನಾಳೆ ಎಡಿಟೋರಿಯಲ್ ಬರಿಬೇಕು. ಯಾವ ಶಿಲಾಯುಗದ ಸರಕಾರ ಇದು. ಐಐಟಿ ಓದಿದವರನ್ನು ಸಾವನೂರಿಗೆ ಎತ್ತು ಹಾಕಿದರೆ ಹೇಗೆ” ಅಂತ ಸ್ವಗತ ಎಂಬುವಂತ ಮಾತು ಆಡಿದರು. ಅವರ ಎದುರು ಅಪರೂಪಕ್ಕೆ ಮಾತಾಡುವ ವರದಿಗಾರ ಅಪೂರ್ವ ವಿಚಾರಸರಣಿಗೆ ತುಂಡು ಹಾಕಿದ. “ಅದು ಸಾವನೂರು ಅಲ್ಲ ಸರ್, ಅದು ಸವಣೂರು. ಹಿಂದೆ ಅದು ಒಂದು ಪ್ರದೇಶದ ರಾಜಧಾನಿ ಆಗಿತ್ತು. ಗೋಕಾಕ ಚಳವಳಿಗೆ ಕಾರಣವಾದ ವರದಿ ಸಿದ್ಧ ಮಾಡಿದ ವಿ.ಕೆ ಗೋಕಾಕ ಅವರು, ನಮ್ಮ ಪತ್ರಿಕೆಯ ಮಾಜಿ ಸಂಪಾದಕ ದಿಲೀಪ್ ಪಡಗಾಂವ್‌ಕರ್ ಅವರು ಸವಣೂರಿನವರೆ” ಅಂತ ಹೇಳಿದ. “ಅಯ್ಯೋ ಹೌದೇ, ಗೋಕಾಕ ಚಳವಳಿ ಅಂದರೆ ನಾನು ರಮೇಶ್ ಜಾರಕಿಹೊಳಿ ಅವರು ಶುರು ಮಾಡಿದ್ದ ರಾಜಕೀಯ ಬಂಡಾಯ ಅಂತ ನಾನು ತಿಳಿದುಕೊಂಡಿದ್ದೆ” ಅಂತ ಗೋಳಾಡಿದರು. “ಅಷ್ಟಕ್ಕೂ ಸವಣೂರು ಒರಿಸ್ಸಾದಂತೆ ಹಿಂದುಳಿದ ಪ್ರದೇಶ ಅಂತ ಹೇಳಿದ ಆ ಅಧಿಕಾರಿ ಮೂಲ ಒರಿಸ್ಸಾದವರು” ಅಂತ ಅಷ್ಟೇ ಹೇಳಿ ವರದಿಗಾರ ಅಲ್ಲಿಂದ ಹೋದ.

PC : Public Tv

ಇಂದಿಗೂ ಸರಕಾರಕ್ಕೆ ಸಲಹೆ ನೀಡುವ ಕಾರ್ಯನಿರ್ವಾಹಕ ಸಂಪಾದಕರು, ಅವರ ಕೆಳಗಿನ ಅಸಹಾಯಕ ಸಂಪಾದಕರು ಇತ್ಯಾದಿ ನೀತಿ ನಿರೂಪಕರಿಗೆ, ಜನಾಭಿಪ್ರಾಯ ಜನಕರಿಗೆ ಇಂತಹ ವಿಷಯಗಳು ಗಲಿಬಿಲಿ ಹುಟ್ಟಿಸತಾವ. ಅವರಿಗೆ ಒಬ್ಬ ಐಎಎಸ್ಸು ಅಧಿಕಾರಿ ತನ್ನ 35 ವರ್ಷ ಸೇವಾ ಕಾಲದಲ್ಲಿ 10 ವರ್ಷ ಬೆಂಗಳೂರಿನಿಂದ ಹೊರಗೆ ಕಳೆದರೆ ಅದು ವ್ಯರ್ಥ ಕಾಲಹರಣ ಅನ್ನಿಸುತ್ತದ.

ಹಿಂದೊಮ್ಮೆ ರಾಜ್ಯ ಸರಕಾರ ರಾಜ್ಯದ ಕೆಲವು ಕಡೆ ಹೊಸ ಪೊಲೀಸ್ ವಲಯಗಳನ್ನು ಮಾಡಿ ಐಜಿಪಿಗಳನ್ನು ನೇಮಕ ಮಾಡಿತು. ಈಗ ನಿವೃತ್ತರಾಗಿರುವ, ಆಗ ಕುಡಿಮೀಸೆಯ ಯುವಕರಾಗಿದ್ದ ರಾಜಸ್ತಾನ ಮೂಲದ ಐಪಿಎಸ್ಸು ಅಧಿಕಾರಿಯೊಬ್ಬರಿಗೆ ದಾವಣಗೆರೆ ವಲಯಕ್ಕೆ ನೇಮಕ ಆತು. ಅವರು ‘ನಾ ಒಲ್ಲೆ’ ಅಂತ ಹಠ ಹಿಡಿದರು. ಡಿಜಿಪಿ ಸಾಹೇಬರ ಹತ್ತಿರ ಹೋಗಿ ಗೋಳಾಡಿದರು. ತಾನು ಎಸ್ಪಿ ಆಗಿದ್ದಾಗ ಇಸ್ಪೀಟು ಆಡಿ ಸಿಕ್ಕಿದ್ದ, ಮುಂದೆ ಎಂಎಲ್‌ಎ ಆಗಿ ಕುಕ್ಕರಿಸಿದ್ದ ಪುಢಾರಿಯೊಬ್ಬರ ಹತ್ತಿರ ಹೋಗಿ ಆ ಆದೇಶ ರದ್ದು ಮಾಡಿಸಿದರು. ತನ್ನ ಬ್ಯಾಚ್‌ಮೇಟ್ ಅಧಿಕಾರಿಯೊಬ್ಬ “ಯಾಕೋ ದಾವಣಗೆರೆಗೆ ಹೋಗಲಿಲ್ಲ? ಹೊಸ ರೇಂಜ್, ಒಳ್ಳೆ ಕೆಲಸ ಮಾಡಬಹುದಿತ್ತು. ಅಂತ ಕಡೆ ಒಳ್ಳೆ ಅಧಿಕಾರಿಗಳು ಬೇಕು” ಅಂತ ಕೇಳಿದರು. ಇವರು ಸಟಕ್ಕನೆ “ಯಾಕೆ ಬೆಂಗಳೂರಿಗೆ ಒಳ್ಳೆ ಅಧಿಕಾರಿಗಳು ಬೇಡವಾ? ನೀವ್ ಮಾತ್ರ ಇಲ್ಲಿ ಎಂಜಾಯ್ ಮಾಡಬೇಕಾ” ಅಂತ ಮರುಉತ್ತರ ಕೊಟ್ಟರು.

ಮುಂದೆ ಸದರಿ ಅಧಿಕಾರಿ ಪೊಲೀಸು ಇಲಾಖೆಯಲ್ಲಿ ಜಾಗ ಸಿಗದೇ ನೀರಾವರಿ ಇಲಾಖೆಯಲ್ಲಿ ಒಂದು ಕುರ್ಚಿ-ಟೇಬಲ್ ಹಾಕಿಕೊಂಡು ಕೂತರು. ರಾಜ್ಯಮಟ್ಟದ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ನಾನು ರಾಜಸ್ತಾನದ ಕುಗ್ರಾಮದಲ್ಲಿ ಬಡತನದಲ್ಲಿ ಹುಟ್ಟಿದೆ. ನಾನು ಕಾಲೇಜು ಓದುವಾಗಲೂ ದಿನಗೂಲಿ ಮಾಡುತ್ತಾ ಇದ್ದೇ. ಸಿಗುತ್ತಿದ್ದ ಒಂದು ರೂಪಾಯಿ ಕೂಲಿಯಲ್ಲಿ ನನ್ನ ಮನೆ ನಡೆಸಿ, ಕಾಲೇಜು ಮುಗಿಸಿದೆ ಅಂತ ಅಭಿಮಾನದಿಂದ ಹೇಳಿಕೊಂಡಿದ್ದರು.

ರಾಜಧಾನಿ ಎಂಬ ಮಾಯಾಮೋಹಿನಿಯ ಗಾರುಡಿ ಸುಲಭಕ್ಕೆ ಮುಗಿಯುವಂತೆ ಕಾಣುವುದಿಲ್ಲ.


ಇದನ್ನೂ ಓದಿ: ಹೋರಾಟಗಾರ ಅಖಿಲ್ ಗೊಗೋಯ್‌ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಟ್ಟ ಎನ್‌ಐಎ ನ್ಯಾಯಾಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...