ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸುವ ಸೋರಿಕೆಯಾದ ಆಡಿಯೋ ಟೇಪ್‌ಗಳ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ವಿಧಿವಿಜ್ಞಾನ ಪ್ರಯೋಗಾಲಯದಿಂದ (ಎಫ್‌ಎಸ್‌ಎಲ್) ವರದಿ ಕೋರಿದೆ.
ಈ ಹಿಂಸಾಚಾರವು ಮೇ 2023 ರಲ್ಲಿ ಮೊದಲ ಬಾರಿಗೆ ಭುಗಿಲೆದ್ದ ನಂತರ 200 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ; ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಸಲ್ಲಿಸಿದ ರಿಟ್ ಅರ್ಜಿಯನ್ನು ಆಧರಿಸಿ ವರದಿ ಕೋರಿದೆ. ಈ ಗುಂಪು ಆಪಾದಿತ ಟೇಪ್‌ಗಳ ಬಗ್ಗೆ ಸ್ವತಂತ್ರ ತನಿಖೆಗೆ ಒತ್ತಾಯಿಸಿದೆ. ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಮಾರ್ಚ್ 24 ಕ್ಕೆ ನಿಗದಿಪಡಿಸಿದೆ.
ಮಣಿಪುರದಲ್ಲಿ ಮೇ 3, 2023 ರಂದು ಬಹುಸಂಖ್ಯಾತ ಮೈತೇಯಿಗಳು ಮತ್ತು ಕುಕಿಗಳ ನಡುವೆ ಮೀಸಲಾತಿ ಮತ್ತು ಆರ್ಥಿಕ ಪ್ರಯೋಜನಗಳ ವಿಚಾರವಾಗಿ ಕುರಿತು ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. ಬೆಟ್ಟ ಮತ್ತು ಕಣಿವೆ ಜಿಲ್ಲೆಗಳ ಗಡಿಯಲ್ಲಿರುವ ದುರ್ಬಲ ವಲಯಗಳಲ್ಲಿ ಕೇಂದ್ರವು ಪಡೆಗಳನ್ನು ನಿಯೋಜಿಸಿದೆ, ಇದು ಬಾಹ್ಯ ಪ್ರದೇಶಗಳಲ್ಲಿ ಗುಂಡಿನ ದಾಳಿಯ ಘಟನೆಗಳಲ್ಲಿ ಇಳಿಕೆಗೆ ಕಾರಣವಾಗಿದೆ.
ಕುಕಿ ಸಂಘಟನೆಯ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ದೆಹಲಿಯಲ್ಲಿರುವ ದೇಶದ ಏಕೈಕ ಪೂರ್ಣ ಪ್ರಮಾಣದ ಸ್ವತಂತ್ರ ವಿಧಿವಿಜ್ಞಾನ ಪ್ರಯೋಗಾಲಯವಾದ ಟ್ರುತ್ ಲ್ಯಾಬ್ಸ್ ಆಡಿಯೋ ಕ್ಲಿಪ್‌ಗಳನ್ನು ಪರಿಶೀಲಿಸಿದೆ ಎಂದು ಹೇಳಿದರು.
ಈ ಕ್ಲಿಪ್‌ಗಳಲ್ಲಿನ ಧ್ವನಿಯು ಬಿರೇನ್ ಸಿಂಗ್ ಅವರ ಧ್ವನಿಗೆ ಶೇ. 93 ರಷ್ಟು ಹೊಂದಿಕೆಯಾಗುತ್ತದೆ ಎಂದು ಪ್ರಯೋಗಾಲಯವು ಪ್ರಮಾಣೀಕರಿಸಿದೆ ಎಂದು ಆರೋಪಿಸಿದ್ದಾರೆ.
ಮುಚ್ಚಿದ ಬಾಗಿಲಿನ ಸಭೆಯಲ್ಲಿ ರೆಕಾರ್ಡಿಂಗ್ ನಡೆದಿದೆ ಎಂದು ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದರು. ಇದರಲ್ಲಿ ಮುಖ್ಯಮಂತ್ರಿಗಳು ಮೈತೇಯಿ ಸಮುದಾಯಕ್ಕೆ ಬಂಧನದಿಂದ ರಕ್ಷಣೆ ನೀಡುವುದಾಗಿ ಮತ್ತು ರಾಜ್ಯದ ಶಸ್ತ್ರಾಸ್ತ್ರ ಸಂಗ್ರಹದಿಂದ ಕದಿಯಲು ಅವಕಾಶ ಮಾಡಿಕೊಟ್ಟಿದ್ದಾಗಿ ಹೇಳುವುದನ್ನು ಕೇಳಬಹುದು ಎಂದು ವರದಿಯಾಗಿದೆ.
ಟ್ರುತ್ ಲ್ಯಾಬ್ಸ್ ವರದಿಯು ಆಡಿಯೋ ಕ್ಲಿಪ್‌ಗಳನ್ನು ಪರಿಶೀಲಿಸುವ ಯಾವುದೇ ಸರ್ಕಾರಿ ಸಂಸ್ಥೆಗಿಂತ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು ವಕೀಲರು ಗಮನಿಸಿದರು.
ನವೆಂಬರ್ 2024 ರಲ್ಲಿ, ಆಗಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಆಡಿಯೋ ಕ್ಲಿಪ್‌ಗಳ ದೃಢೀಕರಣವನ್ನು ಸಾಬೀತುಪಡಿಸಲು ಸಾಮಗ್ರಿಗಳನ್ನು ಒದಗಿಸುವಂತೆ ಕೇಳಿಕೊಂಡ ನಂತರ ಕುಕಿ ಸಂಘಟನೆಯು ಟ್ರುತ್ ಲ್ಯಾಬ್ ವರದಿಯನ್ನು ಸಲ್ಲಿಸಿತು.
ಸೋಮವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ಮಣಿಪುರ ರಾಜ್ಯವನ್ನು ಪ್ರತಿನಿಧಿಸುವ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಕ್ಲಿಪ್‌ಗಳನ್ನು ತನಿಖೆಗೆ ಕಳುಹಿಸಲಾಗಿದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್ ಆಧರಿಸಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಆದರೆ, ಅರ್ಜಿದಾರರು ‘ಪ್ರತ್ಯೇಕತಾವಾದಿ ಮನಸ್ಥಿತಿ] ಹೊಂದಿದ್ದಾರೆಂದು ಆರೋಪಿಸಿದ್ದು, ಮೊದಲು ಸುಪ್ರೀಂ ಕೋರ್ಟ್ ಅಲ್ಲ, ಹೈಕೋರ್ಟ್ ಅನ್ನು ಸಂಪರ್ಕಿಸಬೇಕು ಎಂಬ ಆಕ್ಷೇಪಣೆಯನ್ನು ಅವರು ಪುನರುಚ್ಚರಿಸಿದರು.
ಸೋಮವಾರದ ಬೆಳವಣಿಗೆ ಮಣಿಪುರದ ಜನರ ಹಿಂಸಾಚಾರಕ್ಕೆ ಮುಖ್ಯಮಂತ್ರಿ ಕ್ಷಮೆಯಾಚಿಸಿದ ಒಂದು ತಿಂಗಳ ನಂತರ ಬಂದಿದೆ. ಈಶಾನ್ಯ ರಾಜ್ಯದಲ್ಲಿ ಶಾಂತಿ ಪುನಃಸ್ಥಾಪಿಸಲಾಗುತ್ತಿದೆ ಎಂದು ಒತ್ತಿ ಹೇಳುವಾಗ ‘ಹಿಂದಿನದನ್ನು ಕ್ಷಮಿಸಿ ಮತ್ತು ಮರೆತುಬಿಡಿ’ ಎಂದು ಜನರಿಗೆ ಮನವಿ ಮಾಡಿದರು.
ಇದನ್ನೂ ಓದಿ; ರಾಷ್ಟ್ರಪತಿಗಳ ಭಾಷಣವನ್ನು ಓದಲು ಕಷ್ಟವಾಯಿತು: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ


