Homeಕರ್ನಾಟಕಕೇಂದ್ರದ ತೆರಿಗೆ ತಾರತಮ್ಯದ ವಿರುದ್ಧ ಸಿಡಿದೆದ್ದ ಕನ್ನಡಿಗರು; ಜಾಲತಾಣಗಳಲ್ಲಿ ಟ್ರೆಂಡ್ ಆಯ್ತು 'ನನ್ನ ತೆರಿಗೆ ನನ್ನಹಕ್ಕು'

ಕೇಂದ್ರದ ತೆರಿಗೆ ತಾರತಮ್ಯದ ವಿರುದ್ಧ ಸಿಡಿದೆದ್ದ ಕನ್ನಡಿಗರು; ಜಾಲತಾಣಗಳಲ್ಲಿ ಟ್ರೆಂಡ್ ಆಯ್ತು ‘ನನ್ನ ತೆರಿಗೆ ನನ್ನಹಕ್ಕು’

- Advertisement -
- Advertisement -

ದೇಶದಲ್ಲೇ ಅತೀ ಹೆಚ್ಚು ತೆರಿಗೆ ಕಟ್ಟುವ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಆಗುತ್ತಿಗೆ ಎಂಬ ಕೂಗು ಕಳೆದ ಹತ್ತು ವರ್ಷಗಳಿಂದಲೂ ಹೆಚ್ಚಾಗಿ ಕೇಳಿಬರುತ್ತಿದೆ. ಈ ವಿಷಯವಾಗಿ ಪ್ರತ್ಯೇಕ ದೇಶ ಅಥವಾ ಪ್ರತ್ಯೇಕ ದಕ್ಷಿಣ ಭಾರತದ ಕೂಗು ಸಹ ಆಗಾಗ ಕೇಳಿಬರುತ್ತದೆ. ಅನುದಾನ ಹಂಚಿಕೆ ತಾರತಮ್ಯದ ವಿಚಾರದಲ್ಲಿ ಸಂಸದ ಡಿ.ಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಕೂಗು ಏಳುವ ಬಗ್ಗೆ ಎಚ್ಚರಿಕೆ ನೀಡಿದ್ದರು.

ಸಂಸತ್ತಿನಲ್ಲಿ ಫೆ.2ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಇವತ್ತಿನ ಹಣಕಾಸಿನ ಹಂಚಿಕೆಯನ್ನು ಗಮನಿಸಿದರೆ, ದಕ್ಷಿಣ ರಾಜ್ಯಗಳ ಹಣವನ್ನು ಉತ್ತರ ಭಾರತಕ್ಕೆ ಹೆಚ್ಚು ನೀಡಿ, ನಮಗೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮಿಂದ ನಾಲ್ಕು ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ತೆರಿಗೆ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ನಮಗೆ ಅವರು ಮರಳಿ ಕೊಡುತ್ತಿರುವುದು ಎಷ್ಟು? 16ನೇ ಹಣಕಾಸು ಆಯೋಗ ಪ್ರಾರಂಭ ಆಗುತ್ತಿದೆ. ಅದರಲ್ಲೂ ಸರಿಪಡಿಸದಿದ್ದರೆ, ದಕ್ಷಿಣ ಭಾರತದವರು ಧ್ವನಿ ಏರಿಸುವುದು ಅನಿವಾರ್ಯವಾಗಿದೆ’ಎಂದು ಹೇಳಿದ್ದರು.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಸಂಸದ ಸುರೇಶ್ ಎತ್ತಿದ ಪ್ರತ್ಯೇಕ ರಾಷ್ಟ್ರದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದ ಬಿಜೆಪಿಗರು, ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯ ಹಾಗೂ ಕೇಂದ್ರದ ನಡೆಯನ್ನು ಸಮರ್ಥಿಸಿಕೊಳ್ಳುತ್ತಿರುವ ರಾಜ್ಯ ಬಿಜೆಪಿಗರಿಗೆ ತಿರುಗೇಟು ನೀಡಲು ಕನ್ನಡಿಗರು ಸಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ‘ಸೌತ್ ಟ್ಯಾಕ್ಸ್ ಮೋವ್‌ಮೆಂಟ್’ (#southtaxmovement ), ‘ನನ್ನ ತೆರಿಗೆ ನನ್ನಹಕ್ಕು’ ಹ್ಯಾಷ್ ಟ್ಯಾಗ್‌ಗಳು ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ (ಟ್ವಿಟ್ಟರ್) ಟ್ರೆಂಡ್ ಆಗಿದೆ.

ನಾಡಿನ ಪ್ರಜ್ಞಾವಂತರಿಗೆ ನನ್ನ ಧನ್ಯವಾದಗಳು: ಸಿದ್ದರಾಮಯ್ಯ

‘ನನ್ನ ತೆರಿಗೆ ನನ್ನ ಹಕ್ಕು’ ಆನ್ಲೈನ್ ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಅವರು, ‘ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಕನ್ನಡಿಗರು ನಡೆಸುತ್ತಿರುವ ‘ನನ್ನತೆರಿಗೆ ನನ್ನಹಕ್ಕು’ ಟ್ವಿಟ್ಟರ್ ಅಭಿಯಾನಕ್ಕೆ ನನ್ನ ಪೂರ್ಣ ಬೆಂಬಲವಿದೆ. ಕನ್ನಡಿಗರು ಬೆವರು ಸುರಿಸಿ ಕಟ್ಟುವ ತೆರಿಗೆ ನಮ್ಮವರ ಕಷ್ಟಕಾಲಕ್ಕೆ ಉಪಯೋಗಕ್ಕೆ ಬರದೆ ಉತ್ತರದ ರಾಜ್ಯಗಳ ಪಾಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ದಕ್ಷಿಣ ಭಾರತದ ರಾಜ್ಯಗಳ ತೆರಿಗೆಯ ಋಣದಲ್ಲಿರುವ ಉತ್ತರದ ರಾಜ್ಯಗಳು ಎಂದಿಗೂ ನಮಗೆ ಮಾಡೆಲ್ ಆಗಲಾರವು. ಈ ಹುಸಿ ಕಲ್ಪನೆಯಿಂದ ಎಲ್ಲರೂ ಹೊರಬರಬೇಕು. ಶ್ರಮದಿಂದ ಸದೃಢ ರಾಷ್ಟ್ರ ಕಟ್ಟುತ್ತಿರುವ ಕರ್ನಾಟಕವೇ ಭಾರತಕ್ಕೆ ಮಾಡೆಲ್’ ಎಂದಿದ್ದಾರೆ.

‘ಕೂತು ತಿನ್ನುವವನಿಗೆ ಮೃಷ್ಟಾನ್ನ ಕೊಟ್ಟು, ದುಡಿಯುವ ಮಗನಿಗೆ ಬರೆ ಎಳೆದರು ಎಂಬಂತಿದೆ ದೇಶದಲ್ಲಿ ಕನ್ನಡಿಗರ ಸ್ಥಿತಿ. ಇದು ಬದಲಾಗಲೇಬೇಕು. ನ್ಯಾಯಕ್ಕಾಗಿ ಧ್ವನಿಯೆತ್ತಿರುವ ನಾಡಿನ ಪ್ರಜ್ಞಾವಂತರಿಗೆ ನನ್ನ ಧನ್ಯವಾದಗಳು. ನಿಮ್ಮ ಜೊತೆ ನಾನಿದ್ದೇನೆ, ನಮ್ಮೆಲ್ಲರ ಧ್ವನಿ ಒಟ್ಟಾದರೆ ದಿಲ್ಲಿವರೆಗೆ ಕೇಳುವುದು ಶತಸಿದ್ಧ’ ಎಂದು ಸಿಎಂ ಬರೆದುಕೊಂಡಿದ್ದಾರೆ.

‘ಕರ್ನಾಟಕ ರಾಜ್ಯ ನೀಡುವ 1 ರೂಪಾಯಿ ತೆರಿಗೆಯಲ್ಲಿ, ಮೋದಿ ಸರ್ಕಾರ ವಾಪಾಸು ನೀಡುವುದು ಜುಜುಬಿ 12 ಪೈಸೆ! ಆದರೆ ಉತ್ತರ ಪ್ರದೇಶ ನೀಡುವ 1 ರೂಪಾಯಿಗೆ ಬದಲಾಗಿ ಮೋದಿ ಸರ್ಕಾರ ವಾಪಾಸು ನೀಡುವುದು 2.73 ರೂಪಾಯಿ! ಕರ್ನಾಟಕ ವಿರೋಧಿ ಮೋದಿ ಸರ್ಕಾರ, ಕನ್ನಡಿಗರು ಒಗ್ಗಟ್ಟಾಗಿ ಹೇಳಿ ಧಿಕ್ಕಾರ’ ಎಂದು ಈಶ್ವರ್ ಈಶು ಎಂಬುವವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

‘ಬಿಮಾರು ರಾಜ್ಯಗಳು ತಾವು ಕೊಡುವ ತೆರಿಗೆಗಿಂತ ಹೆಚ್ಚು ತೆರಿಗೆ ಪಾಲನ್ನು ಪಡೆಯುತ್ತವೆ ಅನ್ನೋದು ತಪ್ಪು ಹೇಳಿಕೆ. ಸರಿಯಾಗಿ ಹೇಳಬೇಕೆಂದರೆ, ಅವರು ಪ್ರತಿಯೊಂದನ್ನೂ ಪಡೆಯುವುದೇ ಉಚಿತವಾಗಿ. ಭಾರತದ ಬಿಟ್ಟಿ ಭಾಗ್ಯಗಳ ನಾಡು ಅಂದ್ರೆ ಉತ್ತರ ಭಾರತವೇ ಹೊರತು ಬೇರೊಂದಿಲ್ಲ’ ಎಂದು ಸುನೀಲ್ ಜೆ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ ಭದ್ರ ಮೇಲ್ದಂಡೆ ಯೋಜನೆಗೆ ₹5,200 ಕೋಟಿ ಅನುದಾನವನ್ನ ಪ್ರಸಕ್ತ ಬಜೆಟ್ ನಲ್ಲಿ ನೀಡಿಲ್ಲ. ಬೆಂಗಳೂರಿನಲ್ಲಿ ಮೆಟ್ರೋಗೂ ಸಹ ವಿವಿಧ ಹಂತದ ಯೋಜನೆಗೆ ಕೊಡಬೇಕಾಗಿದ್ದ ಅನುದಾನವನ್ನು ಕೊಡಲಿಲ್ಲ. ಅತಿ ಹೆಚ್ಚು ತೆರಿಗೆ ಕಟ್ಟಿದರೂ ನಮಗೆ ನಮ್ಮ ಪಾಲನ್ನು ಕೊಡಲಿಲ್ಲ’ ಎಂದು ಗಿರೀಶ್ ಕುಮಾರ್ ಪದ್ಮನಾಭನಗರ ಅವರು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

‘ಒಮ್ಮೆ ಈ ಟೇಬಲ್ ನೋಡಿ. ಕರ್ನಾಟಕ ಕ್ಕೆ ಸಿಗುತ್ತಿರೋದು 37,252 ಕೋಟಿ ರೂಪಾಯಿ. ಅದೇ ಯುಪಿಗೆ ಸಿಗುತ್ತಿರುವುದು 1 ಲಕ್ಷ 83 ಸಾವಿರ ಕೋಟಿ ರೂಪಾಯಿ. ಈಗ ಹೇಳಿ ಹೊಟ್ಟೆ ಉರಿಯುತ್ತಾ ಇಲ್ಲವಾ? ದುಡಿದು ದುಡಿದು ತೆರಿಗೆ ಕಟ್ಟಿ ಸಾಯೋದು ನಾವು. ಇದನ್ನೇ ನ್ಯಾಯವಾಗಿ ನಮ್ಮ ಪರವಾಗಿ ನಾವು ಕೇಳಬೇಕಿದೆ.

ಕರ್ನಾಟಕದಂತಹ ರಾಜ್ಯಗಳಿಂದ ದೇಶವೇ ಹೊರತು ದೇಶದಿಂದ ರಾಜ್ಯಗಳಲ್ಲ. ರಾಜ್ಯಗಳ ಸಂಪತ್ತಿನಿಂದ ದೇಶ ನಡೆಯುತ್ತಿದೆ ಎಂಬುದನ್ನು ಕೇಂದ್ರ ಸರ್ಕಾರ ಮರೆಯಬಾರದು. ಕರ್ನಾಟಕ 4.5 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿಕೊಡುವ ಮೂಲಕ ಅತಿ ಹೆಚ್ಚು ತೆರಿಗೆ ಕಟ್ಟುವ 2ನೇ ರಾಜ್ಯವಾಗಿದೆ. ಆದರೆ, ವಾಪಸ್ ಚಿಲ್ಲರೆ ಹಣ ಸಾಕೆ’ ಎಂದು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕರ್ನಾಟಕದ ರಾಜಕಾರಣಿಗಳು ಕರ್ನಾಟಕಕ್ಕೆ ತೆರಿಗೆ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಪಕ್ಷ ಮರೆತು ಪ್ರಶ್ನೆ ಮಾಡಬೇಕು’ ಎಂದು ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ಒತ್ತಾಯಿಸಿದ್ದಾರೆ.

‘ಕಷ್ಟ ಪಟ್ಟು ಬೆವರು ಸುರಿಸಿ ನಿಯ್ಯತ್ತಾಗಿ ತೆರಿಗೆ ಕಟ್ಟೋಕೆ ಕರ್ನಾಟಕ ಬೇಕು ಕನ್ನಡಿಗರು ಬೇಕು. ನಮ್ಮ ಬೆವರಿನ ಹಣವನ್ನು ಬಳಸಿಕೊಂಡು ಮಜಾ ಮಾಡೋಕೆ ಭೀಮಾರು ರಾಜ್ಯಗಳು ಬೇಕೇ..? ಯಾಕೀ ತಾರತಮ್ಯ’ ಎಂದು ಅಶೋಕ್ ಪೂಜಾರಿ ಮಡಿಕೇರಿ ಎಂಬುವವರು ಪ್ರಶ್ನಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಮಾತ್ರ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಅತಿ ಹೆಚ್ಚು ತೆರಿಗೆ ಪಾಲನ್ನು ಪಡೆದುಕೊಳ್ಳುತ್ತಿರುವ ರಾಜ್ಯಗಳು, ಅಲ್ಲಿ ಉದ್ಯೋಗಗಳನ್ನೂ ಸೃಷ್ಟಿಸದೆ ದಕ್ಷಿಣ ಭಾರತಕ್ಕೆ ಹೆಚ್ಚಿನ ವಲಸೆಗೆ ಕಾರಣವಾಗಿವೆ. ಇದೀಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದಕ್ಷಿಣದ ರಾಜ್ಯಗಳು ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದು, ಕರ್ನಾಟಕ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿದೆ. ಕನ್ನಡಿಗರು ಆನ್‌ಲೈನ್ ಅಭೀಯಾನ ಕೈಗೊಂಡಿದ್ದು, ಕೇರಳ, ತಮಿಳುನಾಡು ಸೇರಿದಂತೆ ಅವಿಭಜಿತ ಆಂಧ್ರಪ್ರದೇಶದ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ತಾರತಮ್ಯ ವಿರೋಧಿಸಿ ಕೇರಳ ಸರ್ಕಾರ ವಿಧಾನಸಭೆಯಲ್ಲಿ ಕೇಂದ್ರದ ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ.

ಇದನ್ನೂ ಓದಿ; ತೆರಿಗೆ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ತಾರತಮ್ಯ; ‘ಪ್ರತ್ಯೇಕ ರಾಷ್ಟ್ರ’ದ ಎಚ್ಚರಿಕೆ ನೀಡಿದ ಡಿ.ಕೆ. ಸುರೇಶ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...