ಬೆಂಗಳೂರು ವಿಶ್ವ ವಿದ್ಯಾನಿಲಯದ ಎಂ.ಎ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯೊಬ್ಬರು ಸೋಮವಾರ (ಫೆ 3) ಬೆಳಿಗ್ಗೆ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಹೆಚ್.ಎನ್ ಪಾವನ ಸಾವಿಗೀಡಾದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಮೈಸೂರು ಜಿಲ್ಲೆ ಹೆಚ್‌ಡಿ ಕೋಟೆ ತಾಲೂಕಿನ ಹೆಬ್ಬಲಗುಪ್ಪೆಯ ಪಾವನ ಅವರು ಎಂ.ಎ ಮೂರನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಪಾವನ ತನ್ನ ಕೊಠಡಿಯ ಬಾಗಿಲು ತೆರೆಯದ ಹಿನ್ನೆಲೆ ಆತಂಕಗೊಂಡ ಸ್ನೇಹಿತರು, ಬಾಗಿಲಿನ ಲಾಕ್ ಒಡೆದು ಒಳ ಹೋಗಿ ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಪಾವನಾ ಬರೆದಿರಬಹುದು ಎಂದು ನಂಬಲಾದ ಒಂದು ಪತ್ರವನ್ನು ಆಕೆಯ ಕೋಣೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆಯ ಹಿಂದಿನ ನಿಖರವಾದ ಕಾರಣಗಳು ಸ್ಪಷ್ಟವಾಗಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಜಯಕರ್ ಶೆಟ್ಟಿ ಹೇಳಿದ್ದಾರೆ.
ಘಟನೆ ಸಂಬಂಧ ಜ್ಞಾನಭಾರತಿ ಠಾಣೆ ಪೊಲೀಸರು ಅಸಹಜ ಸಾವು ವರದಿ (ಯುಡಿಆರ್) ದಾಖಲಿಸಿಕೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಾವನ ಅವರ ಶವಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಪಾವನ ಸಾವು ಆತ್ಮಹತ್ಯೆಯಿಂದ ಆಗಿದೆ ಎಂದು ವರದಿಗಳು ಹೇಳಿವೆ. ಅದು ಆತ್ಮಹತ್ಯೆಯೂ.. ಕೊಲೆಯೂ? ಅಥವಾ ಇನ್ಯಾವುದೇ ಕಾರಣಕ್ಕೆ ಸಾವಾಗಿದೆಯೂ ಇನ್ನೂ ಖಚಿತವಾಗಿಲ್ಲ. ಪ್ರಕರಣದ ತನಿಖೆ ಪ್ರಗತಿಯಲ್ಲಿರುವುದರಿಂದ ನಾವು ಇತ್ಯರ್ಥಕ್ಕೆ ಬರಲು ಸಾಧ್ಯವಿಲ್ಲ. ಹಾಗಾಗಿ, ‘ಆತ್ಮಹತ್ಯೆ’ ಬದಲಾಗಿ ಸುದ್ದಿಯಲ್ಲಿ ‘ಅಸಹಜ ಸಾವು’ ಎಂದಷ್ಟೇ ಉಲ್ಲೇಖಿಸಲಾಗಿದೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104


