ಬುಧವಾರ ವಿಧಾಸಭಾ ಅಧಿವೇಶನದಲ್ಲಿ ಬಿಜೆಪಿಯ ಕೆಲವು ನಾಯಕರು ಮಸೂದೆಯ ಪ್ರತಿಗಳನ್ನು ಹರಿದು ಉಪಸಭಾಧ್ಯಕ್ಷರ ಮೇಲೆ ಎಸೆದು ಅತಿರೇಕದ ವರ್ತನೆ ಪ್ರದರ್ಶನ ಮಾಡಿದ್ದಾರೆ. ”ಬಿಜೆಪಿಯವರು ಸದನದಲ್ಲಿ ತಾಲಿಬಾನಿಗಳಿಗಿಂತ ಅಸಭ್ಯವಾಗಿ ಸ್ಪೀಕರ್ ಮೇಲೆಯೇ ಗೂಂಡಾಗಿರಿ ನಡೆಸಿದ್ದಾರೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿಡಿಯೋ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ”ಬೊಮ್ಮಾಯಿಯವರು ನಮಗೆ ತಾಲಿಬಾನ್ ಸರ್ಕಾರ ಎಂದಿದ್ದಾರೆ. ಆದರೆ, ಬೊಮ್ಮಾಯಿಯವರು ಉತ್ತರಿಸಲೇಬೇಕಾದ ಪ್ರಶ್ನೆ ಒಂದಿದೆ. ಬೊಮ್ಮಾಯಿ ಅವರು ಪಾಕಿಸ್ತಾನದಲ್ಲಿ ಯಾವಾಗ ಮುಖ್ಯಮಂತ್ರಿಯಾಗಿದ್ದರು, ಯಾಕಾಗಿ ಆಗಿದ್ದರು? ಈ ಪ್ರಶ್ನೆ ನಾವು ಕೇಳುತ್ತಿರುವುದಲ್ಲ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬೊಮ್ಮಾಯಿಯವರ ಪ್ರತಿಸ್ಪರ್ಧಿಯಾಗಿರುವ ಅವರದ್ದೇ ಪಕ್ಷದ ಯತ್ನಾಳ್ ಅವರು ಕೇಳುತ್ತಿರುವುದು” ಎಂದು ಹೇಳಿದ್ದಾರೆ.
ಸದನದಲ್ಲಿ ತಾಲಿಬಾನಿಗಳಿಗಿಂತ ಅಸಭ್ಯವಾಗಿ ಸ್ಪೀಕರ್ ಮೇಲೆಯೇ ಗೂಂಡಾಗಿರಿ ನಡೆಸಿದ್ದಾರೆ ಬಿಜೆಪಿಯವರು,
ಬೊಮ್ಮಾಯಿಯವರು ನಮಗೆ ತಾಲಿಬಾನ್ ಸರ್ಕಾರ ಎಂದಿದ್ದಾರೆ, ಆದರೆ ಬೊಮ್ಮಾಯಿಯವರು ಉತ್ತರಿಸಲೇಬೇಕಾದ ಪ್ರಶ್ನೆ ಒಂದಿದೆ,
ಶ್ರೀ ಬೊಮ್ಮಾಯಿಯವರು ಪಾಕಿಸ್ತಾನದಲ್ಲಿ ಯಾವಾಗ ಮುಖ್ಯಮಂತ್ರಿಯಾಗಿದ್ದರು, ಯಾಕಾಗಿ ಆಗಿದ್ದರು?
ಈ ಪ್ರಶ್ನೆ ನಾವು… pic.twitter.com/3qs0BQV2eX
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 20, 2023
”ಬೊಮ್ಮಾಯಿ ಅವರಿಗೆ ನೀವು ಕರ್ನಾಟಕದ ಮುಖ್ಯಮಂತ್ರಿಯೇ ಲಾಹೋರ್ ಮುಖ್ಯಮಂತ್ರಿಯೇ ಎಂದು ಕೇಳಿದ್ದರಂತೆ, ಬೊಮ್ಮಾಯಿ ಅವರು ಯತ್ನಾಳ್ ಅವರ ಈ ಮಾತಿಗೆ ಏನು ಹೇಳುತ್ತಾರೋ ಅದನ್ನು ಮೊದಲು ಸ್ಪಷ್ಟಪಡಿಸಲಿ, ನಂತರ ತಾಲಿಬಾನ್ ಕಡೆ ಹೋಗಲಿ” ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಸದನದಲ್ಲಿ ಬಿಜೆಪಿಗರ ಅತಿರೇಕದ ವರ್ತನೆ: 10 ಶಾಸಕರ ಅಮಾನತು
ವಿಧಾನಸಭೆ ಕಲಾಪದ ಸಂದರ್ಭದಲ್ಲಿ ಮಸೂದೆಗಳ ಪ್ರತಿಗಳನ್ನು ಹರಿದು ಪೀಠದಲ್ಲಿದ್ದ ಉಪಸಭಾಧ್ಯಕ್ಷರ ಮೇಲೆಸೆದು ಕೋಲಾಹಲ ಸೃಷ್ಟಿಸಿದ ಬಿಜೆಪಿಯ 10 ಶಾಸಕರನ್ನು ಬುಧವಾರ ಅಮಾನತು ಮಾಡಲಾಗಿದೆ.
ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಪಕ್ಷ ನಾಯಕರ ಸಭೆಗೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದಕ್ಕೆ ಸರಕಾರ ಉತ್ತರ ನೀಡುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಧರಣಿ ನಡೆಸಿದ್ದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸಿದ್ದು, ”ಕೆಲವು ಗಣ್ಯರನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಿ ಅವರನ್ನು ಬರಮಾಡಿಕೊಳ್ಳಲು ಶಿಷ್ಟಾಚಾರದ ಪ್ರಕಾರ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ” ಎಂದು ಹೇಳಿದ್ದರು.
ಸಿಎಂ ಉತ್ತರದಿಂದ ಸಮಾಧಾನಗೊಳ್ಳದ ಬಿಜೆಪಿ ಶಾಸಕರು ಧರಣಿ ಮುಂದುವರಿಸಿದ್ದರು. ಕೆಲ ಹೊತ್ತಿನ ಬಳಿಕ ಉಪಸಭಾಪತಿಯವರು ಸಭಾಂಗಣದಲ್ಲಿ ಕುಳಿತು ಚರ್ಚೆ ಮುಂದುವರಿಸಿದ್ದರು. ಮಧ್ಯಾಹ್ನದ ಊಟಕ್ಕೆ ಸದನವನ್ನು ಮುಂದೂಡದಿರುವುದಕ್ಕೆ ಅಸಮಾಧಾನಗೊಂಡ ಬಿಜೆಪಿ ಮುಖಂಡರು ಕೆಲವು ಬಿಲ್‌ಗಳು ಸೇರಿದಂತೆ ದಾಖಲೆಗಳನ್ನು ಹರಿದು ಸಭಾಧ್ಯಕ್ಷರ ಪೀಠದ ಮೇಲೆ ಎಸೆದಿದ್ದರು. ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ಸ್ಪೀಕರ್ಗೆ ದೂರು ನೀಡಿದ್ದರು. ಆನಂತರ ಸ್ಪೀಕರ್ ಖಾದರ್ ಅವರು ಅಮಾನತು ಮಾಡಿರುವುದಾಗಿ ತಿಳಿಸಿದರು.
ಶಾಸಕರನ್ನು ಅಮಾನತು ಮಾಡಿರುವುದನ್ನು ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ಸೇರಿದಂತೆ ಇತರ ಬಿಜೆಪಿ ನಾಯಕರು ಖಂಡಿಸಿದ್ದಾರೆ. ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ”ಸಣ್ಣ ವಿಚಾರಕ್ಕೆ ಬಿಜೆಪಿಯವರು ಧರಣಿ ಮಾಡುತ್ತಾರೆ. ದಲಿತ ಅಧ್ಯಕ್ಷರ ಮೇಲೆ ಪೇಪರ್ ಎಸೆಯುತ್ತಾರೆ, ಹಲ್ಲೆಗೆ ಮುಂದಾಗುತ್ತಾರೆ. ಬಿಜೆಪಿಯವರು ಕ್ಷಮೆ ಕೇಳಬೇಕು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.


