Homeಮುಖಪುಟಮತ್ತೆ ಕಾಡುತ್ತಿದೆ ಬೇಡ್ತಿ-ವರದಾ-ಅಘನಾಶಿನಿ ನದಿ ಜೋಡಣೆ ಗುಮ್ಮ!

ಮತ್ತೆ ಕಾಡುತ್ತಿದೆ ಬೇಡ್ತಿ-ವರದಾ-ಅಘನಾಶಿನಿ ನದಿ ಜೋಡಣೆ ಗುಮ್ಮ!

ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲ್ಯುಡಿಎ) ಬೇಡ್ತಿ-ಅಘನಾಶಿನಿ ಮತ್ತು ವರದಾ ನದಿಗಳನ್ನು ಸೇರಿಸುವ ವಿಸ್ತೃತ ಯೋಜನಾ ವರದಿ ತಯಾರು ಮಾಡಿತ್ತು. ಈ ವರದಿ ಪ್ರಕಾರ ಬೇಡ್ತಿಯ ಉಪನದಿಗಳಿಗೆ ಅಣೆಕಟ್ಟು ಕಟ್ಟಿ ವರದೆಯ ಪಾತ್ರದಲ್ಲಿ ಆ ನೀರು ತುಂಬಬೇಕು. ವರದೆ ಹರಿದು ತುಂಗಭದ್ರಾ ನದಿ ಸೇರುತ್ತದೆ. ಈ ನೀರಿಂದ ತುಂಗಭದ್ರ್ರಾ ಎಡದಂಡೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು ಯೋಜನೆಯ ಮೂಲ ಉದ್ದೇಶವಾಗಿತ್ತು. ಆದರದು ಶಿರಸಿ ಭಾಗದ ಜನರ ಪ್ರಬಲ ವಿರೋಧದಿಂದ ವಿಫಲವಾಗಿತ್ತು. ಈಗ ಅದೇ ಯೋಜನೆ ’ಕುಡಿಯುವ ನೀರಿನ’ ಹೆಸರಲ್ಲಿ ಮತ್ತೆ ಮುನ್ನಲೆಗೆ ಬಂದಿದೆ

- Advertisement -
- Advertisement -

ಉತ್ತರ ಕನ್ನಡದ ಪಶ್ಚಿಮ ಘಟ್ಟದ ತಪ್ಪಲಲ್ಲಿ ಇದ್ದಕ್ಕಿದ್ದಂತೆ ನದಿ ಜೋಡಣೆ ಗುಮ್ಮ ಮತ್ತೊಮ್ಮೆ ಎದ್ದು ಕುಳಿತು ಬೆಚ್ಚಿ ಬೀಳಿಸಿದೆ! ಜಿಲ್ಲೆಯ ಜೀವ ನದಿಗಳಾದ ಬೇಡ್ತಿ, ಅಘನಾಶಿನಿ ಮತ್ತು ವರದೆಯನ್ನು ಒಂದು ಮಾಡಿ ಬಯಲು ಸೀಮೆಯ ಗದಗ-ರಾಯಚೂರು-ಕೊಪ್ಪಳದ ಕಡೆಗೆ ತಿರುಗಿಸುವುದು ಕಾರ್ಯಸಾಧುವಲ್ಲ. ಪಕ್ಕಾ ಅವೈಜ್ಞಾನಿಕ ಯೋಜನೆಯೊಂದನ್ನು ಸರ್ಕಾರಿ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಮಳೆಗಾಲದಲ್ಲಷ್ಟೇ ಮೈದುಂಬಿ ಹರಿಯುವ ಈ ಮೂರೂ ನದಿಗಳು ಬೇಸಿಗೆ ಬಂತೆಂದರೆ ಬಸವಳಿಯುವ ಸತ್ಯ ಗೊತ್ತಿದ್ದು ಬಯಲುಸೀಮೆಗೆ ಕುಡಿಯುವ ನೀರನ್ನು ಶಿರಸಿ-ಯಲ್ಲಾಪುರ ಸೀಮೆಯಿಂದ ಪೂರೈಸುತ್ತೇವೆಂದು ಹಠಕ್ಕೆ ಬಿದ್ದಿರುವುದು ಉತ್ತರ ಕನ್ನಡಿಗರನ್ನು ಕಂಗಾಲಾಗಿಸಿದೆ.

ಏನಿದು ’ದಾಹ’ದ ಯೋಜನೆ?

ಈಚೆಗೆ ಸಿಎಂ ಯಡ್ಡಿ ಸಾಹೇಬರು ಬಜೆಟ್‌ನಲ್ಲಿ ನದಿ ಜೋಡಣೆ ಯೋಜನೆ ಘೋಷಣೆ ಮಾಡುತ್ತಿದ್ದಂತೆಯೇ ಇದು ತಮ್ಮ ಬದುಕು ಬರಿದಾಗಿಸುವ ಹುಚ್ಚು ಯೋಜನೆ ಎನ್ನುತ್ತ ಉತ್ತರ ಕನ್ನಡ ಮಂದಿ ಪ್ರತಿಭಟನೆ ಶುರು ಮಾಡಿದ್ದಾರೆ. ಹಾಗೆ ನೋಡಿದರೆ ಇದೇನೂ ಹೊಸ ಪ್ರಾಜೆಕ್ಟ್ ಅಲ್ಲ; ಎರಡು ದಶಕದ ಹಿಂದೆ ಪ್ರಸ್ತಾಪವಾಗಿದ್ದ ಈ ಯೋಜನೆ ಸ್ಥಳೀಯರ ವಿರೋಧದಿಂದ ನಿಂತು ಹೋಗಿತ್ತು. ಅಂದಿನ ಪ್ರಧಾನಿ ವಾಜಪೇಯಿ ಸರ್ಕಾರ ರೂಪಿಸಿದ್ದ ರಾಷ್ಟ್ರದ ಪ್ರಮುಖ ನದಿಗಳ ಜೋಡಣೆ ಯೋಜನೆಯಲ್ಲಿ ಬೇಡ್ತಿ-ಅಘನಾಶಿನಿ-ವರದಾ ಸಂಗಮ ಸಂದಿಗ್ಧವೂ ಸೇರಿತ್ತು. ಕೇಂದ್ರ ಸರ್ಕಾರ 2002ರಲ್ಲಿ ಕಾರ್ಯಪಡೆ ರಚಿಸಿ ನದಿ ಪಾತ್ರಗಳ ಜೋಡಣೆಯ ಕ್ರಿಯಾ ಯೋಜನೆಗಳನ್ನು ಸಿದ್ಧಗೊಳಿಸಿತ್ತು. ಪ್ರಾಜೆಕ್ಟ್ ವೆಚ್ಚ, ಬಂಡವಾಳದ ಮೂಲ ಗುರುತಿಸಿ 2016ರ ಹೊತ್ತಿಗೆ ಕೈಗೆತ್ತಿಕೊಳ್ಳಲು ಸೂಚಿಸಿತ್ತು.

ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲ್ಯುಡಿಎ) ಬೇಡ್ತಿ-ಅಘನಾಶಿನಿ ಮತ್ತು ವರದಾ ನದಿಗಳನ್ನು ಸೇರಿಸುವ ವಿಸ್ತೃತ ಯೋಜನಾ ವರದಿ ತಯಾರು ಮಾಡಿತ್ತು. ಈ ವರದಿ ಪ್ರಕಾರ ಬೇಡ್ತಿಯ ಉಪನದಿಗಳಿಗೆ ಅಣೆಕಟ್ಟು ಕಟ್ಟಿ ವರದೆಯ ಪಾತ್ರದಲ್ಲಿ ಆ ನೀರು ತುಂಬಬೇಕು. ವರದೆ ಹರಿದು ತುಂಗಭದ್ರಾ ನದಿ ಸೇರುತ್ತದೆ. ಈ ನೀರಿಂದ ತುಂಗಭದ್ರ ಎಡದಂಡೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು ಯೋಜನೆಯ ಮೂಲ ಉದ್ದೇಶವಾಗಿತ್ತು. ಆದರದು ಶಿರಸಿ ಭಾಗದ ಜನರ ಪ್ರಬಲ ವಿರೋಧದಿಂದ ವಿಫಲವಾಗಿತ್ತು. ಈಗ ಅದೇ ಯೋಜನೆ ’ಕುಡಿಯುವ ನೀರಿನ’ ಹೆಸರಲ್ಲಿ ಮತ್ತೆ ಮುನ್ನಲೆಗೆ ಬಂದಿದೆ.

ರೂಪಾಂತರಗೊಂಡಿರುವ ಯೋಜನೆಯಂತೆ ಗದಗಿನ ಹಿರೆವಡ್ಡತ್ತಿಗೆ ಎಂಬಲ್ಲಿ ದೊಡ್ಡ ಡ್ಯಾಮ್ ಸ್ಥಾಪಿಸಿ ಬೇಡ್ತಿ-ವರದಾ-ಅಘನಾಶಿನಿ ನೀರನ್ನು ಸಂಗ್ರಹಿಸಲಾಗುತ್ತದೆ. ಶಿರಸಿಯ ವನಳ್ಳಿಯಲ್ಲಿ ಹರಿಯುವ ಪಟ್ಟಣದ ಹೊಳೆಗೆ ಮೆಣಸಗೋಡ ಎಂಬಲ್ಲಿ ಅಣೆಕಟ್ಟು ಕಟ್ಟುವುದು; ಶಾಲ್ಮಲಾ ನದಿಗೆ ಸೋಂದಾದಲ್ಲಿ ತಡೆಹಾಕುವುದು ಎರಡೂ ಜಲಾಶಯದ ನೀರನ್ನು 6.3 ಕಿಮೀ ಕಾಲುವೆ 2.2 ಕಿಮೀ ಸುರಂಗದ ಮೂಲಕ ವರದಾಕ್ಕೆ ಹರಿಸುವುದು. ಶಾಲ್ಮಲಾ ಮತ್ತು ಪಟ್ಟಣದ ಹೊಳೆಗಳು ಜಲಾಶಯದ ಹಿನ್ನೀರಿನ ಕೆಂಗ್ರೆ ಎಂಬಲ್ಲಿಂದ 8.03 ಕಿಮೀ ನೀರನ್ನು ಪಂಪ್ ಮಾಡಿ ನಂತರ 6.88 ಕಿಮೀ ಸುರಂಗದ ಮೂಲಕ ಶಿರಸಿಯ ಹಕ್ಕಲುಮನೆ ತನಕ ನೀರು ತರುವುದು. ಇಲ್ಲಿಂದ ಮುಂದೆ ಶಾಲ್ಮಲಾ ಮತ್ತು ಪಟ್ಟಣದ ಹೊಳೆ ನೀರು ಇಳಿಜಾರು ಕಾಲುವೆಯಲ್ಲಿ ಸರಾಗವಾಗಿ ಹರಿದು ಬನವಾಸಿ ಸಮೀಪದ ವರದಾ ನದಿ ಪಾತ್ರಕ್ಕೆ ಸೇರುತ್ತದೆ. ಈ ನೀರನ್ನು ಗದುಗಿನ ಹಿರೇವಡ್ಡತ್ತಿ ಜಲಾಗಾರದಲ್ಲಿ ಸಂಗ್ರಹಿಸಿ ಗದಗ-ರಾಯಚೂರು-ಕೊಪ್ಪಳದ ಜನರಿಗೆ ಒದಗಿಸಲಾಗುತ್ತದೆ ಎಂಬುದು ಎನ್‌ಡಬ್ಲ್ಯುಡಿಎ ನೀಲನಕ್ಷೆಯಲ್ಲಿ ಹೇಳಲಾಗಿದೆ.

ಎಡವಟ್ಟು ಪ್ರಾಜೆಕ್ಟ್

ಎನ್‌ಡಬ್ಲ್ಯುಡಿಎ ಹೇಳುವಷ್ಟು ಸರಳವಾಗಿಲ್ಲ ಯೋಜನೆ. ನೀರನ್ನು ಗದುಗಿನವರೆಗೆ ಎತ್ತಲು ಬರೋಬ್ಬರಿ 61 ಮೆಗಾವ್ಯಾಟ್ ದುಬಾರಿ ವಿದ್ಯುತ್ ಶಕ್ತಿ ಬೇಕಾಗುತ್ತದೆ. ಇಷ್ಟಾದರು ನೀರು ಗದಗ ಸೇರುತ್ತದೆಂಬ ಖಾತ್ರಿಯಿಲ್ಲ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಯನ್ನು ಪೂರ್ವಾಭಿಮುಖವಾಗಿ ತಿರುಗಿಸುವುದು ಅಷ್ಟು ಸುಲಭವಲ್ಲ. ಬೇಸಿಗೆ ಆರಂಭದ ಫೆಬ್ರವರಿಯಲ್ಲೇ ಬೇಡ್ತಿ-ವರದಾ-ಅಘನಾಶಿನಿ ನದಿಗಳ ಪಾತ್ರ ಬತ್ತತೊಡಗುತ್ತದೆ. ಈ ನದಿಗಳು ಸರ್ವಋತು ಹರಿಯುವುದಿಲ್ಲ ಎಂಬುದು ಗೊತ್ತಿದ್ದೂ ಸರ್ಕಾರಿ ಪಂಡಿತರು ಬಯಲು ಸೀಮೆ ದಾಹ ತೀರಿಸುವ ನೆಪದಲ್ಲಿ ನದಿ ಜೋಡಿಸುತ್ತೇವೆಂದು ಹಲಬುವುದು ಕ್ರೂರ ವ್ಯಂಗ್ಯವೇ ಸರಿ! ನದಿ ಜೋಡಣೆ ಎಂತ ಕೆಟ್ಟ ಯೋಜನೆ ಎಂಬುದನ್ನು ಬೇಡ್ತಿ ನದಿ ಹತ್ತಿರವೇ ಇರುವ ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ 20ಕೋಟಿ ರೂ ಪ್ರಾಜೆಕ್ಟ್ ವಿಫಲವಾಗಿರುವುದು ಸಾರಿ ಸಾರಿ ಹೇಳುತ್ತಿದೆ!

2011ರಲ್ಲಿ ಈ ಯೋಜನೆ ಶುರುವಾಗುವಾಗ ವ್ಯರ್ಥ ಸಾಹಸವೆಂಬ ಆಕ್ಷೇಪ ವ್ಯಕ್ತವಾಗಿತ್ತು. ಆದರೂ ಹುಂಬ ಆಳುವವರು ಯೋಜನೆ ಕೈಗೆತ್ತಿಕೊಂಡಿದ್ದರು. ಬೇಡ್ತಿ ನೀರೆಂದರೆ ಹುಬ್ಬಳ್ಳಿ-ಧಾರವಾಡದ ತ್ಯಾಜ್ಯವೇ ಹೊರತು ಶುದ್ಧ ನೀರಲ್ಲವೆಂದು ಜನ ಬೊಬ್ಬೆ ಹಾಕಿದ್ದರು. ದೊಡ್ಡ ಮೊತ್ತದ ಹಣ ವ್ಯಯಿಸಿದರೂ ನದಿಯಲ್ಲೇ ನೀರಿಲ್ಲದ್ದರಿಂದ ಬೇಸಿಗೆಯಲ್ಲಿ ಯೋಜನೆ ಕೈಕೊಟ್ಟಿತ್ತು. ಕೆಲವೇ ಕೆಲವು ವಾರ್ಡ್‌ಗಳಿಗಷ್ಟೆ ನೀರು ಬಂದರೂ ಇದು ಕೊಳಕು ನೀರೆಂದು ಜನ ಬಳಸಲಿಲ್ಲ. ಐದು ವರ್ಷದಿಂದ ಯೋಜನೆ ಸ್ಥಗಿತಗೊಂಡಿದೆ. ಇದಕ್ಕಾಗಿ ನಿರ್ಮಿಸಿದ ಪ್ರತ್ಯೇಕ ವಿದ್ಯುತ್ ಲೈನ್ ಕಾಡಿನಲ್ಲಿ ಅವಶೇಷವಾಗಿದೆ. ಶುದ್ಧೀಕರಣ ಘಟಕ, ಜಾಕ್‌ವೆಟ್, ಯಂತ್ರಗಳೆಲ್ಲ ಕೆಲಸಕ್ಕೆ ಬಾರದೆ ಸರ್ಕಾರಿ ಪಂಡಿತರ ’ಮೇಧಾವಿತನ’ವನ್ನು ಹೇಳುತ್ತಿವೆ!

ಜೀವಜಾಲಕ್ಕೆ ಗಂಡಾಂತರ

ಧಾರವಾಡ ವಿವಿ ಬಳಿ ಹುಟ್ಟುವ ಬೇಡ್ತಿ ನದಿ ಯಲ್ಲಾಪುರ-ಅಂಕೋಲ ತಾಲ್ಲೂಕಲ್ಲಿ ಹರಿದು ಗಂಗಾವಳಿ ಎಂಬಲ್ಲಿ ಸಮುದ್ರ ಸೇರುತ್ತದೆ. ಘಟ್ಟದ ಮೇಲೆ ಬೇಡ್ತಿ ಎಂದು ಕರಾವಳಿಯಲ್ಲಿ ಗಂಗಾವಳಿ ಎಂದು ಕರೆಯಲ್ಪಡುವ ಈ ನದಿಯ ಹರಿವು ಕೇವಲ 152 ಕಿಮೀ. ಮಲೆನಾಡಿನ ರೈತ ತೋಟಿಗರಿಗೆ ಮತ್ತು ಕರಾವಳಿಯ ಮೀನುಗಾರ ರೈತರಿಗೆಲ್ಲ ಬೇಡ್ತಿ/ಗಂಗಾವಳಿ-ಅಘನಾಶಿನಿ-ವರದಾ ಜೀವ-ಜೀವದ ನದಿಗಳು ಸಾವಿರಾರು ಎಕರೆ ಭೂಮಿಗೆ ನೀರೊದಗಿಸುವ ಈ ನದಿಗಳು ಕರಾವಳಿಯಲ್ಲಿ ಸಾವಿರಾರು ಬೆಸ್ತ ಕುಟುಂಬಗಳ ಕುಲಕಸುಬಿಗೆ ಆಧಾರ. ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಒಕ್ಕೂಟ ಬೇಡ್ತಿ ಕೊಳ್ಳವನ್ನು ಜೀವ ವೈವಿಧ್ಯದ ಸಕ್ರಿಯ ಪ್ರದೇಶವೆಂದು ಘೋಷಿಸಿದೆ. ಈ ಭಾಗವನ್ನು 1741 ರೀತಿಯ ಹೂಬಿಡುವ ಸಸ್ಯಗಳು ಮತ್ತು 420 ಪ್ರಭೇದದ ಪಕ್ಷಿಗಳು ಇನ್ನಿತರ ವನ್ಯಜೀವಿಗಳ ನೆಲೆಯೆಂದು ಗುರುತಿಸಲ್ಪಟ್ಟಿದೆ. ಕರಾವಳಿಯ ನದಿ-ಸಮುದ್ರ ಸಂಗಮದಲ್ಲಿ ಮೀನಿನ ಸಂತತಿ ಬೆಳೆಯುವುದೇ ನದಿ ತರುವ ಪೌಷ್ಠಿಕಾಂಶಗಳಿಂದ. 35ಕ್ಕೂ ಹೆಚ್ಚು ಪ್ರಾಣಿ ತಳಿ ಕಾರಿಡಾರ್ ಇದು.

ಬೇಡ್ತಿ-ವರದಾ ಜೋಡಣೆ ಅವೈಜ್ಞಾನಿಕವಷ್ಟೇ ಅಲ್ಲ ಹಣ ಪೋಲು ಮಾಡುವ ಯೋಜನೆ. ಇದರಿಂದ ಗದಗ ಭಾಗಕ್ಕೂ ನೀರು ಸಿಗುವುದು ಕೂಡ ನಿಜವಲ್ಲ. ಒಂದಿಷ್ಟು ಕಂಟ್ರಾಕ್ಟರ್, ಸಿಮೆಂಟ್, ಕಬ್ಬಿಣ, ಗ್ರಾನೈಟ್, ರಾಜಕಾರಣಿ ಲಾಬಿಗೆ ಕೊಪ್ಪರಿಗೆ ಕಾಸು ತಂದು ಕೊಡಬಹುದಷ್ಟೇ. ನದಿಯನ್ನೇ ನಂಬಿ ಕಟ್ಟಿಕೊಂಡಿರುವ ಊರು, ಮನೆ, ಮಠ, ತೋಟ-ಗದ್ದೆಯನ್ನಷ್ಟೇ ಅಲ್ಲ ವಿಶಿಷ್ಟ-ವೈವಿಧ್ಯಮಯ ಜೀವಜಾಲವನ್ನೇ ಈ ಯೋಜನೆ ಧ್ವಂಸ ಮಾಡುತ್ತದೆ! ನದಿಯ ಹೆಚ್ಚುವರಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆಂದು ಸರ್ಕಾರಿ ಪಂಡಿತರು ಮಂಡಿಸುವ ವಾದವೇ ಅನರ್ಥಕಾರಿ. ಹೆಚ್ಚುವರಿ ನೀರೆಂಬುದು ನದಿ ಪಾತ್ರದಲ್ಲಿರಲಾರದು. ಅದೆಲ್ಲಾ ನದಿ ಪಾತ್ರದುದ್ದಕ್ಕೂ ಬಳಕೆಯಾಗಿ ನಂತರ ಸಮುದ್ರ ಸೇರುವಾಗಲೂ ಜಲಚರಗಳಿಗೆ ಅನಿವಾರ್ಯ ಜೀವ ಜಲವಾಗಿರುತ್ತದೆ. ನದಿಯನ್ನು ಅನೈಸರ್ಗಿಕ ಬಲಪ್ರಯೋಗದಿಂದ ತಿರುಗಿಸಿದರೆ ಆಗುವ ಅನಾಹುತ ಒಂದೆರಡಲ್ಲ. ಕರಾವಳಿ ಕೃಷಿ ಭೂಮಿಗೆ ಸಮುದ್ರದ ಉಪ್ಪು ನೀರು ನುಗ್ಗುತ್ತದೆ; ಬಾವಿಯ ನೀರು ಕುಡಿಯಲು ಬಾರದಂತಾಗುತ್ತದೆ. ಅಂತರ್ಜಲ ಬತ್ತುತ್ತದೆ. ಯೋಜನೆಯಿಂದ ಉಪಯೋಗಕ್ಕಿಂತ ಹಾನಿಯೇ ಹೆಚ್ಚು!

ಬೇಡ್ತಿ ನದಿಯಿಂದ ಮುಂಡಗೋಡ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಗಂಗಾವಳಿ ನದಿಯಿಂದ ಅಂಕೋಲಾ-ಕಾರವಾರ ತಾಲ್ಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಸೀಬರ್ಡ್ ನೌಕಾನೆಲೆಗೆ ನೀರು ಸರಬರಾಜು ಮಾಡುವ ಚೆಕ್‌ಡ್ಯಾಮ್ ನಿರ್ಮಾಣವಾಗಲಿದೆ. ವರದೆಯ ಪಾತ್ರದಲ್ಲಿರುವ ತಿಗಣಿ ಸಮೀಪ ಡ್ಯಾಮ್ ಕಟ್ಟಿ ಕೃಷಿಗೆ ನೀರು ಪೂರೈಸಲಾಗುತ್ತಿದೆ. ಬನವಾಸಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ವರದೆಯ ನೀರು ಕುಡಿಯಲು ಸರಬರಾಜಾಗುತ್ತಿದೆ. ಮೂರು ನದಿ ಜೋಡಣೆಯಿಂದ ಇದೆಲ್ಲ ನಿಷ್ಪ್ರಯೋಜಕವಾಗಲಿದೆ! ಬಲಾತ್ಕಾರವಾಗಿ ನದಿಯ ದಿಕ್ಕು ಬದಲಿಸುವುದಿದೆಯಲ್ಲ ಅದು, ಅವೈಜ್ಞಾನಿಕ, ಅನೈಸರ್ಗಿಕವಷ್ಟೇ ಅಲ್ಲ, ಅನಾಹುತಕಾರಿ ಮತ್ತು ಅಕ್ಷಮ್ಯವೂ ಹೌದು.

ಹೋರಾಟಕ್ಕೆ ಸಿದ್ಧತೆ

ಹಿಂದೆ ಈ ನದಿ ಸಂಗಮ ಯೋಜನೆ ವಿರೋಧಿಸಿ ರಾಜಕೀಯ ಮೈಲೇಜು ಪಡೆದಿದ್ದ ಬಿಜೆಪಿ ಈಗ ಅಧಿಕಾರದಲ್ಲಿದೆ. ಅಂದು ಪರಿಸರ ಗುತ್ತಿಗೆ ಪಡೆದಂತೆ ಹಾರಾಡುತ್ತಿದ್ದವರು ಇವತ್ತು ಆಯಕಟ್ಟಿನ ಅಧಿಕಾರದಲ್ಲಿದ್ದಾರೆ. ಹಾಗಾಗಿ ಅವರ ವಿರೋಧದ ಧ್ವನಿ ಅಡಗಿದೆ; ಬೂಟಾಟಿಕೆ ಸಾಬೀತಾಗಿದೆ. ದೇಶದ ಎಲ್ಲಿಯೂ ನದಿ ಜೋಡಣೆ ಯೋಜನೆಗಳು ನಿಯಮಿತ ಸಮಯದಲ್ಲಿ ನಿರೀಕ್ಷಿತ ರೀತಿಯಲ್ಲಿ ಅನುಷ್ಠಾನವಾದದ್ದೇ ಇಲ್ಲ! ಕಳೆದ 20 ವರ್ಷದಲ್ಲಿ ಆದ್ಯತೆಯಲ್ಲಿ ಕೈಗೆತ್ತಿಕೊಂಡ 30 ನದಿ ಜೋಡಣೆ ಪ್ರಾಜೆಕ್ಟ್‌ಗಳು ಒಂದೇ ಒಂದು ಕಾರ್ಯಗತವಾಗಿಲ್ಲ. ಎತ್ತಿನಹೊಳೆಯಿಂದ ಕೋಲಾರಕ್ಕೆ 1 ಟಿಎಂಸಿ ನೀರು ಕೊಂಡೊಯ್ಯುವ 24 ಸಾವಿರ ಕೋಟಿ ಯೋಜನೆ ಆಧ್ವಾನವಾಗಿದೆ!

ಇದೆಲ್ಲ ಗೊತ್ತಿದ್ದೂ ಬೇಡ್ತಿ-ವರದಾ-ಅಘನಾಶಿನಿ ನದಿ ಜೋಡಿಸುವ ಹುಚ್ಚು ಪ್ರಾಜೆಕ್ಟ್‌ಗೆ ಸರ್ಕಾರಿ ಮಂದಿ ತರಾತುರಿಯ ಸಿದ್ಧತೆಯಲ್ಲಿದ್ದಾರೆ. ಪ್ರಕೃತಿ ನಿಯಮ ವೈಜ್ಞಾನಿಕ ನಿಯಮದ ವಿರುದ್ಧ ನದಿ ಜೋಡಣೆ ವ್ಯರ್ಥ ಸಾಹಸವೆಂದು ಆಳುವವರಿಗೆ ಅರ್ಥ ಮಾಡಿಸುವರ್‍ಯಾರು?


ಇದನ್ನೂ ಓದಿ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...