ಭಾರತದಾದ್ಯಂತ ಸುಮಾರು 122 ಪ್ರಕರಣಗಳಲ್ಲಿ ಬೇಕಾಗಿದ್ದ 10 ಸೈಬರ್ ವಂಚಕರನ್ನು ಬೆಂಗಳೂರು ಉತ್ತರ ಸೆನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಆನ್‌ಲೈನ್ ಟಾಸ್ಕ್ ಮೂಲಕ ಅಥವಾ ಆನ್‌ಲೈನ್ ಉದ್ಯೋಗ ವಂಚನೆಯ ಮೂಲಕ ಜನರನ್ನು ವಂಚಿಸುತ್ತಿದ್ದರು. ಪ್ರಕರಣದ ಕಿಂಗ್‌ಪಿನ್‌ಗಳು ಚೀನಾದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.122 ಪ್ರಕರಣಗಳಿಗೆ ಬೇಕಾಗಿದ್ದ 10 ಸೈಬರ್ ವಂಚಕರ ಬಂಧನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
10 ಆರೋಪಿಗಳ ಪೈಕಿ ಮೂವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಮೂಲಕ ಬಂಧಿಸಲಾಗಿದೆ. ಆರೋಪಿಗಳು ಪೀಣ್ಯದ ನೆಲಗದರನಹಳ್ಳಿಯಲ್ಲಿರುವ ಕಚೇರಿ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ. ಮಹಿಳೆಯೊಬ್ಬರು ಸುಮಾರು 25 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಅವರು ಜುಲೈ 3, 2024 ರಂದು ಸೆನ್ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಅನ್ವಯ ಆರೋಪಿಗಳ ಬಂಧನ ನಡೆದಿದೆ.
ಸೆನ್ ಪೊಲೀಸರು 72 ಮೊಬೈಲ್ ಫೋನ್‌ಗಳು, 182 ಡೆಬಿಟ್ ಕಾರ್ಡ್‌ಗಳು, ವಿವಿಧ ಟೆಲಿಕಾಂ ಆಪರೇಟರ್‌ಗಳ 133 ಸಿಮ್ ಕಾರ್ಡ್‌ಗಳು, 127 ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು 1.74 ಲಕ್ಷ ರೂ ನಗದು ಹಾಗೂ ಆರೋಪಿಗಳು ಸಂತ್ರಸ್ತರಿಗೆ ವಂಚಿಸಲು ಬಳಸಿದ ಖಾತೆಗಳಲ್ಲಿ 7.34 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.
ಇದನ್ನೂಓದಿ: ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತರಲು ರಾಜ್ಯಗಳು ಅಡ್ಡಿ: ಕೇಂದ್ರ ಸಚಿವ
ಆರೋಪಿಗಳನ್ನು ಓಂ ಪ್ರಕಾಶ್, ಸೈಯದ್ ಯಾಹ್ಯಾ, ತೇಜಸ್, ಉಮರ್ ಫಾರೂಕ್, ಚೇತನ್, ಮೊಹಮ್ಮದ್ ಮಾಹೀನ್, ಮೊಹಮ್ಮದ್ ಮುಝಮ್ಮಿಲ್, ವಾಸಿಂ, ಸೈಯದ್ ಜೈದ್ ಮತ್ತು ಸಾಹಿ ಅಬ್ದುಲ್ ಅನನ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ, ಆರೋಪಿಗಳು 122 ಪ್ರಕರಣಗಳಲ್ಲಿ ಬೇಕಾಗಿದ್ದಾರೆ.
ಆರೋಪಿಗಳು ಸಾಮಾಜಿಕ ಮಾಧ್ಯಮದ ಮೂಲಕ ಸಂತ್ರಸ್ತರನ್ನು ಸಂಪರ್ಕಿಸಿ, ಆನ್‌ಲೈನ್‌ನಲ್ಲಿ ನೀಡಿದ ಕೆಲಸವನ್ನು ಪೂರ್ಣಗೊಳಿಸಲು ಹೇಳಿ ಪಾವತಿ ಮಾಡುವುದಾಗಿ ಆಮಿಷವೊಡ್ಡುತ್ತಿದ್ದರು. ಆಸಕ್ತರಾದ ಸಂತ್ರಸ್ತರನ್ನು ಆರೋಪಿಗಳು ರಚಿಸಿದ ಟೆಲಿಗ್ರಾಂ ಗುಂಪುಗಳಿಗೆ ಸೇರಿಸಲಾಗುತ್ತಿತ್ತು.
ಆರೋಪಿಗಳು ಮೊದಲು ಐಷಾರಾಮಿ ಹೋಟೆಲ್‌ಗಳ ರಿವೀವ್ ಬರೆಯುವಂತೆ ಮತ್ತು ಅದಕ್ಕಾಗಿ 150 ರಿಂದ 200 ರೂಪಾಯಿಗಳನ್ನು ನೀಡುವ ಮೂಲಕ ಸಂತ್ರಸ್ತರ ವಿಶ್ವಾಸವನ್ನು ಗಳಿಸುತ್ತಿದ್ದರು. ಸಂತ್ರಸ್ತರನ್ನು ಬಲೆಗೆ ಬೀಳಿಸಲು ಹೆಚ್ಚುವರಿ ಬೋನಸ್‌ಗಳನ್ನು ಸಹ ನೀಡಲಾಗುತ್ತಿತ್ತು.
ಅವರ ವಿಶ್ವಾಸವನ್ನು ಗಳಿಸಿದ ನಂತರ, ಹೆಚ್ಚಿನ ಲಾಭಕ್ಕಾಗಿ ಕ್ರಿಪ್ಟೋಕರೆನ್ಸಿ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಸಂತ್ರಸ್ತರನ್ನು ಕೇಳಲಾಗುತ್ತಿತ್ತು. ಅದರಂತೆ ಬಾಗಲಗುಂಟೆಯ ಟಿ ದಾಸರಹಳ್ಳಿ ನಿವಾಸಿ ಮಹಿಳೆ 25 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಪ್ರಕರಣ ದಾಖಲಿಸಿದ್ದರು.122 ಪ್ರಕರಣಗಳಿಗೆ ಬೇಕಾಗಿದ್ದ 10 ಸೈಬರ್ ವಂಚಕರ ಬಂಧನ
ಬೆಂಗಳೂರಿನಲ್ಲಿ ಬ್ಯಾಂಕ್ ಖಾತೆಗಳ ಮೂಲಕ ವಹಿವಾಟು ನಡೆದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಖಾತೆಗಳ ವಿವರಗಳನ್ನು ಆಧರಿಸಿ, ಏಳು ಆರೋಪಿಗಳನ್ನು ಮೊದಲು ಆರ್‌ಟಿ ನಗರ ಬಳಿ ಬಂಧಿಸಲಾಯಿತು. ಅವರು ಚೀನಾದ ಕಿಂಗ್‌ಪಿನ್‌ಗಳ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು. ಚೀನಾಕ್ಕೆ ತೆರಳಿದ್ದ ಇತರ ಮೂವರು ಆರೋಪಿಗಳು ಸೆ.15ರಂದು ವಾಪಸ್ ಬಂದಾಗ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಪೊಲೀಸರು ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪೀಣ್ಯದಲ್ಲಿರುವ ಅವರ ಕಚೇರಿ ಮೇಲೂ ಪೊಲೀಸರು ದಾಳಿ ನಡೆಸಿ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ಮೂವರು ಸಂಪಿಗೆಹಳ್ಳಿಯ ಪಿಜಿ ಸೌಲಭ್ಯದಲ್ಲಿ ತಂಗಿದ್ದು, ದಾಳಿ ನಡೆಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ತಂಡದ ವಿರುದ್ಧ ಆಂಧ್ರಪ್ರದೇಶ, ಒಡಿಶಾ, ದೆಹಲಿ, ಗುಜರಾತ್, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
ವಿಡಿಯೊ ನೋಡಿ: ದಲಿತರಿಗೆ ಅಧಿಕಾರ ಸಿಕ್ಕಾಗ ಕೇಳುವಷ್ಟು ಪ್ರಶ್ನೆಗಳನ್ನು ಬೇರೆಯವರಿಗೆ ಸಿಕ್ಕಾಗ ಕೇಳಲ್ಲ: ಹೆಚ್.ಡಿ. ಉಮಾಶಂಕರ


