ದೇಶಾದ್ಯಂತ ಸುದ್ದಿಯಾಗಿರುವ ಲೈಂಗಿಕ ಹಗರಣದ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ, ಎನ್‌ಡಿಎ ಲೋಕಸಭಾ ಚುನಾವಣೆ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಜನಪರ ಸಂಘಟನೆಗಳು ಇಂದು ಹಾಸನ ನಗರದಲ್ಲಿ ಹಮ್ಮಿಕೊಂಡಿರುವ ‘ಹೋರಾಟದ ನಡಿಗೆ, ಹಾಸನದ ಕಡೆಗೆ..’ ಪ್ರತಿಭಟನಾ ಸಮಾವೇಶ ಆರಂಭಗೊಂಡಿದ್ದು, ಸಾವಿರಾರು ಜನರು ಭಾಗವಹಿಸಿದ್ದಾರೆ.
ಲೈಂಗಿಕ ಹಗರಣ ಪ್ರಕರಣದ ಪ್ರಮುಖ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣನನ್ನ ಕೂಡಲೇ ಬಂಧಿಸಬೇಕು, ವಿಡಿಯೊ ಹಂಚಿಕೊಂಡ ಕಿಡಿಕೇಡಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ, ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ‘ಕರ್ನಾಟಕ ರಾಜ್ಯ ಜನಪರ ಚಳವಳಿಗಳ ಒಕ್ಕೂಟ’ದ ವತಿಯಿಂದ ಇಂದು ‘ಹಾಸನದ ಕಡೆಗೆ ನಮ್ಮ ನಡಿಗೆ’ ಘೋಷವಾಕ್ಯದಡಿ ‘ಹಾಸನ ಚಲೋ’ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.

ಘಟನೆ ಬೆಳಕಿಗೆ ಬಂದು ತಿಂಗಳಾದರೂ ಈವರೆಗೆ ಪ್ರಜ್ವಲ್ ರೇವಣ್ಣ ಬಂಧನ ವಿಳಂಬವಾಗಿರುವುದನ್ನ ವಿರೋಧಿಸಿ, ಸಂತ್ರಸ್ತರಿಗೆ ಮನೋಧೈರ್ಯ ತುಂಬುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿರುವ ಸಂಘಟನೆಗಳು, ಕೂಡಲೇ ಕಾನೂನು ಕ್ರಮಗಳನ್ನು ಜರುಗಿಸಿ ನ್ಯಾಯ ಒದಗಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿವೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟದ 113ಕ್ಕೂ ಹೆಚ್ಚು ದಲಿತ, ಮಹಿಳಾ, ರೈತ, ಕಾರ್ಮಿಕ ಮತ್ತು ಪ್ರಗತಿಪರ ಸಂಘಟನೆಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಹಾಸನದ ಹೇಮಾವತಿ ಪ್ರತಿಮೆಯ ಬಳಿಯಿಂದ ಮೆರವಣಿಗೆ ಆರಂಭವಾಗಿದ್ದು, ಬಹುತೇಕ ಮಹಿಳೆಯರೇ ಜಾಥಾವನ್ನು ಮುನ್ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿಯ ಹೊಸ ಬಸ್‌ನಿಲ್ದಾಣ ರಸ್ತೆಯಲ್ಲಿ ನಡೆಯುತ್ತಿರುವ ಬಹಿರಂಗ ಸಭೆಯಲ್ಲಿ ಹಲವು ಮುಖಂಡರು ಭಾಗವಹಿಸಿದ್ದಾರೆ. ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ರಾಷ್ಟ್ರದ ವಿವಿಧ ಭಾಗಗಳಿಂದ ಹೋರಾಟಗಾರರು ಆಗಮಿಸಿದ್ದಾರೆ.

ಹಿರಿಯ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ, ಸಿಐಟಿಯುನ ರಾಜ್ಯ ಅಧ್ಯಕ್ಷೆ ವರಲಕ್ಷ್ಮಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ, ಲೇಖಕಿ ಹೋರಾಗಾರ್ತಿ ಕೆ. ನೀಲಾ, ಬಂಜಗೆರೆ ಜಯಪ್ರಕಾಶ, ಹಿ.ಶಿ. ರಾಮಚಂದ್ರೇಗೌಡ, ಸಬಿಹಾ ಭೂಮಿಗೌಡ, ಮಾವಳ್ಳಿ ಶಂಕರ್, ಬಡಗಲಪುರ ನಾಗೇಂದ್ರ ಸೇರಿದಂತೆ ಅನೇಕ ಪ್ರಗತಿಪರರು ಮುಖಂಡರು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ; ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್


