ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್‌ಡಿಎಂಸಿ) ಚುನಾವಣೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ವ್ಯಕ್ತಿಗೆ ಬೆದರಿಕೆ ಹಾಕಿರುವ ಪ್ರಬಲ ಜಾತಿ ಮುಖಂಡರು, ದಲಿತ ಕುಟುಂಬಕ್ಕೆ ಗ್ರಾಮ ತೊರೆಯುವಂತೆ ಒತ್ತಡ ಹಾಕಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಸೌಂದತ್ತಿ ಬಳಿಯ ಅಟಗಲ್ ಗ್ರಾಮದ ದಲಿತ ವ್ಯಕ್ತಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದು, “ಗ್ರಾಮದ ಕೆಲವರು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಜಾತಿ ದೌರ್ಜನ್ಯ ಎಸಗಿದ್ದಾರೆ. ಸಾಲದ್ದಕ್ಕೆ ತನ್ನ ಪತ್ನಿ ಮತ್ತು ತಾಯಿಯನ್ನು ಅವಮಾನಿಸಿ ಗ್ರಾಮವನ್ನು ತೊರೆಯುವಂತೆ ಒತ್ತಾಯಿಸಿದ್ದಾರೆ” ಎಂದು ಹೇಳಿದ್ದಾರೆ.
ಗುರುವಾರ ನಡೆದ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಚುನಾವಣೆಯ ಸಂದರ್ಭದಲ್ಲಿ ಕೆಲವರು ತನ್ನನ್ನು ಗ್ರಾಮವನ್ನು ತೊರೆಯುವಂತೆ ಒತ್ತಾಯಿಸಲು ಪ್ರಯತ್ನಿಸಿದ್ದಾರೆ ಎಂದು ದುರ್ಗಪ್ಪ ಮಾದರ್ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿಯದಿದ್ದಾಗ, ಅವರು ತಮ್ಮ ಜಾತಿಯ ಹೆಸರಿಡಿದು ನಿಂದಿಸಿ, ತಮ್ಮ ಕುಟುಂಬದೊಂದಿಗೆ ಗ್ರಾಮ ತೊರೆಯಬೇಕು ಎಂದು ಒತ್ತಡ ಹಾಕಿದ್ದಾರೆ ಎಂದು ಹೇಳಿದ್ದಾರೆ.
“ಗ್ರಾಮದಿಂದ ಹೊರಹೋಗದಿದ್ದರೆ ನನ್ನನ್ನು ಕೊಲ್ಲುವುದಾಗಿ ಹಾಗೂ ನನ್ನ ಕುಟುಂಬದ ಮಹಿಳೆಯರನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಅವರು ಹೇಳಿದರು.
ದೂರಿನಲ್ಲಿ ಕೃಷ್ಣ ಗುಡಿಗೆಪ್ಪ, ಸೋಮಲಿಂಗಪ್ಪ, ಹನುಮಂತಪ್ಪ, ನಾಗಪ್ಪ ಆಯೆಟ್ಟಿ ಮತ್ತು ಬಸಪ್ಪ ಆಯೆಟ್ಟಿ ಅವರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ.
ಇದನ್ನೂ ಓದಿ; ಸಂವಿಧಾನ V/s ಮನುವಾದದ ನಡುವಿನ ಸಂಘರ್ಷದ ತಾರ್ಕಿಕ ಹಂತಕ್ಕೆ ಬಂದು ನಿಂತಿದ್ದೇವೆ: ಮಾವಳ್ಳಿ ಶಂಕರ್


