ಮಾನವ ಹಕ್ಕುಗಳ ಹೋರಾಟಗಾರ್ತಿ ಅರುಂಧತಿ ರಾಯ್ ಮತ್ತು ಪ್ರೊ. ಶೇಖ್ ಶೌಕತ್ ಹುಸೇನ್ ಅವರ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅನುಮತಿ ನೀಡಿರುವುದನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಗುರುವಾರ (ಜೂನ್ 20) ಪ್ರತಿಭಟನೆ ನಡೆಯಿತು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಅನೇಕ ಪ್ರಗತಿಪರ ಚಿಂತಕರನ್ನು ಕಠೋರ ಮತ್ತು ಪ್ರಜಾಪ್ರಭುತ್ವ ವಿರೋಧಿ ಕಾನೂನಾದ ಯುಎಪಿಎ ಕಾಯ್ದೆ ಅಡಿ ಬಂಧಿಸಿ ಬಾಯಿ ಮುಚ್ಚಿಸುತ್ತಿದೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕಾಶ್ಮೀರಿ ಜನರ ಸಮಸ್ಯೆಗಳ ಕುರಿತು 2010ರಲ್ಲಿ ಮಾತನಾಡಿದಕ್ಕಾಗಿ ಇಬ್ಬರ ಮೇಲೆ ಈಗ ಯುಎಪಿಎ ಅಡಿ ಕ್ರಮ ಜರುಗಿಸಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ. ಸಕ್ಸೇನಾ ದೆಹಲಿ ಪೊಲೀಸರಿಗೆ ಅನುಮತಿ ನೀಡಿರುವುದು ಖಂಡನೀಯ ಎಂದು ಎಐಸಿಸಿಟಿಯು, ಎಐಪಿಡಬಲ್ಯೂಎ, ಎಐಎಸ್‌ಎ, ಸಿಪಿಐಎಂಎಲ್, ಆರ್‌ಐಎ ಸಂಘಟನೆಗಳ ಮುಖಂಡರು ಒಕ್ಕೊರಳಿನಿಂದ ಹೇಳಿದರು.

ವಕೀಲ ಕ್ಲಿಫ್ಟನ್. ಡಿ. ರೊಜಾರಿಯೊ ಮಾತನಾಡಿ, “ಯಾವುದೇ ಕಾನೂನಿನ ಪ್ರಕ್ರಿಯೆ ಇಲ್ಲದೆ ಕೇವಲ ಪ್ರಕರಣ ದಾಖಲಾದ ತಕ್ಷಣಕ್ಕೆ ವ್ಯಕ್ತಿಗಳನ್ನು ಬಂಧಿಸುವ ಯುಎಪಿಎ ಕಾಯ್ದೆಯು ಅಸಾಂವಿಧಾನಿಕವಾದ್ದದ್ದು. ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಸಿಯುತ್ತದೆ. ದಲಿತರು, ರೈತರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ವಿದಾರ್ಥಿಗಳ ಪರ ನಾವು ಸದಾ ದನಿ ಎತ್ತುತ್ತೇವೆ. ಅದು ನಮ್ಮ ಹಕ್ಕು. ಹತ್ತು ವರ್ಷಗಳಿಂದ ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿರುವ ವಿದ್ಯಾರ್ಥಿ ನಾಯಕರು, ಹೋರಾಟಗಾರರು, ಪ್ರಗತಿಪರ ಚಿಂತಕರನ್ನು ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
“ಭೀಮಾ ಕೊರೆಂಗಾವ್‌ನಲ್ಲಿ ಕಾರ್ಮಿಕರು ಗುತ್ತಿಗೆ ಪದ್ಧತಿ ರದ್ದಾಗಬೇಕು ಎಂದು ಪ್ರತಿಭಟಿಸಿದ್ದ ಕಾರಣಕ್ಕಾಗಿ ಅವರ ಮೇಲೆ ಯುಎಪಿಎ ಅಡಿ ಕ್ರಮ ಜರುಗಿಸಿದ್ದರು. ಜನರಿಗೆ ಸಂವಿಧಾನದ ಅಡಿಯಲ್ಲಿ ಸರ್ಕಾರ ಮತ್ತು ಅದು ರೂಪಿಸುವ ನೀತಿಗಳ ವಿರುದ್ಧ ಪ್ರಶ್ನಿಸುವ ಹಕ್ಕಿದೆ. ಆದರೆ, ಎಲ್ಲ ರಾಜಕೀಯ ಪಕ್ಷಗಳು ಈ ಹಕ್ಕನ್ನು ನಾನಾ ರೂಪದಲ್ಲಿ ಕಸಿಯುತ್ತಿವೆ. ದೇವನಹಳ್ಳಿಯಲ್ಲಿ ರೈತನಿಗೆ ಅನ್ಯಾಯವಾದರೆ 25 ಕಿಲೋ ಮೀಟರ್ ದೂರದಲ್ಲಿರುವ ಸ್ವಾತಂತ್ರ್ಯ ಉದ್ಯಾವನಕ್ಕೆ ಬಂದು ಪ್ರತಿಭಟಿಸಬೇಕಾಗಿದೆ. ಹೀಗೆ ಪ್ರತಿಭಟಿಸುವ ಹಕ್ಕನ್ನು ಕೂಡ ಜನರಿಂದ ಕಿತ್ತುಕೊಳ್ಳಲಾಗಿದೆ” ಎಂದು ಎಐಎಸ್‌ಎ ಸದಸ್ಯ ಶರತ್ ಬೇಸರ ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಲಾಯರ್ಸ್ ಅಸೋಷಿಯೇಷನ್ ಫಾರ್ ಜಸ್ಟೀಸ್‌ನ ಸದಸ್ಯೆ ಶಿಲ್ಪಾ, ಬಹುತ್ವ ಕರ್ನಾಟಕದ ತನ್ವೀರ್, ಅರತ್ರಿಕಾ, ನರಸಿಂಹಮೂರ್ತಿ, ವಿನಯ್ ಕುಮಾರ್ ಮತ್ತಿತರು ಹಾಜರಿದ್ದರು.
ಇದನ್ನೂ ಓದಿ : ನೀಟ್-ಯುಜಿ ವಿವಾದ: ಸುಪ್ರೀಂ ಕೋರ್ಟಿನಿಂದ ಎನ್‌ಟಿಎ-ಕೇಂದ್ರಕ್ಕೆ ನೋಟಿಸ್, ಹೈಕೋರ್ಟ್ ವಿಚಾರಣೆಗೆ ತಡೆ


