ತನಿಖಾ ವರದಿಗಳ ಮೂಲಕ ಗಮನ ಸೆಳೆದಿರುವ, ಈಗಾಗಲೇ ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಕಾಲಿಟ್ಟಿರುವ ಕನ್ನಡದ ‘ದಿ ಫೈಲ್’ ಜಾಲತಾಣದ ಕಾರ್ಯವನ್ನು ಅಂತಾರಾಷ್ಟ್ರೀಯ ಸುದ್ದಿ ಜಾಲತಾಣ ‘ಬಿಬಿಸಿ’ (ಇಂಗ್ಲಿಷ್) ಉಲ್ಲೇಖಿಸಿದೆ.
ಪತ್ರಕರ್ತ ಜಿ.ಮಹಾಂತೇಶ್ ಅವರು ಮುನ್ನಡೆಸುತ್ತಿರುವ ‘ದಿ ಫೈಲ್’ ತನಿಖಾ ವರದಿಗಳಿಗೆ ಹೆಸರಾಗಿದೆ. ಎರಡು ವರ್ಷಗಳಿಂದ ಹಲವಾರು ಹಗರಣಗಳನ್ನು ಜನರ ಮುಂದೆ ತೆರೆದಿಟ್ಟಿದೆ. ಭ್ರಷ್ಟ ಸರ್ಕಾರದ ಹಲವಾರು ಮುಖಗಳು ‘ದಿ ಫೈಲ್’ನಲ್ಲಿ ಅನಾವರಣಗೊಂಡಿವೆ.
‘Bangalore: How polarisation is dividing India’s Silicon Valley’ ಎಂಬ ಶೀರ್ಷಿಕೆಯಲ್ಲಿ ಬಿಬಿಸಿಯ ಭಾರತದ ವರದಿಗಾರ ಸೌತಿಕ್ ಬಿಸ್ವಾಸ್ ಬರೆದಿರುವ ವರದಿಯಲ್ಲಿ ‘ದಿ ಫೈಲ್’ ಉಲ್ಲೇಖಗೊಂಡಿದೆ. ಸೌತಿಕ್ ಅವರು ಅಫ್ಘಾನಿಸ್ತಾನ ಮತ್ತು ಶ್ರೀಲಂಕಾದಲ್ಲಿನ ಚುನಾವಣೆಗಳು, 2005ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ಅಪ್ಪಳಿದ ಸುನಾಮಿ, ಕಾಶ್ಮೀರದಲ್ಲಿನ ಭಯೋತ್ಪಾದನೆ ಸೇರಿದಂತೆ ಹಲವಾರು ವರದಿಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ಬಿಬಿಸಿ’ ವರದಿಯಲ್ಲಿ ಏನಿದೆ?
“ಕರ್ನಾಟಕ ರಾಜ್ಯವು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಅಭಿವೃದ್ಧಿಯನ್ನು ರೂಪಿಸುತ್ತದೆ. ಕೋಮುವಾದ ಪ್ರೇರಿತ ಹೊರಗಿಡುವಿಕೆಗೆ ಅವಕಾಶ ನೀಡಬಾರದು. ಐಟಿಬಿಟಿ ಕ್ಷೇತ್ರವೇನಾದರೂ ಕೋಮುವಾದೀಕರಣಗೊಂಡರೆ ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ” ಎಂದು ಇತ್ತೀಚೆಗೆ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಮಾಡಿರುವ ಟ್ವೀಟ್ ಉಲ್ಲೇಖಿಸಿ ಆರಂಭವಾಗುವ ಬಿಬಿಸಿ ವರದಿಯು, ಕರ್ನಾಟಕದಲ್ಲಿ ಹಿಂದುತ್ವ ರಾಜಕಾರಣ ಹುಟ್ಟುಹಾಕುತ್ತಿರುವ ಹಲವಾರು ವಿವಾದಗಳನ್ನು ಉಲ್ಲೇಖಿಸಿದೆ.
ಇದನ್ನೂ ಓದಿರಿ: ಚಂದ್ರು ಕೊಲೆ ಪ್ರಕರಣ: ಕೋಮು ದ್ವೇಷದ ಹೇಳಿಕೆ ನೀಡಿ ನಂತರ ಕ್ಷಮೆ ಕೇಳಿದ ಗೃಹ ಸಚಿವ ಆರಗ ಜ್ಞಾನೇಂದ್ರ
ದೇವಾಲಯದ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ತಡೆ, ಹಿಂದೂಗಳು ಮುಸ್ಲಿಮರ ಬಳಿ ಮಾಂಸ ಖರೀದಿಸದಂತೆ ಪ್ರಚಾರ, ತರಗತಿಗಳಲ್ಲಿ ಹಿಜಾಬ್ ಧರಿಸದಂತೆ ನಿರ್ಬಂಧ, ಪರೀಕ್ಷೆಯಿಂದ ವಿದ್ಯಾರ್ಥಿನಿಯರು ಹೊರಗುಳಿದಿರುವುದು, ಗೋ ಹತ್ಯೆ ನಿಷೇಧ, ಪಠ್ಯದಲ್ಲಿ ಟಿಪ್ಪು ಇತಿಹಾಸಕ್ಕೆ ಕಡಿವಾಣ, ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಪ್ರಸ್ತಾಪದ ಜೊತೆಗೆ ಆರ್ಥಿಕತೆಯ ದೃಷ್ಟಿಯಿಂದ ಕಿರಣ್ ಮಜುಂದಾರ್ ಶಾ ವ್ಯಕ್ತಪಡಿಸಿರುವ ಆತಂಕ ಸೇರಿದಂತೆ ಹಲವಾರು ವಿಷಯಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು, ಅರ್ಥಶಾಸ್ತ್ರ ಪ್ರಾಧ್ಯಾಪಕ ನರೇಂದ್ರ ಪಾಣಿ, ಸಮಾಜಶಾಸ್ತ್ರ ಪ್ರಾಧ್ಯಾಪಕ ಚಂದನ್ ಗೌಡ ಅವರ ಅಭಿಪ್ರಾಯಗಳನ್ನು ದಾಖಲಿಸಲಾಗಿದೆ.
ಸರ್ಕಾರದ ಕಳಪೆ ಸಾಧನೆಯ ಬಗ್ಗೆ ಹೇಳುತ್ತಾ, “61 ವರ್ಷದ ರಾಜಕಾರಣಿ ಬೊಮ್ಮಾಯಿ ಅವರು ಯಡಿಯೂರಪ್ಪನವರ ಬಳಿಕ ಅಧಿಕಾರ ಸ್ವೀಕರಿಸಿದರು. ಬೊಮ್ಮಾಯಿ ನೇತೃತ್ವದ ಸರ್ಕಾರದ ಸಾಧನೆ ಕೆಳಮಟ್ಟದ್ದಾಗಿದೆ ಎಂದು ಟೀಕಾಕಾರರು ಹೇಳುತ್ತಾರೆ. ಕೋವಿಡ್ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಿಸದ ಆರೋಪಗಳಿವೆ. ಗೌರವಾನ್ವಿತ ಸ್ಥಳೀಯ ಸುದ್ದಿ ಮಾಧ್ಯಮ ಮತ್ತು ತನಿಖಾ ವೆಬ್‌ಸೈಟ್ ‘ದಿ ಫೈಲ್’ನಲ್ಲಿನ ವರದಿಯ ಪ್ರಕಾರ, ಸರ್ಕಾರದ ಅರ್ಧದಷ್ಟು ಇಲಾಖೆಗಳು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆಂತರಿಕ ಪರಿಶೀಲನೆಗಳು ಹೇಳುತ್ತವೆ” ಎಂದು ಬಿಬಿಸಿ ವರದಿ ಮಾಡಿದೆ.

ಜವಾಬ್ದಾರಿ ಹೆಚ್ಚಿದೆ: ಜಿ.ಮಹಾಂತೇಶ್
‘ಬಿಬಿಸಿ’ಯಲ್ಲಿ ‘ದಿ ಫೈಲ್’ ವರದಿ ಉಲ್ಲೇಖಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಪತ್ರಕರ್ತ ಜಿ.ಮಹಾಂತೇಶ್, “ಇದು ನಿಜಕ್ಕೂ ನಮ್ಮೆಲ್ಲರ ಖುಷಿಯನ್ನು ಇಮ್ಮಡಿಗೊಳಿಸಿದೆ ಮತ್ತು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ” ಎಂದಿದ್ದಾರೆ.

“ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನೀತಿ ನಿರೂಪಣೆಯಲ್ಲಿ ಲೋಪದೋಷಗಳು, ಈಗಿನ ಸರ್ಕಾರ ಹೇಗೆ ನಡೆಯುತ್ತಿದೆ, ಎತ್ತ ಸಾಗುತ್ತಿದೆ ಎಂಬುದನ್ನು ಕಳೆದ 2 ವರ್ಷಗಳಿಂದಲೂ ನಿರಂತರವಾಗಿ ದಾಖಲೆ ಸಮೇತ ವಸ್ತುನಿಷ್ಠವಾಗಿ, ಪ್ರಾಮಾಣಿಕವಾಗಿ ದಾಖಲಿಸುತ್ತ ಬರಲಾಗಿದೆ. ಇದೀಗ ಅಂತಾರಾಷ್ಟ್ರೀಯ ಸುದ್ದಿ ಜಾಲತಾಣ ಬಿಬಿಸಿಯಲ್ಲಿಯೂ ‘ದಿ ಫೈಲ್’ ವರದಿಗಳು ಉಲ್ಲೇಖಗೊಂಡಿವೆ” ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
“ಈಗಿನ ಸರ್ಕಾರವು ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್, ಮಸೀದಿ, ಲೌಡ್ ಸ್ಪೀಕರ್, ಕೋಮು ಪ್ರಚೋದಕ ವಿಚಾರಗಳಲ್ಲಿಯೇ ಮುಳುಗಿರುವ ಕಾರಣ ಅಭಿವೃದ್ದಿ ವಿಚಾರದಲ್ಲಿ ಕನಿಷ್ಠ ಪ್ರಗತಿ ಸಾಧಿಸಿದೆ ಎಂಬುದನ್ನು ‘ದಿ ಫೈಲ್’ ಕಳೆದ 2 ವರ್ಷಗಳಿಂದಲೂ ಕೆಡಿಪಿ ಸಭೆಯ ನಡವಳಿಗಳನ್ನಾಧರಿಸಿ ವರದಿ ಮಾಡಿತ್ತು. ಅದನ್ನೀಗ ಬಿಬಿಸಿ ತನ್ನ ವರದಿಯಲ್ಲಿಯೂ ಪ್ರಸ್ತಾಪಿಸುವ ಮೂಲಕ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸ್ವತಂತ್ರ ನೋಟ, ಸ್ವತಂತ್ರ ಕರ್ನಾಟಕ, ಸ್ವತಂತ್ರ ಭಾರತಕ್ಕಾಗಿ ಸ್ವತಂತ್ರ ಮಾಧ್ಯಮವನ್ನು ನೀವು ಹೀಗೆಯೇ ಬೆಂಬಲಿಸುತ್ತೀರಿ ಎಂದು ನಂಬಿದ್ದೇವೆ” ಎಂದು ಮಹಾಂತೇಶ್ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿರಿ: ಧಾರ್ಮಿಕ ವಿಭಜನೆಯು ಭಾರತದ ಐಟಿ ನಾಯಕತ್ವವನ್ನು ನಾಶಪಡಿಸುತ್ತದೆ: ಮಜುಂದಾರ್ ಶಾ



ದಿ ಫೈಲ್ ಕಾರ್ಯ ಶ್ಲಾಘನೀಯ, ಇದು ಹೀಗೆಯೇ ಮುಂದುವರಿಯಲಿ.