ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ಕುರಿತು ವಿರೋಧ ಪಕ್ಷಗಳು ಆಂತರಿಕ ಸವಾಲುಗಳನ್ನು ಎದುರಿಸುತ್ತಿರುವಾಗಲೇ, ‘ಇಂಡಿಯಾ’ ಬ್ಲಾಕ್ ಮೈತ್ರಿಕೂಟದ ಪ್ರಮುಖ ಪಾಲುದಾರರ ಪಕ್ಷವಾಗಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಆಹ್ವಾನಿಸಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಉತ್ತರ ಪ್ರದೇಶದ ಕಾರ್ಯಕ್ರಮಗಳು ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿದೆ.
ಯಾತ್ರೆಯು ಉತ್ತರ ಪ್ರದೇಶಕ್ಕೆ ಪ್ರವೇಶಿಸಿದಾಗ ತಾವು ಭಾಗವಹಿಸುವ ಬಗ್ಗೆ ಕೇಳಿದಾಗ, ‘ರಾಜ್ಯದಲ್ಲಿ ಹಲವು ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆದರೆ, ನಮಗೆ ಆಹ್ವಾನವಿಲ್ಲ’ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆಯ ಮುಂದುವರಿದ ಭಾಗವು ಮಣಿಪುರದಿಂದ ಜನವರಿಯಲ್ಲಿ ಪ್ರಾರಂಭವಾಗಿದ್ದು, ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. ಪ್ರಸ್ತುತ ಯಾತ್ರೆಯು ಬಿಹಾರ ದಾಟಿ ಜಾರ್ಖಂಡ್‌ನಲ್ಲಿದೆ. ಈಗಾಗಲೇ ಐದು ರಾಜ್ಯಗಳಲ್ಲಿ ಯಾತ್ರೆ ಸಂಚರಿಸಿದೆ.
ಅಖಿಲೇಶ್ ಯಾದವ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಸ್ಪಷ್ಟನೆ ನೀಡಲು ಮುಂದಾಗಿದೆ. ಯಾತ್ರೆಯ ಮಾರ್ಗವು ಇನ್ನೂ ಅಂತಿಮಗೊಂಡಿಲ್ಲ, ಮೈತ್ರಿ ಪಾಲುದಾರರನ್ನು ಆಹ್ವಾನಿಸಲು ಪಕ್ಷ ಮುಕ್ತವಾಗಿದೆ ಎಂದು ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
‘ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಗಾಗಿ ವಿವರವಾದ ಮಾರ್ಗ ಮತ್ತು ಕಾರ್ಯಕ್ರಮವನ್ನು ಸಿದ್ಧಪಡಿಸಲಾಗುತ್ತಿದೆ. ಒಂದು ಅಥವಾ ಎರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು’ ಎಂದು ಜೈರಾಮ್ ರಮೇಶ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ಅಂತಿಮವಾದ ನಂತರ, ಕಾರ್ಯಕ್ರಮದ ವಿವರಗಳನ್ನು ಇಂಡಿಯಾ ಮೈತ್ರಿಕೂಟದ ಘಟಕ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುವುದು. ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಅಖಿಲೇಶ್ ಅವರ ಭಾಗವಹಿಸುವಿಕೆಯು ಇಂಡಿಯಾ ಮೈತ್ರಿಯನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದು ಪಕ್ಷದ ಸಂವಹನ ಉಸ್ತುವಾರಿ ರಮೇಶ್ ಹೇಳಿದ್ದಾರೆ. ಯಾತ್ರೆಯು ಫೆಬ್ರವರಿ 16 ರ ಮಧ್ಯಾಹ್ನ ಯುಪಿ ಪ್ರವೇಶಿಸುವ ನಿರೀಕ್ಷೆಯಿದೆ.
‘ಇಂಡಿಯಾ ಬ್ಲಾಕ್‌ನಲ್ಲಿ ಎಲ್ಲವೂ ಸರಿಯಿಲ್ಲ’
ಜನತಾ ದಳ (ಯುನೈಟೆಡ್) ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರುಸೇರ್ಪಡೆಯಾದ ನಂತರ ಇಂಡಿಯಾ ಬಣವನ್ನು ಬಲಪಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವಾಗ, ಎರಡು ನಿರ್ಣಾಯಕ ಮಿತ್ರಪಕ್ಷಗಳಾದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಮೈತ್ರಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿವೆ. ಮುಂಬರುವ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಇಲ್ಲ ಎದು ಹೇಳಿವೆ.
ಈ ಬೆಳವಣಿಗೆಗಳ ನಡುವೆಯೆ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಜನವರಿ 14 ರಂದು ಮಣಿಪುರದ ತೌಬಲ್‌ನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತು, 110 ಜಿಲ್ಲೆಗಳಾದ್ಯಂತ 6,700 ಕಿಲೋಮೀಟರ್‌ಗಳನ್ನು ಒಳಗೊಂಡಿದೆ.
67 ದಿನಗಳ ಕಾಲ 100 ಲೋಕಸಭಾ ಕ್ಷೇತ್ರಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳನ್ನು ತಲುಪುವ ಈ ಯಾತ್ರೆಯು ಹಿಂದಿನ ‘ಭಾರತ್ ಜೋಡೋ ಯಾತ್ರೆ’ಯನ್ನು ಅನುಸರಿಸುತ್ತದೆ. ಅಲ್ಲಿ ರಾಹುಲ್ ಗಾಂಧಿ 3,000 ಕಿಲೋಮೀಟರ್‌ಗಳಷ್ಟು ಕಾಲ್ನಡಿಗೆಯಲ್ಲಿ ಕ್ರಮಿಸಿದರು.
ಇದನ್ನೂ ಓದಿ; ‘ಬಿಜೆಪಿ ಸೇರಿದರೆ ತೊಂದರೆ ಕೊಡುವುದಿಲ್ಲ ಎಂದಿದ್ದಾರೆ; ನಾನು ಅವರಿಗೆ ತಲೆಬಾಗುವುದಿಲ್ಲ’


