Homeಮುಖಪುಟ‘BIFFes’ ಎಂಬ ಅಂತಾರಾಷ್ಟ್ರೀಯ, Sorry ‘ಕನ್ನಡ ಅಂತಾರಾಷ್ಟ್ರೀಯ ಸಿನಿಮೋತ್ಸವ!’

‘BIFFes’ ಎಂಬ ಅಂತಾರಾಷ್ಟ್ರೀಯ, Sorry ‘ಕನ್ನಡ ಅಂತಾರಾಷ್ಟ್ರೀಯ ಸಿನಿಮೋತ್ಸವ!’

ಅಂತಾರಾಷ್ಟ್ರೀಯ ಸಿನಿಮೋತ್ಸವದ ಧ್ಯೇಯೋದ್ದೇಶಗಳನ್ನು ಮುಖ್ಯವಾಗಿಟ್ಟುಕೊಂಡು ನೋಡಿದರೆ ಬಿಫೆಸ್ ತನ್ನ ಅರ್ಥ ವ್ಯಾಪ್ತಿಯನ್ನು ಕಳೆದುಕೊಂಡಿದೆ ಎನ್ನುತ್ತಾರೆ ಹಿರಿಯ ಪತ್ರಕರ್ತರು...

- Advertisement -
- Advertisement -

ನಿಮಗಿದು ಗೊತ್ತೇ? ಮಾರ್ಚ್ 3ರಿಂದ ಮಾರ್ಚ್ 10ರವರೆಗೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ (BIFFes) ನಡೆಯಲಿದೆ! ಕೋವಿಡ್ ಕಾರಣದಿಂದಾಗಿ ಹಲವು ದೇಶಗಳಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳನ್ನು ಕಳೆದ ವರ್ಷ ಮುಂದೂಡಲಾಗಿತ್ತು. ಅಥವಾ ವರ್ಚುಯಲ್ ಆಗಿ ನಡೆಸಲಾಗಿತ್ತು. ಹಾಗಾಗಿ, ಬಿಫೆಸ್ 13ನೇ ಆವೃತ್ತಿಯೂ ನಡೆದಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಸದ್ದುಗದ್ದಲವಿಲ್ಲದೆ, ಜನರಿಗೆ ಸಮರ್ಪಕ ಮಾಹಿತಿಯನ್ನೂ ನೀಡದೆ, ಒಂದಷ್ಟು ಗೊಂದಲಗಳೊಂದಿಗೆ ಬಿಫೆಸ್ ನಡೆಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಮುಂದಾಗಿದೆ. 2020 ಮತ್ತು 2021 ಇಸವಿಯಲ್ಲಿ ತೆರೆಕಂಡ ಹಲವು ಸಿನಿಮಾಗಳು ಈ ಪ್ರತಿಷ್ಟಿತ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿವೆ.

12ನೇ ಆವೃತ್ತಿಯ ಬಿಫೆಸ್ 2020 ಫೆಬ್ರವರಿ 26ರಿಂದ ಮಾರ್ಚ್ 4, 2020ರ ನಡುವೆ ನಡೆದಿತ್ತು. 60ಕ್ಕೂ ಹೆಚ್ಚು ದೇಶಗಳ 220 ಸಿನಿಮಾಗಳನ್ನು 13 ಪರದೆಗಳಲ್ಲಿ ಪ್ರದರ್ಶಿಸಲಾಗಿತ್ತು. 10,000ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದು ಬಿಫೆಸ್ ವೆಬ್‌ಸೈಟ್ ಹೇಳುತ್ತದೆ. ಈ ಬಾರಿ 55 ರಾಷ್ಟ್ರಗಳ 200 ಚಲನಚಿತ್ರಗಳು ಪ್ರದರ್ಶನವಾಗಲಿವೆ. ಒರಾಯನ್ ಮಾಲ್‌ನಲ್ಲಿ 11 ಪ್ರದರ್ಶನ ಮಂದಿರಗಳನ್ನು ಮೀಸಲಿಡಲಾಗಿದೆ. ಚಾಮರಾಜಪೇಟೆಯಲ್ಲಿನ ಡಾ.ರಾಜ್‌ಭವನ, ಬನಶಂಕರಿ 2ನೇ ಹಂತದಲ್ಲಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿಯೂ ಪ್ರದರ್ಶನ ಏರ್ಪಡಿಸಲಾಗಿದೆ. ಆನ್‌ಲೈನ್ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಚಲನಚಿತ್ರ ಅಕಾಡೆಮಿ ಮಾಹಿತಿ ನೀಡಿದೆ.

ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ರೂಪಿಸುವಾಗ ಎಷ್ಟು ಪೂರ್ವ ಸಿದ್ಧತೆ ಹಾಗೂ ಬದ್ಧತೆ ಇರಬೇಕು ಎಂಬುದು ಎಲ್ಲಿರುಗೂ ತಿಳಿದಿರುವುದೇ. ಆದರೆ ಈ ಬಾರಿಯ ಬಿಫೆಸ್ ತರಾತುರಿಯಲ್ಲಿ, ಗುಣಮಟ್ಟವನ್ನು ಮೂಲೆಗೆ ತಳ್ಳಿ ಸಿನಿಮೋತ್ಸವ ನಡೆಸು ತ್ತಿದೆ ಎಂಬ ಆರೋಪಗಳನ್ನು ಸಿನಿಮಾ ತಜ್ಞರು ಮಾಡುತ್ತಿದ್ದಾರೆ.

ಬಿಫೆಸ್ ಎಂಬುದು ಅಂತಾರಾಷ್ಟ್ರೀಯ ಮಟ್ಟದ ಗಂಭೀರ ವಿಷಯಗಳನ್ನು ಕಲಾತ್ಮಕವಾಗಿ ನಿರ್ವಹಿಸಿರುವ ಗುಣಮಟ್ಟದ ಮತ್ತು ಸುಲಭವಾಗಿ ತೆರೆಕಾಣಲು ಅವಕಾಶವಿಲ್ಲದ ಸಿನಿಮಾಗಳನ್ನು ಪ್ರದರ್ಶಿಸುವ ಉತ್ಸವವೋ ಅಥವಾ ಕನ್ನಡದ್ದೇ ಸಿನಿಮಾಗಳನ್ನು ರಾರಾಜಿಸುವ ಉತ್ಸವವೋ? ಈಗಾಗಲೇ ಚಲನಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದ್ದ ಜನಪ್ರಿಯ ಸಿನಿಮಾಗಳನ್ನೂ ಇಲ್ಲಿ ಪ್ರದರ್ಶಿಸುವ ಅವಶ್ಯಕತೆ ಇತ್ತೆ?

ಕನ್ನಡ ಸಿನಿಮಾ ಸ್ಪರ್ಧೆ, ಭಾರತೀಯ ಸಿನಿಮಾ ಸ್ಪರ್ಧೆ (ಚಿತ್ರಭಾರತಿ), ಏಷಿಯನ್ ಸಿನಿಮಾ ಕಾಂಪಿಟೇಷನ್, ಕನ್ನಡ ಜನಪ್ರಿಯ ಮನರಂಜನಾ ಸಿನಿಮಾ ಸ್ಪರ್ಧೆ ವಿಭಾಗದಲ್ಲಿನ ಒಟ್ಟು ಸಿನಿಮಾಗಳ ಪೈಕಿ 51 ಕನ್ನಡ ಸಿನಿಮಾಗಳಿರುವುದು ಈ ಬಾರಿಯ ಅಂತಾರಾಷ್ಟ್ರೀಯ ಸಿನಿಮೋತ್ಸವದ ಸ್ಪೆಷಲ್! ಕನ್ನಡ ಸಿನಿಮಾ ಸ್ಪರ್ಧೆಯಲ್ಲಿ ರತ್ನನ್ ಪ್ರಪಂಚ, ಜನಪ್ರಿಯ ಕನ್ನಡ ಸಿನಿಮಾ ಸ್ಪರ್ಧೆಯಲ್ಲಿ ಪೊಗರು, ರಾಬರ್ಟ್, ಯುವರತ್ನ, ಕೋಟಿಗೊಬ್ಬ-3, ಸಲಗ, ಗಗಾವೃವಾ, ಭಜರಂಗಿ-2, ಆಕ್ಟ್-1978, ದಿಯಾ, ಲವ್ ಮಾಕ್‌ಟೇಲ್, ಶಿವಾಜಿ ಸುರತ್ಕಲ್ ಸೇರಿದಂತೆ 16 ಸಿನಿಮಾಗಳಿವೆ.

ಅರ್ಥವ್ಯಾಪ್ತಿ ಕಳೆದುಕೊಂಡ ಬಿಫೆಸ್

ಅಂತಾರಾಷ್ಟ್ರೀಯ ಸಿನಿಮೋತ್ಸವದ ಧ್ಯೇಯೋದ್ದೇಶಗಳನ್ನು ಮುಖ್ಯವಾಗಿಟ್ಟುಕೊಂಡು ನೋಡಿದರೆ ಬಿಫೆಸ್ ತನ್ನ ಅರ್ಥ ವ್ಯಾಪ್ತಿಯನ್ನು ಕಳೆದುಕೊಂಡಿದೆ ಎನ್ನುತ್ತಾರೆ ಹಿರಿಯ ಪತ್ರಕರ್ತ ಮುರಳೀಧರ ಖಜಾನೆ.

ಬಿಫೆಸ್‌ನ ಹಲವು ಆವೃತ್ತಿಗಳನ್ನು ವರದಿ ಮಾಡಿರುವ ಮುರಳೀಧರ್ ಅವರು ನ್ಯಾಯಪಥದೊಂದಿಗೆ ಮಾತನಾಡಿ ಬಿಫೆಸ್‌ನ ಲೋಪದೋಷಗಳನ್ನು ಬಹಳ ವಿಸ್ತೃತವಾಗಿ ಬಿಚ್ಚಿಟ್ಟರು. “ಒಂದು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಸಾಕಷ್ಟು ಸಿದ್ಧತೆಗಳು ಅಗತ್ಯ. ಅದಕ್ಕಾಗಿಯೇ ವರ್ಷ ಪೂರ್ತಿ ಕೆಲಸ ಮಾಡುವ ಚಲನಚಿತ್ರೋತ್ಸವ ನಿರ್ದೇಶನಾಲಯ ಇರಬೇಕು. ಈ ನಿರ್ದೇಶನಾಲಯ ಜಗತ್ತಿನಾದ್ಯಂತ ತೆರೆಕಾಣುವ ಸಿನಿಮಾಗಳನ್ನು ಸಂಗ್ರಹಿಸಿ ಆಯ್ಕೆ ಮಾಡಿಕೊಳ್ಳಬೇಕು. ಸಂಘಟನಾ ಸಮಿತಿಯ ಕೆಲಸಗಳು ಜೂನ್ ವೇಳೆಗೆ ಆರಂಭವಾಗಬೇಕು. ಪ್ರತಿ ವರ್ಷ ನಿಗದಿತ ಕ್ಯಾಲೆಂಡರ್ ಅನುಸರಿಸಬೇಕು. ಹಿಂದಿನ ವರ್ಷಗಳಲ್ಲಿ ಈ ಬದ್ಧತೆಯನ್ನು ಕಾಣಬಹುದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಶಿಸ್ತು ಕಾಣುತ್ತಿಲ್ಲ. ಯಾಕೆಂದರೆ ಪ್ರತಿಯೊಂದರಲ್ಲೂ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ” ಎಂದರು.

ಬಜೆಟ್‌ನಲ್ಲಿ ದುಡ್ಡಿರುತ್ತದೆ. ಆದರೆ ಖರ್ಚು ಮಾಡಲು ರಾಜಕಾರಣಿಗಳನ್ನು ಕಾಯುತ್ತಾ ಕೂರುವಂತಾಗಿದೆ. ಈ ಭಾರಿಯ ಬಿಫೆಸ್ ಬಹಳ ತುರ್ತಾಗಿ ಮಾಡಲಾಗುತ್ತಿದೆ. 51 ಕನ್ನಡ ಸಿನಿಮಾಗಳಿವೆ. ಇದು ಕನ್ನಡ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಲೋ, ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ಲೋ ಎಂಬ ಅನುಮಾನ ಬರುತ್ತದೆ. ಇಷ್ಟು ಕನ್ನಡ ಸಿನಿಮಾಗಳು ಪ್ರದರ್ಶನವಾಗುತ್ತಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಪೆದ್ರೊ, ನೀಲಿಹಕ್ಕಿ ಥರದ ಕನ್ನಡ ಸಿನಿಮಾಗಳು ಬಿಫೆಸ್‌ನಿಂದ ಹೊರಗುಳಿದದ್ದು ಹೇಗೆ? ಕನ್ನಡಿಗ ಥರದ ಸದಭಿರುಚಿಯ ಸಿನಿಮಾ ಪ್ರದರ್ಶನವಾಗುತ್ತಿಲ್ಲ ಏಕೆ? ಎಂದು ಪ್ರಶ್ನಿಸುತ್ತಾರೆ ಖಜಾನೆ.

ಸುಚಿತ್ರ ಫಿಲ್ಮ್ ಸೊಸೈಟಿಯವರು ಬಿಫೆಸ್ ನಡೆಸುವಾಗ ಅಂತಾರಾಷ್ಟ್ರೀಯ ಸಿನಿಮಾಗಳೇ ಪ್ರದರ್ಶನವಾಗುತ್ತಿದ್ದವು. ಟಿ.ಎಸ್.ನಾಗಾಭರಣ, ರಾಜೇಂದ್ರಸಿಂಗ್ ಬಾಬು, ತಾರಾ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಬಿಫೆಸ್ ನಡೆದಿದೆ. ಆದರೆ ಅಕಾಡೆಮಿಯ ಈಗಿನ ಅಧ್ಯಕ್ಷರು ಸಂಘಪರಿವಾರದ ಹಿಡಿತದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಇಷ್ಟರ ಮಟ್ಟಿಗೆ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಿನಿಮೋತ್ಸವಗಳಲ್ಲಿನ ಪ್ರಜಾಪ್ರಭುತ್ವದ ದನಿಯನ್ನು ಹತ್ತಿಕ್ಕಲಾಗುತ್ತಿದೆ. ಸರ್ಕಾರದ ಹಸ್ತಕ್ಷೇಪದಿಂದಾಗಿ ಗೋವಾ ಫಿಲ್ಮ್ ಫೆಸ್ಟಿವಲ್ ಕೂಡ ಗೊಂದಲಕಾರಿಯಾಗಿತ್ತು. ಫಿಲ್ಮ್ ಫೆಸ್ಟಿವಲ್‌ಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಯಾವ ಲೋಪದೋಷವಿಲ್ಲದೆ ಬಿಫೆಸ್ ನಡೆಯಬೇಕು. ಯಾಕೆಂದರೆ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಕೆಲವೇ ಕೆಲವು ಸಿನಿಮೋತ್ಸವಗಳ ಪೈಕಿ ಬಿಫೆಸ್ ಕೂಡ ಒಂದು. ಈ ಮಾನ್ಯತೆಯನ್ನು ಪಡೆಯುವುದು ಅಷ್ಟು ಸುಲಭವಲ್ಲ. ಏಷಿಯಾ ಪ್ರದೇಶಗಳ ವಿಶೇಷ ಆವೃತ್ತಿಯನ್ನು ನಮಗೆ ನೀಡಲಾಗಿದೆ. ಅದರ ಮೇಲೆಯೇ ಫೋಕಸ್ ಮಾಡಿ ನಾವು ಸಿನಿಮಾಗಳನ್ನು ತೋರಿಸಬೇಕು. ಆದರೆ ನಾವು ಪ್ರತಿಷ್ಠಿತ ಚಲನಚಿತ್ರೋತ್ಸವದ ಮಾನ್ಯತೆಯನ್ನು ಕಳೆದುಕೊಳ್ಳುವತ್ತ ನಡೆಯುತ್ತಿದ್ದೇವೆ ಎಂದು ವಿಷಾದಿಸುತ್ತಾರೆ ಮುರಳೀಧರ ಕಜಾನೆ.

ಜನಪ್ರಿಯ ಸಿನಿಮಾಗಳಿಗೆ ಅನಗತ್ಯ ಅವಕಾಶ

ಹಲವು ಬಿಫೆಸ್‌ನಲ್ಲಿ ಭಾಗವಹಿಸಿರುವ ಸಿನಿಮಾ ಪ್ರೇಮಿ ವಿವೇಕ್ ನಾಯ್ಡು ಅವರು ಮಾತನಾಡಿ, “ಸಿನಿಮೋತ್ಸವಗಳಿಂದಾಗಿ ದೊಡ್ಡ ಮಟ್ಟದ ಸಾಂಸ್ಕೃತಿಕ ವಿನಿಮಯ ಸಾಧ್ಯವಾಗುತ್ತದೆ. ಹೀಗಾಗಿ ಹೊರಗಿನ ಸಿನಿಮಾಗಳಿಗೆ ಇಲ್ಲಿ ಹೆಚ್ಚು ಅವಕಾಶವಿರಬೇಕು. ಕನ್ನಡದ ಜನಪ್ರಿಯ ಸಿನಿಮಾಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದಿತ್ತು. ಅವುಗಳನ್ನು ಜನರು ಈಗಾಗಲೇ ಚಿತ್ರಮಂದಿರಗಳಲ್ಲಿ ನೋಡಿದ್ದಾರೆ. ಆದರೆ ಬೇರೆ ಬೇರೆ ದೇಶಗಳ ಭಾಷೆಗಳ ಸಿನಿಮಾಗಳನ್ನು ನೋಡಲೆಂದು ಜನ ಬಿಫೆಸ್‌ಗೆ ನುಗ್ಗುತ್ತಾರೆ. ಜನಪ್ರಿಯ ಸಿನಿಮಾಗಳನ್ನು ನೋಡುವವರು ಬಿಫೆಸ್‌ಗೆ ಬರದಿದ್ದರೆ ಪ್ರದರ್ಶನದ ಸಮಯ ಹಾಗೂ ಹಣ ಅನಗತ್ಯವಾಗಿ ವ್ಯರ್ಥವಾಗುತ್ತದೆ” ಎಂದರು.

ಕೇರಳ ಫಿಲ್ಮ್ ಫೆಸ್ಟಿವಲ್‌ನವರು ಪೆದ್ರೋ ಸಿನಿಮಾವನ್ನು ಸೆಲೆಕ್ಟ್ ಮಾಡಿದ್ದರು. ಆದರೆ ಬಿಫೆಸ್‌ನಲ್ಲಿ ಆಯ್ಕೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ವಿವೇಕ್, ಆನ್‌ಲೈನ್‌ನಲ್ಲಿಯೂ ಸಿನಿಮಾಗಳನ್ನು ನೋಡುವ ಅವಕಾಶವನ್ನು ಬಿಫೆಸ್ ಮಾಡಿಕೊಡುತ್ತಿದೆ. ಬೇರೆ ಅಂತಾರಾಷ್ಟ್ರೀಯ ಸಿನಿಮೋತ್ಸವಗಳೂ ಈ ಪ್ರಯೋಗವನ್ನು ಮಾಡಿ ಯಶಸ್ವಿಯಾಗಿವೆ. ಆದರೆ ಪೈರಸಿ ಆಗದಂತೆ ಗಮನ ಹರಿಸಬೇಕು ಎಂದು ಎಚ್ಚರಿಸಿದರು.

ಮಾಧ್ಯಮಗಳೊಂದಿಗೆ ಸಂವಹನದ ಕೊರತೆ

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಬಿಫೆಸ್ ಕುರಿತು ಮಾಧ್ಯಮಗಳಿಗೆ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಅನುಭವಿ ಪತ್ರಕರ್ತರು ಹೇಳುವಂತೆ, ಇಷ್ಟು ವೇಳೆಗಾಗಲೇ ಮೂರ್ನಾಲ್ಕು ಬಾರಿ ಪತ್ರಿಕಾಗೋಷ್ಠಿ ನಡೆಯಬೇಕಿತ್ತು. ಯಾರು ಯಾರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆಂಬ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗಬೇಕಿತ್ತು. ಅದ್ಯಾವುದನ್ನೂ ಅಕಾಡೆಮಿ ಮಾಡಿಲ್ಲ ಎನ್ನುತ್ತಾರೆ ನುರಿತ ಪತ್ರಕರ್ತರೊಬ್ಬರು.

ನ್ಯಾಯಪಥದೊಂದಿಗೆ ಮಾತನಾಡಿದ ಪತ್ರಕರ್ತ ಶ್ಯಾಮ್ ಪ್ರಸಾದ್, “ಕಳೆದ ಬಿಫೆಸ್‌ಗಳಲ್ಲೆಲ್ಲ ಮಾಧ್ಯಮದವರಿಗೆ ಕಾಮ್‌ಸ್ಟಾರ್ಟ್ ಎಂಬ ಪಿಆರ್ ಏಜೆನ್ಸಿ ಪಾಸ್‌ಗಳನ್ನು ಒದಗಿಸುತ್ತಿತ್ತು. ಒಂದು ತಿಂಗಳ ಮುಂಚೆಯೇ ಸೂಚನೆಗಳು ಪತ್ರಕರ್ತರಿಗೆ ಸಿಗುತ್ತಿದ್ದವು. ಸಿನಿಮಾ ಪಿಆರ್‌ಗಳನ್ನು ಅಕಾಡೆಮಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿತ್ತು. ಕಾಮ್‌ಸ್ಟಾರ್ಟ್ ಕಂಪನಿ ಈಗಿನ ಬಿಫೆಸ್‌ನಲ್ಲಿ ಇಲ್ಲ. ನೋಂದಣಿ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಮುಖ್ಯ ಅತಿಥಿಗಳ್ಯಾರು, ಏನು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಸಿನಿಮಾ ವರದಿಗಾರರಿಗೂ ಗೊಂದಲ ಸೃಷ್ಟಿಯಾಗಿದೆ” ಎಂದು ನಕ್ಕರು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಮುಗ್ಧತೆ ಮತ್ತು ಧರ್ಮ ಸೂಕ್ಷ್ಮತೆ!

ಮಾರ್ಚ್ 3ಕ್ಕೆ ಬಿಫೆಸ್ ಆರಂಭವಾಗುತ್ತಿದ್ದರೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದೆ ಎಂಬುದು ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ ಅವರ ಮಾತುಗಳಲ್ಲಿ ಧ್ವನಿಸುತ್ತವೆ.

ಮಂಗಳವಾರ (ಮಾರ್ಚ್ 1) ಬೆಳಿಗ್ಗೆ ನ್ಯಾಯಪಥದೊಂದಿಗೆ ಮಾತನಾಡಿರುವ ಪುರಾಣಿಕ್, ಸೋಮವಾರ (ಫೆ.28) ಕೋರ್ ಕಮಿಟಿ ಸಭೆಯಾಗಿದೆ. ಸರ್ಕಾರದ ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ. ಅನುಮತಿ ಸಿಕ್ಕ ಬಳಿಕ ಆಹ್ವಾನ ಪತ್ರಿಕೆಯನ್ನು ಅಂತಿಮಗೊಳಿಸಲಾಗಿದೆ. ಪದ್ಮಶ್ರೀ ಪುರಸ್ಕೃತರಾದ ಭಾರತಿ ವಿಷ್ಣುವರ್ಧನ್, ಮಲಯಾಳಂ ಫಿಲ್ಮ್‌ಮೇಕರ್ ಪ್ರಿಯದರ್ಶನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟನೆ ಮಾಡಲಿದ್ದಾರೆ. ಈ ಕುರಿತು ಪ್ರೆಸ್ ನೋಟ್ ರೆಡಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿರುವ ಪೆದ್ರೊ ಕನ್ನಡ ಸಿನಿಮಾವನ್ನು ಬಿಫೆಸ್ ಹೊರಗಿಟ್ಟಿರುವುದು ಏತಕ್ಕೆ ಎಂದು ಕೇಳಿದಾಗ, ಪೆದ್ರೊ ಸಿನಿಮಾವನ್ನು ಕನ್ನಡ ಸಿನಿಮಾ ಸ್ಪರ್ಧೆ ಹಾಗೂ ರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ನೋಂದಣಿ ಮಾಡಿಲ್ಲ. ಕನ್ನಡ ಚಿತ್ರವನ್ನು ಕನ್ನಡ ಸಿನಿಮಾ ಸ್ಪರ್ಧೆಗೆ ಕಳುಹಿಸದಿದ್ದರೆ ಯಾರಿಗೆ ಅವಮಾನ? ಕನ್ನಡ ಸಿನಿಮಾ ಮಾಡಿ ಕನ್ನಡ ಸ್ಪರ್ಧೆಗೆ ಕಳುಹಿಸದೆ ಏಷ್ಯನ್ ಸಿನಿಮಾಗಳ ಸ್ಪರ್ಧೆಗೆ ಕಳುಹಿಸುತ್ತಾರೆಂದರೆ ನಾವೇನು ಹೇಳೋಣ? ಇವರಿಗೆ ಕನ್ನಡ ವಿಭಾಗದ ಕುರಿತು ಹೆಮ್ಮೆ ಇಲ್ಲವೇ? ಎಂದು ಮುಗ್ಧವಾಗಿ ಪ್ರಶ್ನಿಸಿದರು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್

ಸಿನಿಮಾಗಳ ಗುಣಮಟ್ಟ, ಕಥಾ ವಸ್ತು, ಸೌಂಡ್ ಪ್ರತಿಯೊಂದನ್ನೂ ಪರಿಗಣಿಸಿ ಜ್ಯೂರಿಗಳು ಆಯ್ಕೆ ಮಾಡಿದ್ದಾರೆ. ಪೆದ್ರೋ ಬಗ್ಗೆ ಮಾತ್ರ ಏಕೆ ಮಾತನಾಡುತ್ತೀರಿ? ಸೋಷಿಯಲ್ ಮೀಡಿಯಾದಲ್ಲಿ ಬರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಿಲ್ಲ. ಕನ್ನಡ ಚಿತ್ರಗಳು ಬಿಫೆಸ್‌ಗೆ ಆಯ್ಕೆಯಾಗಲ್ಲ ಎಂದು ಈ ಹಿಂದೆ ಆರೋಪಿಸುತ್ತಿದ್ದರು. ಈಗ ಆಯ್ಕೆ ಮಾಡಿದರೆ ಬರೀ ಕನ್ನಡ ಸಿನಿಮಾಗಳನ್ನೇ ಸೆಲೆಕ್ಟ್ ಮಾಡುತ್ತೀರಿ ಎನ್ನುತ್ತಾರೆ. ನಾವು ಏನು ಮಾಡಬೇಕು? ಎಂದರು.

ಸಿನಿಮೋತ್ಸವಗಳಲ್ಲಿ ಬಿಜೆಪಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆಯೇ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಭಾರತೀಯತೆಯಲ್ಲಿ ಧರ್ಮ ಸೂಕ್ಷ್ಮಗಳಿರುತ್ತವೆ. ಸರ್ಕಾರದ ವತಿಯಿಂದ ಸಿನಿಮೋತ್ಸವ ನಡೆಯುತ್ತಿರುವುದರಿಂದ ಯಾವುದೇ ಧರ್ಮಕ್ಕೂ ಅವಮಾನ ಆಗಬಾರದು ಎಂದು ಜ್ಯೂರಿಗಳು ಎಚ್ಚರಿಕೆ ವಹಿಸುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅತ್ಯಂತ ಹೆಚ್ಚು ಜಾತ್ಯತೀತತೆಯನ್ನು ಕಾಣುತ್ತಿದ್ದೇವೆ” ಎಂದು ಸಮರ್ಥಿಸಿಕೊಂಡರು.

ರಾಷ್ಟ್ರ ಪ್ರಶಸ್ತಿ ಬಂದ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿಯೂ ಬರಬೇಕೆಂದು, ರಾಜ್ಯ ಪ್ರಶಸ್ತಿ ಪಡೆದ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿಯೂ ಸಿಗಬೇಕೆಂದು ವಾದಿಸಲು ಸಾಧ್ಯವೆ? ಎಂದು ಪ್ರಶ್ನಿಸಿ ಮಾತು ಮುಗಿಸಿದರು.


ಇದನ್ನೂ ಓದಿ: ಪ್ಯಾರಲಲ್ ಮದರ್ಸ್ ಸಿನಿಮಾ; ಇತಿಹಾಸ-ವರ್ತಮಾನ, ನೆನಪು-ಸಂಬಂಧಗಳ ಚಿತ್ರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...