ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಈ ವಾರದಲ್ಲಿ ಮತದಾನದ ದಿನಾಂಕ ಪ್ರಕಟವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಚುನಾವಣಾ ಆಯೋಗದ ಕಡೆಗಿದೆ. ಈ ನಡುವೆ ಅನಾಮಧೇಯ ಬ್ಯಾನರ್‌ಗಳು ಅಡಳಿತಾರೂಢ ಪಕ್ಷಗಳನ್ನು ಕಾಡಲು ಪ್ರಾರಂಭಿಸಿವೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸುಮಾರು 5 ವರ್ಷಗಳ ಹಿಂದೆ ನೀಡಿದ್ದ ವಿವಾದಾತ್ಮಕ “ಡಿಎನ್‌ಎ” ಹೇಳಿಕೆ ಈಗ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (NDA) ಕಾಡಲು ಮತ್ತೆ ಬ್ಯಾನರ್ ರೂಪದಲ್ಲಿ ರಸ್ತೆಗಳಿಗಿಳಿದಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಬಿಜೆಪಿ – ಜೆಡಿಯು ನಡುವೆ ಸ್ಥಾನ ಹಂಚಿಕೆ ಮಾತುಕತೆ
ನಿನ್ನೆ ಬೆಳಿಗ್ಗೆ ಪಾಟ್ನಾದಲ್ಲಿ ಮೋದಿಯವರ ಡಿಎನ್‌ಎ ಹೇಳಿಕೆ ಆಧಾರಿತ ದೊಡ್ಡ ವರ್ಣರಂಜಿತ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳು ಕಾಣಿಸಿಕೊಂಡವು. ಬಿಜೆಪಿ ಮತ್ತು ಜೆಡಿಯು ಪಕ್ಷಗಳ ಮುಖಂಡರುಗಳು ಮುಜುಗರಕ್ಕಿಡು ಮಾಡುವಂತೆ ಮೋದಿ ಹೇಳಿಕೆಯನ್ನು ಬ್ಯಾನರ್‌ನಲ್ಲಿ ಹೈಲೈಟ್ ಮಾಡಲಾಗಿದೆ.

2015ರ ಜುಲೈನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನಿತೀಶ್ ಕುಮಾರ್ ಡಿಎನ್‌ಎನಲ್ಲಿ ಏನೋ ತೊಂದರೆ ಇದೆ ಎಂದಿದ್ದರು. ಈ ವಾಕ್ಯವನ್ನು ಬ್ಯಾನರ್‌ನಲ್ಲಿ ಹೈಲಟ್ ಮಾಡಲಾಗಿದೆ. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ “ನಿತೀಶ್ ಕುಮಾರ್ ಕೆ ಡಿಎನ್‌ಎ ಮೇ ಹೇ ಗಡ್‌ಭಡ್ ಹೈ”. ಬ್ಯಾನರ್‌ಗಳಲ್ಲಿ ಬಳಸಲಾದ ಮತ್ತೊಂದು ಸಾಲು ಕುಮಾರ್ ಅವರ ನಂಬಿಕೆಯನ್ನು ಪ್ರಶ್ನಿಸಿದೆ: “ಮಾರ್ತೆ ರಹೆ ಬಸಾ ಪಲಟಿ, ನಿತೀಶ್ ಕಿ ಹರ್ ಬಾತ್ ಕಚ್ಚಿ” ಎಂಬ ವಾಕ್ಯಗಳನ್ನು ಬ್ಯಾನರ್‌ನಲ್ಲಿ ಬಳಸಲಾಗಿದೆ. ವಿಶೇಷವೆಂದರೆ, ಬ್ಯಾನರ್‌ಗಳ ಪ್ರಾಯೋಜಕರ ಹೆಸರನ್ನು ಉಲ್ಲೇಖಿಸಲಾಗಿಲ್ಲ.
ಇದನ್ನೂ ಓದಿ: ಬಿಹಾರ ಚುನಾವಣೆವರೆಗೂ ಮುಂದುವರೆಯಲಿದೆ ಸುಶಾಂತ್ ಸಿಂಗ್- ಕಂಗನಾ ವಿವಾದಗಳು
2015 ರಲ್ಲಿ ಪಾಟ್ನಾದಿಂದ 75 ಕಿ.ಮೀ ದೂರದಲ್ಲಿರುವ ಮುಜಾಫರ್ಪುರದಲ್ಲಿ ನಡೆದ ಪರಿವರ್ತನಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ನಿತೀಶ್ ಕುಮಾರ್ ಅವರ “ರಾಜಕೀಯ ಡಿಎನ್‌ಎ”ಯಲ್ಲಿ ಏನಾದರೂ ದೋಷವಿದೆಯೇ ಎಂದಿದ್ದರು.
’ಅವರು ಬಿಜೆಪಿಯಿಂದ ತಮ್ಮ ಬೆಂಬಲ ಹಿಂಪಡೆದುಕೊಂಡಾಗ ನನಗೆ ನೋವುಂಟಾಗಿತ್ತು( 2013ರಲ್ಲಿ ಜೆಡಿ-ಯು ಬಿಜೆಪಿಯಿಂದ ವಿಭಜನೆಯಾಗಿತ್ತು) ಆದರೆ ಮಾಜಿ ಮುಖ್ಯಮಂತ್ರಿ ಜಿತಾನ್ ರಾಮ್ ಮಾಂಜಿ ಅಂತಹವರೊಂದಿಗೂ ಅದೇ ರೀತಿ ಮಾಡಿದಾಗ, ಅವರ ರಾಜಕೀಯ ಡಿಎನ್‌ಎಯಲ್ಲಿ ಏನಾದರೂ ದೋಷವಿದೆ ಎಂದು ನಾನು ಕಂಡುಕೊಂಡೆ’ ಎಂದು ಮೋದಿ ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಜೆಡಿಯು ಮುಖ್ಯಸ್ಥರು ಇದನ್ನು ಬಿಹಾರದ ಜನರಿಗೆ ಮಾಡಿದ ಅವಮಾನ ಎಂದು ಭಾವಿಸಿದ್ದರು. ಮೋದಿಯವರು ತಮ್ಮ ವಿರುದ್ಧದ ಡಿಎನ್‌ಎ ಹೇಳಿಕೆಯನ್ನು ಹಿಂಪಡೆಯುವಂತೆ ಹೇಳಿ, ಈ ಹೇಳಿಕೆಯ ವಿರುದ್ಧ ಸಹಿ ಅಭಿಯಾನವನ್ನು ಪ್ರಾರಂಭಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಮೈತ್ರಿ ಬಿಜೆಪಿಯನ್ನು ಸೋಲಿಸಿ ಜಯಗಳಿಸಿತ್ತು. ಆದರೆ ನಿತೀಶ್ ಕುಮಾರ್ ಅವರು ಮೈತ್ರಿಯನ್ನು ಕೈಬಿಟ್ಟು ಮತ್ತೊಮ್ಮೆ ಬಿಜೆಪಿಯೊಂದಿಗೆ ಕೈಜೋಡಿಸಿ 2017 ರ ಜುಲೈನಲ್ಲಿ ಹೊಸ ಸರ್ಕಾರವನ್ನು ರಚಿಸಿದ್ದರು.

ಇದನ್ನೂ ಓದಿ: ಬಿಹಾರ ಚುನಾವಣೆಯಲ್ಲಿ ಆಜಾದ್ ಸಮಾಜ ಪಕ್ಷ ಸ್ಪರ್ಧೆ: ಚಂದ್ರಶೇಖರ್ ಆಜಾದ್
ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮೋದಿ ಮತ್ತು ಕುಮಾರ್ ಅವರನ್ನು ಗುರಿಯಾಗಿಸುವ ಇತ್ತೀಚಿನ ಬ್ಯಾನರ್‌ಗಳು ಹಠಾತ್ತನೆ ಕಾಣಿಸಿಕೊಂಡಿದ್ದು, ಇದು ಪ್ರತಿಪಕ್ಷ ಆರ್‌ಜೆಡಿ ನೇತೃತ್ವದ ಮಹಾ ಮೈತ್ರಿ ಮತ್ತು ಎನ್‌ಡಿಎ ನಡುವಿನ ಬ್ಯಾನರ್ ಯುದ್ಧ ಎಂದೇ ಭಾವಿಸಲಾಗುತ್ತಿದೆ.
ಬಿಹಾರದ ರಾಜಕೀಯ ವಿಶ್ಲೇಷಕ ಎ.ಕೆ.ಮಿಶ್ರಾ ಹೇಳುವಂತೆ, ಪ್ರತಿಪಕ್ಷ ಮಹಾಮೈತ್ರಿ ಮತ್ತು ಆಡಳಿತಾರೂಢ ಎನ್‌ಡಿಎ ನಡುವಿನ ಬ್ಯಾನರ್‌ಗಳು ಮತ್ತು ಪೋಸ್ಟರ್ ಯುದ್ಧವು ರಾಜ್ಯದಾದ್ಯಂತಾ ತೀವ್ರಗೊಳ್ಳುತ್ತದೆ. ಇದು ಅವರ ಬೆಂಬಲಿಗರು ಮತ್ತು ಮತದಾರರಿಗೆ ರಾಜಕೀಯ ಸಂದೇಶವನ್ನು ಕಳುಹಿಸುವ ಕಾರ್ಯತಂತ್ರದ ಒಂದು ಭಾಗವಾಗಿದೆ. ಚುನಾವಣಾ ದಿನಾಂಕ ಪ್ರಕಟವಾಗಲಿ ಆಗ ಇನ್ನೂ ಇಂತಹ ಅನೇಕ ಬ್ಯಾನರ್ ಮತ್ತು ಹೋರ್ಡಿಂಗ್ ಬರಲಿವೆ ಎನ್ನುತ್ತಾರೆ.


