Homeಮುಖಪುಟಬಾದಲ್ ಸರ್ಕಾರ್‌ರವರ ‘ಏವಂ ಇಂದ್ರಜಿತ್’: ಮೂರನೇ ರಂಗಭೂಮಿಗೆ ಅಡಿಪಾಯ ಹಾಕಿದ ನಾಟಕ

ಬಾದಲ್ ಸರ್ಕಾರ್‌ರವರ ‘ಏವಂ ಇಂದ್ರಜಿತ್’: ಮೂರನೇ ರಂಗಭೂಮಿಗೆ ಅಡಿಪಾಯ ಹಾಕಿದ ನಾಟಕ

ಖಾಲಿ ಇರುವಂತಹ ಯಾವುದೇ ಜಾಗವು ನಾಟಕ ಪ್ರದರ್ಶಿಸುವ ರಂಗಭೂಮಿಯಾಗಿ ಕಂಡಿತು. ಇಂತಹ ಹೊಸ ಸಾಧ್ಯತೆಗಳನ್ನು ಶೋಧಿಸಿದ ಬಾದಲ್ ಸರ್ಕಾರ್ ಅವರ ಈ ಪ್ರಯೋಗಶೀಲತೆಯೇ ಭಾರತೀಯ ರಂಗಭೂಮಿಯಲ್ಲಿ ‘ಮೂರನೆಯ ರಂಗಭೂಮಿ’ ಎಂದು ಪ್ರಸಿದ್ಧವಾಗಿದೆ.

- Advertisement -
- Advertisement -

ನಾಟಕವು ಜೀವಂತ ಪ್ರದರ್ಶನ ಕಲೆಯಾಗಿದೆ. ಅದರೊಳಗೆ ಅಭಿನಯ, ವೇಷಭೂಷಣ, ಪ್ರಸಾಧನ, ಹಾಡು, ಕುಣಿತ, ಸಂಗೀತ, ಕತೆ, ವಾದ್ಯಗಳ ಬಳಕೆ ಎಲ್ಲವೂ ಸೇರಿಕೊಂಡಿರುತ್ತದೆ. ಇವೆಲ್ಲವು ಪರಸ್ಪರ ಒಂದರೊಳಗೊಂದು ಹೆಣೆದುಕೊಂಡು ಆ ಕ್ಷಣದಲ್ಲಿಯೇ ಪ್ರೇಕ್ಷಕರ ಎದುರಿನಲ್ಲಿಯೇ ಜೀವವನ್ನು ಪಡೆದುಕೊಂಡು ಅರಳಬೇಕಾಗುತ್ತದೆ. ಆಗ ಅದೊಂದು ಪ್ರಭಾವಿ ನಾಟಕವೆನಿಸುತ್ತದೆ. ಸ್ವಾತಂತ್ರೋತ್ತರ ಭಾರತೀಯ ನಾಟಕರಂಗದಲ್ಲಿ ಹೊಸ ಆವಿಷ್ಕಾರಗಳು ಶುರುವಾದವು. ಅವು ನಗರದ ಮಧ್ಯಮ ವರ್ಗದ ಸಮುದಾಯವನ್ನು ನೇರವಾಗಿ ತಲುಪುವ ಹಲವು ಒತ್ತಡಗಳು ನಿರ್ಮಾಣವಾದವು. ಈ ಹಿನ್ನೆಲೆಯಲ್ಲಿ ಬಹುಮಟ್ಟಿಗೆ ನಗರವಾಸಿ ಬರಹಗಾರರಿಂದ ಪ್ರಯೋಗಶೀಲತೆಗಳು ನಡೆದವು. ಕೆಲವು ನಾಟಕಕಾರರು ಅಸ್ತಿತ್ವವಾದಿ ಒತ್ತಾಸೆಗಳನ್ನು ಹೊತ್ತುಕೊಂಡು 1960ರ ದಶಕದಲ್ಲಿ ನಾಟಕಲೋಕವನ್ನು ಪ್ರವೇಶಿಸಿದರು. ಅವರಲ್ಲಿ ಹಿಂದಿಯ ಮೋಹನ ರಾಕೇಶ್, ಮರಾಠಿಯ ವಿಜಯ ತೆಂಡೂಲ್ಕರ್, ಕನ್ನಡದ ಗಿರೀಶ ಕಾರ್ನಾಡ್ ಮತ್ತು ಬೆಂಗಾಲಿಯಲ್ಲಿ ಬಾದಲ್ ಸರ್ಕಾರ್ ಪ್ರಮುಖರಾಗಿದ್ದಾರೆ.

ಇವರಲ್ಲಿ ಕೊಲ್ಕೊತ್ತಾದ ಬಾದಲ್ ಸರ್ಕಾರ್ ಅವರು ಬರಿ ನಾಟಕಕಾರರಲ್ಲ; ಅವರು ನಾಟಕ ನಿರ್ದೇಶನಕ್ಕೆ ಹೊಸ ಆಯಾಮಗಳನ್ನು ನೀಡಿದರು; ಅವರು ರಂಗತಜ್ಞರಾಗಿ ನಿರಂತರ ಜನಪರವಾದ ಚಿಂತನೆಗಳನ್ನು ರೂಪಿಸಿದವರಾಗಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಬಾದಲ್ ಸರ್ಕಾರ್ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ‘ಏವಂ ಇಂದ್ರಜಿತ್’, ‘ಪಗ್ಲ ಘೋಡ’, ‘ತೀಸ್ವಿ ಶತಾಬ್ದಿ’, ‘ಬಾಕಿ ಇತಿಹಾಸ’, ‘ಸಾರಿ ರಾಥ್’, ‘ಬಸಿ ಖಬರ್’, ‘ಸಗಿನ ಮಹತೊ’, ‘ಶೇಷ್ ನಹಿ’ ನಾಟಕಗಳು ಮುಖ್ಯವಾಗಿವೆ. ಇವುಗಳಲ್ಲಿ ‘ಏವಂ ಇಂದ್ರಜಿತ್’ ಭಾರತೀಯ ರಂಗಭೂಮಿಯಲ್ಲಿಯೇ ಒಂದು ಮೈಲಿಗಲ್ಲಾಗಿದೆ. ಇದು ಬಾದಲ್ ಸರ್ಕಾರ್‍ರ ನಾಟಕಗಳಲ್ಲೇ ಅತ್ಯಂತ ಯಶಸ್ವಿ ನಾಟಕ ಎಂದು ಗುರುತಿಸಲಾಗಿದೆ. ಭಾರತೀಯ ರಂಗಭೂಮಿಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಈ ನಾಟಕವನ್ನು ಬಿ.ವಿ. ಕಾರಂತ ಅವರು ಕನ್ನಡದ್ದೇ ನಾಟಕ ಎನ್ನುವಂತೆ ಅನುವಾದಿಸಿದ್ದಾರೆ. ಈ ನಾಟಕವು 1973ರಲ್ಲಿ ಅಕ್ಷರ ಪ್ರಕಾಶನದಿಂದ ಹೊರ ಬಂದಿದೆ. ಇದೇ ನಾಟಕವನ್ನು ಗಿರೀಶ ಕಾರ್ನಾಡ್ ಅವರು 1974ರಲ್ಲಿ ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಭಾರತೀಯ ಅನೇಕ ಭಾಷೆಗಳಿಗೂ ತರ್ಜುಮೆಗೊಂಡು ಪ್ರದರ್ಶನಗಳನ್ನು ಕಂಡಿದೆ.

‘ಏವಂ ಇಂದ್ರಜಿತ್’ ನಾಟಕವು ಮೂಲತಃ ಬೆಂಗಾಲಿಯಲ್ಲಿ 1963ರಲ್ಲಿ ರಚನೆಯಾಗಿದೆ. ಬಾದಲ್ ಸರ್ಕಾರ್ ಅವರೇ ಸ್ಥಾಪಿಸಿದ ‘ಶತಾಬ್ದಿ’ ಎಂಬ ರಂಗತಂಡದ ಮೂಲಕವೇ ಈ ನಾಟಕವು ಪ್ರದರ್ಶಿತವಾಯಿತು. ಇದು ನಾಗರಿಕ ಜೀವನದ ಏಕತಾನತೆಯನ್ನು ಮತ್ತು ವೈಫಲ್ಯಗಳನ್ನೇ ವ್ಯಂಗ್ಯದ ಧಾಟಿಯಲ್ಲಿ ನಿರೂಪಿಸುವ ನಾಟಕವಾಗಿದೆ. ಈ ನಾಟಕವು ಸ್ಯಾಮ್ಯುಯಲ್ ಬೆಕೆಟ್‍ನ ‘ವೇಟಿಂಗ್ ಫಾರ್ ಗೋಡೊ’ ನಾಟಕದಂತೆ ಅಸಂಗತದ ವಿನ್ಯಾಸವನ್ನು ಒಳಗೊಂಡಿದೆ. ಇದಕ್ಕಿಂತ ಮುಖ್ಯವಾಗಿ ಈ ನಾಟಕವು ಅಸ್ತಿತ್ವವಾದಿ ನೆಲೆಗಟ್ಟನ್ನು ಹೊಂದಿದೆ. ನಾಟಕದ ಮೊದಲ ಅಂಕದಲ್ಲಿ ಲೇಖಕನೊಬ್ಬ ಬರೆಯುತ್ತ ಕುಳಿತಿರುತ್ತಾನೆ. ಆತ ಕತೆಯನ್ನು ಬರೆಯಲಾಗದೆ ಒದ್ದಾಡುತ್ತಿರುತ್ತಾನೆ. ಆಗ ಮಾನಸಿ ಎಂಬ ಹುಡುಗಿಯಿಂದ ಸ್ಫೂರ್ತಿಗೊಂಡು ಪ್ರೇಕ್ಷಕರಲ್ಲಿಯೇ ಇರುವ ನಾಲ್ವರ ಕತೆಯನ್ನು ಬರೆಯಲು ನಿರ್ಧರಿಸುತ್ತಾನೆ. ಅವರುಗಳೇ ಅಮಲ್ ಕುಮಾರ್ ಬೋಸ್, ವಿಮಲ್ ಕುಮಾರ್ ಘೋಷ್, ಕಮಲ್ ಕುಮಾರ್ ಸೇನ್ ಮತ್ತು ನಿರ್ಮಲ್ ಕುಮಾರ್ ರಾಯ್. ಆದರೆ ಲೇಖಕ ಕೊನೆಯವನ ಹೆಸರು ನಿರ್ಮಲ್ ಕುಮಾರ್ ರಾಯ್ ಅಲ್ಲವೆನ್ನುತ್ತಾನೆ. ನಿಜವಾದ ಹೆಸರನ್ನು ಹೇಳಲು ಒತ್ತಾಯಿಸಿದಾಗ ಅವನು ಇಂದ್ರಜಿತ್ ರಾಯ್ ಎನ್ನುತ್ತಾನೆ. ಆತ ಸಾಮಾಜಿಕ ನಿಯಮ ಕಟ್ಟಳೆಗಳಿಗೆ ವಿರುದ್ಧವಾಗಿ ನಡೆದರೆ ಹೆದರಿಕೆಯೆಂದು ಹೇಳುತ್ತಾನೆ. ಹೀಗೆ ‘ಏವಂ ಇಂದ್ರಜಿತ್’ ನಾಟಕದ ರಚನಾ ವಿನ್ಯಾಸದಲ್ಲಿಯೇ ಅದರ ನಾವೀಣ್ಯತೆಯಿದೆ. ಈ ನಾಟಕದಲ್ಲಿ ಬರುವ ಲೇಖಕ ನಿರೂಪಕನೂ ಹೌದು ಮತ್ತು ಇತರ ಪಾತ್ರಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ವ್ಯಕ್ತಿಯೂ ಹೌದು.

ನಾಟಕದ ಎರಡನೆಯ ಅಂಕವು ಏಳು ವರ್ಷಗಳ ನಂತರದಲ್ಲಿ ಶುರುವಾಗುತ್ತದೆ. ಅಮಲ್, ವಿಮಲ್ ಮತ್ತು ಕಮಲ್-ಇವರು ಉದ್ಯೋಗಸ್ಥರಾಗಿರುತ್ತಾರೆ; ಅವರಿಗೆಲ್ಲ ಮದುವೆಯಾಗಿರುತ್ತದೆ; ಅವರು ತಂತಮ್ಮ ಉದ್ಯೋಗಗಳಿಗೆ ಹೊಂದಿಕೊಂಡಿರುತ್ತಾರೆ; ಏಕತಾನತೆಯೇ ಅವರ ಬದುಕಿನ ಸೂತ್ರವಾಗಿರುತ್ತದೆ. ಹೀಗಾಗಿ ಅವರೆಲ್ಲರ ಬದುಕು ದೈನಂದಿನ ಜಂಜಾಟಗಳಲ್ಲಿಯೇ ಕಳೆದುಹೋಗುತ್ತದೆ; ಹಾಗಾಗಿ ಅವರು ಯಾವ ಮಹತ್ವಪೂರ್ಣ ಸಾಧನೆಯಿಲ್ಲದೇ ಸಾಂಸಾರಿಕ ಜೀವನದಲ್ಲಿ ಮುಳುಗಿಹೋಗಿರುತ್ತಾರೆ. ಆದರೆ ಇಂದ್ರಜಿತ್ ಈ ಕಟ್ಟುಪಾಡುಗಳ ಜೀವನದಿಂದ ರೋಸಿಹೋಗುತ್ತಾನೆ. ಎಲ್ಲದರಿಂದಲೂ ಬಿಡುಗಡೆ ಹೊಂದಲು ಹಂಬಲಿಸುತ್ತಾನೆ. ತಾನು ಇಷ್ಟಪಡುವ ಮಾನಸಿಯನ್ನು ಮದುವೆಯಾಗಲು ಬಯಸುತ್ತಾನೆ. ಆದರೆ ಅವಳು ಹೆಚ್ಚಿನ ಕಾಲಾವಕಾಶ ಕೇಳುತ್ತಾಳೆ. ಅಷ್ಟರಲ್ಲಿ ಇಂದ್ರಜಿತ್ ವಿದೇಶಕ್ಕೆ ಹಾರುತ್ತಾನೆ. ತನ್ನ ವಿಧಿಯನ್ನು ಹಳಿದುಕೊಳ್ಳುತ್ತಾನೆ.

ಬಾದಲ್ ಸರ್ಕಾರ್

ಮೂರನೆಯ ಅಂಕದಲ್ಲಿ ವಿದೇಶದಲ್ಲಿರುವ ಇಂದ್ರಜಿತ್‍ನ ಪತ್ರವು ಲೇಖಕನಿಗೆ ತಲುಪುತ್ತದೆ. ಅದರಲ್ಲಿ ಇಂದ್ರಜಿತ್ “ಕಲಕತ್ತೆ, ಭೂಪಾಲ್, ಬಾಂಬೆ, ಜಲಂಧರ್, ಉದಯಪುರ್, ಕಲಕತ್ತೆ-ಲಂಡನ್! ಅತೀತವೆಲ್ಲ ರಥಚಕ್ರದಂತೆ ಉರುಳುತ್ತಲೇ ಸಾಗಿತು. ಆದರೂ ಅದು ಚಕ್ರದ ಹಾಗೆ ಅಲ್ಲ – ಪ್ರತಿಯೊಂದು ಸುತ್ತು -ಮೊದಲಿನದನ್ನು ಬಿಟ್ಟು ಹೊಸ ಸುತ್ತು ಹಾಕುತ್ತದೆ – ಇದೇ ದಿನನಿತ್ಯದ ದುರಂತ. ಏನನ್ನೋ ಯಾವುದನ್ನೋ ಹಿಡಿಯುತ್ತೇನೆ. ಅಲ್ಲಿಗೇ ಎಲ್ಲಾ ಮುಗಿದಂತೆ ಅನ್ನಿಸುತ್ತದೆ-ತಟ್ಟನೆ-ಕೈಯಲ್ಲಿದ್ದುದನ್ನು ಬಿಸಾಕಿಬಿಡುತ್ತೇನೆ. ಮತ್ತೆ ಹೊಸತನ್ನ ಹಿಡಿಯಲು ಹವಣಿಸುತ್ತೇನೆ. ಇನ್ನೂ ಆಸೆ ಬಿಟ್ಟಿಲ್ಲ-ಒಂದಲ್ಲ ಒಂದು ದಿನ ಏನಾದರೊಂದು, ಅಸಾಧ್ಯ, ಅನಿರೀಕ್ಷಿತ ಘಟನೆ ಘಟಿಸಿಯೇ ಘಟಿಸೀತು-ಎಂದು. ಇಲ್ಲಿಗೇ ಮುಗಿಯಲಿಲ್ಲ-ಇಷ್ಟೇ ಅಲ್ಲ-ಎಂಬ ಅರಿವು ನನ್ನನ್ನು ಕೆದುಕುತ್ತಲೇ ಇರುತ್ತದೆ. ಅದಕ್ಕೆ ಒಮ್ಮೊಮ್ಮೆ ಕಲ್ಪಿಸುತ್ತೇನೆ-ಎಂದಾದರೊಂದು ದಿನ, ಯಾವುದೋ ಕಲ್ಪನಾತೀತ ಘಟನೆಯೊಂದು ನಡೆದು, ಗತಕಾಲದ ಅನುಭವ-ನೆನಪುಗಳನ್ನೆಲ್ಲಾ ಅಳಿಸಿ ಹಾಕೀತು-ಎಂದು. ಎಂಥಾ ಬೋಳೇ ಕನಸು? ನಿದ್ದೆ ಓಡಿಹೋದರೂ ಕನಸಿನ ಗುಂಗು ಮತ್ತು ಅಮಲು ಹಾಗೆಯೇ ಆವರಿಸಿಕೊಂಡಿರುತ್ತದೆ..” ಎಂದು ಬರೆದಿರುತ್ತಾನೆ. ಈ ಪತ್ರವೇ ಇಂದ್ರಜಿತ್‍ನ ಅಸ್ತಿತ್ವವಾದಿ ಆಲೋಚನೆಗಳನ್ನು ಬಿಚ್ಚಿಡುತ್ತದೆ. ಕಥಾನಾಯಕ ಇಂದ್ರಜಿತ್‍ನಿಗೆ ಯಾವುದರಲ್ಲಿಯೂ ಗಾಢವಾದ ನಂಬಿಕೆಯಿಲ್ಲ; ಅವನು ತನ್ನನ್ನು ತಾನು ಈ ಸಮಾಜದ ಒಂದು ಭಾಗವಾಗಿಯೇ ನೋಡುತ್ತಾನೆ; ಬೀದಿಬದಿಯಲ್ಲಿ ಬೂಟ್ ಪಾಲಿಶ್ ಮಾಡುವ ಹುಡುಗನ ಬದುಕಿನ ಬಗ್ಗೆ ಪ್ರಶ್ನಿಸುತ್ತಾನೆ. ಎಲ್ಲ ನೀತಿನಿಯಮಗಳನ್ನು ಪ್ರಶ್ನಿಸುತ್ತಾನೆ. ತನ್ನೊಳಗಿನ ಸಿಟ್ಟು ಆಕ್ರೋಶವನ್ನು ಹೊರಹಾಕುತ್ತಾನೆ. ಸಾಮಾಜಿಕ ಅಸಮಾನತೆ, ಬಡತನ, ದಮನ, ಶೋಷಣೆಗಳನ್ನು ಕಂಡು ಉರಿಯುತ್ತಾನೆ.

ಲೇಖಕ ಮತ್ತು ಇಂದ್ರಜಿತ್‍ನ ಮುಖಾಮುಖಿಯಾಗುತ್ತದೆ. ಆಗ ಲೇಖಕ ಮದುವೆಯ ವಿಷಯವನ್ನು ಕೇಳಿದರೆ ಇಂದ್ರಜಿತ್ ತಾನು ಮಾನಸಿಯನ್ನು ಮದುವೆಯಾಗಿದ್ದೇನೆ ಎನ್ನುತ್ತಾನೆ. ಆದರೆ ಲೇಖಕ ಇದನ್ನು ಒಪ್ಪುವುದಿಲ್ಲ. ಅವನಿಗೆ ತಾನು ಅಂದುಕೊಂಡಂತೆ ಜೀವಿಸಲು ಆಗುವುದಿಲ್ಲ. ಆತನ ಕನಸುಗಳೆಲ್ಲ ಭಗ್ನಗೊಂಡವುಗಳೇ. ಅವನು ಆತ್ಮಹತ್ಯೆಯನ್ನು ಕುರಿತು ಮಾತಾಡುತ್ತಾನೆ. ಈ ಬದುಕು ನಿರರ್ಥಕವೆಂದು ವಾದಿಸುತ್ತಾನೆ. ಅದಕ್ಕೆ ಗ್ರೀಕ್ ಪುರಾಣದಲ್ಲಿ ಜೂಪಿಟರ್, ಸಿಸಿಫಸ್‍ಗೆ ಕೊಟ್ಟ ಶಾಪದಂತೆ ಹೆಬ್ಬಂಡೆಯನ್ನು ಬೆಟ್ಟದ ತುದಿಗೆ ತಳ್ಳಿಕೊಂಡು ಹೋಗುವುದನ್ನು ಪ್ರಸ್ತಾಪಿಸುತ್ತಾನೆ. ಇದರಂತೆಯೇ ತನ್ನ ಜೀವನದ ಶ್ರಮವೆಲ್ಲ ನಿರರ್ಥಕವೆಂದು ನುಡಿಯುತ್ತಾನೆ. ಈ ಲೋಕದಿಂದ ತಾನು ತುಂಬ ದೂರ ಓಡಿಹೋಗಬೇಕೆಂದು ಹೇಳುತ್ತಾನೆ. ಈ ನಾಟಕದಲ್ಲಿ ಇಂದ್ರಜಿತ್ ಮತ್ತು ಲೇಖಕ ಇಬ್ಬರು ಕೂಡ ಅಸ್ತಿತ್ವವಾದಿ ಮಾತುಗಳನ್ನಾಡುತ್ತಾರೆ. ನಾಟಕದಲ್ಲಿ ಅಂತಿಮವಾಗಿ ಇಂದ್ರಜಿತ್ ತಾನು ನಿರ್ಮಲ್ ಕುಮಾರ್ ರಾಯ್ ಎಂಬುದನ್ನು ಒಪ್ಪಿಕೊಳ್ಳುತ್ತಾನೆ. ತಾನು ಕೂಡ ಅಮಲ್, ವಿಮಲ್, ಕಮಲ್ ಮತ್ತು ಮಾನಸಿಯಂತೆಯೇ ಒಬ್ಬ ಸಾಮಾನ್ಯ ವ್ಯಕ್ತಿಯೆಂದು ಭಾವಿಸುತ್ತಾನೆ. ‘ಮಿಥ್ ಆಫ್ ಸಿಸಿಫಸ್’ನಂತೆ ಜೀವನದ ನಿರರ್ಥಕತೆಯನ್ನು ಒಪ್ಪಿಕೊಳ್ಳುವುದೇ ಸರಿಯಾದ ಮಾರ್ಗವೆನ್ನುತ್ತಾನೆ. ಒಟ್ಟಿನಲ್ಲಿ ಅವನು ಜೀವನದ ದುರಂತ ಮತ್ತು ಅಸಂಗತತೆಯನ್ನು ಒಪ್ಪಿಕೊಳ್ಳುವ ತೀರ್ಮಾನಕ್ಕೆ ಬರುತ್ತಾನೆ.

ಗಿರೀಶ್ ಕಾರ್ನಾಡ್

ಬಾದಲ್ ಸರ್ಕಾರ್ ಅವರು ವ್ಯಾಪಾರದ ಹಿತಾಸಕ್ತಿಯನ್ನು ಹೊಂದಿರುವ ರಂಗಭೂಮಿಯನ್ನು ನಿರಾಕರಿಸಿದರು. ಆಡಂಬರದ ರಂಗಸಜ್ಜಿಕೆ, ಎದ್ದು ಕಾಣುವ ವೇಷಭೂಷಣ, ಬೆಳಕಿನ ವಿನ್ಯಾಸ, ದೊಡ್ಡ ದೊಡ್ಡ ಪರಿಕರಗಳ ಅಗತ್ಯವೇ ಇಲ್ಲವೆಂದರು. ನಾಟಕದ ನಟ-ನಟಿಯರು ಮತ್ತು ಪ್ರೇಕ್ಷಕರನ್ನು ಬೇರ್ಪಡಿಸುವ ಚಿತ್ರಚೌಕಟ್ಟಿನ ಪ್ರೋಸಿನಿಯಂ ರಂಗಮಂದಿರದ ಅಸ್ತಿತ್ವವನ್ನು ಧಿಕ್ಕರಿಸಿದರು. ನಾಟಕವನ್ನು ಕಸುಬುದಾರ ಲೇಖಕನೇ ಅಲಂಕಾರಿಕ ಭಾಷೆಯಲ್ಲಿ ಬರೆಯುವುದನ್ನು ಬಿಟ್ಟುಕೊಟ್ಟರು. ಖಾಲಿ ಇರುವಂತಹ ಯಾವುದೇ ಜಾಗವು ಅವರಿಗೆ ನಾಟಕ ಪ್ರದರ್ಶಿಸುವ ರಂಗಭೂಮಿಯಾಗಿ ಕಂಡಿತು. ಇಂತಹ ಹೊಸ ಸಾಧ್ಯತೆಗಳನ್ನು ಶೋಧಿಸಿದ ಬಾದಲ್ ಸರ್ಕಾರ್ ಅವರ ಈ ಪ್ರಯೋಗಶೀಲತೆಯೇ ಭಾರತೀಯ ರಂಗಭೂಮಿಯಲ್ಲಿ ‘ಮೂರನೆಯ ರಂಗಭೂಮಿ’ ಎಂದು ಪ್ರಸಿದ್ಧವಾಗಿದೆ. ಅವರು ಗ್ರಾಮೀಣ ರಂಗಭೂಮಿ ಮತ್ತು ನಗರ ರಂಗಭೂಮಿಗಳ ನಡುವೆ ಸಾಮರಸ್ಯವನ್ನು ಸಾಧಿಸಿದರು. ಇದನ್ನು ಸಮನ್ವಯ ರಂಗಭೂಮಿ ಎಂದೇ ಕರೆಯಲಾಗಿದೆ. ರಂಗಭೂಮಿ ವಿಮರ್ಶಕರಾದ ರುಸ್ತುಂ ಭರೂಚ ಅವರು ತಮ್ಮ ‘ರಿಹರ್ಸಲ್ಸ್ ಆಫ್ ರೆವೊಲ್ಯೂಶನ್’ ಎಂಬ ಕೃತಿಯಲ್ಲಿ ಬಾದಲ್ ಸರ್ಕಾರ್ ಕುರಿತು “ಅವರ ರಂಗಭೂಮಿಯು ತಾನು ತೀವ್ರಗಾಮಿಯೆಂದು ಸೋಗು ಹಾಕುವುದಿಲ್ಲ. ಪ್ರೇಕ್ಷಕರ ಪ್ರಜ್ಞೆಯನ್ನು ಅದು ಅಲ್ಲಾಡಿಸುವ ಕಡೆಗೆ ಒತ್ತು ಕೊಡುತ್ತದೆ. ಪರಿಸ್ಥಿತಿಯ ಅರಿವಿದ್ದೂ ಆ ಕುರಿತು ಏನೂ ಮಾಡದೆ ಜನರ ಸಂಕಟವನ್ನು ತಣ್ಣಗೆ ಕುಳಿತು ನೋಡುವ ತಾಕತ್ತಿರುವ ಮಧ್ಯಮ ವರ್ಗದವರ ಜಡ್ಡುಗಟ್ಟಿದ ಮನಃಸ್ಥಿತಿಯ ಬಗೆಗೆ ಬಾದಲ್ ಸರ್ಕಾರ್ ಬೆಳಕು ಚೆಲ್ಲುತ್ತಾರೆ” ಎಂದಿದ್ದಾರೆ.

ಭಾರತೀಯ ರಂಗಭೂಮಿಯ ಮೇಲೆ ಬಾದಲ್ ಸರ್ಕಾರ್ ಅವರ ಪ್ರಭಾವ ಗಾಢವಾದದ್ದು. ಆದರೆ ಅವರ ಮೇಲೆ ಪೊಲೆಂಡಿನ ಪ್ರಖ್ಯಾತ ರಂಗಭೂಮಿ ನಿರ್ದೇಶಕ ಮತ್ತು ರಂಗತಜ್ಞನಾದ ಗ್ರೋಟಾವ್‍ಸ್ಕಿಯ ಪ್ರಭಾವವಿದೆ. ಅವರು ಗ್ರೋಟಾವ್‍ಸ್ಕಿಯ ‘ಬಡ ರಂಗಭೂಮಿ’ಯ ಆಶಯಗಳನ್ನು ಒಪ್ಪಿಕೊಂಡವರಾಗಿದ್ದರು. ಇದು ಕಲೆಯ ಬೇರೆ ಬೇರೆ ತಂತ್ರಗಳಿಂದ ನಡೆಯುವ ಹಿನ್ನೆಲೆ ಸಂಗೀತ, ಬೆಳಕು, ರಂಗಸಜ್ಜಿಕೆ, ವಸ್ತ್ರಾಲಂಕಾರಗಳಿಂದ ರಂಗಭೂಮಿಯನ್ನು ಅದ್ದೂರಿಗೊಳಿಸುವುದರ ವಿರೋಧಿಯಾಗಿದೆ. ಇದರಿಂದ ರಂಗಭೂಮಿ ಪ್ರದರ್ಶನವು ದುಬಾರಿಯಾಗುವುದನ್ನು ತಪ್ಪಿಸಿದಂತಾಗುತ್ತದೆ. ಯಾವುದೇ ಅಲಂಕಾರಗಳಿಲ್ಲದೇ ನಟ-ನಟಿಯರು ತಂತಮ್ಮ ದೇಹವನ್ನೇ ರಂಗಭೂಮಿಯ ಏಕೈಕ ಸೊತ್ತಾಗಿಸುವುದನ್ನು ಈ ತತ್ವವು ಒತ್ತಾಯಿಸುತ್ತದೆ. ಆಗ ನಟ-ನಟಿಯರ ಆಂಗಿಕ ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದಂತಾಗುತ್ತದೆ; ನೇರವಾಗಿ ಪ್ರೇಕ್ಷಕರೊಂದಿಗೆ ಸಂಬಂಧ ಬೆಳೆಯುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ‘ಏವಂ ಇಂದ್ರಜಿತ್’ ನಾಟಕವು ಅತ್ಯಂತ ಯಶಸ್ವಿಯಾಗಿದೆ. ಈ ನಾಟಕವು ಅದನ್ನು ವೀಕ್ಷಿಸುವ ಪ್ರೇಕ್ಷಕರ ಮಧ್ಯದಿಂದಲೇ ಎದ್ದು ಬಂದು ಪುನಃ ಅವರ ಎದುರಿನಲ್ಲಿಯೇ ಪ್ರದರ್ಶನಗೊಂಡಂತೆ ಗೋಚರವಾಗುತ್ತದೆ. ಆದ್ದರಿಂದಲೇ ಈ ನಾಟಕವು ನೋಡುಗರ ಮನದಾಳದಲ್ಲಿ ಇಳಿದು ಪ್ರಭಾವ ಬೀರುತ್ತದೆ. ಪ್ರಜ್ಞೆಯನ್ನು ಕದಡುತ್ತದೆ.


ಇದನ್ನು ಓದಿ: ಮತ ನಂಬಿಕೆ, ಜಾತ್ಯತೀತತೆ : ಮರುಕಟ್ಟಿಕೊಳ್ಳಬೇಕಾದ್ದು ಯಾವ ಭಾಷೆಯನ್ನು? – ಕೆ.ಫಣಿರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...