ಪ್ರತಿರೋಧದ ಗೀತೆಯಾಗಿ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿರುವ ‘ಬೆಲ್ಲಾ ಚಾವ್’ ಹಾಡು ಇದೀಗ ರೈತರ ಪ್ರತಿಭಟನೆಯನ್ನೂ ಪ್ರತಿಧ್ವನಿಸುತ್ತಿದೆ. ಇಟಲಿ ಮೂಲದ ಈ ಹಾಡನ್ನು 27 ವರ್ಷದ ಪೂಜನ್ ಸಾಹಿಲ್ ಪಂಜಾಬಿ ಭಾಷೆಗೆ ಅನುವಾದಿಸಿ ಹಾಡಿದ್ದಾರೆ. ಹೋರಾಟನಿರತ ರೈತರೇ ಆರಂಭಿಸಿರುವ ಯೂಟೂಬ್ ಚಾನೆಲ್‌ನಲ್ಲಿ ಇದು ಕೇವಲ ಒಂದು ವಾರದಲ್ಲಿ 2 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿ ದಾಖಲೆ ಮಾಡಿದೆ. ಪ್ರಸ್ತುತ ಈ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ದೆಹಲಿಯ ಶಾಲೆಯೊಂದರಲ್ಲಿ ಗಣಿತ ಪಾಠ ಮಾಡುವ ಸಾಹಿಲ್, “ಸಾಮಾಜಿಕ ಪ್ರಜ್ಞೆಯಿರುವ ಸಂಗೀತಗಾರನಿಗೆ ಭಯ, ನಿಂದನೆ ಮತ್ತು ನಿರಾಶೆಗಳು ಒಂದು ಕೋರ್ಸ್‌ಗೆ ಸಮನಾಗಿರುತ್ತದೆ. ನಮ್ಮ ಪದಗಳು ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರಿಗೆ ಬಲ ನೀಡಿದರೆ ಅದು ಸಾರ್ಥಕವಾದಂತೆ. ಕೇಂದ್ರವು ತನ್ನ ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಲು ಈ ಮೂಲಕ ಒತ್ತಾಯಿಸುತ್ತಿದ್ದೇನೆ” ಎಂದು ಪಿಟಿಐಗೆ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ದೇಶದಾದ್ಯಂತ ನಡೆದ ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ‘ಬೆಲ್ಲಾ ಚಾವ್’ ಹಾಡನ್ನು ಹಿಂದಿಗೆ ಅನುವಾದ ಮಾಡಿ ಹಾಡಲಾಗಿತ್ತು. ಕಳೆದ ಜುಲೈನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ‘ಮನಿ ಹೈಸ್ಟ್’ ವೆಬ್ ಸರಣಿಯಲ್ಲಿ ಈ ಮೂಲ ಹಾಡನ್ನು ಬಳಸಿಕೊಳ್ಳಲಾಗಿತ್ತು. ಇದರಿಂದ ವಿಶ್ವದಾದ್ಯಂತ ಈ ಹಾಡು ಇನ್ನಷ್ಟು ಜನಪ್ರಿಯತೆ ಗಳಿಸಿತು.
ಇದನ್ನೂ ಓದಿ: ಜಾತಿ ದುರಹಂಕಾರ ಮತ್ತು ಮೀಸಲಾತಿ ಬಗ್ಗೆ ಗೌರಿ ಲಂಕೇಶ್ ಬರಹ
“ನಾನು ಈಗಾಗಲೇ ಭಾರತದ ವಿವಿಧ ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ‘ಬೆಲ್ಲಾ ಚಾವ್’ ಹಾಡಿನ ಹಿಂದಿ ಅನುವಾದ ‘ವಾಪಾಸ್ ಜಾವೊ’ ಹಾಡನ್ನು ರಚಿಸಿದ್ದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಂತರ ಇದನ್ನು ಸಿಎಎ ಪ್ರತಿಭಟನೆಗಳಲ್ಲಿ ಹಲವು ಬಾರಿ ಬಳಸಿಕೊಳ್ಳಲಾಗಿದೆ. ಈ ಹಾಡಿನ ಇತಿಹಾಸವನ್ನು ಗಮನಿಸಿದಾಗ ಇದು ರೈತರ ಪ್ರತಿಭಟನೆಗೆ ಚೆನ್ನಾಗಿ ಹೊಂದುತ್ತದೆ ಎಂದು ನಾನು ಭಾವಿಸಿದೆ” ಎಂದು ಸಾಹಿಲ್ ಹೇಳಿದರು.
ಉತ್ತರ ಇಟಲಿಯಲ್ಲಿ 19 ನೇ ಶತಮಾನದ ಉತ್ತರಾರ್ಧದಲ್ಲಿ “ಬೆಲ್ಲಾ ಚಾವ್” (ಗುಡ್‌ಬೈ ಬ್ಯೂಟಿಫುಲ್) ಹಾಡು ಹುಟ್ಟಿಕೊಂಡಿತ್ತು. ಅಲ್ಲಿನ ಮಹಿಳಾ ರೈತರು ಕಠಿಣ ಕೆಲಸದ ಸಂದರ್ಭಗಳಲ್ಲಿ ಇದನ್ನು ಹಾಡುತ್ತಿದ್ದರು. ನಂತರ ಈ ಹಾಡನ್ನು ಫ್ಯಾಸಿಸ್ಟ್ ವಿರೋಧಿ ಗುಂಪುಗಳ ಸದಸ್ಯರು ಎರಡನೇ ವಿಶ್ವಯುದ್ಧದ ಸಮಯದಲ್ಲಿ ಬೆನಿಟೊ ಮುಸೊಲೊನಿ ವಿರುದ್ಧ ಬಳಸಿದ್ದರು. ನಂತರದ ವರ್ಷಗಳಲ್ಲಿ ಇದು ಗ್ರೀಸ್, ಫ್ರಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ನಡೆಯುವ ಎಲ್ಲಾ ಪ್ರತಿಭಟನೆಯಲ್ಲಿಯೂ ಬಳಕೆಗೆ ಬಂತು.
ಇದನ್ನೂ ಓದಿ: ಪ್ರಧಾನಿ ವಿರುದ್ಧ ದನಿಯೆತ್ತಿದರೆ ಮೋಹನ್ ಭಾಗವತ್ ಕೂಡಾ ಭಯೋತ್ಪಾದಕರೇ! – ರಾಹುಲ್ ಗಾಂಧಿ
ಹಾಡಿನ ಪಂಜಾಬಿ ಸಾಹಿತ್ಯದ ಅನುವಾದದಲ್ಲಿ, ಸಾಮಾಜಿಕ ಸಾಮರಸ್ಯ, ನಾಗರಿಕ ಸಮಾಜದ ಅಭಿಯಾನ, ರೈತರ ತ್ಯಾಗ, ಕೇಂದ್ರದ ಕೃಷಿ ಕಾನೂನುಗಳಿಗೆ ವಿರೋಧ, ಪ್ರತಿಭಟನೆ ಮುಂತಾದ ಅಂಶಗಳು ಧ್ವನಿಸಿದೆ.
ದೆಹಲಿ ಮತ್ತು ಹರಿಯಾಣ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 29 ನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ತಮ್ಮ ವಿರೋಧವನ್ನು ಇನ್ನಷ್ಟು ತೀವ್ರಗೊಳಿಸುವ ಉದ್ದೇಶದಿಂದ ಇತ್ತೀಚೆಗೆ ದೇಶದಾದ್ಯಂತ ಉಪವಾಸಕ್ಕೆ ಕರೆ ನೀಡಿದ್ದರು.
ಇದನ್ನೂ ಓದಿ: ಸರ್ವಾಧಿಕಾರಿ ಹಿಟ್ಲರ್ ಮತ್ತು ಆತನ ಬಗೆಗಿನ ಗಮನ ಸೆಳೆದ ವ್ಯಂಗ್ಯಚಿತ್ರಗಳು
ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಅವುಗಳೆಲ್ಲಾ ವಿಫಲವಾಗಿವೆ. ಇತ್ತೀಚೆಗೆ ಈ ವಿಷಯವನ್ನು ಕೈಗೆತ್ತಿಕೊಂಡು ಸುಪ್ರೀಂಕೋರ್ಟ್, ಈ ಕುರಿತು ಶೋಧನೆ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿತ್ತು.
ಜೊತೆಗೆ ರೈತರು ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳಬೇಕಾಗಿಲ್ಲ. ಹೋರಾಟ ಮಾಡುವುದು ಅವರ ಹಕ್ಕು ಎಂದು ಸುಪ್ರೀಂ ಹೇಳಿತ್ತು. ಆದರೆ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ, ಶಾಂತಿಯುತವಾಗಿ ಪ್ರತಿಭಟಿಸುವಂತೆ ಹೇಳಿತ್ತು.
ಇದನ್ನೂ ಓದಿ: ’ಶಗ್ಗಿ ಬೈನ್’ಗೆ ಬುಕರ್: ಜೀವನ ಸಂಘರ್ಷವೇ ಈ ಕತೆಗಾರನ ಜೀವಾಳ ಮತ್ತು ಬಂಡವಾಳ


