2017 ರಲ್ಲಿ ತೃಣಮೂಲ ಪಕ್ಷ ತೊರೆದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಮತ್ತೆ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದಾಗಿ ಒಂದು ದಿನದ ನಂತರ ಪಶ್ಚಿಮ ಬಂಗಾಳ ಬಿಜೆಪಿ ಮತ್ತೆ ಚಿಂತಿತವಾಗಿದೆ. ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಬಿಜೆಪಿಗೆ ಸೇರಿದ್ದ ಪಶ್ಚಿಮ ಬಂಗಾಳದ ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ, ಟಿಎಂಸಿ ನಾಯಕ ಕುನಾಲ್ ಘೋಷ್ ಅವರನ್ನು ಶನಿವಾರ ಭೇಟಿಯಾಗಿದ್ದಾರೆ. ಈ ಭೇಟಿಯ ಮೂಲಕ ತಮ್ಮ ಹಳೆಯ ಪಕ್ಷಕ್ಕೆ ಮರಳುವ ಊಹಾಪೋಹಗಳಿಗೆ ಅವರು ಮತ್ತಷ್ಟು ಪುಷ್ಠಿ ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜೀಬ್ ಬ್ಯಾನರ್ಜಿ ಅವರು ಡೊಮ್ಜೂರ್‌ನಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಶನಿವಾರ ರಾಜ್ಯ ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಅವರ ನಿವಾಸಕ್ಕೆ ತೆರಳಿದ ರಾಜೀಬ್, ಅಲ್ಲಿ ಸುದೀರ್ಘ ಮಾತುಕರೆ ನಡೆಸಿದ್ದಾರೆ. ಈ ಮಾತುಕತೆಯನ್ನು ಇಬ್ಬರೂ ನಾಯಕರೂ “ಸೌಜನ್ಯ ಮಾತು” ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಮುಕುಲ್ ರಾಯ್ ನಿರ್ಗಮನ: ಬಂಗಾಳ ಬಿಜೆಪಿಯಲ್ಲಿ ಆಂತರೀಕ ಕಲಹ ಆರಂಭ
“ದಯವಿಟ್ಟು ಈ ಭೇಟಿಯನ್ನು ಬೇರೆ ಯಾವುದೆ ದೃಷ್ಠಿಯಿಂದ ನೋಡಬೇಡಿ. ಕುನಾಲ್ ಅವರ ಮನೆಯ ಪಕ್ಕದಲ್ಲಿನ ನನ್ನ ಸಂಬಂಧಿಕರೊಬ್ಬರನ್ನು ನೋಡಲು ನಾನು ಬಂದಿದ್ದೆ. ಇದು ಸೌಜನ್ಯದ ಭೇಟಿಯೆ ಹೊರತು ಬೇರೇನೂ ಅಲ್ಲ. ನಮ್ಮ ನಡುವೆ ಯಾವುದೇ ರಾಜಕೀಯ ಮಾತುಕತೆ ನಡೆದಿಲ್ಲ” ಎಂದು ಕುನಾಲ್ ಘೋಷ್ ಮನೆಯಿಂದ ಹೊರಬರುತ್ತಿರುವಾಗ ರಾಜೀಬ್ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕುನಾಲ್ ಘೋಷ್ ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಕಾಲಿಟ್ಟ ಅನೇಕ ಟಿಎಂಸಿ ನಾಯಕರು ಮಾತೃ ಪಕ್ಷಕ್ಕೆ ಮರಳುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂಬ ಊಹಾಪೋಹಗಳು ಈಗಾಗಲೆ ಹರಿದಾಡುತ್ತಿವೆ.
ಮುಕುಲ್ ರಾಯ್ ಟಿಎಂಸಿಗೆ ಮರಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಮುಕುಲ್ ಅವರೊಂದಿಗೆ ಟಿಎಂಸಿ ತೊರೆದವರನ್ನು ನಾವು ಪರಿಗಣಿಸುತ್ತೇವೆ. ಅವರು ಮತ್ತೆ ಪಕ್ಷಕ್ಕೆ ಮರಳಲಿ ಎಂದು ಬಯಸುತ್ತೇವೆ. ಆದರೆ, ಏಪ್ರಿಲ್-ಮೇ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರಲು ತೆರಳಿದ್ದ ಟಿಎಂಸಿ ರಾಜಕಾರಣಿಗಳು ಮತ್ತು ಕಾರ್ಯಕರ್ತರನ್ನು ಪಕ್ಷಕ್ಕೆ ತೆಗೆದುಕೊಳ್ಳಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಪ್ರಧಾನಿ ಹೇಡಿಯಂತೆ ವರ್ತಿಸುತ್ತಿದ್ದಾರೆ: ಕೋವಿಡ್ ನಿರ್ವಹಣೆ ಕುರಿತು ಮೋದಿ ವಿರುದ್ಧ ಕಿಡಿಕಾರಿದ ಪ್ರಿಯಾಂಕಾ ಗಾಂಧಿ
“ಪಕ್ಷದ ತತ್ವಗಳ (ಬಿಜೆಪಿ) ಬಗ್ಗೆ ನನಗೆ ಖಂಡಿತವಾಗಿಯೂ ತಕರಾರು ಇದೆ. ಇದನ್ನು ನನ್ನ ಪಕ್ಷದ ಮುಖಂಡರಿಗೆ ತಿಳಿಸಿದ್ದೇನೆ. ಆದರೆ ಕುನಾಲ್ ಅವರೊಂದಿಗಿನ ಇಂದಿನ ಸಭೆಗೆ ಅದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ರಾಜೀಬ್ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ರಾಜೀಬ್ ಬ್ಯಾನರ್ಜಿ ಸಾಮಾಜಿಕ ಜಾಲತಾಣದಲ್ಲಿ, “ಭಾರಿ ಜನಾದೇಶದೊಂದಿಗೆ ಚುನಾಯಿತವಾದ ಸರ್ಕಾರದ ವಿರುದ್ಧ ರಾಷ್ಟ್ರಪತಿ ಆಡಳಿತ ಹೇರುವ ಬೆದರಿಕೆಗಳನ್ನು ಹಾಕಬಾರದು” ಎಂದು ಬಿಜೆಪಿಯ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರು.
ಕುನಾಲ್ ಘೋಷ್ ಅವರ ನಿವಾಸಕ್ಕೆ ರಾಜೀಬ್ ಬ್ಯಾನರ್ಜಿ ಪ್ರಯಾಣಿಸಿದ ವಾಹನದಲ್ಲಿ ಟಿಎಂಸಿಯ ಹಲವಾರು ಸ್ಟಿಕ್ಕರ್‌ಗಳು ಮತ್ತು ಶಾಲು ಇದ್ದವು ಎಂದು ವರದಿಯಾಗಿದೆ.
ರಾಜೀಬ್ ಬ್ಯಾನರ್ಜಿ 2011 ಮತ್ತು 2016 ರಲ್ಲಿ ಟಿಎಂಸಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಡಿಪೆಂಡು ಬಿಸ್ವಾಸ್ ಮತ್ತು ಸೋನಾಲಿ ಗುಹಾ ಸೇರಿದಂತೆ ಹಲವಾರು ಟಿಎಂಸಿಯ ಮಾಜಿ ಶಾಸಕರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ನಿರ್ಧಾರಕ್ಕೆ ವಿಷಾದಿಸುತ್ತಾ ಪತ್ರಗಳನ್ನು ಕಳುಹಿಸಿದ್ದು, ಮತ್ತೆ ಟಿಎಂಸಿಗೆ ಸೇರಲು ಪ್ರಯತ್ನಿಸಿದ್ದಾರೆ.
ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಗೆ ಆಪ್ತರಾಗಿದ್ದ ಸೋನಾಲಿ ಗುಹಾ, ಕ್ಯಾಮರಾ ಮುಂದೆ ಮುಖ್ಯಮಂತ್ರಿಯ ಕ್ಷಮೆ ಕೋರಿ ಮನವೊಲಿಸಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಸತ್ಗಾಚಿಯಾದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸೋನಾಲಿ ಗುಹಾ ಅವರು “ಮೀನುಗಳು ನೀರಿನಿಂದ ಹೊರಗುಳಿಯಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೆ ನೀವು ಇಲ್ಲದೆ ನಾನು ಬದುಕಲು ಸಾಧ್ಯವಿಲ್ಲ, ದೀದಿ” ಎಂದು ಪತ್ರದಲ್ಲಿ ಬರೆದಿದ್ದರು.
ಇದನ್ನೂ ಓದಿ: ‘ಬಡತನದ ಸ್ಮಾರಕ’ ಎಂದು ಮೋದಿ ಟೀಕಿಸಿದ್ದ ನರೇಗಾ ಯೋಜನೆಯನ್ನು, ‘ಜೀವಸೆಳೆ’ ಎಂದ ಗುಜರಾತ್ ಸರ್ಕಾರ!


