ಬೀದರ್ ಜಿಲ್ಲೆ ಔರಾದ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರನ್ನು ಸುಮಾರು ಏಳು ದಿನಗಳ ಕಾಲ ಡಿಜಿಟಲ್ ಅರೆಸ್ಟ್‌ನಲ್ಲಿಟ್ಟು, ಬ್ಯಾಂಕ್ ಖಾತೆಯಿಂದ 30.99 ಲಕ್ಷ ರೂಪಾಯಿ ಲಪಟಾಯಿಸಿರುವ ಬಗ್ಗೆ ವರದಿಯಾಗಿದೆ.
ಈ ಸಂಬಂಧ ಗುಂಡಪ್ಪ ಅವರು ಮಂಗಳವಾರ (ಸೆ.9) ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಗಸ್ಟ್ 12ರಂದು ತಮ್ಮ ಬ್ಯಾಂಕ್ ಖಾತೆಯಿಂದ 30.99 ಲಕ್ಷ ರೂಪಾಯಿ ಅಕ್ರಮವಾಗಿ ದೋಚಲಾಗಿದೆ. ಇದರಲ್ಲಿ ಮುಂಬೈ ಮೂಲದ ಸಂದೀಪ್ ಕುಮಾರ್ ಹಾಗೂ ನೀರಜ್ ಕುಮಾರ್ ಅವರ ಕೈವಾಡವಿದ್ದು, ಅವರ ವಿರುದ್ಧ ತನಿಖೆ ನಡೆಸುವಂತೆ ಮನವಿ ಮಾಡಿದ್ಧಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದ ಕಥೆ ಕಟ್ಟಿ ಗುಂಡಪ್ಪ ಅವರನ್ನು ಹೆದರಿಸಿದ ಸೈಬರ್ ವಂಚಕರು, ನಕಲಿ ಅಧಿಕಾರಿಗಳು, ನಕಲಿ ನ್ಯಾಯಾಧೀಶ, ನಕಲಿ ನ್ಯಾಯಾಲಯ ಹಾಗೂ ನಕಲಿ ಪೊಲೀಸ್ ಠಾಣೆಗಳ ಮೂಲಕ ವಂಚನೆ ನಡೆಸಿದ್ದಾರೆ.
ವರದಿಗಳ ಪ್ರಕಾರ, ಆಗಸ್ಟ್ 12ರಂದು ಅಪರಿಚಿತ ವ್ಯಕ್ತಿಯೊಬ್ಬ ಗುಂಡಪ್ಪ ಅವರಿಗೆ ಕರೆ ಮಾಡಿ ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಜೆಟ್ ಏರ್‌ವೇಸ್‌ನ ಮಾಲೀಕ ನರೇಶ್ ಗೋಯಿಲ್ ಅವರಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನೀವು ಭಾಗಿಯಾಗಿದ್ದಿರಿ. ಜಪ್ತಿ ಮಾಡಲಾದ ವಸ್ತುಗಳಲ್ಲಿ ನಿಮ್ಮ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಗಳು ಸಿಕ್ಕಿವೆ. ಸಾಕಷ್ಟು ಅವ್ಯವಹಾರ ನಡೆಸಿದ್ದೀರಿ ಎಂದು ಹೇಳಿ ಡಿಜಿಟಲ್ ಅರೆಸ್ಟ್ ಮಾಡಿ ನಕಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದ. ಬಳಿಕ, ಹಂತ ಹಂತವಾಗಿ ಹಣ ವಂಚಿಸಲಾಗಿದೆ ಎಂದು ಗುಂಡಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆಗಸ್ಟ್ 12 ರಂದು ಸಂಜೆ 6 ಗಂಟೆ ಸುಮಾರಿಗೆ 8464988135 ಮೊಬೈಲ್ ಸಂಖ್ಯೆಯಿಂದ ಗುಂಡಪ್ಪ ಅವರಿಗೆ ಮೊದಲ ಕರೆ ಬಂದಿದೆ. ಕರೆ ಮಾಡಿದಾತ ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಗುಂಡಪ್ಪ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದಾನೆ.
ನಂತರ,ಗುಂಡಪ್ಪ ಅವರನ್ನು ಹೆದರಿಸಿ ಬ್ಯಾಂಕ್ ಖಾತೆಯದ್ದೂ ಸೇರಿದಂತೆ ಅವರಿಂದ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡಿದ್ದಾನೆ.
ನಂತರ ಆ ಕರೆಯನ್ನು ಉಪ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಎನ್ನಲಾದ ಮತ್ತೊಬ್ಬ ವ್ಯಕ್ತಿಗೆ ವರ್ಗಾವಣೆ” ಮಾಡಿದ್ದಾನೆ. ಗುಂಡಪ್ಪ ಅವರು ವಂಚನೆ ತಿಳಿಯದೆ ತನಿಖೆಯಿಂದ ವಿನಾಯಿತಿ ಕೋರಿದಾಗ, ಅವರ ವಯಸ್ಸು ಮತ್ತು ಹಿನ್ನೆಲೆಯ ಕಾರಣ, ತನಿಖೆಯನ್ನು ವರ್ಚುವಲ್ ಮೂಲಕ ನಡೆಸಲಾಗುವುದು ಮತ್ತು ಅವರನ್ನು ‘ಡಿಜಿಟಲ್ ಬಂಧನ’ಕ್ಕೆ ಒಳಪಡಿಸಲಾಗುವುದು ಎಂದು ವಂಚಕರು ಹೇಳಿದ್ದಾರೆ.
ವಂಚಕರು ವಾಟ್ಸಾಪ್ ಕರೆಗಳ ಮೂಲಕ ಗುಂಡಪ್ಪ ಅವರ ಮೇಲೆ ನಿಗಾ ಇಟ್ಟಿದ್ದರು. ಪ್ರಕರಣವು “ಅತ್ಯಂತ ಸೂಕ್ಷ್ಮ” ವಾಗಿರುವುದರಿಂದ ಯಾರೊಂದಿಗೂ ಮಾತನಾಡದಂತೆ ಎಚ್ಚರಿಕೆ ನೀಡಿದ್ದರು. ಸಂಭಾಷಣೆಯ ಸಮಯದಲ್ಲಿ, ವಂಚಕರು ನಕಲಿ ಐಡಿ ಕಾರ್ಡ್‌ಗಳು ಮತ್ತು ಬಂಧನ ವಾರಂಟ್ ತೋರಿಸಿದ್ದರು. ಅಲ್ಲದೆ, ನಕಲಿ ಪೊಲೀಸ್ ಠಾಣೆಯ ಸೆಟಪ್ ಕೂಡ ತೋರಿಸಿದ್ದರು ಎಂದು ವರದಿಯಾಗಿದೆ.
ಆಗಸ್ಟ್ 13ರಂದು, ಗುಂಡಪ್ಪ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರಂತೆ ನಟಿಸಿದ್ದ ವ್ಯಕ್ತಿಯ ಮುಂದೆ ಹಾಜರುಪಡಿಸಿದ್ದರು. ಸಂಕ್ಷಿಪ್ತ ವಿಚಾರಣೆಯ ನಂತರ, ನಕಲಿ ನ್ಯಾಯಾಧೀಶರು ತಾನು ನಿರಪರಾಧಿ ಎಂಬ ಲಿಖಿತ ಪತ್ರವನ್ನು ಸಲ್ಲಿಸಲು ಮತ್ತು ಅಧಿಕಾರಿಗಳು ಒದಗಿಸಿದ ಬ್ಯಾಂಕ್ ಖಾತೆಗೆ ಆರ್‌ಟಿಜೆಎಸ್ ಮೂಲಕ 10.99 ಲಕ್ಷ ರೂ.ಗಳನ್ನು ವರ್ಗಾಯಿಸಲು ನಿರ್ದೇಶಿಸಿದ್ದರು.
ಆಗಸ್ಟ್ 14ರಿಂದ, ವಂಚಕರು ತಮ್ಮನ್ನು ನೀರಜ್ ಕುಮಾರ್ ಮತ್ತು ಸಂದೀಪ್ ಕುಮಾರ್ ಎಂದು ಪರಿಚಯಿಸಿಕೊಂಡು ದೈನಂದಿನ ವಿಚಾರಣೆ ಮುಂದುವರೆಸಿದ್ದರು. ಗುಂಡಪ್ಪ ಅವರ ಕುಟುಂಬ ಸದಸ್ಯರು, ಅವರ ಬ್ಯಾಂಕ್ ಖಾತೆಗಳು ಮತ್ತು ಇತರ ವೈಯಕ್ತಿಕ ವಿವರಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದರು. ನಾಲ್ಕು ದಿನಗಳ ನಂತರ, ಅವರನ್ನು ಮತ್ತೆ ನಕಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅವರ ಖಾತೆಗಳು ಮತ್ತು ಆಸ್ತಿಗಳನ್ನು ‘ಪರಿಶೀಲಿಸಲು’ ಸಾಧ್ಯವಾಗುವಂತೆ ಇನ್ನೂ 20 ಲಕ್ಷ ರೂ.ಗಳನ್ನು ಠೇವಣಿ ಇಡುವಂತೆ ಆದೇಶಿಸಿದ್ದರು. ಗುಂಡಪ್ಪ ಅವರು ಆಗಸ್ಟ್ 18 ರಂದು ಹಣವನ್ನು ವರ್ಗಾಯಿಸಿದ್ದರು.
ಇದಾಗಿ, ಎರಡು ದಿನಗಳ ತಾನು ವಂಚನೆಗೊಳಗಾಗಿದ್ದೇನೆ ಎಂದು ಅರಿತುಕೊಂಡ ಗುಂಡಪ್ಪ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ. ಅದಕ್ಕೂ ಮೊದಲು ತಮ್ಮ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಸೈಬರ್ ಅಪರಾಧ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ವಂಚನೆ ಮತ್ತು ಸೋಗು ಹಾಕುವಿಕೆಯ ಪ್ರಕರಣವನ್ನು ದಾಖಲಿಸಿದ್ದಾರೆ.


