Homeಮುಖಪುಟಜಿಂದಾಲ್ ಪರ ಕೊಂಡಯ್ಯ ವಕೀಲಿಕೆ : ಇದರ ಹಿಂದಿದೆ ‘ದೊಡ್ಡ’ ಕೊಡುಕೊಳ್ಳುವಿಕೆ!

ಜಿಂದಾಲ್ ಪರ ಕೊಂಡಯ್ಯ ವಕೀಲಿಕೆ : ಇದರ ಹಿಂದಿದೆ ‘ದೊಡ್ಡ’ ಕೊಡುಕೊಳ್ಳುವಿಕೆ!

ಇಲ್ಲಿ ಜಿಂದಾಲ್ ಮುಖ್ಯಸ್ಥ ಸಜ್ಜನ್ ಜಿಂದಾಲ್‍ರಿಗೆ ಎಲ್ಲ ಪಕ್ಷಗಳ ನಾಯಕರ ಜೊತೆಗೂ ‘ಸ್ನೇಹ’ವಿದೆ. ಹಿಂದೆ ಅವರ ಸಹೋದರ ನವೀನ್ ಜಿಂದಾಲ್ ಕಾಂಗ್ರೆಸ್ ಸಂಸದರಾಗಿದ್ದರು.

- Advertisement -
- Advertisement -

| ಭೀಮನಗೌಡ ಕಾಶಿರೆಡ್ಡಿ, ಕಂಪ್ಲಿ |

ರಾಜ್ಯ ಸಂಪುಟವಾಗಲೇ ಜಿಂದಾಲ್‍ಗೆ 3,666 ಎಕರೆ ಭೂಮಿಯನ್ನು ಕೊಡಲು ಒಪ್ಪಿಯಾಗಿದೆ. ಅದಕ್ಕೆ ಕಾಂಗ್ರೆಸ್ನೊಳಗಿಂದಲೇ ಸಣ್ಣ ಮಟ್ಟದ ವಿರೋಧ ವ್ಯಕ್ತವೂ ಆಗಿದೆ. ಇನ್ನೊಂದು ಕಡೆ, ಸಿಂಗಾಪುರ್ ಪ್ರವಾಸ ಮುಗಿಸಿ ಬಂದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಮೊದಲ ಹೇಳಿಕೆಯೇ ಜಿಂದಾಲ್ ಪರವಿತ್ತು. ಈಗ ಬಳ್ಳಾರಿಯ ಕಾಂಗ್ರೆಸ್‍ನ ಪಳೆಯುಳಿಕೆ ಮತ್ತು ಹಾಲಿ ಎಂಎಲ್‍ಸಿ ಕೆ.ಸಿ. ಕೊಂಡಯ್ಯ ಜಿಂದಾಲ್‍ಗೆ ಭೂಮಿ ಕೊಡುವುದನ್ನು ಸಮರ್ಥಿಸಿ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಟಿಯನ್ನೇ ನಡೆಸುವ ಸಾಹಸ ಮಾಡಿದ್ದಾರೆ! ಕೊಂಡಯ್ಯರ ಜಿಂದಾಲ್ ಪ್ರೀತಿಯ ಹಿಂದಿನ ಕತೆ ಇಲ್ಲಿದೆ…

ಜಿಂದಾಲ್ ಪರ ಎಂಎಲ್‍ಸಿ ಕೊಂಡಯ್ಯ ಪ್ರೆಸ್‍ಮೀಟ್ ಮಾಡಿದ್ದು ಬಳ್ಳಾರಿ ಆಚೆಯವರಿಗೆ ಕೊಂಚ ಆಶ್ಚರ್ಯ ಅನಿಸಬಹುದು. ಆದರೆ ಬಳ್ಳಾರಿ ಜಿಲ್ಲೆಯವರಿಗೆ ಇದರಲ್ಲೇನೂ ವಿಚಿತ್ರ ಕಾಣುತ್ತಿಲ್ಲ. ಕೊಂಡಯ್ಯ ಜಿಂದಾಲ್ ಏಜೆಂಟರು ಎಂದು ಜನ ಎಂದೋ ಲೇಬಲ್ ಅಂಟಿಸಿಯಾಗಿದೆ.

ಜಿಂದಾಲ್‍ಗೆ ಕಡಿಮೆ ದರದಲ್ಲಿ ಭೂಮಿಯನ್ನು ಕೊಡುತ್ತಿರುವ ಸರ್ಕಾರದ ನಿರ್ಧಾರದ ಬಗ್ಗೆ ಜನರಿಂದ ಪ್ರತಿರೋಧ ಎದುರಾದ ಮೇಲೆ ಸೋಮವಾರ ಫೀಲ್ಡಿಗೆ ಇಳಿದ ಎಂಎಲ್‍ಸಿ ಕೊಂಡಯ್ಯ, ‘ಜಿಂದಾಲ್ ಜೊತೆ ಹಿಂದೆ ಮಾಡಿಕೊಂಡ ಒಪ್ಪಂದದಂತೇ ಭೂಮಿಯನ್ನು ಮಾರಲು ಸರ್ಕಾರ ನಿರ್ಧರಿಸಿದೆ, ಇದು ಸರಿಯಾದ ಮಾರ್ಗ. ಲೀಸ್ ಕಂ ಸೇಲ್ ಅವಧಿ ಮುಗಿದ ಮೇಲೆ ಕಂಪನಿಗೆ ಮಾರುವುದು ಸರಿಯಾದ ಕ್ರಮ. ಈ ಬಗ್ಗೆ ಏನೂ ಗೊತ್ತಿಲ್ಲದೇ, ಜಿಂದಾಲ್‍ಗೆ ಭೂಮಿ ಮಾರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆಯುವ ಮೊದಲು ಎಚ್ಕೆ ಪಾಟೀಲರು ನನ್ನನ್ನು ಒಂದು ಮಾತು ಕೇಳಬೇಕಿತ್ತು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಂತರ ಗದಗಿನಲ್ಲಿ ಪ್ರೆಸ್ ಮೀಟ್ ಮಾಡಿದ ಎಚ್ಕೆ ಪಾಟೀಲ, ‘ಕೊಂಡಯ್ಯರಿಗೆ ಕೇಳಲು ಅವರೇನು ಜಿಂದಾಲ್ ಚೇರಮನ್ನಾ?’ ಎಂದು ಪ್ರಶ್ನಿಸದ್ದಲ್ಲದೇ, ತೀರಾ ಕಡಿಮೆ ಬೆಲೆಗೆ ಭೂಮಿ ಮಾರುತ್ತಿರುವುದೇಕೆ? ಸರ್ಕಾರದ ಸಂಸ್ಥೆಗಳಿಗೆ 2 ಸಾವಿರ ಕೋಟಿಯಷ್ಟು ಬಾಕಿ ಉಳಿಸಿಕೊಂಡಿರುವ ಜಿಂದಾಲ್ ಕಂಪನಿ ಒಪ್ಪಂದದ ಪ್ರಕಾರ ನಡೆದುಕೊಂಡಿಲ್ಲ. ಅಷ್ಟಲ್ಲದೇ ಅದರ ಮೇಲೆ ಸುಪ್ರಿಂನಲ್ಲಿ ಕೇಸು ಇರುವಾಗಲೂ ಭೂಮಿ ಮಾರಲು ತರಾತುರಿ ಏಕೆ?’ ಎಂದು ಕೊಂಡಯ್ಯರ ನಡೆಯನ್ನು ಟೀಕಿಸಿದರು.

ಈಗ ಬಳ್ಳಾರಿಯ ವ್ಯಾಟ್ಸಪ್ ಗ್ರೂಪ್‍ಗಳಲ್ಲಿ ಈ ಕುರಿತು ಪರ-ವಿರೋಧದ ಚರ್ಚೆಯಿದೆಯಾದರೂ, ಕೊಂಡಯ್ಯ ಜಿಂದಾಲ್ ಏಜೆಂಟ್ ಎಂಬ ಸಂದೇಶಗಳೇ ರಾರಾಜಿಸುತ್ತಿವೆ. 4 ದಿನಗಳ ಹಿಂದೆ, ‘ಸರ್ಕಾರದ ನಡೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡ್ತೇವೆ’ ಎಂದಿದ್ದ ವಿಪಕ್ಷ ನಾಯಕ ಯಡಿಯೂರಪ್ಪ ನಂತರ ಆ ಕುರಿತು ಮಾತೇ ಆಡಿಲ್ಲ. ಬಳ್ಳಾರಿ ಜಿಲ್ಲೆಯ ಬಿಜೆಪಿ ಪ್ರತಿನಿಧಿಗಳೂ ಮೌನದಲ್ಲೇ ಇದ್ದಾರೆ.

ಕೊಂಡಯ್ಯ-ಜಿಂದಾಲ್ ಲಿಂಕು!
ಗಣಿ ಉದ್ಯಮದಲ್ಲಿ ಅಷ್ಟೇನೂ ಯಶಸ್ಸು ಕಾಣದ ಕೊಂಡಯ್ಯರು ನಂತರ ಜಿಂದಾಲ್ ಪರವಾಗಿ ಕೆಲಸ ಮಾಡುತ್ತಲೇ ಬಂದವರು. ಹಿಂದೆ ಬಳ್ಳಾರಿ ಸ್ಟೀಲ್ಸ್ ಮತ್ತು ಅಲಾಯಡ್ಸ್ ಎಂಬ ಕಂಪನಿಯಲ್ಲಿ ಸಣ್ಣ ಶೇರು ಹೊಂದಿದ್ದ ಕೊಂಡಯ್ಯರಿಗೆ ಬೃಹತ್ ಗಣಿ ಉದ್ಯಮಿಯಾಗಲು ಸಾಧ್ಯವಾಗಲಿಲ್ಲ. ಆದರೆ ಕಾಂಗ್ರೆಸ್‍ನಲ್ಲಿ ಒಂದಿಲ್ಲೊಂದು ಸ್ಥಾನಮಾನ ಪಡೆಯುತ್ತಲೇ ಬಂದಿರುವ ಅವರಿಗೆ ಜಿಂದಾಲ್ ಆಪ್ತವಾಗಿತು. 1990ರ ದಶಕದಲ್ಲಿ ಖಾಸಗೀಕರಣ ಪರ್ವ ಆರಂಭವಾದ ಮೇಲೆ ಸರ್ಕಾರಿ ಸ್ವಾಮ್ಯದ ವಿಜಯನಗರ ಸ್ಟೀಲ್ಸ್ ಅನ್ನು ಜಿಂದಾಲ್ ಮಡಿಲಿಗೆ ಹಾಕಲಾಗಿತು. ಆಗ ಕೇವಲ ಸಣ್ಣ ಸಣ್ಣ ಘಟಕಗಳನ್ನಷ್ಟೇ ಹೊಂದಿದ್ದ ಜಿಂದಾಲ್ ಬೃಹತ್ ಕಾರ್ಯಾಚರಣೆ ಶುರು ಮಾಡಿದ್ದು ರಾಜ್ಯದಲ್ಲಿ ಎಸ್.ಎಂ ಕೃಷ್ಣ ಸರ್ಕಾರ ಬಂದ ಮೇಲೆ.

ಅಷ್ಟೊತ್ತಿಗೆ ಎರಡು ಸಲ ಎಂಪಿಗಿರಿ ಮುಗಿಸಿ ರಾಜ್ಯಸಭಾ ಸದಸ್ಯರಾಗಿದ್ದ ಕೊಂಡಯ್ಯ ಜಿಂದಾಲ್ ಕಂಪನಿಯ ಪರ ಸರ್ಕಾರಿ ಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು ಎಂದು ಜನರೇ ಹೇಳುತ್ತಾರೆ. ಆಗ ಮಲ್ಲಿಕಾರ್ಜುನ ಖರ್ಗೆ ಜಲಸಂಪನ್ಮೂಲ ಸಚಿವರಿದ್ದಾಗ ಜಿಂದಾಲ್‍ಗೆ ತುಂಗಭದ್ರಾ ನೀರು ಕೊಡಿಸುವಲ್ಲಿ ಕೊಂಡಯ್ಯ ಪಾತ್ರವೂ ಇತ್ತು. ಮುಂದೆ ದೂರದ ಆಲಮಟ್ಟಿ ಡ್ಯಾಮಿನಿಂದ ಪೈಪ್‍ಲೈನ್ ಮಾಡಿಸಿ ಜಿಂದಾಲ್‍ಗೆ ನೀರು ಒದಗಿಸಿವ ವ್ಯವಸ್ಥೆಯೂ ಆಗಿತು.

ಇಲ್ಲಿ ಜಿಂದಾಲ್ ಮುಖ್ಯಸ್ಥ ಸಜ್ಜನ್ ಜಿಂದಾಲ್‍ರಿಗೆ ಎಲ್ಲ ಪಕ್ಷಗಳ ನಾಯಕರ ಜೊತೆಗೂ ‘ಸ್ನೇಹ’ವಿದೆ. ಹಿಂದೆ ಅವರ ಸಹೋದರ ನವೀನ್ ಜಿಂದಾಲ್ ಕಾಂಗ್ರೆಸ್ ಸಂಸದರಾಗಿದ್ದರು. ಪ್ರಧಾನಿ ಮೋದಿ ಪಾಕ್‍ಗೆ ದಿಢೀರನೆ ಭೇಟಿ ಕೊಟ್ಟು ನವಾಜ್ ಶರೀಫ್ ಮನೆಯ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರಲ್ಲ? ಆ ಭೇಟಿ ಏರ್ಪಡಿಸಿದ್ದೇ ಸಜ್ಜನ ಜಿಂದಾಲ್ ಎಂಬ ಮಾತಿಗೆ ತಕ್ಕಂತೆ ಸಜ್ಜನ್ ಆ ಭೇಟಿಗೂ ಮೊದಲೇ ಅಲ್ಲಿ ಹಾಜರಿದ್ದರು. ಪಾಕ್ ನ ನವಾಜ್ ಶರೀಫರ ಕುಟುಂಬದ ಉಕ್ಕು ವ್ಯವಹಾರದ ಜೊತೆ ಸಜ್ಜನ್‍ಗೆ ಲಿಂಕ್ ಇದೆ ಎನ್ನಲಾಗುತ್ತಿದೆ.

ಸಜ್ಜನ್ ಜಿಂದಾಲ್

ಒಪ್ಪಂದ ಮುರಿಯುತ್ತಲೇ ಬಂದ ಜಿಂದಾಲ್
ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ರಾಜ್ಯದ ಎಲ್ಲ ಪಕ್ಷಗಳ ಜೊತೆಗೂ ಸಜ್ಜನ್ ಜಿಂದಾಲ್‍ಗೆ ಉತ್ತಮ ‘ಬಾಂಧವ್ಯ’ವಿದೆ. ಇಂತಹ ಬಾಂಧವ್ಯ ಬೆಸೆಯಲೆಂದೇ ಕೊಂಡಯ್ಯನಂತವರು ಓಡಾಡುತ್ತಾರೆ. ದಿಢೀರನೆ ಜಿಂದಾಲ್ ಪರ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಸದ್ಯ ರಾಯಚೂರು, ಬಳ್ಳಾರಿ, ಕೊಪ್ಪಳ ಭಾಗಕ್ಕೆ ವರ್ಷಕ್ಕೆ ಒಂದೇ ಬೆಳೆ ಎಂಬ ನಿರ್ಬಂಧವಿದೆ. ಆದರೆ, ಒಳಹರಿವು ಇದ್ದಾಗ ಮಾತ್ರ (ನವಂಬರ್‍ನಿಂದ ಡಿಸೆಂಬರ್ 25) ನದಿ ನೀರನ್ನು ತೆಗೆದುಕೊಳ್ಳಬೇಕೆಂಬ ನಿರ್ಬಂಧ ಇದ್ದರೂ ಜಿಂದಾಲ್ ಕಂಪನಿ ಮಾತ್ರ ಮಾರ್ಚ್‍ವರೆಗೂ ನದಿ ನೀರನ್ನು ಪಂಪ್ ಮಾಡುತ್ತಲೇ ಇದೆ. ವಾಸ್ತವದಲ್ಲಿ ಹೊಸಪೇಟೆ ಡ್ಯಾಮ್‍ಗೆ ಸೇರುವ ಹಳ್ಳದ ನೀರನ್ನು ಜಿಂದಾಲ್ ಬಳಸಬೇಕು ಅಷ್ಟೇ. ಆದರೆ, ಡ್ಯಾಮ್ ಪರಿಧಿಯೊಳಗೆ ಮೋಟಾರ್ ಪಂಪ್ ಕೂಡಿಸಿರುವ ಜಿಂದಾಲ್ ಕಂಪನಿ ಡ್ಯಾಮ್‍ನಿಂದಲೇ ನೀರು ಎತ್ತಿ, ಜಿಂದಾಲ್ ಆವರಣದಲ್ಲಿರುವ ತನ್ನ ಕೆರೆಗೆ ಪಂಪ್ ಮಾಡುತ್ತಿದೆ.

ಇನ್ನೊಂದು ಕಡೆ ಭುವನಹಳ್ಳಿ ಬಳಿ ಏಜೆಂಟರ ಮೂಲಕ 800 ಎಕರೆಯಷ್ಟು ಭೂಮಿ ಖರೀದಿಸಿರುವ ಜಿಂದಾಲ್ ಅಲ್ಲಿ ಒಂದು ದೊಡ್ಡ ಕೆರೆ ನಿರ್ಮಿಸಿ ಅಲ್ಲಿಗೂ ನೀರು ಹರಿಸುತ್ತಿದೆ. ಕುಡಿಯಲು, ಬೇಸಾಯಕ್ಕೆ ನೀರಿಲ್ಲದಿದ್ದರೂ ಜಿಂದಾಲ್‍ಗೆ ಪಕ್ಕದ ಹೊಸಪೇಟೆಯ ಡ್ಯಾಮ್‍ನಿಂದ ತುಂಗಭದ್ರಾ ನೀರು ಮತ್ತು ದೂರದ ಆಲಮಟ್ಟಿಯಿಂದ ಕೃಷ್ಣಾ ನೀರು ಯಥೇಚ್ಛವಾಗಿ ಹರಿಯುತ್ತಲೇ ಇದೆ.

ಹೀಗೆ ಹಿಂದಿನ ಒಪ್ಪಂದದಲ್ಲಿನ ಅಂಶಗಳನ್ನು ಪಾಲಿಸದೇ ಇರುವ ಜಿಂದಾಲ್ ಕಂಪನಿ ಪರ ನಿಂತು ಕೊಂಡಯ್ಯ ಪತ್ರಿಕಾಗೋಷ್ಠಿ ನಡೆಸುತ್ತಾರೆಂದರೆ? ಒಪ್ಪಂದದ ಪ್ರಕಾರ ಸರ್ಕಾರ ಜಿಂದಾಲ್‍ಗೆ ಆ ಲೀಸ್ ಭೂಮಿಯನ್ನು ಮಾರುದ್ದು ಸರಿಯಾಗಿಯೇ ಇದೆ ಎಂದು ವಾದಿಸುತ್ತಾರೆಂದರೆ?

ವೈಕುಂಠದಿಂದ ಹಂಪಿಹೌಸ್‍ಗೆ ಶಿಫ್ಟ್!
ಹಿಂದೆಲ್ಲ ಬಳ್ಳಾರಿ ಅಥವಾ ಕೊಪ್ಪಳ ಜಿಲ್ಲೆಗೆ ಭೇಟಿ ಕೊಟ್ಟ ರಾಜ್ಯದ ಮುಖ್ಯಮಂತ್ರಿಗಳು ಹೊಸಪೇಟೆಯಲ್ಲಿ ಅಚ್ಚುಕಟ್ಟಾಗಿರುವ ‘ವೈಕುಂಠ’ ಎಂಬ ಸರ್ಕಾರಿ ಅತಿಥಿ ಗೃಹದಲ್ಲಿ ತಂಗುತ್ತಿದ್ದರು. ಎಸ್‍ಎಂ. ಕೃಷ್ಣ ಮುಖ್ಯಮಂತ್ರಿ ಅವಧಿಯಲ್ಲಿ ಕೊಂಡಯ್ಯರ ವಿಶೇಷ ಆಸಕ್ತಿಯ ಪರಿಣಾಮವಾಗಿ ಮುಖ್ಯಮಂತ್ರಿಗಳು ಜಿಂದಾಲ್‍ನ ಆವರಣದಲ್ಲಿರುವ ‘ಹಂಪಿ ಹೌಸ್’ನಲ್ಲಿ ವಿಶ್ರಾಂತಿ ಮಾಡುವ ಪರಿಪಾಠ ಶುರು ಮಾಡಲಾಗಿತು. ಲೋಕಲ್ ರಾಜಕಾರಣಿಗಳಿಗೂ ಪ್ರವೇಶ ನಿಷಿದ್ಧವಾಗಿರುವ ವಿಶ್ರಾಂತಿ ಗೃಹವಿದೆ. ಮುಂದೆ ಧರ್ಮಸಿಂಗ್, ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲ ಈ ಜಿಂದಾಲ್‍ನ ‘ಹಂಪಿ ಹೌಸ್’ನ ಆತಿಥ್ಯ ಸ್ವೀಕರಿಸಿಯೇ ಬಂದರು.

ಇದನ್ನು ಓದಿ: ದುಷ್ಟ ಜಿಂದಾಲ್ ಗೆ ಭೂಮಿ ನೀಡುತ್ತಿರುವ ಭ್ರಷ್ಟ ಸರ್ಕಾರ

ಕೊಂಡಯ್ಯರ ಕಾಳಜಿ ಹಿಂದಿನ ಅಸಲಿಯತ್ತು ಇದು. ಜಿಲ್ಲೆಯ ಭತ್ತದ ಬೆಳೆಗಾರರಿಗೆ ನೀರು ತಲುಪುವಲ್ಲಿ ತೊಂದರೆಯಾದಾಗ, ಕುಡಿಯುವ ನೀರಿನ ಸಮಸ್ಯೆಯಾದಾಗ ಎಂದೂ ಪ್ರೆಸ್‍ಮೀಟ್ ಮಾಡದ ಕೊಂಡಯ್ಯ ಜಿಂದಾಲ್ ಪರ ಏಕಾಏಕಿ ಪ್ರೆಸ್‍ಮೀಟ್ ಮಾಡುವುದರ ಹಿಂದೆ ಏನೆಲ್ಲ ಇದೆಯಲ್ಲವೇ? ಹಿಂದೊಮ್ಮೆ ಹೊಸಪೇಟೆ ಡ್ಯಾಮ್‍ನಲ್ಲಿ ನೀರಿನ ಲಭ್ಯತೆ ಕಡಿಮೆ ಇದ್ದಾಗ, ಅಲ್ಲಿನ ಶಾಸಕ ಆನಂದಸಿಂಗ್ ಉದ್ಯಮಗಳಿಗೆ ಸದ್ಯ ನೀರು ಪೂರೈಕೆ ನಿಲ್ಲಿಸಿ, ಕುಡಿಯುವ ನೀರಿಗಷೇ ಮೀಸಲಿಡಿ ಎಂದಾಗಲೂ ಕೊಂಡಯ್ಯ ಪ್ರೆಮೀಟ್ ಮಾಡಿ, ಒಪ್ಪಂದದ ಪ್ರಕಾರ ಉದ್ಯಮಗಳಿಗೆ ನೀರು ಕೊಡುವುದು ಸರ್ಕಾರದ ಕರ್ತವ್ಯ ಎಂದಿದ್ದರು. ಸದ್ಯ ಎಂ.ಎಲ್.ಸಿ ಯಾಗಿರುವ ಅವರು ವಿಧಾನಸೌಧದ ಮೊಗಸಾಲೆಯಲ್ಲಿ ಕಾಣಿಸಿಕೊಂಡರೆ, ಓಹ್ ಜಿಂದಾಲ್ ಫೈಲ್ ಕ್ಲಿಯರನ್ಸ್‍ಗೆ ಬಂದಿದ್ದಾರೇನೋ ಎಂಬ ಮಾತು ಪ್ರಚಲಿತಕ್ಕೆ ಬಂದಿದೆಯಂತೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...