ಬೆಂಗಳೂರಿನಲ್ಲಿ ಯಾವುದೇ ಸಂಚಾರಿ ನಿಯಮ ಉಲ್ಲಂಘನೆಯಾಗದಿದ್ದರೂ ವಾಹನ ಸವಾರರನ್ನು ತಡೆದು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಟ್ರಾಫಿಕ್ ಪೊಲೀಸರ ವಿರುದ್ಧ ಪದೇ ಪದೇ ಆರೋಪ ಕೇಳಿ ಬರುತ್ತಿತ್ತು. ಈ ಹಿನ್ನೆಲೆ ಡಿಜಿ, ಐಜಿಪಿ ಪ್ರವೀಣ್ ಸೂದ್, ಎಲ್ಲೆಂದರಲ್ಲಿ ವಾಹನ ತಡೆದು ಪರಿಶೀಲಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಅನವಶ್ಯಕವಾಗಿ ಯಾವುದೇ ಸಂಚಾರಿ ನಿಯಮ ಉಲ್ಲಂಘಟನೆಯಾಗದಿದ್ದರೂ ವಾಹನಗಳನ್ನು ತಡೆದು ದಾಖಲೆ ಪರಿಶೀಲನೆ ನಡೆಸಲಾಗುತ್ತಿತ್ತು. ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಅಧಿಕವಾಗಿತ್ತು. ಇದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಮಂದಿ ಆಕ್ರೋಶ ಹೊರಹಾಕಿದ್ದರು.
ಈ ಹಿನ್ನೆಲೆ ಸಭೆ ನಡೆಸಿದ ಡಿಜಿಪಿ ಪ್ರವೀಣ್ ಸೂದ್ ಬಳಿಕ ಆದೇಶ ಹೊರಡಿಸಿದ್ದಾರೆ. “ನಾನು ಮತ್ತೊಮ್ಮೆ ಪುನರುಚ್ಚರಿಸುತ್ತೇನೆ. ಕಣ್ಣಿಗೆ ಕಾಣುವ ಸಂಚಾರಿ ನಿಯಮ ಉಲ್ಲಂಘನೆ ಹೊರತು ಪಡಿಸಿ ಯಾವುದೇ ವಾಹನವನ್ನು ದಾಖಲೆಗಳನ್ನು ಪರಿಶೀಲಿಸಲು ಮಾತ್ರವೇ ನಿಲ್ಲಿಸುವಂತಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಪಠ್ಯ ಪರಿಷ್ಕರಣೆ: 8 ತಪ್ಪು ತಿದ್ದಲು ಮುಂದಾದ ಸರ್ಕಾರ; ಹಾಗೆಯೇ ಉಳಿದ ಸಾಲು ಸಾಲು ಎಡವಟ್ಟು!
I reiterate again… no vehicle SHALL BE STOPPED merely for checking documents unless it has committed a traffic violation visible to the naked eye. Only exception is drunken driving. Have instructed @CPBlr & @jointcptraffic for its implementation immediately.
— DGP KARNATAKA (@DgpKarnataka) June 27, 2022
ಕುಡಿದು ವಾಹನ ಚಲಾಯಿಸುವವರನ್ನು ಹೊರತು ಪಡಿಸಿ, ಈ ಆದೇಶವನ್ನು ತಕ್ಷಣದಿಂದಲೇ ಅನುಷ್ಠಾನಕ್ಕೆ ತರುವಂತೆ ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಮತ್ತು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅವರಿಗೆ ಸೂಚನೆ ನೀಡಲಾಗಿದೆ.
ಟ್ರಾಫಿಕ್ ಪೊಲೀಸರು ಕೇವಲ ದಾಖಲೆಗಳನ್ನು ಪರಿಶೀಲಿಸಲು ವಾಹನಗಳನ್ನು ನಿಲ್ಲಿಸಬಾರದು ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರ ಆದೇಶ ಇದು ಮೊದಲೇನಲ್ಲ.
2021 ರ ಡಿಸೆಂಬರ್‌ನಲ್ಲಿಯೂ ಸಹ, ದಾಖಲೆಗಳನ್ನು ಪರಿಶೀಲಿಸಲು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಬಾರದು. ವಾಹನ ಸವಾರರಿಗೆ ಕಿರುಕುಳ ನೀಡುವುದು, ಅವರಿಗೆ ವಿಳಂಬವಾದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದರು.
ಯಾವುದೇ ಕಾರಣಕ್ಕೂ ವಾಹನಗಳನ್ನು ಸುಖಾಸುಮ್ಮನೆ ನಿಲ್ಲಿಸುವುದು ಸರಿಯಲ್ಲ. ನಗರದಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದು ಅಂದಿನ ನಗರ ಪೊಲೀಸ್ ಮುಖ್ಯಸ್ಥ ಕಮಲ್ ಪಂತ್ ಹೇಳಿದ್ದರು. ಆದರೂ ರಸ್ತೆಯಲ್ಲಿ ವಾಹನಗಳಿಗೆ ಪೊಲೀಸರು ಅಡ್ಡ ಹಾಕುವುದು ನಡೆಯುತ್ತಲೇ ಇತ್ತು.
ಇದನ್ನೂ ಓದಿ: ಸಂಪತ್ತು ಅನುಭವಸಿದವರೇ ಮೀಸಲಾತಿ ವಿರೋಧಿಸುತ್ತಿದ್ದಾರೆ: ಸಿದ್ದರಾಮಯ್ಯ ವಿಷಾದ


