Homeಮುಖಪುಟಮಯನ್ಮಾರ್ ಮಿಲಿಟರಿ ದಂಗೆಯ ವಿರುದ್ಧ ಬಂಡಾಯ 8888 ರಿಂದ 2021

ಮಯನ್ಮಾರ್ ಮಿಲಿಟರಿ ದಂಗೆಯ ವಿರುದ್ಧ ಬಂಡಾಯ 8888 ರಿಂದ 2021

- Advertisement -
- Advertisement -

2021, ಫೆಬ್ರವರಿ ಒಂದರಂದು, ಮಯನ್ಮಾರ್‌ನ ಮಿಲಿಟರಿ, (ಟಾಟ್ಮಾಡಾವ್) ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಅಧ್ಯಕ್ಷ ವಿನ್ ಮೈಂಟ್ ಅವರನ್ನು ಮಿಲಿಟರಿ ದಂಗೆಯಲ್ಲಿ ಪದಚ್ಯುತಗೊಳಿಸಿತು. ಮಿಲಿಟರಿ ಅಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. 2020ರ ಚುನಾವಣೆಯಲ್ಲಿ ಪ್ರಚಾರ ಮಾರ್ಗಸೂಚಿಗಳನ್ನು ಹಾಗೂ ಕೋವಿಡ್-19 ನಿರ್ಬಂಧನೆಗಳನ್ನು ಉಲ್ಲಂಘಿಸಿದ್ದಾರೆಂದು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ನಾಯಕರ ಮೇಲೆ ಅಲ್ಲಿನ ಮಿಲಿಟರಿ ದೋಷಾರೋಪ ಮಾಡುತ್ತಾ ಬಂದಿದೆ. 2020ರ ಚುನಾವಣೆಯಲ್ಲಿ ಎನ್‌ಎಲ್‌ಡಿ ಸಂಸತ್ತಿನ 476 ಸ್ಥಾನಗಳಲ್ಲಿ 396 ಸ್ಥಾನಗಳನ್ನು ಗೆದ್ದುಕೊಂಡಿತು. ಚುನಾವಣಾ ಫಲಿತಾಂಶಗಳು ವಂಚನೆ ಮತ್ತು ರಿಗ್ಗಿಂಗ್‌ನ ಫಲ ಎಂದು ಮಿಲಿಟರಿ ನಾಯಕರು ಪ್ರತಿಪಾದಿಸುತ್ತ ಬಂದಿದ್ದಾರೆ.

ಮಿಲಿಟರಿ ದಂಗೆಯ ನಂತರ ಪ್ರತಿಭಟನೆಗಳು ಪ್ರಾರಂಭವಾದವು. ಫೆಬ್ರವರಿ 2ರಂದು ಕೆಲವೇ ಜನರೊಂದಿಗೆ ಶುರುವಾದ ಪ್ರತಿಭಟನೆ, ಫೆಬ್ರವರಿ 7ರ ಹೊತ್ತಿಗೆ ಲಕ್ಷಗಳ ಸಂಖ್ಯೆಯಲ್ಲಿ ಜನರು ಪ್ರತಿಭಟಿಸುತ್ತಿದ್ದರು. ಈ ಪ್ರತಿಭಟನೆಗಳಿಗೆ ಯಾವ ನಾಯಕರೂ ಇರಲಿಲ್ಲ. ಮಿಲಿಟರಿ ಆಡಳಿತವನ್ನು ಕೊನೆಗೊಳಿಸಬೇಕು ಮತ್ತು ನಾಗರಿಕ ಆಡಳಿತವನ್ನು ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತ ಬಂದಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಮಿಲಿಟರಿ ಜಲ-ಫಿರಂಗಿಗಳನ್ನು, ಬಳಸಿದೆ. ಫೆಬ್ರವರಿ 8 ರಿಂದ ಮಿಲಿಟರಿ ಅಲ್ಲಿ ತನ್ನ ’ಸೇನಾಡಳಿತ’ವನ್ನು ಸ್ಥಾಪಿಸಿದೆ.

PC : BBC

ಪ್ರತಿಭಟನೆಗಳು ದೇಶಾದ್ಯಂತ ಹರಡಿವೆ. ನೂರಾರು ಪ್ರತಿಭಟನಾಕಾರರನ್ನು ಹತ್ಯೆ ಮಾಡಲಾಗಿದೆ ಮತ್ತು ಸಾವಿರಾರು ಜನರನ್ನು ಬಂಧಿಸಲಾಗಿದೆ. ಎನ್‌ಎಲ್‌ಡಿಯ ನಾಯಕರನ್ನು ಜೈಲಿಗೆ ಹಾಕಲಾಗಿದೆ. ದೇಶಾದ್ಯಂತ ಅನೇಕ ಉಗ್ರಗಾಮಿ ಗುಂಪುಗಳು ಸರ್ಕಾರದ ವಿರುದ್ಧ ಬಹಿರಂಗ ಘೋಷಣೆಗಳನ್ನು ಮಾಡುತ್ತಿವೆ. ಮಯನ್ಮಾರ್ ನಾಗರಿಕ ಅಂತರ್ಯುದ್ಧದ ಅಂಚಿನಲ್ಲಿರಬಹುದು. ಇದರೊಂದಿಗೆ ಭಾರತದ ಗಡಿಯಲ್ಲಿ ನಿರಾಶ್ರಿತರ ಬಿಕ್ಕಟ್ಟು ಉಂಟಾಗಬಹುದು. ಈ ಪರಿಸ್ಥಿತಿಯಿಂದ ಮುಂದೆ ಒದಗಬಹುದಾದ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಒಂದು ಪ್ರಬುದ್ಧ ನೀತಿಯನ್ನು ಭಾರತ ನಿರ್ಧರಿಸಬೇಕಾದ ಸಮಯ ಇದು.

ಹಿನ್ನೆಲೆ

ಸ್ವಾತಂತ್ರ್ಯ ಬಂದಾಗಿನಿಂದ ಮಯನ್ಮಾರ್ ಹೆಚ್ಚಾಗಿ ಮಿಲಿಟರಿ ಆಡಳಿತದಲ್ಲಿದೆ. 1985ರಲ್ಲಿ ಮತ್ತು 1987 ರಲ್ಲಿ ಸರ್ಕಾರವು ಡಿಮಾನೆಟೈಸೇಶನ್ ನೀತಿಯನ್ನು ಜಾರಿಗೆ ತಂದಿತು ಮತ್ತು ಸುಮಾರು ಶೇ 75ರಷ್ಟು ರಾಷ್ಟ್ರೀಯ ಕರೆನ್ಸಿಯನ್ನು ಇಲ್ಲವಾಗಿಸಿತು. ಪರಿಣಾಮವಾಗಿ, ಅನೇಕ ಜನರು ತಮ್ಮ ಉಳಿತಾಯವನ್ನು ಕಳೆದುಕೊಂಡರು. 1985ರ ಡಿಮಾನೆಟೈಸೇಶನ್ (ನೋಟು ಅಮಾನ್ಯೀಕರಣ) ಕೆಲವು ಸಣ್ಣ ಆಂದೋಲನಗಳಿಗೆ ಕಾರಣವಾಯಿತು. ಭೂಗತ ಪ್ರಭುತ್ವ ವಿರೋಧಿ ಪ್ರತಿರೋಧವು ರೂಪುಗೊಳ್ಳಲು ಪ್ರಾರಂಭಿಸಿತು. 1987ರ ಡಿಮಾನೆಟೈಸೇಶನ್ ಪ್ರತಿರೋಧದ ಎರಡನೇ ಅಲೆಗೆ ಕಾರಣವಾಯಿತು. ಇದು 8 ಆಗಸ್ಟ್ 1988 ರ ದಂಗೆಗೆ (8888 ದಂಗೆ ಎಂದೇ ಪ್ರಚಲಿತ) ಇದು ಕಾರಣವಾಯಿತು. ಶಿಕ್ಷಣಕ್ಕೆ ಬೇಕಾದ ಉಳಿತಾಯವನ್ನು ಕಳೆದುಕೊಂಡ ವಿದ್ಯಾರ್ಥಿಗಳು ಗಲಭೆಗಳನ್ನು ಮುನ್ನಡೆಸಿದರು. ಕೊನೆಗೆ, ಸಮಾಜದ ಇತರ ವರ್ಗಗಳು ಸೇರಿಕೊಂಡವು. ಪ್ರತಿಭಟನೆಗಳು ದೇಶಾದ್ಯಂತ ಹರಡಿದವು. ಆರಂಭದಲ್ಲಿ, ಮಿಲಿಟರಿ ’ಸೇನಾ ಕಾನೂನು’ ಘೋಷಿಸುವ ಮೂಲಕ ಪ್ರತಿಕ್ರಿಯಿಸಿತು. ಅಂತಿಮವಾಗಿ, ಅವರು ಚುನಾವಣೆ ನಡೆಸಲು ಒಪ್ಪುವ ಮೂಲಕ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

8888 ದಂಗೆಯ ನಂತರ ಎನ್‌ಎಲ್‌ಡಿ ರಚನೆಯಾಯಿತು. ಪ್ರಸಿದ್ಧ ರಾಷ್ಟ್ರೀಯವಾದಿ ಆಂಗ್ ಸಾನ್ ಅವರ ಪುತ್ರಿ ಆಂಗ್ ಸಾನ್ ಸೂಕಿ ಮಿಲಿಟರಿ ಆಡಳಿತದ ಪ್ರತಿರೋಧದ ಮುಖವಾಗಿ ಮುನ್ನಲೆಗೆ ಬಂದರು. ಅವರು ಎನ್‌ಎಲ್‌ಡಿಯನ್ನು ಮುನ್ನಡೆಸಿದರು. 1990 ರಲ್ಲಿ ಚುನಾವಣೆಗಳು ನಡೆದವು. ಸಂಸತ್ತಿನ 492 ಸ್ಥಾನಗಳಲ್ಲಿ ಎನ್‌ಎಲ್‌ಡಿ 392 ಸ್ಥಾನಗಳನ್ನು ಗಳಿಸಿ ಶೇ.59 ಜನಪ್ರಿಯ ಮತಗಳನ್ನು ಗಳಿಸಿತು. ಮಿಲಿಟರಿ ಚುನಾವಣೆಗಳನ್ನು ನ್ಯಾಯಸಮ್ಮತವಲ್ಲವೆಂದು ಘೋಷಿಸಿತು ಮತ್ತು ಮಯನ್ಮಾರ್ ಆಡಳಿತವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿತು.

1990ರ ದಶಕದಲ್ಲಿ ಆಂದೋಲನಗಳು ಮುಂದುವರೆದವು. ಎನ್‌ಎಲ್‌ಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿತು. ಅಮೆರಿಕ, ಬ್ರಿಟನ್, ಜಪಾನ್ ಮತ್ತು ಅನೇಕ ಯುರೋಪಿಯನ್ ದೇಶಗಳಿಂದ ಬೆಂಬಲವನ್ನು ಪಡೆದುಕೊಂಡಿತು, ಇದು ಮಯನ್ಮಾರ್ ವಿರುದ್ಧ ನಿರ್ಬಂಧಗಳಿಗೆ ಕಾರಣವಾಯಿತು. ಮಯನ್ಮಾರ್‌ನ ಆರ್ಥಿಕತೆ ಸಂಕಷ್ಟಕ್ಕೆ ಈಡಾಗಿತು. ವಿವಿಧ ಪ್ರದೇಶಗಳ ಉಗ್ರ ಜನಾಂಗೀಯ ಆಧಾರಿತ ಗುಂಪುಗಳು ಸ್ವಾತಂತ್ರ್ಯಕ್ಕಾಗಿ ಯುದ್ಧಗಳನ್ನು ಘೋಷಿಸಲು ಪ್ರಾರಂಭಿಸಿದವು.

2003ರಲ್ಲಿ, ಸರ್ಕಾರವು ಪ್ರಜಾಪ್ರಭುತ್ವ ಸ್ಥಾಪನೆಗೆ ಏಳು ಹಂತಗಳನ್ನು ಪ್ರಸ್ತಾಪಿಸಿತು. ಅಲ್ಲಿ ಅವರು ಸಂವಿಧಾನವನ್ನು ಸ್ಥಾಪಿಸಲು ಮತ್ತು ನಾಗರಿಕ ಆಡಳಿತಕ್ಕೆ ಹೋಗಲು ಒಪ್ಪಿದರು. ಅವರ ಪ್ರಸ್ತಾಪವನ್ನು ದೇಶದ ಪ್ರಮುಖ ಬಂಡುಕೋರ ಗುಂಪುಗಳು ಒಪ್ಪಿಕೊಂಡವು ಮತ್ತು ಪ್ರತಿ ಪ್ರದೇಶದಲ್ಲೂ ಪ್ರಾದೇಶಿಕ ಸಂವಿಧಾನಗಳನ್ನು ರೂಪಿಸಲು ಅವಕಾಶ ನೀಡುವ ಷರತ್ತಿನ ಮೇಲೆ ಅವರು ಕದನ ವಿರಾಮಕ್ಕೆ ಒಪ್ಪಿದರು,

2008ರಲ್ಲಿ ರಾಜ್ಯವು ಪ್ರಸ್ತಾವಿತ ಸಂವಿಧಾನದೊಂದಿಗೆ ಜನಾಭಿಪ್ರಾಯವನ್ನು ಪ್ರಸ್ತಾಪಿಸಿತು. ಹೊಸ ಸಂವಿಧಾನವು ಸಂಸತ್ತಿನ ಶೇ.25 ಸ್ಥಾನಗಳನ್ನು ನಿಯಂತ್ರಿಸುವ ಮೂಲಕ ಮಿಲಿಟರಿಗೆ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಉಪಾಧ್ಯಕ್ಷರಲ್ಲಿ ಒಬ್ಬರನ್ನು ನೇಮಿಸುತ್ತದೆ. ಜನಾಭಿಪ್ರಾಯ ಸಂಗ್ರಹಣೆ ನಡೆಯುವ ಎರಡು ತಿಂಗಳ ಮೊದಲು ಸಂವಿಧಾನವನ್ನು ಬಿಡುಗಡೆ ಮಾಡಲಾಯಿತು. ಈ ಅವಧಿಯಲ್ಲಿ ಪ್ರಮುಖ ಚಂಡಮಾರುತವಾದ ನಾರ್ಗಿಸ್ ಬಂದೆರಗಿತು. ಸಂವಿಧಾನವು ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸಿದೆ, ಸಾರ್ವಜನಿಕ ಚರ್ಚೆಗೆ ಸ್ವಲ್ಪ ಸಮಯವನ್ನು ನೀಡಿದೆ ಮತ್ತು ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಇದು ಸಂಭವಿಸಿದೆ ಎಂದು ಜನಾಭಿಪ್ರಾಯ ಸಂಗ್ರಹಣೆಗೆ ಎನ್‌ಎಲ್‌ಡಿ ಆಕ್ಷೇಪ ವ್ಯಕ್ತಪಡಿಸಿತು.

ಕೊನೆಗೂ ಸಂವಿಧಾನವನ್ನು ಅಂಗೀಕರಿಸಲಾಯಿತು, ಮತ್ತು 2010 ರಲ್ಲಿ ಚುನಾವಣೆಗಳು ನಡೆದವು. ಎನ್‌ಎಲ್‌ಡಿ ಚುನಾವಣೆಯಲ್ಲಿ ಭಾಗವಹಿಸಲು ನಿರಾಕರಿಸಿತು. ಮಿಲಿಟರಿಯೊಂದಿಗೆ ಬಲವಾದ ಸಂಪರ್ಕ ಹೊಂದಿರುವ ಪಕ್ಷವಾದ ಯೂನಿಯನ್ ಸಾಲಿಡಾರಿಟಿ ಅಂಡ್ ಡೆವಲಪ್ಮೆಂಟ್ ಪಾರ್ಟಿ (ಯುಎಸ್‌ಡಿಪಿ) ಚುನಾವಣೆಯಲ್ಲಿ ಜಯ ಗಳಿಸಿತು. 2015ರ ಚುನಾವಣೆಯಲ್ಲಿ ಎನ್‌ಎಲ್‌ಡಿ ಸ್ಪರ್ಧಿಸಿ ಜಯ ಗಳಿಸಿತು.

2020ರ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ನಡೆಯಿತು. ಯುಎಸ್‌ಡಿಪಿ ವಿರುದ್ಧ ಎನ್‌ಎಲ್‌ಡಿ ಹೋರಾಟ ಎಂಬಂತೆ ಈ ಚುನಾವಣೆ ನಡೆಯಿತು. 2020 ರಲ್ಲಿನ ಸೋಲು ಮಿಲಿಟರಿ ಪ್ರಭಾವಕ್ಕೆ ಹೆಚ್ಚು ಸವಾಲು ಒಡ್ಡುವುದಕ್ಕೆ ಸಂಕೇತವಾಗಿತ್ತು. ಇದರ ಪರಿಣಾಮವಾಗಿ, ಮಿಲಿಟರಿ ದಂಗೆಯ ಮೂಲಕ ಅದು ಈಗ ಪ್ರತಿಕ್ರಿಯೆ ನೀಡಿದೆ.

PC : Digis Mak

ಮಯನ್ಮಾರ್ ಕೇಂದ್ರ ಸರ್ಕಾರದ ಬಗ್ಗೆ ಭಾರತ ಯಾವಾಗಲೂ ಹಸ್ತಕ್ಷೇಪ ಮಾಡದ ನೀತಿಯನ್ನು ಹೊಂದಿದೆ. ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಸ್ವ-ನಿರ್ಣಯವು ಪ್ರಮುಖ ತತ್ವಗಳು ಎಂದು ಸತತವಾಗಿ ವಾದಿಸುತ್ತಿರುವುದರಿಂದ ಇದು ಬಹುತೇಕ ವಿಷಯಗಳಲ್ಲಿ ಭಾರತದ ವಿದೇಶಾಂಗ ನೀತಿಗೆ ಅನುಗುಣವಾಗಿದೆ. ಮಯನ್ಮಾರ್‌ನೊಂದಿಗಿನ ಪರಿಸ್ಥಿತಿ ಹೆಚ್ಚು ತಂತ್ರಗಾರಿಕೆಯದ್ದಾಗಿದೆ. 8888ರ ದಂಗೆಯಂತೆ, ಮಯನ್ಮಾರ್‌ನಲ್ಲಿನ ಸಂಘರ್ಷವು ಭಾರತಕ್ಕೆ ನಿರಾಶ್ರಿತರ ಒಳಹರಿವಿಗೆ ಕಾರಣವಾಗಬಹುದು. ಭಾರತ ಅದಕ್ಕೆ ಸಿದ್ಧವಾದಂತೆ ಕಾಣುತ್ತಿಲ್ಲ.

ನೆರೆಯ ರಾಷ್ಟ್ರವಾಗಿ, ಎರಡೂ ಕಡೆಗಳಲ್ಲಿ ಅನೇಕ ಪ್ರತ್ಯೇಕತಾವಾದಿ ಚಳವಳಿಗಳು ಸಂಭವಿಸುತ್ತಿರುವ ಸಂದರ್ಭದಲ್ಲಿ ಭಾರತವು ಮಯನ್ಮಾರ್ ಬಗ್ಗೆ ಖಚಿತ ನಿಲುವು ತೆಗೆದುಕೊಳ್ಳುವುದನ್ನು ತಪ್ಪಿಸಿಕೊಂಡಿದೆ ಧ್ರುವೀಕರಿಸುವ ಕಾಲದಲ್ಲಿ, ಮಯನ್ಮಾರ್ ದೇಶದೊಳಗಿನ ಬಣಗಳು ಚೀನಾದ ಕಡೆಗೆ ಬಾಗುವ ಬಗ್ಗೆ ಭಾರತ ಸರ್ಕಾರ ಕಳವಳದಿಂದಿದ್ದು, ಅದರಿಂದ ತಟಸ್ಥ ನಿಲುವನ್ನು ಇಟ್ಟುಕೊಂಡಿದೆ. ಮಯನ್ಮಾರ್‌ನಲ್ಲಿ ತೈಲ ಮತ್ತು ಅನಿಲದ ದೊಡ್ಡ ಸಂಗ್ರಹವಿದೆ ಮತ್ತು ಭಾರತ ಈ ವ್ಯಾಪಾರಕ್ಕೆ ಕಾಯುತ್ತಿದೆ.

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಈಶ್ವರಪ್ಪನವರು ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...