ಸುಮಾರು ಮೂರು ತಿಂಗಳ ಕಾಲ ಕನಿಷ್ಠ 15 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ಶುಕ್ರವಾರ ವರದಿ ಮಾಡಿದೆ.
54 ವರ್ಷದ ಆಂಜನಪ್ಪ, ನಗರದ ಹೆಬ್ಬಾಳ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದನು. ತರಗತಿ ವೇಳೆ ಮತ್ತು ಊಟದ ವಿರಾಮದ ಸಮಯದಲ್ಲಿ ವಿದ್ಯಾರ್ಥಿಗಳನ್ನು ಅನುಚಿತವಾಗಿ ಈತ ಸ್ಪರ್ಶಿಸುತ್ತಿದ್ದನು. ಕೆಲವು ವಿದ್ಯಾರ್ಥಿಗಳಿಗೆ ಚುಂಬಿಸುತ್ತಿದ್ದನು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಆಂಜನಪ್ಪನ ವರ್ತನೆಯ ಬಗ್ಗೆ ಪೋಷಕರಿಗೆ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ದಿಲೀಪ್ ಕುಮಾರ್ ಕೆ.ಎಚ್. ಮಾಹಿತಿ ನೀಡಿದ್ದಾರೆ.
ಮಕ್ಕಳು ತಮ್ಮ ಪೋಷಕರಲ್ಲಿ ವಿಷಯ ತಿಳಿಸಿದ ಬಳಿಕ ಶಾಲೆಯ ಮುಖ್ಯೋಪಾಧ್ಯಾಯರ ಬಳಿ ವಿಷಯ ತಲುಪಿತು. ಅವರು ಆರೋಪದ ಬಗ್ಗೆ ತನಿಖೆ ಆರಂಭಿಸಿದ್ದರು.
ಆಂತರಿಕ ವಿಚಾರಣೆಯಲ್ಲಿ ಆರೋಪಗಳು ಪ್ರಾಥಮಿಕವಾಗಿ ನಿಜವೆಂದು ತೀರ್ಮಾನಿಸಿದ ನಂತರ ಮುಖ್ಯೋಪಾಧ್ಯಾಯರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
“ದೈಹಿಕ ಶಿಕ್ಷಕ ಆಂಜನಪ್ಪ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ” ಎಂದು ಇನ್‌ಸ್ಪೆಕ್ಟರ್ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ವಿದ್ಯಾರ್ಥಿಗಳ ಹಲವಾರು ದೂರುಗಳ ನಡುವೆ, ಮುಖ್ಯೋಪಾಧ್ಯಾಯರು ತನಿಖೆ ನಡೆಸಿದ್ದರು. ಅಂತಿಮವಾಗಿ ಮಂಗಳವಾರ ರಾತ್ರಿ ಪೊಲೀಸರನ್ನು ಸಂಪರ್ಕಿಸಿದ್ದರು.
ಬುಧವಾರ ಶಿಕ್ಷಕನನ್ನು ಬಂಧಿಸಲಾಗಿದೆ. ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾನೂನು ಹಾಗೂ ಐಪಿಸಿ ಸೆಕ್ಷನ್ 354 ಅಡಿಯಲ್ಲಿ ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿರಿ: ಮಂಡ್ಯ: ಟ್ಯೂಷನ್‌ಗೆ ಬಂದಿದ್ದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ ಶಿಕ್ಷಕ
ಮಂಡ್ಯದ ಮಳವಳ್ಳಿಯಲ್ಲಿ ಟ್ಯೂಷನ್‌ಗೆಂದು ತೆರಳಿದ್ದ 6ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಶಿಕ್ಷಕನೇ ಕೊಂದಿದ್ದ ಘಟನೆ ಇತ್ತೀಚೆಗೆ ವರದಿಯಾಗಿತ್ತು.
ಶಿಕ್ಷಕ ಕಾಂತರಾಜು ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಆರೋಪಿ ಕಾಂತರಾಜು ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದವನಾಗಿದ್ದು, ಕಳೆದ 15 ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದ. ಬಾಲಕಿಯನ್ನು ಆರೋಪಿಯು ಚಾಕೊಲೇಟ್ ನೀಡುವುದಾಗಿ ಪುಸಲಾಯಿಸಿ ಕರೆದೊಯ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾಗಿ ತಿಳಿದು ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಶಿಕ್ಷಕ ಇಂತಹದ್ದೇ ಅಪರಾಧದಲ್ಲಿ ಸಿಕ್ಕಿಬಿದ್ದಿದ್ದಾನೆ.


