ಬಿಎಂಟಿಸಿ ನೌಕರ ಪ್ರಸನ್ನ ಕುಮಾರ್ ಅವರ ಹೆಂಡತಿ ಮತ್ತು ಮಕ್ಕಳು ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಸರ್ಕಾರವೇ ಕಾರಣ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದು ಕೊಲೆಗಡುಕ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣ ಹೃದಯ ವಿದ್ರಾವಕ. ಈ ಘಟನೆಯನ್ನು ಸರಕಾರ ತಡೆಯಬಹುದಿತ್ತು. ಮೊದಲೇ ಆ ಕುಟುಂಬಕ್ಕೆ ಪರಿಹಾರ, ಅನುಕಂಪದ ಉದ್ಯೋಗ ನೀಡಿದ್ದಿದ್ದರೆ ಮೂರು ಅಮೂಲ್ಯ ಜೀವಗಳು ಉಳಿಯುತ್ತಿದ್ದವು. ಇದು ‘ಕೊಲೆಗೆಡುಕ ಸರಕಾರ” ಎಂದು ಕಿಡಿ ಕಾರಿದ್ದಾರೆ.
ಪೀಣ್ಯ ಡಿಪೋದಲ್ಲಿ ಬಿಎಂಟಿಸಿ ನಿರ್ವಾಹಕ ಮತ್ತು ಚಾಲಕರಾಗಿ ಕೆಲಸ ಮಾಡುತ್ತಿದ್ದ ಪ್ರಸನ್ನ ಕುಮಾರ್ ಅವರು ಕಳೆದ ವರ್ಷ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು. ಅವರ ಸಾವಿನಿಂದ ಖಿನ್ನತೆಗೆ ಜಾರಿದ್ದ ಕುಟುಂಬ, ಎರಡು ದಿನಗಳ ಹಿಂದೆ ನೆಲಮಂಗಲದ ಮಾದನಾಯಕನಹಳ್ಳಿ ಸಮೀಪದ ಪ್ರಕೃತಿ ಬಡಾವಣೆಯಲ್ಲಿ ಪತ್ನಿ ವಸಂತ (40), ಮಗ ಯಶವಂತ್ (15) ಮತ್ತು ನಿಶ್ಚಿತಾ (6) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಹರಿಯಾಣ: ಪತ್ನಿ, 3 ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಎಲ್ಲಾ ದುಂದು ವೆಚ್ಚ, ಲೂಟಿ ನಿಲ್ಲಿಸಿ ಸರಕಾರ ಇಂಥವರ ನೆರವಿಗೆ ಧಾವಿಸಬೇಕಿತ್ತು. ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ರಾಜ್ಯ ಸರಕಾರ ಪೂರ್ಣ ವಿಫಲವಾಗಿದೆ ಹಾಗೂ ಅಧಿಕಾರಿಗಳ ಹೊಣೆಗೇಡಿತನ ಎದ್ದು ಕಾಣುತ್ತದೆ.2/3
— H D Kumaraswamy (@hd_kumaraswamy) October 3, 2021
“ಎಲ್ಲಾ ದುಂದು ವೆಚ್ಚ, ಲೂಟಿ ನಿಲ್ಲಿಸಿ ಸರಕಾರ ಇಂಥವರ ನೆರವಿಗೆ ಧಾವಿಸಬೇಕಿತ್ತು. ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ಮೊದಲ ಆದ್ಯತೆ ನೀಡಬೇಕಿತ್ತು. ರಾಜ್ಯ ಸರಕಾರ ಪೂರ್ಣ ವಿಫಲವಾಗಿದೆ ಹಾಗೂ ಅಧಿಕಾರಿಗಳ ಹೊಣೆಗೇಡಿತನ ಎದ್ದು ಕಾಣುತ್ತದೆ” ಎಂದು ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
“ಕೂಡಲೇ ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಸ್ವತಃ ಮುಖ್ಯಮಂತ್ರಿಗಳೇ ಈ ಬಗ್ಗೆ ಗಮನ ಹರಿಸಿ ಕೊರೋನ ಸೋಂಕಿಗೆ ಬಲಿಯಾದ ಸಾರಿಗೆ ನೌಕರರ ಕುಟುಂಬಗಳಿಗೆ ನೇರವಾಗಿ, ಮುಂದಿನ ಅನಾಹುತಗಳನ್ನು ತಪ್ಪಿಸಬೇಕು ಎಂದು ನಾನು ಬಸವಾರಾಜ್ ಬೊಮ್ಮಾಯಿ ಅವರನ್ನು ಒತ್ತಾಯ ಮಾಡುತ್ತೇನೆ” ಎಂದು ಒತ್ತಾಯಿಸಿದ್ದಾರೆ.
’ಕೊರೊನಾ ಸೋಂಕಿನಿಂದ ಮನೆಯ ಯಜಮಾನ ಮೃತಪಟ್ಟಿದ್ದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಜೊತೆಗೆ ಮನೆಕಟ್ಟಲು ಮಾಡಿಕೊಂಡಿದ ಲಕ್ಷಗಟ್ಟಲೆ ಸಾಲ ತಲೆಯ ಮೇಲಿತ್ತು. ಸಾಲಗಾರರ ಕಾಟ ಜಾಸ್ತಿಯಾಗಿತ್ತು. ಇದರಿಂದ ಮಾನಸಿಕವಾಗಿ ನೊಂದಿದ್ದ ವಸಂತ, ಮಕ್ಕಳ ಜೊತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ಕೊರೊನಾ ಸಂಕಷ್ಟ: ಮಗಳನ್ನು ನೇಣಿಗೇರಿಸಿ ತಾಯಿ ಆತ್ಮಹತ್ಯೆ ಯತ್ನ, ಮಗಳು ಸಾವು


