Homeಕರ್ನಾಟಕಮಕ್ಕಳ ಎದೆಗೆ ಬೀಳುವ ಅಕ್ಷರ ತಮ್ಮ ಸಹಜೀವಿಗಳ ಬಗೆಗೆ ಅಂತಃಕರಣ ಹಾಗೂ ಪ್ರೀತಿಯನ್ನಷ್ಟೇ ಕಲಿಸುವಂತಾಗಬೇಕು..

ಮಕ್ಕಳ ಎದೆಗೆ ಬೀಳುವ ಅಕ್ಷರ ತಮ್ಮ ಸಹಜೀವಿಗಳ ಬಗೆಗೆ ಅಂತಃಕರಣ ಹಾಗೂ ಪ್ರೀತಿಯನ್ನಷ್ಟೇ ಕಲಿಸುವಂತಾಗಬೇಕು..

- Advertisement -
- Advertisement -

ರಾಜ್ಯದ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳನ್ನು ರಾಜ್ಯದ ಜನ ಗಂಭೀರವಾಗಿ ಗಮನಿಸುತ್ತಿದ್ದಾರೆ. ಪಠ್ಯಗಳನ್ನು ಕುರಿತ ಚರ್ಚೆಗಳು ಆರೋಗ್ಯಕರ ನೆಲೆಯಲ್ಲಿ ನಡೆದು ವಿದ್ಯಾರ್ಥಿಗಳ ಜ್ಞಾನವಿಕಾಸಕ್ಕೆ ಕಾರಣವಾಗುವ ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳು ದೊರಕುವಂತಾದರೆ ಎಲ್ಲರಿಗೂ ಸಂತೋಷ. ಆದರೆ ಚರ್ಚೆಗಳು ಆ ನಿಟ್ಟಿನಲ್ಲಿ ಸಾಗದೆ ಸೈದ್ಧಾಂತಿಕ ದ್ವೇಷ, ವೈಯಕ್ತಿಕ ನಿಂದನೆಯ ಮಟ್ಟಕ್ಕೆ ತಲುಪಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರ ಬಗೆಗೆ ಕೆಲವರು ಮಾಡುತ್ತಿರುವ ಟೀಕೆಗಳು, ಬಳಸುತ್ತಿರುವ ಭಾಷೆ ಸಜ್ಜನ ಸಂಸ್ಕೃತಿಯದ್ದಲ್ಲ. ನಾಡಿನ ನೆಲ-ಜಲ-ನುಡಿ-ಸಾಮಾಜಿಕ ನ್ಯಾಯ-ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಸದಾ ಚಿಂತಿಸುವ ದೇವನೂರ ಮಹಾದೇವ, ಬರಗೂರರಂತಹ ಹಿರಿಯರ ಬಗೆಗೆ ಮಾತನಾಡುವಾಗ ಅವರೊಂದಿಗೆ ಎಷ್ಟೇ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ, ಗೌರವದಿಂದ ಮಾತನಾಡಬೇಕು ಎನ್ನುವ ಸಾಮಾನ್ಯ ವಿವೇಕ ಅವರನ್ನು ಟೀಕಿಸುವವರಿಗೆ ಇರಬೇಕಾಗಿದೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಎಂತಹುದೇ ಭಿನ್ನಾಭಿಪ್ರಾಯಗಳನ್ನೂ ಪರಸ್ಪರ ಚರ್ಚೆಯ ಮೂಲಕ ಬಗೆಹರಿಸಿಕೊಳ್ಳುವ ಅವಕಾಶ ಇರುವಾಗ ದ್ವೇಷ ಕಾರುವ ಮಾತುಗಳ ಅವಶ್ಯಕತೆ ಇಲ್ಲ. ಆದರೆ, ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರೇ ಬಾಯಿಗೆ ಬಂದಂತೆ ಮಾತನಾಡುತ್ತಿರುವುದರಿಂದ ಮನಸ್ಸುಗಳನ್ನು ಬೆಸೆಯಬೇಕಾದ ಮಾತು ತನ್ನ ಮೂಲೋದ್ದೇಶದಿಂದ ವಿಮುಖಗೊಂಡು ದ್ವೇಷ, ತಿರಸ್ಕಾರದ ಅಸ್ತ್ರವಾಗಿ ಬದಲಾಗಿದೆ. ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಂತೂ ದ್ವೇಷ ಬಿತ್ತುವ ಅಂಕಣಗಳಾಗಿ ಬದಲಾಗಿವೆ. ಈ ಅಸಹನೆ, ದ್ವೇಷ, ಪೂರ್ವಾಗ್ರಹಗಳು ಕನ್ನಡದ ಮನಸ್ಸಾಕ್ಷಿಯಂತಿರುವ ರಾಷ್ಟ್ರಕವಿ ಕುವೆಂಪುರವರನ್ನು ಹಾಗೂ ನಮ್ಮೆಲ್ಲರ ಹೆಮ್ಮೆಯ ನಾಡಗೀತೆಯನ್ನೂ ಬಿಡದೆ ಅವಹೇಳನ ಮಾಡುವ ಮಟ್ಟಕ್ಕೆ ತಲುಪಿದೆ ಎಂದರೆ, ಖಂಡಿತವಾಗಿಯೂ ಇದು ನಾಡಿನ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾದುದು. ಕನ್ನಡದ ಸೌಹಾರ್ದ ಸಂಸ್ಕೃತಿಯ ಅಡಿಪಾಯವನ್ನೇ ನಾಶ ಮಾಡುವಂತಹ ಈ ಅಪಾಯದಿಂದ ಪಾರಾಗಬೇಕಾದರೆ, ಯಾರೂ ಯಾರನ್ನೂ ಶತ್ರುಗಳೆನ್ನುವಂತೆ ನೋಡಬಾರದೆನ್ನುವ ಸರಳ ತತ್ವವನ್ನು ಎಲ್ಲ ಪಂಥೀಯರೂ ಅರ್ಥಮಾಡಿಕೊಳ್ಳಲೇಬೇಕಾಗಿದೆ.

ಹಾಗೆಯೇ, ಈ ನಾಡಿನ ಶತಮಾನಗಳ ಕಾಲದ ಕೂಡಿ ಬಾಳುವ ಪರಂಪರೆಗೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಉಳಿವಿಗೆ ಯಾವುದು ಸೂಕ್ತವೋ ಅಂತಹ ಪಠ್ಯಪುಸ್ತಕಗಳು ಮಕ್ಕಳಿಗೆ ದೊರಕುವಂತಾಗಬೇಕು. ಆ ಮಕ್ಕಳ ಎದೆಗೆ ಬೀಳುವ ಅಕ್ಷರ ತಮ್ಮ ಸಹಜೀವಿಗಳ ಬಗೆಗೆ ಅಂತಃಕರಣ ಹಾಗೂ ಪ್ರೀತಿಯನ್ನಷ್ಟೇ ಕಲಿಸುವಂತಾಗಬೇಕು. ಇಲ್ಲದಿದ್ದರೆ ಯಾರೂ ನೆಮ್ಮದಿಯಿಂದ ಇರಲಾಗದ ಸಮಾಜವೊಂದು ಸೃಷ್ಟಿಯಾಗುವ ಅಪಾಯವಿದೆ ಎನ್ನುವುದನ್ನು ಎಲ್ಲರೂ ಮನಗಾಣಬೇಕಾಗಿದೆ.

ವಂದನೆಗಳೊಂದಿಗೆ,

ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ಸಂಘ(ರಿ).
ಡಾ. ಅಮರೇಂದ್ರ ಶೆಟ್ಟಿ ಆರ್(ಅಮರೇಂದ್ರ ಹೊಲ್ಲಂಬಳ್ಳಿ) – ಅಧ್ಯಕ್ಷರು
ಡಾ.ಎ.ವಿ.ಲಕ್ಷ್ಮೀನಾರಾಯಣ- ಪ್ರಧಾನ ಕಾರ್‍ಯದರ್ಶಿ
ಡಾ.ಕೆ.ಎನ್.ಹೊಯ್ಸಳಾದಿತ್ಯ- ಉಪಾಧ್ಯಕ್ಷರು
ಡಾ. ಎ.ಸಿ.ಸುಧಾ- ಖಜಾಂಚಿ
ಡಾ. ಕೆ.ಪಿ.ಪುಟ್ಟಮಾರಯ್ಯ- ಸಹ ಕಾರ್‍ಯದರ್ಶಿ


ಇದನ್ನೂ ಓದಿ: ಪಠ್ಯ ಪರಿಶೀಲಿಸಿದ ಸಮಿತಿಯ ಸದಸ್ಯರ್‍ಯಾರೂ ಪ್ರತಿಕ್ರಿಯೆಗೆ ಸಿದ್ಧರಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೂಡಾ ಹಗರಣ ಆರೋಪ : ಸಿಎಂ ಸಿದ್ದರಾಮಯ್ಯ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ...

0
ಆಪಾದಿತ ಮೂಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಬಿ.ಎಂ ಪಾರ್ವತಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಇವರ ಸಹೋದರ ಬಿ.ಎಂ ಮಲ್ಲಿಕಾರ್ಜುನಸ್ವಾಮಿ,...