2018-19ರ ಸಾಲಿನಲ್ಲಿ ಒಂದು ವರ್ಷದಲ್ಲಿಯೇ 71,500 ಕೋಟಿ ರೂಗಳಷ್ಟು ಬ್ಯಾಂಕ್ ವಂಚನೆ ನಡೆದಿದ್ದು 6800 ಕೇಸುಗಳು ದಾಖಲಾಗಿವೆ ಎಂಬ ಆಘಾತಕಾರಿ ಅಂಶವನ್ನು ಆರ್.ಬಿ.ಐ ತಿಳಿಸಿದೆ.
2017-18 ರ ಸಾಲಿನಲ್ಲಿ 5,916 ಪ್ರಕರಣಗಳಿಂದ ಒಟ್ಟು 41,167 ಕೋಟಿ ರೂಗಳ ವಂಚನೆ ನಡೆದಿತ್ತು ಎಂದು ಪಿಟಿಐ ಪತ್ರಕರ್ತರೊಬ್ಬರು ಸಲ್ಲಿಸಿದ್ದ ಆರ್‍ಟಿಐ ಅರ್ಜಿಗೆ ಉತ್ತರಿಸಿ ರಿಸರ್ವ್ ಬ್ಯಾಂಕ್ ಇಂಡಿಯಾ ಈ ಮಾಹಿತಿ ಹೊರಹಾಕಿದೆ.
ಕಳೆದ 11 ವರ್ಷಗಳ ಡೆಟಾವನ್ನು ಗಮನಿಸಿದ್ದಲ್ಲಿ ಒಟ್ಟು 53ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು 2 ಲಕ್ಷ ಕೋಟಿ ಹಣವನ್ನು ಸಾರ್ವಜನಿಕ ಬ್ಯಾಂಕುಗಳಿಗೆ ವಂಚಿಸಲಾಗಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ 2008-13ರ ಸಮಯದಲ್ಲಿ ವರ್ಷಕ್ಕೆ ಸರಾಸರಿ 5 ಸಾವಿರ ಕೋಟಿಯಂತೆ 30 ಸಾವಿರ ಕೊಟಿ ವಂಚನೆಯಾಗುತ್ತಿದ್ದರೆ 2013ರಿಂದ 2018ರ ವರೆಗೆ ನರೇಂದ್ರ ಮೋದಿಯವರ ನೇತೃತ್ವದ ಅವಧಿಯಲ್ಲಿ ಬ್ಯಾಂಕ್ ವಂಚನೆ ತೀರಾ ಅತಿರೇಕಕ್ಕೇರಿದೆ.
ಮೋದಿಯವರ 5 ವರ್ಷದ ಆಡಳಿತದಲ್ಲಿ ಸುಮಾರು 1 ಲಕ್ಷದ 70 ಸಾವಿರ ಕೋಟಿ ರೂಗಳಷ್ಟು ಬ್ಯಾಂಕುಗಳಿಗೆ ವಂಚನೆ ನಡೆದಿದೆ. ಆರಂಭದಲ್ಲಿ ನೀರವ್ ಮೋದಿ, ವಿಜಯ್ ಮಲ್ಯ ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದು ಅವರು ದೇಶ ಬಿಟ್ಟು ಓಡಿಹೋಗಿದ್ದರು. ಇದರ ಕುರಿತು ವ್ಯಾಪಕ ವಿರೋಧ ಬಂದರೂ ಲೆಕ್ಕಿಸದೇ ನಂತರವೂ ಎರಡೇ ವರ್ಷದಲ್ಲಿ 1 ಲಕ್ಷದ 10ಸಾವಿರ ಕೋಟಿಯಷ್ಟು ವಂಚನೆ ನಡೆದಿದೆ ಎಂದು ದಿ ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.
ಈ ಕುರಿತು ಖ್ಯಾತ ಯುವ ಚಿಂತಕ ಧೃವ್ ರಾಠೀಯವರು “ಭಾರತದಲ್ಲಿ ಮೂವರಲ್ಲಿ ಒಬ್ಬ ವ್ಯಕ್ತಿ ಚೌಕಿದಾರ್ ಆಗಿದ್ದಾರೆ. ಆದರೆ ಅವರು ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ನಿಂದಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿಯೇ ಬ್ಯಾಂಕ್‍ಗಳಿಗೆ ವಂಚನೆಯಲ್ಲಿ ಭಾರತ ಹಳೆಯ ದಾಖಲೆಗಳೆನ್ನವನ್ನು ಮುರಿದು ಎತ್ತರಕ್ಕೇರಿದೆ. ಎಷ್ಟರ ಮಟ್ಟಿಗೆ ಎಂದರೆ ಒಂದೇ ವರ್ಷದಲ್ಲಿ 6800 ಪ್ರಕರಣಗಳು ಮತ್ತು 71ಸಾವಿರ ಕೋಟಿ ಹಣ. ಕಳೆದ ವರ್ಷಕ್ಕೆ ಹೋಲಿಸಿದರೆ 73% ಹೆಚ್ಚು” ಎಂದು ವ್ಯಂಗ್ಯವಾಡಿದ್ದಾರೆ.

ಒಂದು ಕಡೆ ಭಾರತದ ಆರ್ಥಿಕತೆ ಕುಸಿಯುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ರೈತರು ಸಾಲಮನ್ನಾಕ್ಕಾಗಿ ಅಂಗಲಾಚುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಸಾರ್ವಜನಿಕರಿಗೆ/ಸರ್ಕಾರಕ್ಕೆ ಸೇರಿದ ಲಕ್ಷಾಂತರ ಕೋಟಿ ರೂಗಳನ್ನು ದೊಡ್ಡ ಬಂಡವಾಳಶಾಹಿಗಳು ಸಾಲವಾಗಿ ಪಡೆದು ವಾಪಸ್ ಕಟ್ಟದೆ ವಂಚಿಸುತ್ತಿದ್ದಾರೆ, ಅವರಿಗೆ ಮೋದಿ ಅಭಯ ಹಸ್ತ ನೀಡುತ್ತಿದ್ದಾರೆ ಎಂದು ಧೃವ್ ರಾಠೀ ಆರೋಪಿಸಿದ್ದಾರೆ.


