ಬಾಂಗ್ಲಾದೇಶದ ವಿರುದ್ಧ ದೇಶದಾದ್ಯಂತ ಹೆಚ್ಚುತ್ತಿರುವ ಆಕ್ರೋಶದ ನಂತರ ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಂಸ್ಥೆಗೆ ಕೇಳಿಕೊಂಡಿದೆ.
ಕಳೆದ ತಿಂಗಳು ನಡೆದ ಹರಾಜಿನಲ್ಲಿ ಕೆಕೆಆರ್ ಎಡಗೈ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು 9.2 ಕೋಟಿ ರೂ.ಗಳಿಗೆ ಖರೀದಿಸಿತ್ತು. ಈ ಟೂರ್ನಿಯಲ್ಲಿ ಆಯ್ಕೆಯಾದ ಏಕೈಕ ಬಾಂಗ್ಲಾದೇಶ ಆಟಗಾರ ಮುಸ್ತಾಫಿಜುರ್ ರೆಹಮಾನ್ ಆಗಿದ್ದಾರೆ.
ಆದರೆ, ಅವರ ಆಯ್ಕೆಯ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಲವಾರು ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಟೀಕೆಗಳು ದುಪ್ಪಟ್ಟಾಗಿದೆ. ವಿಶೇಷವಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮತ್ತು ದೇಶದಲ್ಲಿ ನಾಗರಿಕ ಅಶಾಂತಿಯ ನಂತರ, ಇದು ಭಾರತದಲ್ಲಿಯೂ ವ್ಯಾಪಕ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಫ್ರಾಂಚೈಸಿಯು ಒರ್ವ ಆಟಗಾರನನ್ನು ಕೈಬಿಡಲು ಸಿದ್ಧರಿದ್ದರೆ, ಬದಲಿ ಆಟಗಾರನನ್ನು ನೇಮಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
“ಇತ್ತೀಚೆಗೆ ಎಲ್ಲೆಡೆ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ, ಬಿಸಿಸಿಐ ತಮ್ಮ ಆಟಗಾರರಲ್ಲಿ ಒಬ್ಬರಾದ ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಫ್ರಾಂಚೈಸಿ ಕೆಕೆಆರ್‌ಗೆ ಸೂಚಿಸಿದೆ. ಬಿಸಿಸಿಐ ಅವರು ಬದಲಿ ಆಟಗಾರರನ್ನು ಕೇಳಿದರೆ, ಬಿಸಿಸಿಐ ಆ ಬದಲಿ ಆಟಗಾರನಿಗೆ ಅವಕಾಶ ನೀಡಲಿದೆ ಎಂದು ಹೇಳಿದೆ” ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದರು.
ಮುಸ್ತಾಫಿಜುರ್ ಅವರ ಬಿಡುಗಡೆಯು ಕೆಕೆಆರ್‌ನ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಅಂತರವನ್ನುಂಟುಮಾಡಿದೆ. ಏಕೆಂದರೆ, ಅವರು ವಿಶೇಷವಾಗಿ ಡೆತ್ ಓವರ್‌ಗಳಲ್ಲಿನ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.


