ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ನಡುವಿನ ಜಟಾಪಟಿ ಮತ್ತೆ ಭುಗಿಲೆದ್ದಿದ್ದು, ಜಯನಗರದ 4ನೇ ಬ್ಲಾಕ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಬಿಬಿಎಂಪಿ ಅಧಿಕಾರಿಗಳು ಹಠಾತ್ ತೆರವು ಮಾಡಲು ಮುಂದಾಗಿದ್ದಾರೆ. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ನಡುವೆ ವಾಕ್ಸಸಮರ ನಡೆದಿದ್ದು, ಬಲವಂತವಾಗಿ ಅಧಿಕಾರಿಗಳು ವ್ಯಾಪಾರಿಗಳನ್ನು ತೆರವು ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಬಿಬಿಎಂಪಿ ಅಧಿಕಾರಿಗಳು ಯಾವುದೇ ನೊಟೀಸ್ ನೀಡದೆ ಮಾರ್ಷಲ್‌ಗಳನ್ನು ಬಳಸಿಕೊಂಡು 30-40 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ನಮ್ಮನ್ನು ಬಲವಂತವಾಗಿ ತೆರವು ಮಾಡುತ್ತಿದ್ದಾರೆ ಎಂದು ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ.
ಬೀದಿ ಬದಿ ವ್ಯಾಪಾರ ಮಾಡಲು ಅನುಮತಿ ನೀಡಿ ಬಿಬಿಎಂಪಿ ಕೊಟ್ಟಿರುವ ಪತ್ರ ನಮ್ಮಲ್ಲಿದೆ. ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರ ನಮಗೆ ಲೋನ್ ಕೂಡ ಕೊಡುತ್ತಿದೆ. ಆದರೂ ಬಿಬಿಎಂಪಿಯವರು ನಮಗೆ ತೊಂದರೆ ಕೊಡುತ್ತಿದ್ದಾರೆ. ಮಾರ್ಷಲ್‌ಗಳನ್ನು ಬಳಸಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಬಿಬಿಎಂಪಿ ನಿಗದಿ ಮಾಡಿದ ಸ್ಥಳಗಳಲ್ಲೇ ವ್ಯಾಪಾರ ಮಾಡುತ್ತಿದ್ದೇವೆ. ಆದರೂ ಸುಖಾ ಸುಮ್ಮನೆ ಫುಟ್ ಪಾತ್ ಒತ್ತುವರಿ ಆರೋಪ ಹೊರಿಸಿ ನಮ್ಮ ತಳ್ಳು ಗಾಡಿಗಳನ್ನು ಹೊತ್ತೊಯ್ದಿದ್ದಾರೆ. ಯಾವುದೇ ಮುನ್ಸೂಚಣೆ ನೀಡದೆ ತೆರವು ಕಾರ್ಯಾಚರಣೆ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಕೀಲರಾದ ವಿನಯ್ ಶ್ರೀನಿವಾಸ್ ನಾನು ಗೌರಿ.ಕಾಂ ಜೊತೆ ಮಾತನಾಡಿದ್ದು, ಬಿಬಿಎಂಪಿ ಮಾರ್ಷಲ್‌ಗಳು ವ್ಯಾಪಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ವ್ಯಾಪಾರ ಮಾಡಲಿಕ್ಕೆ ಬಿಡುತ್ತಿಲ್ಲ. ಬೀದಿ ವ್ಯಾಪಾರಿಗಳು ಎಂದರೆ ಮೂವಿಂಗ್ ಇರಬೇಕು ಎಂದು ಹೇಳುತ್ತಾರೆ. ಕಾನೂನಿನಲ್ಲಿ ಬೀದಿ ವ್ಯಾಪಾರಿಗಳು ಒಂದೆಡೆ ಕುಳಿತು ವ್ಯಾಪಾರ ಮಾಡವುದಕ್ಕೆ ಅವಕಾಶ ಇದೆ. ಆದರೆ ಅವರು ಕಿರುಕುಳ ಕೊಡುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿಯ ಕಮಿಷನರ್‌ಗಳ ಗಮನಕ್ಕೆ ತಂದಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ವ್ಯಾಪಾರ ಮಾಡುವುದು ನಮ್ಮ ಹಕ್ಕು ಎಂದು ಪ್ರತಿಭಟನೆ ಮಾಡುತ್ತಿದ್ದೇವೆ. 192 ಸದಸ್ಯರು ಅದೀಕೃತವಾಗಿ ಲೈಸನ್ಸ್ ಪಡೆದವರು. ನಾವು ಅವರಿಗೆ ವ್ಯಾಪಾರದ ಜಾಗವನ್ನು ತೋರಿಸಿದ್ದೇವೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡುತ್ತಿದ್ದೇವೆ. ಈಗ ನೊಟೀಸ್ ಇಲ್ಲದೆ ತೆರವಿಗೆ ಮುಂದಾಗಿದ್ದಾರೆ. ನೊಟೀಸ್ ಕೇಳಿದ್ರು ಕೊಡಲಿಲ್ಲ. ಬೀದಿ ವ್ಯಾಪಾರಿಗಳ ಕಾನೂನುಗಳ ಎಲ್ಲಾ ಸೆಕ್ಸನ್‌ಗಳನ್ನು ಅವರು ಉಲ್ಲಂಘನೆ ಮಾಡಿದ್ದಾರೆ. ಯಾಕೆ ವ್ಯಾಪಾರ ಇಲ್ಲಿ ಮಾಡಬಾರದು ಎಂದು ಹೇಳುವುದಿಲ್ಲ. ಯಾವುದೇ ಆದೇಶ, ನೊಟೀಸ್ ಇಲ್ಲದೆ ತೆರವು ಮಾಡುತ್ತಿದ್ದಾರೆ. ಬಿಬಿಎಂಪಿ ಕಾನೂನು ಪಾಲಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ತಮಿಳುನಾಡು: ದಲಿತ ಯುವಕನನ್ನು ಮದುವೆಯಾದ ಯುವತಿ; ಪೋಷಕರಿಂದ ಮಾರ್ಯಾದೆಗೇಡು ಹತ್ಯೆ!


