ಬಿಬಿಸಿ 2024ರ ಅತ್ಯಂತ ಪ್ರಭಾವಶಾಲಿ ಮತ್ತು ಸ್ಪೂರ್ತಿದಾಯಕ 100 ಮಹಿಳೆಯರ ಪಟ್ಟಿಯಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿರುವ 100 ಪ್ರಮುಖ ಮಹಿಳೆಯರ ಈ ಪಟ್ಟಿಯಲ್ಲಿ ಭಾರತದ ಸಾಮಾಜಿಕ ಹೋರಾಟಗಾರ್ತಿ ಅರುಣಾ ರಾಯ್, ಕುಸ್ತಿಪಟು-ರಾಜಕಾರಣಿ ವಿನೇಶ್ ಫೋಗಟ್ ಮತ್ತು ಅಂತ್ಯಕ್ರಿಯೆಯ ಪ್ರವರ್ತಕಿ ಪೂಜಾ ಶರ್ಮಾ ಕಾಣಿಸಿಕೊಂಡಿದ್ದಾರೆ
ಅರುಣಾ ರಾಯ್ ಅವರು ಸರ್ಕಾರಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದು, ಜೊತೆಗೆ ಸಾಮಾಜಿಕ ನ್ಯಾಯ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಕೂಡಾ ಕೆಲಸ ಮಾಡುತ್ತಿದ್ದಾರೆ. ಇತ್ತಿಚೆಗಷ್ಟೆ ಶಾಸಕಿಯಾಗಿ ಆಯ್ಕೆಯಾದ ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಅವರು ಮಹಿಳಾ ಹಕ್ಕುಗಳಿಗಾಗಿ ಮತ್ತು ಮಹಿಳಾ ಕುಸ್ತಿಪಟುಗಳ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅಂತ್ಯಕ್ರಿಯೆಯ ವಿಧಿಗಳಿಗೆ ಹೊಸ ವಿಧಾನವನ್ನು ಪ್ರವರ್ತಿಸಿದ ಪೂಜಾ ಶರ್ಮಾ, ಸಾವು ಮತ್ತು ಶೋಕವನ್ನು ಸುತ್ತುವರೆದಿರುವ ಸಾಮಾಜಿಕ ನಿಯಮಗಳು ಮತ್ತು ಆಚರಣೆಗಳನ್ನು ಮರುವ್ಯಾಖ್ಯಾನಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಿಬಿಸಿ 2024ರ 100 ಮಹಿಳೆಯರ ಪಟ್ಟಿಯಲ್ಲಿ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಹಾಲಿವುಡ್ ತಾರೆ ಶರೋನ್ ಸ್ಟೋನ್, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ನಾಡಿಯಾ ಮುರಾದ್ ಮತ್ತು ಹವಾಮಾನ ಹೋರಾಟಗಾರ್ತಿ ಅಡೆನಿಕೆ ಒಲಾಡೋಸು ಅವರಂತಹ ಅಂತರರಾಷ್ಟ್ರೀಯ ವ್ಯಕ್ತಿಗಳು ಕೂಡಾ ಇದ್ದಾರೆ.
ಅರುಣಾ ರಾಯ್
ಅರುಣಾ ರಾಯ್ ಭಾರತದ ಅತ್ಯಂತ ಪ್ರಭಾವಿ ಸಾಮಾಜಿಕ ಹೋರಾಟಗಾರರಾಗಿದ್ದು ಮತ್ತು ಮಾಹಿತಿ ಹಕ್ಕು (ಆರ್‌ಟಿಐ) ಆಂದೋಲನದ ಪ್ರಮುಖ ವ್ಯಕ್ತಿಯಾಗಿದ್ದಾರೆ. 2005 ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯಿದೆಯ ರಚನೆಯಲ್ಲಿ ಅವರ ಪ್ರಯತ್ನಗಳು ಪ್ರಮುಖ ಪಾತ್ರವನ್ನು ವಹಿಸಿದ್ದವು. ಅರುಣಾ ಅವರು ಮಾಜಿ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಅವರು ಪೂರ್ಣ ಕಾಲಿಕ ಸಾಮಾಜಿಕ ಹೋರಾಟಗಾರ್ತಿಯಾಗಿದ್ದಾರೆ. ತನ್ನ ಪ್ರತಿಷ್ಠಿತ ಸರ್ಕಾರಿ ಕೆಲಸವನ್ನು ತೊರೆದ ನಂತರ, ಅವರು ಸುಮಾರು ನಾಲ್ಕು ದಶಕಗಳ ಕಾಲ ಭಾರತದಾದ್ಯಂತ ಗ್ರಾಮೀಣ ಸಮುದಾಯಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆ ಮತ್ತು ತಳಮಟ್ಟದಲ್ಲಿ ಇರುವವರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ.
ವಿನೇಶ್ ಫೋಗಟ್
ಮೂರು ಬಾರಿ ಒಲಿಂಪಿಯನ್ ಆಗಿರುವ ಮತ್ತು ಭಾರತದ ಅತ್ಯಂತ ಖ್ಯಾತ ಕುಸ್ತಿಪಟುಗಳಲ್ಲಿ ಒಬ್ಬರಾದ ವಿನೇಶ್ ಫೋಗಟ್ ಅವರು, ತಮ್ಮ ಕ್ರೀಡಾ ಸಾಧನೆಗಳಿಗೆ ಮಾತ್ರವಲ್ಲದೆ ಕ್ರೀಡೆಯಲ್ಲಿನ ಲಿಂಗ ಪಕ್ಷಪಾತದ ವಿರುದ್ಧದ ಹೋರಾಟಗಳಿಗೂ ಹೆಸರುವಾಸಿಯಾಗಿದ್ದಾರೆ. ಅವರು ವಿಶ್ವ ಚಾಂಪಿಯನ್‌ಶಿಪ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. 2024 ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ್ದ ಅವರು, ಕುಸ್ತಿಯಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಇತಿಹಾಸವನ್ನು ನಿರ್ಮಿಸಿದ್ದರು.
ಮಹಿಳಾ ಹಕ್ಕುಗಳ ಪ್ರಮುಖ ಹೋರಾಟಗಾರ್ತಿಯಾದ ಅವರ ಭಾರತೀಯ ಕುಸ್ತಿ ಫಡರೇಷನ್‌ನಲ್ಲಿ, ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಕ್ರೀಡಾಪಟುಗಳಿಗೆ ನೀಡುತ್ತಿದ್ದ ಲೈಂಗಿಕ ಕಿರುಕುಳವನ್ನು ವಿರೋಧಿಸಿ ನಡೆಸಲಾಗಿದ್ದ ಭಾರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದವರಲ್ಲಿ ಒಬ್ಬರಾಗಿದ್ದರು. ಈ ಪ್ರತಿಭಟನೆಯು ವಿಶ್ವ ಗಮನ ಸೆಳೆಯಿತು.
ಪೂಜಾ ಶರ್ಮಾ
ಪೂಜಾ ಶರ್ಮಾ ಅವರು ಕಳೆದ ಮೂರು ವರ್ಷಗಳಿಂದ ದೆಹಲಿಯಲ್ಲಿ ಯಾವುದೆ ವಾರಿಸುದಾರರು ಇಲ್ಲದ ಮೃತದೇಹಗಳಿಗೆ ಅಂತಿಮ ವಿಧಿಗಳನ್ನು ಮಾಡುವ ಮೂಲಕ ಸಮಾಜ ಸೇವೆ ಮಾಡುವವರಾಗಿದ್ದಾರೆ. ಅವರ ಈ ಪ್ರಯಾಣವು 2022 ರಲ್ಲಿ ತನ್ನ ಮುಂದೆಯೆ ಬರ್ಬರವಾಗಿ ಹತ್ಯೆಗೀಡಾದ ತನ್ನ ಸಹೋದರ ದುರಂತದೊಂದಿಗೆ ಪ್ರಾರಂಭವಾಯಿತು. ಈ ವೇಳೆ ಅವರ ಸಹೋದರನ ಅಂತ್ಯಕ್ರಿಯೆಗೆ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಅವರ ಈ ಅನುಭವವು ಏಕಾಂಗಿಯಾಗಿ ಸಾಯುವವರಿಗೆ ಸಹಾಯ ಮಾಡುವ ಪ್ರತಿಜ್ಞೆ ಮಾಡುವಂತೆ ಮಾಡಿತು.
ಅದಾಗ್ಯೂ, ಪೂಜಾ ಅವರ ಈ ಕೆಲಸವು ಅವರ ಸಮುದಾಯ ಮತ್ತು ಧಾರ್ಮಿಕ ಜನರಿಂದ ಭಾರಿ ಪ್ರತಿರೋಧ ಎದುರಿಸಿತು. ಸಾಂಪ್ರದಾಯಿಕವಾಗಿ, ಹಿಂದೂ ಧರ್ಮದಲ್ಲಿ ಅಂತ್ಯಕ್ರಿಯೆಯ ವಿಧಿಗಳನ್ನು ಪುರುಷರಿಗೆ ಮೀಸಲಿಡಲಾಗಿದೆ. ಇದರ ಹೊರತಾಗಿಯೂ, ಅವರು ವಿವಿಧ ಧಾರ್ಮಿಕ ಹಿನ್ನೆಲೆಯ 4,000 ಕ್ಕೂ ಹೆಚ್ಚು ಜನರಿಗೆ ಅಂತಿಮ ವಿಧಿಗಳನ್ನು ನೆರವೇರಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಸಾವಿನಲ್ಲೂ ಘನತೆಯ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ: “ಧರ್ಮದ ಕಾರಣಕ್ಕೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು” : ಪೋಕ್ಸೋ ಕೇಸ್‌ನಲ್ಲಿ ಖುಲಾಸೆಗೊಂಡ ಮುಸ್ಲಿಂ ಬಳೆ ವ್ಯಾಪಾರಿ


