Homeಪುಸ್ತಕ ವಿಮರ್ಶೆ’ಶಗ್ಗಿ ಬೈನ್’ಗೆ ಬುಕರ್: ಜೀವನ ಸಂಘರ್ಷವೇ ಈ ಕತೆಗಾರನ ಜೀವಾಳ ಮತ್ತು ಬಂಡವಾಳ

’ಶಗ್ಗಿ ಬೈನ್’ಗೆ ಬುಕರ್: ಜೀವನ ಸಂಘರ್ಷವೇ ಈ ಕತೆಗಾರನ ಜೀವಾಳ ಮತ್ತು ಬಂಡವಾಳ

80 ಮತ್ತು 90ರ ದಶಕದ ಗ್ಲಾಸ್ಗೊ ನಗರದ ಬದುಕನ್ನು ಚಿತ್ರಿಸುವ ಕಾದಂಬರಿ ಇದು. ಗಂಡನಿಲ್ಲದ ಒಂಟಿ ಹೆಣ್ಣು, ಆಕೆಯ ಕುಡಿತದ ಚಟ ಮತ್ತು ಆಕೆಯ ಕಿರಿಯ ಮಗನ ಕತೆಯನ್ನು ಕಟ್ಟಿಕೊಡುತ್ತದೆ.

- Advertisement -
- Advertisement -

ಮೂಲತಃ ಸ್ಕಾಟ್ಲೆಂಡಿನವರಾದ ಸ್ಟುವರ್ಟ್ ಡಗ್ಲಸ್ ಅವರಿಗೆ ಈ ಬಾರಿಯ ಬುಕರ್ ಪ್ರಶಸ್ತಿ ಲಭಿಸಿದೆ. ’ಶಗ್ಗಿ ಬೈನ್’ ಹೆಸರಿನ ಅವರ ಮೊದಲ ಪ್ರಕಟಿತ ಕಾದಂಬರಿಗೆ ಬುಕರ್ ಲಭಿಸಿರುವುದು ಸಾಹಿತ್ಯಲೋಕದಲ್ಲಿ ಬೆರಗು ಮೂಡಿಸಿದೆ. ಈ ಲೇಖಕ ಮತ್ತು ಪುಸ್ತಕ ಕುರಿತ ಸಣ್ಣ ಝಲಕ್ ಇಲ್ಲಿದೆ

ಚಿಕ್ಕವಯಸ್ಸಿಗೆ ಅಪ್ಪ ಕುಟುಂಬವನ್ನೇ ತೊರೆದು ಹೋದ. ಬಡತನದಲ್ಲಿ ಬೇಯುತ್ತಿರುವ ಸಂಸಾರ, ಕುಡಿತಕ್ಕೆ ದಾಸಳಾದ ತಾಯಿ. ಮೂರು ಜನ ಮಕ್ಕಳು. ನಿರುದ್ಯೋಗ, ಬಡತನವೇ ಕಿತ್ತು ತಿನ್ನುತ್ತಿದ್ದ ಕಾಲದಲ್ಲಿ ಕುಡುಕ ತಾಯಿಯ ಜೀವನ ಹೋರಾಟ ಈ ಪುಟ್ಟ ಹುಡುಗನನ್ನು ಕಂಗೆಡಿಸಿತ್ತು. ಹರೆಯಕ್ಕೆ ಕಾಲಿಡುವಷ್ಟರಲ್ಲಿ ತಾಯಿ ಮೂವರು ಮಕ್ಕಳನ್ನು ಅನಾಥರನ್ನಾಗಿಸಿ ಹೋದಳು. ಅತಂತ್ರವೇ ಆಗಿದ್ದ ಆ ಮಕ್ಕಳ ಬದುಕಿಗೆ ಇದು ಆಘಾತವೆಂದರೆ ಕಡಿಮೆಯೇ. ಹೇಗೊ ಹಾಸ್ಟೆಲ್‌ವೊಂದರಲ್ಲಿ ಆಶ್ರಯ ಪಡೆದು ಓದು ಮುಂದುವರೆಸಿದ ಆ ಹುಡುಗನಿಗೆ ಪುಸ್ತಕ-ಬರವಣಿಗೆ-ಸಾಹಿತ್ಯ ಆಕರ್ಷಣೆಯೇನೊ ಆಗಿದ್ದವು. ಯಾವುವೂ ಕೈಗೆಟುಕುವಷ್ಟು ಹತ್ತಿರವಿರಲಿಲ್ಲ. ಒಂದೆಡೆ ಅಸ್ತಿತ್ವ ಆದ್ಯತೆಯಾಗಿತ್ತು, ಇನ್ನೊಂದೆಡೆ ’ನೀನು ಇದಕ್ಕೆ ಅರ್ಹನಲ್ಲ’ ಎಂದು ಅನೇಕರು ತೀರ್ಪು ಕೊಟ್ಟಿದ್ದರು.

PC : Twitter

ಇದು ಯಾವುದೇ ಕಾದಂಬರಿಯ ಸಾಲುಗಳಲ್ಲ. 2020ರ ಬುಕರ್ ಪ್ರಶಸ್ತಿಗೆ ಭಾಜನರಾದ ಸ್ಟುವರ್ಟ್ ಡಗ್ಲಸ್ ಬದುಕಿನ ಬಗ್ಗೆ ಮಾತನಾಡುವಾಗ ಹೇಳಲೇಬೇಕಾದ ಮಾತುಗಳಿವು. ತನ್ನ ನಲವತ್ತು ವರ್ಷಗಳಲ್ಲಿ ಪ್ರೀತಿಯ ಕೊರತೆ, ಸಂಬಂಧಗಳ ಸಂಕೀರ್ಣತೆ, ಬಡತನಗಳ ಜೊತೆಗೆ ಗುದ್ದಾಟಗಳೊಂದಿಗೆ ಬೆಳೆದ ಡಗ್ಲಸ್ ಒಬ್ಬ ಸಾಹಿತಿಯಾಗಿ ಹೊರಹೊಮ್ಮಿದ್ದೆ ಬೆರಗುಗಣ್ಣಿನಿಂದ ನೋಡಬೇಕಾದ ಒಂದು ಕತೆ. ಬಡತನ ಎಷ್ಟರ ಮಟ್ಟಿಗೆ ಇತ್ತೆಂದರೆ ಪುಸ್ತಕಗಳನ್ನು ಊಹಿಸಿಕೊಳ್ಳುವುದು ಕಷ್ಟವಿತ್ತು. ಅಂತಹ ಪರಿಸರದಿಂದ ಬಂದು ಒಬ್ಬ ಲೇಖಕನಾಗಿ ಬೆಳೆದದ್ದು ಆತನಿಗೂ ಅಚ್ಚರಿಯೇ.

“ಮೊದಲನೆಯದಾಗಿ, ನನಗೆ ನಾನೇ ಸಾಬೀತುಮಾಡಿಕೊಳ್ಳುತ್ತಿದೆ. ನಾನು ಯಾವುದೇ ಬರಹಗಾರರ ಕಾರ್ಯಾಗಾರದಲ್ಲಿ ಕಲಿತವನಲ್ಲ. ಬರಹಗಾರರ ಸಮುದಾಯದ ಸಾಮೀಪ್ಯವೂ ಇರಲಿಲ್ಲ. ನನಗೆ ಇಷ್ಟವಾಗುತ್ತಿದ್ದ ಮಾತ್ರಕ್ಕೆ ಬರೆಯುತ್ತಿದೆ. ಏಕೆಂದರೆ ನಾನು ಏನನ್ನೊ ಹೊರಹಾಕಬೇಕಿತ್ತು. ಅದಕ್ಕೆ ಬರೆಯುತ್ತಿದ್ದೆ” ಎಂದು ತನ್ನ ಬರವಣಿಗೆಯ ಮೇಲಿನ ಪ್ರೀತಿ ಹಂಚಿಕೊಳ್ಳುವ ಡಗ್ಲಸ್, “ಇದು ನಂಬಲಸಾಧ್ಯ ಎನಿಸುವಷ್ಟು ಸಮಾಧಾನ ನೀಡುತ್ತದೆ. ನಾನು ಬೆಳೆದು ಬಂದ ಹಿನ್ನೆಲೆಯಿಂದಾಗಿ ಬಹಳಷ್ಟು ವಿಷಯಗಳನ್ನು ಸ್ಪಷ್ಟತೆಯಿಂದ ನೋಡುವಂತೆ ಮಾಡಿತು” ಎಂದು ಬರಹಗಾರನಾಗಿ ಬೆಳೆದ ಬಗೆಯನ್ನು ವಿವರಿಸುತ್ತಾರೆ.

ಹೀಗೆ ಸಾಹಿತ್ಯ ಬರವಣಿಗೆಯ ಮೇಲೆ ಇಷ್ಟೊಂದು ಪ್ರೀತಿ ಹೊಂದಿದ್ದ ಡಗ್ಲಸ್‌ಗೆ ಸಾಹಿತ್ಯ ವ್ಯಾಸಂಗ ಮಾಡುವುದಕ್ಕೆ ಅವಕಾಶ ಸಿಕ್ಕಿರಲಿಲ್ಲ! ಸ್ಕಾಟಿಶ್ ಕಾಲೇಜ್ ಆಫ್ ಟೆಕ್ಸ್‌ಟೈಲ್ಸ್‌ನಲ್ಲಿ ಪದವಿ ಮುಗಿಸಿದ ಡಗ್ಲಸ್‌ಗೆ ಇಂಗ್ಲಿಷ್ ಸಾಹಿತ್ಯ ಓದಬೇಕೆನ್ನುವ ಆಸೆ ಇತ್ತು. ಆದರೆ ಈ ಕೋರ್ಸ್ ಆಯ್ಕೆ ಮಾಡಿಕೊಂಡಾಗ, “ನೀನು ಬೆಳೆದ ಹಿನ್ನೆಲೆಯಲ್ಲಿ ನಿನಗೆ ಸಾಹಿತ್ಯ ಅಧ್ಯಯನ ಸೂಕ್ತವಲ್ಲ”ಎಂದು ಶಿಕ್ಷಕರೊಬ್ಬರು ನಿರಾಶೆ ಉಂಟು ಮಾಡಿದ್ದರಂತೆ. ಅದಕ್ಕೆ ಟೆಕ್ಸ್‌ಟೈಲ್ಸ್ ವ್ಯಾಸಂಗ ಮಾಡಿ ಮುಂದೆ ಲಂಡನ್ ಕಾಲೇಜ್ ಆಫ್ ಆರ್ಟ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು.

ಉದ್ಯೋಗ ಅರಸಿ ಇಂಗ್ಲೆಂಡಿನಿಂದ ಅಮೆರಿಕಕ್ಕೆ ಬಂದ ಡಗ್ಲಸ್ ಫ್ಯಾಷನ್ ಜಗತ್ತಿನಲ್ಲಿ ಅವಕಾಶವೊಂದನ್ನು ಗಿಟ್ಟಿಸಿಕೊಂಡು ದಿನದ 12 ತಾಸು ದುಡಿಮೆ ಮಾಡುತ್ತಾ, ಉಳಿದ ಸಂದರ್ಭಗಳಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲಾರಂಭಿಸಿದರು. ಜಾಗತಿಕ ಸಾಹಿತ್ಯ ಪತ್ರಿಕೆಗಳೆನಿಸಿಕೊಂಡ ದಿ ನ್ಯೂಯಾರ್ಕರ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡವು.

ಮೊದಲ ಪುಸ್ತಕ, ಮೊದಲ ಪ್ರಶಸ್ತಿ

“ಯಾರದೋ ಗಮನ ಸೆಳೆಯುವುದಕ್ಕೆ ಬರೆದದ್ದಲ್ಲ” ಎನ್ನುವುದು ಡಗ್ಲಸ್ ಮಾತು. ತನ್ನ ಒಂಟಿತನ, ಅನಾಥ ಭಾವವನ್ನು ಅಭಿವ್ಯಕ್ತಿಸಲಾಗದ ಅಂತರ್ಮುಖಿ ಡಗ್ಲಸ್. ಇಂಥ ಸ್ವಭಾವದವರಿಗೆ ಸಹಜವಾಗಿಯೇ ಬರವಣಿಗೆ ಆತ್ಮಸಂಗಾತಿಯಾಗಿಬಿಡುತ್ತದೆ. ಹೀಗೆ ತನ್ನ ಒತ್ತಡದ ವೃತ್ತಿಜೀವನದ ನಡುವೆ ಬರೆಯುತ್ತಿದ್ದ ಡಗ್ಲಸ್‌ಗೆ, ’ಶಗ್ಗಿ ಬೈನ್’ ಬರೆದು ಮುಗಿಸಿದ ಮೇಲೆ ಪ್ರಕಟಿಸುವ ಇರಾದೆ ಇರಲಿಲ್ಲ.

“ನಾನು ಪುಸ್ತಕವೇ ಇಲ್ಲದ ಮನೆಯಲ್ಲಿ ಬೆಳೆದವನು. ನಾನು ನೋಡುತ್ತಿದ್ದದ್ದೆ ಕಾರ್ಮಿಕರನ್ನು, ಹಡಗುಕಟ್ಟುವವರನ್ನು. ನನ್ನು ಸುತ್ತಲೂ ಬರವಣಿಗೆ ಮಾಡಿಕೊಂಡಿದ್ದವರನ್ನು ನೋಡಿದ್ದೇ ಇಲ್ಲ” ಎಂದು ಡಗ್ಲಸ್ ವಿವರಿಸುತ್ತಾ, ಬರಹ ಅತ್ಯಂತ ಖಾಸಗಿಯಾದ ಸಂಗತಿ ಎಂಬಂತೆ ಮನವರಿಕೆ ಮಾಡಿಕೊಡುತ್ತಾರೆ.

PC: Wikipedia

ಆತ್ಮಕಥಾನಕದಂತಿರುವ ಈ ಕಾದಂಬರಿಯನ್ನು ಪ್ರಕಟಿಸಲು ನಿರ್ಧರಿಸಿದ ಮೇಲೆ ಇಂಗ್ಲೆಂಡಿನ ಮೂವತ್ತಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆ ಎಡತಾಕಬೇಕಾಗಿ ಬಂದದ್ದೇ ಆಶ್ಚರ್ಯ! 80ರ ದಶಕದ ಜೀವನ ಮತ್ತು ಬಳಸಿದ್ದ ಸ್ಲ್ಯಾಂಗ್ ಇಂಗ್ಲೆಂಡಿನ ಪ್ರಕಾಶಕರಿಗೆ ಅರಗಿಸಿಕೊಳ್ಳಲಾಗಿರಲಿಲ್ಲ. ಎಷ್ಟೋ ಪದಗಳಿಗೆ ಅರ್ಥವೇ ಗೊತ್ತಿಲ್ಲವೆಂದು ಪ್ರಕಟಿಸಲು ತಿರಸ್ಕರಿಸಿದ್ದರು. ಕಡೆಗೆ ಅಮೆರಿಕದ ಪ್ರಕಾಶನ ಸಂಸ್ಥೆ ಗ್ರೋವ್ ಅಟ್ಲಾಂಟಿಕ್ ಈ ಕೃತಿಯನ್ನು ಕೈಗೆತ್ತಿಕೊಂಡು ಪ್ರಕಟಿಸಿತು.

ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾದ ಈ ಕೃತಿ ಕೆಲವೇ ತಿಂಗಳಲ್ಲಿ ವಿಶ್ವದ ಗಮನ ಸೆಳೆಯಿತು. ಲೇಖಕರೊಬ್ಬರ ಚೊಚ್ಚಲ ಕೃತಿ ಇಷ್ಟರ ಮಟ್ಟಿಗೆ ಗಮನಸೆಳೆದ ಉದಾಹರಣೆ ಇತ್ತೀಚಿನ ದಿನಗಳಲ್ಲಿ ಕಂಡಿಲ್ಲ ಎಂದು ಪತ್ರಿಕೆಗಳು ಕೊಂಡಾಡಿದವು.

ಪುಸ್ತಕ ಲೋಕದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಬುಕರ್ ಸೇರಿದಂತೆ ಹಲವು ಸಾಹಿತ್ಯ ಗೌರವಗಳು ಈ ಕೃತಿಗೆ ಸಂದವು.

ಕಾದಂಬರಿಯಲ್ಲಿ ಏನಿದೆ?

80 ಮತ್ತು 90ರ ದಶಕದ ಗ್ಲಾಸ್ಗೊ ನಗರದ ಬದುಕನ್ನು ಚಿತ್ರಿಸುವ ಕಾದಂಬರಿ ಇದು. ಗಂಡನಿಲ್ಲದ ಒಂಟಿ ಹೆಣ್ಣು, ಆಕೆಯ ಕುಡಿತದ ಚಟ ಮತ್ತು ಆಕೆಯ ಕಿರಿಯ ಮಗನ ಕತೆಯನ್ನು ಕಟ್ಟಿಕೊಡುತ್ತದೆ.

ಮಾರ್ಗರೇಟ್ ಥ್ಯಾಚರ್ ಅಧಿಕಾರಾವಧಿಯಲ್ಲಿ ಇಂಗ್ಲೆಂಡಿನಲ್ಲಿ ಆದ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗಳು, ಅದರಿಂದ ಕಾರ್ಮಿಕ ವರ್ಗ ಅನುಭವಿಸಿದ ಸಂಕಷ್ಟಗಳು, ನಿರುದ್ಯೋಗ, ಬಡತನ ಎಲ್ಲವೂ ಕಾದಂಬರಿ ತೀವ್ರವಾಗಿ ವಿವರಿಸುತ್ತದೆ.

ಕಾದಂಬರಿಯ ಬಹುಪಾಲು ಆತ್ಮಕಥಾನಕದಂತೆ ಬಿಚ್ಚಿಕೊಳ್ಳುವುದರಿಂದ ಡಗ್ಲಸ್ ಬಾಲ್ಯದ ಅನುಭವಗಳು ದಟ್ಟವಾಗಿವೆ. ಇಲ್ಲಿ ಗ್ಲಾಸ್ಗೊ ನಗರವೇ ಒಂದು ಪಾತ್ರವಾಗಿ ಆವರಿಸಿಕೊಳ್ಳುತ್ತದೆ.

ಈಗ..

ತಮ್ಮ ಮೊದಲ ಕೃತಿಗೆ ಸಿಕ್ಕಿರುವ ಬೆಂಬಲದಿಂದ ಉತ್ಸಾಹದಲ್ಲಿರುವ ಡಗ್ಲಸ್ ಬರವಣಿಗೆಯಲ್ಲೇ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಇರಾದೆ ಹೊಂದಿದ್ದಾರೆ. ಎರಡನೆಯ ಕಾದಂಬರಿ ’ಲೋಕ್ ಅ’ಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. “ಇದು ತೊಂಬತ್ತರ ದಶಕದ ಇಬ್ಬರು ಯುವಕರ ನಡುವಿನ ಪ್ರೇಮಕತೆ (ಡಗ್ಲಸ್ ಸಲಿಂಗ ವಿವಾಹವಾಗಿದ್ದು, ಮೈಕೆಲ್ ಕ್ಯಾರಿ ಅವರ ಸಂಗಾತಿ, ಗಾಗೊಸಿಯನ್ ಗ್ಯಾಲರಿಯಲ್ಲಿ ಆರ್ಟ್ ಕ್ಯುರೇಟರ್). “ಆದರೆ ಸಂಪ್ರದಾಯವಾದಿಗಳ ಆಕ್ರೋಶದಿಂದಾಗಿ ಈ ಪ್ರೇಮಕತೆ ದುರಂತವನ್ನು ಕಾಣುತ್ತದೆ” ಎಂದು ಡಗ್ಲಸ್ ಇತ್ತೀಚಿನ ಸಂದರ್ಶನಗಳಲ್ಲಿ ವಿವರಿಸಿದ್ದಾರೆ. ಕಳೆದ ವರ್ಷ ಹೆಬ್ರೈಡ್ಸ್‌ನಲ್ಲಿ ಮೂರು ತಿಂಗಳ ಕಾಲ ನಡೆಸಿದ ಸುತ್ತಾಟದ ಫಲ, ಮೂರನೆಯ ಕಾದಂಬರಿಯ ಕೆಲಸವೂ ಶುರುವಾಗಿದೆಯಂತೆ! ಅಲೆದಾಟದ ವೇಳೆ ಸ್ಥಳೀಯರೊಂದಿಗೆ ನಡೆಸಿದ ಮಾತುಕತೆ ಸಂದರ್ಶನಗಳ ಸುಮಾರು 80 ತಾಸುಗಳ ಆಡಿಯೋ ರೆಕಾಡಿಂಗ್ ಇದೆಯಂತೆ! ಬರವಣಿಗೆಯನ್ನು ತಡವಾಗಿ ಆರಂಭಿಸಿದರೂ, ತನ್ನ ತೀವ್ರತೆಯ ಕಥೆಗಳಿಂದ ತಾಕಿರುವ ಡಗ್ಲಸ್ ಈಗ ಬಹು ಚರ್ಚಿತ ಮತ್ತು ಓದಲೇಬೇಕಾದ ಲೇಖಕರ ಸಾಲಿನಲ್ಲಿದ್ದಾರೆ.

’ಶಗ್ಗೀ ಬೈನ್’ ಕಾದಂಬರಿಯಿಂದ ಆಯ್ದ ಸಾಲುಗಳು…

1981. ಗ್ಲಾಸ್ಗೋ ಕುಸಿಯುತ್ತಿತ್ತು ಮತ್ತು ಸಭ್ಯ ಕುಟುಂಬಗಳು ವಂಚಿಸಿ ಬದುಕುತ್ತಿದ್ದವು. ಆಗ್ನೆಸ್ ಬೈನ್‌ಗೆ ಬದುಕಿನ ಬಗ್ಗೆ ಅತೀವವಾದ ನಿರೀಕ್ಷೆ. ಆಕೆಯದ್ದು ದೊಡ್ಡ ದೊಡ್ಡ ಕನಸುಗಳು. ತನ್ನದೇ ಆದ ಮನೆ, ಅದಕ್ಕೆ ಮುಂಬಾಗಿಲು ಮತ್ತು ತಾನು ಬಯಸಿದ್ದನ್ನು ಕೊಳ್ಳುವಂತಹ ಆಕೆಯ ಬದುಕಿನ ಕನಸುಗಳು. ಆದರೆ ಅವಳ ಅಂಡೆಪಿರ್ಕಿ ಗಂಡ, ಆಗ್ನೆಸ್‌ಳನ್ನು ಬಿಟ್ಟುಹೋಗಿದ್ದ. ನಶಿಸಿಹೋಗುತ್ತಿದ್ದ ಗಣಿಯ ಆ ನಗರದಲ್ಲಿ ಅವಳು ಮತ್ತು ಅವಳ ಮೂವರು ಮಕ್ಕಳು ಸಿಲುಕುವಂತಿದ್ದರು.

ಕುಡಿತದ ಚಟದಲ್ಲಿ ಆಳಕ್ಕೆ ಮುಳುಗಿ ಹೋಗುತ್ತಿದ್ದ ಅವಳನ್ನು, ಮಕ್ಕಳು ಕಾಪಾಡಿಕೊಳ್ಳುವುದಕ್ಕೆ ತಮ್ಮಿಂದಾದಷ್ಟು ಪ್ರಯತ್ನ ಮಾಡುತ್ತಲೇ ಇದ್ದರು. ಅದರೂ ಒಬ್ಬರಾದ ಮೇಲೆ ಒಬ್ಬರು ಕೈಚೆಲ್ಲಿಬಿಡುತ್ತಿದ್ದರು. ಆದರೆ ದೀರ್ಘಕಾಲದವರೆಗೆ ಅವಳ ಮೇಲೆ ಭರವಸೆ ಇಟ್ಟು ಜೊತೆಗೆ ಇದ್ದಿದ್ದು ಅವಳ ಕಿರಿಯ ಮಗ ಶಗ್ಗಿ.

ಶಗ್ಗಿ ಸ್ವಲ್ಪ ಭಿನ್ನ. ಕಾಳಜಿಯುಳ್ಳ, ಸೂಕ್ಷ್ಮ ಮನಸ್ಸಿನ, ಯಾವುದೇ ಗಡಿಬಿಡಿಯಿಲ್ಲದ ಹುಡುಗ. ತನ್ನ ತಾಯಿಯ ಶಿಷ್ಟಾಚಾರದ ಪ್ರದರ್ಶನದ ಗುಣ ಇವನಲ್ಲೂ ಇದೆ. ಆದರೆ ಗಣಿ ಕಾರ್ಮಿಕರ ಮಕ್ಕಳು, ವಯಸ್ಕರು ನೀನು ಸರಿ ಇಲ್ಲವೆಂದು ಆಡಿಕೊಳ್ಳುತ್ತಿದ್ದರು. ಆದರೆ ಶಗ್ಗಿಗೆ ತಾನು ಸರಿಯಾಗಿ ಪ್ರಯತ್ನಿಸಿದರೆ, ಇತರೆ ಹುಡುಗರಂತೆ ಆಗಬಲ್ಲೆ ಮತ್ತು ತಾಯಿಯನ್ನು ಈ ನಿರಾಶೆಯ ಜಾಗದಿಂದ ಹೊರಕರೆದುಕೊಂಡು ಬರಬಲ್ಲೆ ಎಂದು ಬಲವಾದ ನಂಬಿಕೆ ಇತ್ತು.

ಆ ದಿನ ತುಂಬಾ ನೀರಸವಾಗಿತ್ತು. ಬೆಳಬೆಳಗ್ಗೆಯೇ ಅವನ ಮನಸ್ಸು ಅವನ ದೇಹವನ್ನು ತೊರೆದು ಅಲೆಯುವುದಕ್ಕೆ ಹೋಗಿತ್ತ. ಖಾಲಿಯಿದ್ದ ಅವನ ದೇಹ ಯಾಂತ್ರಿಕವಾಗಿ ದಿನಚರಿಯಲ್ಲಿ ತೊಡಗಿತ್ತು ಮತ್ತು ಫ್ಲೋರಸೆಂಟ್ ದೀಪಗಳ ಸಾಲಿನಡಿ ಪೇಲವವಾಗಿ ಮತ್ತು ಶೂನ್ಯ ನೋಟ ಬೀರುತ್ತಾ ಅವನು ಕೂತಿದ್ದ. ತೇಲುತ್ತಿದ್ದ ಅವನ ಆತ್ಮಕ್ಕೆ ನಾಳೆಯದ್ದೇ ಯೋಚನೆ. ನಾಳೆಯನ್ನು ನೋಡುವುದಷ್ಟೇ ಆಗಿತ್ತು.

ಶಗ್ಗಿ, ತನ್ನ ಪಾಳಿಯನ್ನು ಹೊಂದಿಸಿಕೊಳ್ಳುವ ಬಗ್ಗೆ ಒಂದು ಪದ್ಧತಿ ಅನುಸರಿಸುತ್ತಿದ್ದ. ಎಣ್ಣೆ ಜಿಡ್ಡಿನಿಂದ ಕೂಡಿದ ಕುಡಿಕೆಗಳ ಮತ್ತು ಚೆಲ್ಲಿದ ಎಣ್ಣೆಯನ್ನು ಸ್ವಚ್ಛಗೊಳಿಸುವುದು ಅವನ ಕೆಲಸ. ಸದಾ ಹೊಳೆಯುವಂತೆ ಕಾಣುವ ಮೇಜಿನ ತುದಿಗಳನ್ನು ಹಾಳು ಮಾಡಿಬಿಡಬಹುದಾದ ಎಣ್ಣೆಯನ್ನು ಒರೆಸುವುದು. ಕತ್ತರಿಸಿದ ಹ್ಯಾಮ್‌ಗಳನ್ನು ಅಂದವಾಗಿ ಜೋಡಿಸುವುದು.

ಶಗ್ಗಿ ಕತ್ತಲಲ್ಲೇ ಕೂತು ಗೋಡೆಗಳಿಂದ ಒಮ್ಮೆ ಜೋರಾಗಿ, ಮತ್ತೊಮ್ಮೆ ಮೆಲ್ಲಗೆ ತೂರಿ ಬರುತ್ತಿದ್ದ ಗೊರಕೆ ಸದ್ದುಗಳನ್ನು ಕೇಳಿಸಿಕೊಳ್ಳುತ್ತಿದ್ದ. ಯಾರೂ ದಿಕ್ಕಿಲ್ಲದ ಆ ಒಂಟಿ ಜನರನ್ನು ಉಪೇಕ್ಷಿಸುವುದಕ್ಕೆ ಮತ್ತೆ ಮತ್ತೆ ಪ್ರಯತ್ನಿಸಿ ಸೋಲುತ್ತಿದ್ದ. ಬೆಳಗಿನ ಚಳಿ ಅವನ ಬೆತ್ತಲೆ ತೊಡೆಗಳನ್ನು ನೀಲಿಗಟ್ಟಿಸಿತ್ತು. ಬೆಚ್ಚಗಿರಲೆಂದು ತೆಳ್ಳನೆಯ ಟವೆಲ್‌ವೊಂದನ್ನು ಸುತ್ತಿಕೊಂಡಿದ್ದ ಮತ್ತು ಮೂಲೆಯಲ್ಲಿ ಒತ್ತಿ ಕೂತು ಕಲ್ಲು ಕಡಿಯುತ್ತಿದ್ದ. ಸೂಪರ್‌ಮಾರ್ಕೆಟ್‌ನಲ್ಲಿ ದುಡಿದ ಸಂಪಾದನೆಯನ್ನು ಟೇಬಲ್ ತುದಿಯಲ್ಲಿ ಜೋಡಿಸಿದ್ದ. ಮೊದಲು ನಾಣ್ಯಗಳನ್ನು ಅವುಗಳ ಮುಖಬೆಲೆಯಂತೆ ಜೋಡಿಸಿದ್ದ. ಪಕ್ಕದ ಕೋಣೆಯಲ್ಲಿದ್ದ ನಸುಗೆಂಪು ಮುಖದ ವ್ಯಕ್ತಿ ಸದ್ದು ಮಾಡಿದ. ಉದ್ದನೆಯ ಹಾಸಿಗೆಯಲ್ಲಿ ಸದ್ದಾಗುವಂತೆ ಕೆರೆದುಕೊಳ್ಳುತ್ತಾ, ಎದ್ದು ನಿಲ್ಲುವುದಕ್ಕೆ ಶಕ್ತಿ ನೀಡುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದ. ಹೆಜ್ಜೆ ನೆಲಕ್ಕೆ ಇಟ್ಟಿದ್ದು, ಅಪ್ಪಳಿಸಿದಂತೆ ಸದ್ದಾಯಿತು. ಮಾಂಸದ ತುಂಡುಗಳಿಂದ ತುಂಬಿದ ಚೀಲ ನೆಲಕ್ಕೆ ಬಿದ್ದಂತೆ. ತಡವರಿಸುತ್ತಾ, ತನಗೆ ರೂಢಿಯಾಗಿದ್ದ ಚಿಲಕವನ್ನು ತೆಗೆಯುತ್ತಾ, ಕತ್ತಲು ತುಂಬಿದ ಹಾಲ್‌ಗೆ ಬಂದ. ಕಣ್ಣು ಬಿಡದೆ ತನ್ನ ದಾರಿಯಲ್ಲಿ ಅಂದಾಜಿನಲ್ಲಿ ಹೆಜ್ಜೆ ಹಾಕುತ್ತಾ, ಗೋಡೆಯನ್ನು ಹಿಡಿದು ಬಂದು ಶಗ್ಗಿ ಬಾಗಿಲ ಮುಂದೆ ಬಿದ್ದ. ಹುಡುಗ ಬೆಚ್ಚಿ ಬಿದ್ದ.


ಇದನ್ನೂ ಓದಿ: ‘ಜನ್ನತ್ ಮೊಹಲ್ಲಾ’: ಮನುಷ್ಯ ಘನತೆಯನ್ನು ಕಾಪಿಡುವ ಸೃಜನಶೀಲ ಪ್ರಯತ್ನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಐತಿಹಾಸಿಕ...