ರಾಮನಗರ ಜಿಲ್ಲೆ ಕನಕಪುರ ಬಳಿಯ ಡಾ.ಚಂದ್ರಮ್ಮ ದಯಾನಂದಸಾಗರ ವಿಶ್ವವಿದ್ಯಾಲಯದ ನರ್ಸಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಕೇರಳ ಮೂಲದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಅನಾಮಿಕ ವಿನೀತ್ (19) ಮಂಗಳವಾರ (ಫೆ.4) ಸಾವಿಗೀಡಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪುತ್ರಿಯ ಸಾವಿಗೆ ಕಾಲೇಜಿನ ಆಡಳಿತ ಮಂಡಳಿಯ ಕಿರುಕುಳವೇ ಕಾರಣ ಎಂದು ಆರೋಪಿಸಿ ಅನಾಮಿಕ ಅವರ ಪೋಷಕರು ನೀಡಿರುವ ದೂರಿನ ಮೇರೆಗೆ ಕಾಲೇಜಿನ ಪ್ರಾಚಾರ್ಯ ಮತ್ತು ಆಡಳಿತ ಮಂಡಳಿ ಸಿಬ್ಬಂದಿ ವಿರುದ್ದ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಬುಧವಾರ (ಫೆ.5) ಪ್ರಕರಣ ದಾಖಲಾಗಿದೆ.
ಅನಾಮಿಕ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ವಿರುದ್ದ ಕಾಲೇಜಿನ ಆವರಣದಲ್ಲಿ ಬುಧವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದ್ದಾರೆ. ಅನಾಮಿಕ ಸಾವಿಗೆ ಕಾರಣರಾದವರ ವಿರುದ್ದ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ಮುಝಪ್ಪಿಲನಗರ ಗ್ರಾಮದ ನಿವಾಸಿ ಅನಾಮಿಕ ದಯಾನಂದಸಾಗರ ವಿವಿಯ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಮಂಗಳವಾರ ರಾತ್ರಿ ಅನಾಮಿಕ ಊಟಕ್ಕೆ ಬಂದಿರಲಿಲ್ಲ. ಸಹಪಾಠಿಗಳು ಆಕೆಯ ಕೊಠಡಿಯ ಬಾಗಿಲು ಬಡಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ನಂತರ ಕಿಟಕಿ ಬಾಗಿಲು ತೆರೆದು ನೋಡಿದಾಗ ಅನಾಮಿಕ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ವಿದ್ಯಾರ್ಥಿಗಳು ಈ ವಿಷಯವನ್ನು ತಕ್ಷಣ ವಾರ್ಡನ್‌ಗೆ ತಿಳಿಸಿದ್ದಾರೆ. ಅವರು ಆಡಳಿತ ಮಂಡಳಿ ಗಮನಕ್ಕೆ ತಂದು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ವರದಿಗಳ ಪ್ರಕಾರ, ರೂಮ್‌ಮೇಟ್ ಅನಾರೋಗ್ಯ ನಿಮಿತ್ತ ರಜೆಯಲ್ಲಿದ್ದ ಕಾರಣ, ಕಳೆದ 15 ದಿನಗಳಿಂದ ಅನಾಮಿಕ ಅವರು ತಮ್ಮ ಹಾಸ್ಟೆಲ್ ಕೋಣೆಯಲ್ಲಿ ಒಬ್ಬಂಟಿಯಾಗಿ ಇದ್ದರು.
ಆಂತರಿಕ ಪರೀಕ್ಷೆಯ ಸಮಯದಲ್ಲಿ ಮೊಬೈಲ್ ಫೋನ್ ಹೊಂದಿರುವುದು ಪತ್ತೆಯಾದ ನಂತರ ಅನಾಮಿಕಾಳನ್ನು ಕಾಲೇಜಿಗೆ ಹೋಗದಂತೆ ನಿರ್ಬಂಧಿಸಲಾಗಿತ್ತು ಎಂದು ವರದಿಯಾಗಿದೆ.
ಅನಾಮಿಕ ಅವರ ಕೊಠಡಿಯಲ್ಲಿ ವಿದ್ಯಾರ್ಥಿನಿಯರಿಗೆ ಎರಡು ಪತ್ರಗಳು ದೊರೆತಿವೆ. ಒಂದು ಆಕೆಯ ಕುಟುಂಬವನ್ನು ಉದ್ದೇಶಿಸಿ ಬರೆದಿದ್ದರೆ, ಇನ್ನೊಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಿಂದ ಆಕೆ ಅನುಭವಿಸಿದ ಕಿರುಕುಳದ ಬಗ್ಗೆ ವಿವರಿಸಿದೆ. ಆದಾಗ್ಯೂ, ಆಡಳಿತ ಮಂಡಳಿಯ ವಿರುದ್ಧದ ಆರೋಪಗಳನ್ನು ಒಳಗೊಂಡ ಪತ್ರವು ಕಾಣೆಯಾಗಿದೆ ಎಂದು ವಿದ್ಯಾರ್ಥಿಗಳು ಹೇಳಿಕೊಳ್ಳುತ್ತಿದ್ದಾರೆ, ಇದು ಮತ್ತಷ್ಟು ಕಳವಳವನ್ನು ಹುಟ್ಟು ಹಾಕಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಅನಾಮಿಕ ಅವರ ಕುಟುಂಬಸ್ಥರು ಮತ್ತು ಸಹ ವಿದ್ಯಾರ್ಥಿಗಳು ಕಾಲೇಜು ಅಧಿಕಾರಿಗಳು ಆಕೆಯನ್ನು ತೀವ್ರ ಮಾನಸಿಕ ಯಾತನೆಗೆ ಒಳಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ಕಳೆದ ಕೆಲವು ದಿನಗಳಲ್ಲಿ, ಪ್ರಾಂಶುಪಾಲರಿಂದ ಆಕೆ ತೀವ್ರ ಮಾನಸಿಕ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಪ್ರಾಂಶುಪಾಲರು, ಇತರ ಇಬ್ಬರು ಶಿಕ್ಷಕರೊಂದಿಗೆ ಸೇರಿ ಆಕೆಯನ್ನು ಮಾತಿನ ಮೂಲಕ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಾರೆ. ಆಕೆ ಇತ್ತೀಚೆಗೆ ತರಗತಿಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದರು” ಎಂದು ವಿದ್ಯಾರ್ಥಿನಿಯೊಬ್ಬಳು ಮಾಧ್ಯಮಗಳಿಗೆ ತಿಳಿಸಿದ್ದಾಗಿ ವರದಿ ವಿವರಿಸಿದೆ.
ವಿಶ್ವವಿದ್ಯಾನಿಲಯದ ಮಲಯಾಳಿ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ವಿಧಿಸಲಾಗಿರುವ ನಿರ್ಬಂಧಿತ ನೀತಿಗಳ ಬಗ್ಗೆ, ವಿಶೇಷವಾಗಿ ಮೊಬೈಲ್ ಫೋನ್ ಬಳಕೆಗೆ ಸಂಬಂಧಿಸಿದ ಬಗ್ಗೆ ಮಾತನಾಡಿದ್ದಾರೆ. ನಿರ್ಬಂಧಗಳ ಪ್ರಕಾರ, ಎಲ್ಲಾ ವಿದ್ಯಾರ್ಥಿಗಳು ಕಾಲೇಜು ಅವಧಿ ಪ್ರಾರಂಭವಾದಾಗ ತಮ್ಮ ಮೊಬೈಲ್ ಫೋನ್‌ಗಳನ್ನು ಕಾಲೇಜು ಸಿಬ್ಬಂದಿ ಕೈಗೆ ಕೊಡಬೇಕು. ಆಡಳಿತ ಮಂಡಳಿಯ ನಿಯಮಗಳು ಕಠಿಣವಾಗಿವೆ ಎಂದು ಮಲಯಾಳಿ ವಿದ್ಯಾರ್ಥಿಗಳು ಆರೋಪಿಸಿದ್ದಾಗಿ ನ್ಯೂಸ್ ಮಿನಿಟ್ ವರದಿ ಹೇಳಿದೆ.
ಪುತ್ರಿಗೆ ತೊಂದರೆ ನೀಡುತ್ತಿದ್ದ ಕಾಲೇಜಿನ ಪ್ರಾಂಶುಪಾಲರು ಆಕೆಯನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ವಿದ್ಯಾರ್ಥಿನಿ ತಂದೆ ವಿನೀತ್ ಕುಮಾರ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪ್ರಜಾವಾಣಿ ವರದಿ ತಿಳಿಸಿದೆ.
ನಾಲ್ಕು ತಿಂಗಳ ಹಿಂದೆ ಕಾಲೇಜಿಗೆ ಸೇರಿದ್ದ ಅನಾಮಿಕ ಒಂದೆರಡು ವಿಷಯದಲ್ಲಿ ಹಿಂದುಳಿದಿದ್ದರು. ಇದನ್ನೇ ನೆಪ ಮಾಡಿಕೊಂಡು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಅವರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಒಂದು ವಿಷಯದಲ್ಲಿ ಫೇಲಾದರೆ ಇಂತಿಷ್ಟು ಹಣ ಪಾವತಿಸಬೇಕು. ಇಲ್ಲದಿದ್ದರೆ ವರ್ಷದ ಪೂರ್ಣ ಶುಲ್ಕ ಪಾವತಿಸಬೇಕು ಎಂದು ತೊಂದರೆ ಕೊಡುತ್ತಿದ್ದರು. ಕಾಲೇಜು ತೊರೆಯಲು ಮುಂದಾಗಿದ್ದ ಅನಾಮಿಕ ವರ್ಗಾವಣೆ ಪತ್ರ ಕೇಳಿದಾಗ ನಾಲ್ಕು ವರ್ಷದ ಶುಲ್ಕ ಪಾವತಿಸಿದರೆ ಕೊಡುವುದಾಗಿ ಹೇಳಿದ್ದರು. ಇದರಿಂದ ತೀವ್ರ ನೊಂದಿದ್ದ ಅನಾಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ದೂರಿದ್ದಾಗಿ ವರದಿ ವಿವರಿಸಿದೆ.
ಕಿರುಕುಳ ಆರೋಪದ ಮೇಲೆ ಅನಾಮಿಕ ಪೋಷಕರು ನೀಡಿದ ದೂರಿನ ಮೇರೆಗೆ ಕಾಲೇಜು ಪ್ರಾಚಾರ್ಯ ಮತ್ತು ಆಡಳಿತ ಮಂಡಳಿ ಸಿಬ್ಬಂದಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 108ರಡಿ (ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಅನಾಮಿಕ ಅವರ ಸಾವು ಆತ್ಮಹತ್ಯೆಯಿಂದ ಆಗಿದೆ ಎಂದು ವರದಿಗಳು ಹೇಳಿವೆ. ಅದು ಆತ್ಮಹತ್ಯೆಯೂ.. ಕೊಲೆಯೂ? ಅಥವಾ ಇನ್ಯಾವುದೇ ಕಾರಣಕ್ಕೆ ಸಾವಾಗಿದೆಯೂ ಇನ್ನೂ ಖಚಿತವಾಗಿಲ್ಲ. ಪ್ರಕರಣದ ತನಿಖೆ ಪ್ರಗತಿಯಲ್ಲಿರುವುದರಿಂದ ನಾವು ಇತ್ಯರ್ಥಕ್ಕೆ ಬರಲು ಸಾಧ್ಯವಿಲ್ಲ. ಹಾಗಾಗಿ, ‘ಆತ್ಮಹತ್ಯೆ’ ಬದಲಾಗಿ ಸುದ್ದಿಯಲ್ಲಿ ‘ಅಸಹಜ ಸಾವು’ ಎಂದಷ್ಟೇ ಉಲ್ಲೇಖಿಸಲಾಗಿದೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಯುಜಿಸಿ ಕರಡು ನಿಯಮಕ್ಕೆ ವಿರೋಧ : ಉನ್ನತ ಶಿಕ್ಷಣ ಸಚಿವರ ಸಮಾವೇಶದಲ್ಲಿ 15 ಅಂಶಗಳ ನಿರ್ಣಯ


