Homeಅಂಕಣಗಳುಸ್ತ್ರೀಮತಿಸ್ತ್ರೀಮತಿ- 5: ಹೆಣ್ಣಾಗುವುದು ಎಂದರೆ ಲೋಕ ಬಯಸಿದಂತೆ ಇರುವುದು!?

ಸ್ತ್ರೀಮತಿ- 5: ಹೆಣ್ಣಾಗುವುದು ಎಂದರೆ ಲೋಕ ಬಯಸಿದಂತೆ ಇರುವುದು!?

- Advertisement -
- Advertisement -

ಹೆಣ್ಣಾಗುವುದು ಎಂದರೆ ಲೋಕ ಏನನ್ನು ಅವಳಿಂದ ನಿರೀಕ್ಷಿಸುತ್ತದೋ ಅದಾಗುವುದು. ಹುಟ್ಟಿನಿಂದಲೇ ಅವಳು ಹೆಣ್ಣಾಗಿರುವುದಿಲ್ಲ ಎಂದು ಸ್ತ್ರೀವಾದಿ ಚಿಂತಕಿ ಸಿಮನ್ ದಿ ಬೊವಾ ಬಹಳ ಹಿಂದೆಯೇ ಸಾಬೀತುಪಡಿಸಿದ್ದರೂ, ಜೆಂಡರ್‌ (ಲಿಂಗತ್ವ) ಎನ್ನುವುದು ಜೀವಶಾಸ್ತ್ರ ಅಲ್ಲ ಸಮಾಜಶಾಸ್ತ್ರ ಎಂದು ಸ್ತ್ರೀವಾದಿಗಳು ಸಾರಿ ಹೇಳಿದ್ದರೂ ಹೆಣ್ಣನ್ನು ಪಳಗಿಸುವ ಕಾರ್ಯತಂತ್ರಗಳು ಮಾತ್ರ ಸ್ಥಗಿತಗೊಂಡಿಲ್ಲ. ಅಷ್ಟೇ ಅಲ್ಲ ಹೆಣ್ಣೂ ಕೂಡ ಈ ಕಾರ್ಯತಂತ್ರಗಳ ಸಕ್ರಿಯ ಪಾತ್ರಧಾರಿಯಾಗಿರುವುದು ವಿಪರ್ಯಾಸ.

ನೈಜೀರಿಯಾದ ಲೇಖಕಿ, ಚಿಂತಕಿ ಚಿಮಮಾಂಡ ಅಡಿಚಿಯೆ ಅವರ ‘ಫೆಮಿನಿಸ್ಟ್ ಮ್ಯಾನಿಫೆಸ್ಟೋ’ ಎನ್ನುವ ಪುಟ್ಟ ಪುಸ್ತಕದಲ್ಲಿ ತನ್ನ ಗೆಳತಿಗೆ ಮಗಳನ್ನು ಬೆಳೆಸಲು 15 ಸಲಹೆಗಳನ್ನು ನೀಡಿದ್ದಾಳೆ. ಅಲ್ಲಿ ಉಡುಪಿನ ವಿಚಾರ ಬರುತ್ತದೆ, ಹಾಗೆಯೇ ಸ್ತ್ರೀಪುರುಷರಿಗೆ ಸಮಾಜ ನೀಡಿರುವ ಅವಕಾಶಗಳ ಬಗ್ಗೆಯೂ ಹೇಳುತ್ತಾಳೆ- “ಗೆಳತಿಯ ಮಗುವಿಗೊಂದು ಉಡುಪನ್ನು ಕೊಳ್ಳಲು ಬಟ್ಟೆಯಂಗಡಿಗೆ ಹೋಗಿದ್ದೆ. ಹೆಣ್ಣುಮಕ್ಕಳ ವಿಭಾಗದಲ್ಲಿ ಇದ್ದ ಉಡುಪುಗಳೆಲ್ಲ ತಿಳಿ ಗುಲಾಬಿ ಬಣ್ಣದ, ಮಾಸಲು ಛಾಯೆಯ ವಸ್ತ್ರಗಳು. ನನಗೆ ಅವು ಹಿಡಿಸಲಿಲ್ಲ. ಹುಡುಗರ ವಿಭಾಗದಲ್ಲಿ ಎದ್ದು ಕಾಣುವ ನೀಲಿ ಬಣ್ಣದ ಬಗೆಬಗೆಯ ಉಡುಪುಗಳಿದ್ದವು. ಇದನ್ನು ಕಂಡು ಹಿಡಿದವರಾರು? ಹಾಗೆಯೇ ಆಟಿಕೆಗಳ ವಿಭಾಗದಲ್ಲಿ ಕೂಡ, ಹುಡುಗರಿಗೆ-ರೈಲು, ಕಾರು, ಹುಡುಗಿಯರಿಗೆ ಗೊಂಬೆಗಳು. ಸಮಾಜ ಎಷ್ಟು ಚಿಕ್ಕ ವಯಸ್ಸಿನಿಂದಲೇ ಒಬ್ಬ ಹುಡುಗ ಏನು ಮಾಡಬೇಕು, ಒಬ್ಬ ಹುಡುಗಿ ಏನು ಮಾಡಬೇಕು ಎಂಬ ಕಲ್ಪನೆಯನ್ನು ಬಿತ್ತತೊಡಗುತ್ತದೆ. ಚಿಕ್ಕ ಮಕ್ಕಳ ಮೇಲೆ ಇಂತಹ ವಿಭಾಗೀಕರಣವನ್ನು ಹೇರದಿದ್ದರೆ ಅವರಲ್ಲಿ ಅಡಗಿರುವ ಪೂರ್ಣ ಸಾಮರ್ಥ್ಯ ಹೊರಬರಲು ಅವಕಾಶ ನೀಡಿದಂತಾಗುತ್ತದೆ”.

ಸಮಾಜದಲ್ಲಿ ಪುರುಷರಿಗೆ ಸಿಗುವಷ್ಟು ಅವಕಾಶಗಳು ಮಹಿಳೆಯರಿಗೆ ಏಕಿಲ್ಲ? ತನ್ನಿಷ್ಟದ ಬಟ್ಟೆ ತೊಡುವುದರಿಂದ ಹಿಡಿದು, ತನ್ನಿಷ್ಟದ ಕೆಲಸವನ್ನು ಆಯ್ಕೆ ಮಾಡಿಕೊಳ್ಳುವವರೆಗೆ, ಪುರುಷ ವರ್ಗಕ್ಕೆಂದೇ ಸಮಾಜ ಕೊಟ್ಟುಕೊಂಡು ಬಂದಿರುವ ವಿಶೇಷ ಸವಲತ್ತು ಸೌಲಭ್ಯಗಳು ಹಲವು. ಸಾವಿರಾರು ವರುಷಗಳಿಂದ ಪುರುಷರು ಅವುಗಳನ್ನು ಅನುಭವಿಸುತ್ತಾ ಬಂದಿದ್ದರೂ ಅದು ಅವರಿಗೆ ಮಾತ್ರ ಮೀಸಲಾಗಿದೆ ಎಂಬುದನ್ನು ಮರೆತುಹೋಗಿದ್ದಾರೆ. ಇನ್ನೂ ಎಷ್ಟೋ ಸುಶಿಕ್ಷಿತ ಮಹಿಳೆಯರಿಗೂ ಕೂಡ ತಾವು ವಂಚಿತರು ಎಂಬ ಪರಿವೆಯೇ ಇಲ್ಲ. ಹಾಗೆ ವಂಚಿತರಾಗಿರುವುದರಿಂದಲೇ ಹಲವಾರು ಕಷ್ಟಗಳನ್ನು ಅನುಭವಿಸಬೇಕಾಗಿದೆ ಎಂಬುದನ್ನೂ ಅರ್ಥಮಾಡಿಕೊಂಡಿಲ್ಲ, ಬದಲಾಗಿ ಅಯ್ಯೋ ಇದು ನನ್ನ ಹಣೆಬರಹ, ದುರಾದೃಷ್ಟ, ಕರ್ಮ ಎಂದುಕೊಂಡಿರುತ್ತಾರೆ. ಗಟ್ಟಿಗಿತ್ತಿಯಾದ ದ್ರೌಪದಿಯೇ  `ಅಕಟ! ಹೆಂಗಸು ಜನ್ಮವನು ಸುಡಲಿ/ ಘೋರ ಪಾತಕಿ ಎನ್ನವೊಲು ಮುನ್ನ ಆರು ನವೆದವರುಂಟು ಮರಣವು ಬಾರದೆ… ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು!’ ಎಂದು ಹೇಳುವಂತೆ ಕುಮಾರವ್ಯಾಸನು ಬರೆಯುವುದು, ಬಹಳಷ್ಟು ಮಹಿಳೆಯರು ಹಲುಬುತ್ತಲೇ ಬದುಕು ಸವೆಸಿಬಿಡುತ್ತಾರೆ ಎಂದು ಸೂಚಿಸುತ್ತದೆ ಅಲ್ಲವೆ! ಅವುಗಳ ಹಿಂದಿನ ವ್ಯವಸ್ಥಿತ, ಸಾಂಸ್ಥಿಕ ಶೋಷಣೆಯ ಪದರಗಳನ್ನು ಬಿಡಿಸಲು ಹೋಗುವುದಿಲ್ಲ. ಆದರೆ ಅಂತಹ ಪ್ರಯತ್ನಗಳನ್ನು ಸ್ತ್ರೀವಾದ ನಿರಂತರವಾಗಿ ಮಾಡುತ್ತಲೇ ಬರುತ್ತಿದೆ. ಪುರುಷರಿಗೆಂದೇ ಮೀಸಲಾಗಿರುವ ಸವಲತ್ತುಗಳನ್ನು ಸರಳವಾಗಿ ಅಸಮಾನತೆ ಅಥವಾ ಅಸಮಾನತೆಗೆ ಕಾರಣಗಳು ಎಂದು ಹೆಸರಿಸಿಬಿಡಲು ಆಗುವುದಿಲ್ಲ. ಗಂಡುಮಗನಿಗೆ ಗಟ್ಟಿಮೊಸರು ಹಾಕಿ ಹೆಣ್ಣುಮಗಳಿಗೆ ನೀರುಮಜ್ಜಿಗೆ ಕೊಡುತ್ತಾರೆ ಎಂಬ ಸರಳವಾದ ವಿವರಗಳನ್ನೂ ಮೀರಿ ಗುರುತಿಸಲಾಗದಷ್ಟು ಸಂಕೀರ್ಣವಾಗಿ ನಮ್ಮ ಸಮಾಜ, ಸಂಸ್ಕೃತಿಯೊಳಗೆ ಅಸಮಾನತೆಯ ಬೇರುಗಳು ಬೆಸೆದುಕೊಂಡಿದೆ. ಅಷ್ಟೇ ಅಲ್ಲ ಇಂತಹ ಇನ್ನಷ್ಟು ಆಚರಣೆಗಳಿಗೆ ಭದ್ರ ಬುನಾದಿಯನ್ನೂ ಹಾಕಿದೆ.

ಈ ವಿಶೇಷ ಸವಲತ್ತುಗಳತ್ತ ಅದರಲ್ಲೂ ಮುಖ್ಯವಾಗಿ ಅವುಗಳನ್ನು ಕೇವಲ ಪುರುಷರಿಗೆಂದೇ ಮೀಸಲಾಗಿಟ್ಟ ರಾಜಕಾರಣದತ್ತ ಸ್ತ್ರೀಪುರುಷರಿಬ್ಬರ ಗಮನ ಸೆಳೆದು ಅರಿವು ಮೂಡಿಸಬೇಕಿದೆ. ಏಕೆಂದರೆ ಸ್ತ್ರೀಪುರುಷರ ನಡುವೆ ಅಸಮಾನತೆ ಎಲ್ಲಿದೆ ಎಂದು ಕೇಳುವ ಪ್ರಶ್ನೆಗೆ ಉತ್ತರ ಅಲ್ಲಿಯೇ ಸಿಗುತ್ತದೆ. ಮತ್ತು ಇದು ಒಂದು ಚಳವಳಿಯ ಮಾದರಿಯಲ್ಲಿಯೇ ನಡೆಯಬೇಕು.  ಸಮಾನತೆ ಎಂಬುದನ್ನು ಎಷ್ಟು ಸೂಕ್ಷ್ಮವಾಗಿ ಅವಲೋಕಿಸಿದರೂ ಸಾಲದು. ಅದು ಧರ್ಮ, ಜಾತಿ, ಲಿಂಗ, ದೇಶ, ಭಾಷೆ ಯಾವ ನೆಲೆಯಲ್ಲಿಯಾದರೂ ಸರಿ.  ಬಸ್ಸಿನಲ್ಲಿ ಅಥವಾ ಪಾರ್ಲಿಮೆಂಟಿನಲ್ಲಿ ಸೀಟು ಮೀಸಲಿಡುವುದಷ್ಟೇ ಸಮಾನತೆ ಅಲ್ಲ.

ಸ್ತ್ರೀಪುರುಷರ ನಡುವೆ ಇರುವುದು ಭಿನ್ನತೆ ಆದರೆ ಅದನ್ನು ಅಸಮಾನತೆ ಎಂದೇ ಗ್ರಹಿಸಲಾಗಿದೆ. ಜೈವಿಕ ಕಾರಣಗಳಿಂದ ಸ್ತ್ರೀಪುರುಷರ ನಡುವೆ ಭಿನ್ನತೆ ಇರಬಹುದು, ಹಾಗೆಂದು ಅವರು ಮಾಡುವ ಕೆಲಸಗಳಲ್ಲಿ ಶ್ರೇಣೀಕರಣ ಇಲ್ಲ- ಇದು ಮೇಲು, ಅದು ಕೀಳು ಎಂದು.  ಶತಮಾನಗಳಿಂದ ಅಂದರೆ ಸಾಮಾಜಿಕ ರಚನೆಯ ಆರಂಭದ ಹಂತದಿಂದಲೇ ಈ ಶ್ರೇಣೀಕರಣ ರೂಪುಗೊಂಡು  ಗಂಡಿನ ಯಜಮಾನಿಕೆ ಮತ್ತು ಹೆಣ್ಣಿನ ಅಧೀನತೆ ಸಾಮಾಜೀಕರಣದ ಮೂಲಭೂತ ಅಂಶವಾಗಿಯೇ ಬೆಳೆದುಬಂದಿದೆ.

ಚರಿತ್ರೆಯ ವಿವಿಧ ಹಂತಗಳಲ್ಲಿ ವ್ಯವಸ್ಥೆಯು ಜೈವಿಕ ಕಾರಣಗಳಿಗೆ ಸಂಬಂಧವೇ ಇಲ್ಲದ ಕಾರ್ಯಕ್ಷೇತ್ರಗಳನ್ನೂ ಇದು ಪುರುಷರ ಕಾರ್ಯಕ್ಷೇತ್ರ, ಇದು ಮಹಿಳೆಯರ ಕಾರ್ಯಕ್ಷೇತ್ರ ಎಂದು ವಿಭಜಿಸುವ ಮೂಲಕ ಮಹಿಳೆಯರ ಶ್ರಮವನ್ನು, ಅವರ ಸಾಮರ್ಥ್ಯ, ಶಕ್ತಿಯನ್ನು ಅಪಮೌಲ್ಯಗೊಳಿಸಿದೆ. ಕಾಲಾಂತರದಲ್ಲಿ ಮಹಿಳೆಯರ ಕಾರ್ಯಕ್ಷೇತ್ರ  ಮತ್ತು ಅವರು ನಿರ್ವಹಿಸಬೇಕಾದ ಪಾತ್ರಗಳನ್ನು ತಾಯಿ, ಹೆಂಡತಿ, ಮಗಳು ಎಂದು ಸೀಮಿತಗೊಳಿಸಿದಂತೆಯೇ ಔದ್ಯೋಗಿಕ ಕ್ಷೇತ್ರದಲ್ಲಿಯೂ ಕೆಲವೇ ಸ್ಥಾನಗಳಿಗೆ ಸೀಮಿತ ಮಾಡಿ ಅವನ್ನೇ ಸ್ಥಿರೀಕರಿಸಲಾಯಿತು. ಆಯಾ ಕಾರ್ಯಕ್ಷೇತ್ರಗಳ ಆಚೆಗೆ ಬೇರೆ ಯಾವುದೇ ಸ್ಥಾನಗಳಿಗೆ ಮಹಿಳೆಯರು ಅರ್ಹರಲ್ಲ ಎಂದು ನಿರ್ಧರಿಸಿ ನಿರ್ಬಂಧಿಸಲಾಯಿತು.

ಸ್ತ್ರೀಪುರುಷರಿಬ್ಬರೂ ಅಸಮಾನರು ಎಂಬ ವಾದ ಮಂಡಿಸುವ ಬಹಳಷ್ಟು ಮಂದಿ ಇಂದಿಗೂ ಜೈವಿಕ ಮತ್ತು ಮನಃಶಾಸ್ತ್ರೀಯ ಕಾರಣಗಳನ್ನು ಮುಂದೊಡ್ಡುತ್ತಾರೆ. ಹೀಗಾಗಿಯೇ ಎಸ್ತೆಲ್ ಫ್ರೀಡ್‍ಮನ್‍ ‘ಸಮಾನತೆ’ ಎಂಬ ಪದದ ಸ್ಥಾನದಲ್ಲಿ ಸಮಾನ ಯೋಗ್ಯತೆ, ಸಮಾನ ಮೌಲ್ಯ ಎಂಬ ಪದವನ್ನು ಬಳಸುತ್ತಾರೆ.

ಗಾಂಧೀಜಿ, ಅಂಬೇಡ್ಕರ್, ಲೊಹಿಯಾ ತತ್ವಗಳನ್ನು ಅಥವಾ ಪೆರಿಯಾರ್ ಅವರ ತತ್ವಗಳನ್ನು ಅನುಸರಿಸುವವರು ಆ ಮಹನೀಯರ ಸ್ತ್ರೀಪರ ಚಿಂತನೆಗಳನ್ನು ಗ್ರಹಿಸಿದರೂ ಕೂಡ ಹೆಣ್ಣನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಪೆರಿಯಾರರು ಹೆಣ್ಣಿನ ಜಾಣ್ಮೆ ಮತ್ತು ಸಾಮರ್ಥ್ಯದ ಬಗ್ಗೆ ಮಾತನಾಡುತ್ತಾರೆ. ಕಾಲದಿಂದಲೂ ವ್ಯವಸ್ಥೆಯು  ಹೆಣ್ಣನ್ನು ಜಾಣ್ಮೆ ಮತ್ತು ಸಾಮರ್ಥ್ಯ ಗಳಿಸುವ ಅವಕಾಶಗಳಿಂದ ವಂಚಿತಳನ್ನಾಗಿಸಿ ಕೆಲವು ಕಾರ್ಯಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಿ ಅವಳು ಬೇರೆ ಕ್ಷೇತ್ರಗಳಿಗೆ ಅನರ್ಹಳು ಎಂದು ಹೇಳಿಕೊಂಡು ಬಂದಿದೆ. ಆದರೆ ಇಂದು ವಿಶ್ವಾದ್ಯಂತ ಉದ್ಯೋಗ, ವೇತನ ಮತ್ತು ಬಡ್ತಿಯಲ್ಲಿ ಮಹಿಳೆಯರಿಗೆ ಸಮಾನತೆ ದೊರೆಯದಿರುವುದರಿಂದ ಪ್ರತಿವರ್ಷ ಕೋಟ್ಯಾಂತರ ರೂಪಾಯಿಗಳು ನಷ್ಟವಾಗುತ್ತಿದೆ ಎಂದು ವಿಶ್ವಬ್ಯಾಂಕ್‌ ʻಜೆಂಡರ್‌ ವೇಜ್‌ ಗ್ಯಾಪ್‌ʼ ವರದಿ ನೀಡುತ್ತಿದೆ.

ಇಷ್ಟೆಲ್ಲ ಅಂಕಿಅಂಶಗಳು ಕಣ್ಣೆದುರಿಗಿದ್ದರೂ ಮಹಿಳೆಯರ ಸಾಮರ್ಥ್ಯದ ಬಗ್ಗೆ ಅನುಮಾನ ಪಡುವವರ ಸಂಖ್ಯೆ ಕಡಿಮೆಯಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಚರ್ಚಿತ ಮನಃಶಾಸ್ತ್ರಜ್ಞರಲ್ಲಿ ಒಬ್ಬರಾದ ಜೊರ್ಡನ್ ಪೀಟರ್‍ಸನ್ ಹೇಳುತ್ತಾರೆ- ಮಾನವಿಕ ಕ್ಷೇತ್ರದಲ್ಲಿ ಅಧ್ಯಯನ ಮಾಡುವವರು, ಹೆಚ್ಚಾಗಿ ಮಹಿಳೆಯರೇ, ಜೈಲಿನಲ್ಲಿರುವ ಖೈದಿಗಳಲ್ಲಿ ಬಹುಸಂಖ್ಯಾತರು ಪುರುಷರೇ ಹೀಗಿರುವಾಗ ಅವರಿಬ್ಬರು ಹೇಗೆ ಸಮಾನರಾಗುತ್ತಾರೆ? ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್, ಟ್ಯಾಂಪೊನ್ ಗಳನ್ನು ಮಹಿಳೆಯರಿಗಾಗಿ ಕಂಡುಹಿಡಿದದ್ದು ಪುರುಷರೇ ಹೀಗಿರುವಾಗ ಮಹಿಳೆಯರನ್ನು ಶೋಷಿತರು ಎನ್ನಲು ಹೇಗೆ ಸಾಧ್ಯ ಎಂಬ ವಿತಂಡವಾದ ಮಾಡುತ್ತಾರೆ.

ಸಿಗ್ಮಂಡ್ ಫ್ರಾಯ್ಡ್‍ನಿಂದ  ಹಿಡಿದು ಜೊರ್ಡನ್ ಪೀಟರ್‍ಸನ್ ವರೆಗಿನ ಬಹುತೇಕ ಮನಃಶಾಸ್ತ್ರಜ್ಞರು ಮಹಿಳೆಯರ ಬಗ್ಗೆ ತಳೆದಿರುವ ನಿಲುವುಗಳನ್ನು ಅನೇಕ ಸ್ತ್ರೀವಾದಿಗಳು, ಮನಃಶಾಸ್ತ್ರಜ್ಞೆಯರು ಪ್ರಶ್ನಿಸುತ್ತಾ ನಿಕಷಕ್ಕೆ ಒಡ್ಡುತ್ತಾ, ಅವುಗಳನ್ನು ಸರಿಪಡಿಸುತ್ತಾ ಬಂದಿದ್ದಾರೆ.

‘ಅನಾಟಮಿ ಈಸ್ ಡೆಸ್ಟಿನಿ’ ಎಂದು ಫ್ರಾಯ್ಡ್ ಕೂಡ ಬಲವಾಗಿ ನಂಬಿದ್ದ. ಆದರೆ ಕಾರೆನ್ ಹಾರ್ನಿಯ ಎಂಬ ಮನಃಶಾಸ್ತ್ರಜ್ಞೆ ತನ್ನ ‘ಫೆಮಿನೈನ್ ಸೈಕಾಲಜಿ’ ಎಂಬ ಕೃತಿಯಲ್ಲಿ ಸ್ತ್ರೀ ಪುರುಷರ ವರ್ತನೆಯಲ್ಲಿರುವ ವ್ಯತ್ಯಾಸಗಳಿಗೆ ಸಂಸ್ಕೃತಿಯೇ ಕಾರಣ ಎಂದು ವಿವರವಾಗಿ ತಿಳಿಸಿದ್ದಾಳೆ. ಇಂದಿಗೂ ನಮ್ಮ ಸರ್ಕಾರ ಭಾರತೀಯ ಸಂಸ್ಕೃತಿಯನ್ನು ಕಟ್ಟಿಕೊಡುವ ಭರದಲ್ಲಿ ಪೌರಾಣಿಕ ಧಾರವಾಹಿಗಳನ್ನು ಪ್ರೊತ್ಸಾಹಿಸುತ್ತಾ ಪುರಾಣದ ಪಾತ್ರಗಳನ್ನು ಆದರ್ಶ ಪಾತ್ರಗಳೆಂಬಂತೆ ಬಿಂಬಿಸುತ್ತಿದೆ.  ಸಮಾನ ಯೋಗ್ಯತೆ ಹೊಂದಿರುವ ಮಹಿಳೆಯರು ಆಯಾ ಸಂಸ್ಕೃತಿಯ-ಸಮಾಜದ ಸ್ಥಾಪಿತ ಸಿದ್ಧಮಾದರಿಯ ಪಾತ್ರಗಳಿಂದ ತಮ್ಮನ್ನು ಬಿಡಿಸಿಕೊಳ್ಳಬೇಕಿದೆ. ಆ ದಾರಿ ಸುಲಭದ್ದೇನೂ ಅಲ್ಲ.

ಹೀಗೆ ಬಿಡಿಸಿಕೊಳ್ಳುವ ಹಂತದಲ್ಲಿಯೇ ಸಂಯುಕ್ತಾ ಹೆಗಡೆಯ ಮೇಲೆ ನಡೆದಂತಹ ಆಕ್ರಮಣಗಳು ಜರುಗುತ್ತವೆ!

ಸಿಗರೇಟ್ ಪ್ಯಾಕಿನ ಮೇಲೆ ಆರೋಗ್ಯಕ್ಕೆ ಹಾನಿಕರ ಎಂದು ಹಾಕಿದಂತೆ, ಮಹಿಳೆಯರ ಉಡುಪುಗಳ ಮೇಲೆ ಇದನ್ನು ತೊಡುವುದು ನಿಮ್ಮ ಸುರಕ್ಷತೆಗೆ ಹಾನಿಕರ ಎಂದಾಗಲಿ, ಪುರುಷರ ಮಾನಸಿಕ ಸ್ವಾಸ್ಥ್ಯಕ್ಕೆ ಹಾನಿಕರ ಎಂದಾಗಲೀ ಮುದ್ರಿಸದಿದ್ದರೂ ಹೆಣ್ಣಿನ ಮೇಲೆ ಅತ್ಯಾಚಾರ, ದೈಹಿಕ ಹಲ್ಲೆ ನಡೆದಾಗಲೆಲ್ಲಾ ಅದಕ್ಕೆ ಅವಳ ಉಡುಪು ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತದೆಯೇ ವಿನಃ ಆಕ್ರಮಣ ಮಾಡಿದ ಪುರುಷ ಮನಸ್ಥಿತಿಯ ಅಥವಾ ನಮ್ಮ ಸಂಸ್ಕೃತಿಯ ವಿಶ್ಲೇಷಣೆ ನಡೆಯುವುದಿಲ್ಲ.

ಕುಟುಂಬದ ಚೌಕಟ್ಟಿನೊಳಗೆ ಹೆಣ್ಣು ಹೇಗಿರಬೇಕು ಎಂಬ ನೀತಿನಿರೂಪಣೆಗಳು ಎಷ್ಟಿವೆಯೋ ನಾಲ್ಕು ಗೋಡೆಗಳಾಚೆಗೆ ಅವಳು ಹೇಗಿರಬೇಕು, ಏನು ಮಾಡಬೇಕು, ಏನು ಮಾಡಬಾರದು ಎಂಬ ನೈತಿಕ ಪೊಲೀಸಿಂಗ್ ಪ್ರಬಲವಾಗಿದೆ. ಸಾರ್ವಜನಿಕ ಸ್ಥಳಗಳು ಇಂದಿಗೂ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ. ಈ ನಿಟ್ಟಿನಲ್ಲಿ `ಬ್ಲ್ಯಾಂಕ್ ನಾಯ್ಸ್’ ಸಂಸ್ಥೆಯ ಸ್ಥಾಪಕಿ ಜಸ್ಮೀತ್ ಪಥೆಜಾ ಅವರು ‘ಮೀಟ್ ಟು ಸ್ಲೀಪ್’ ಎಂಬ ಅಭಿಯಾನವನ್ನೇ ಆರಂಭಿಸಿದ್ದಾರೆ. ಸಾರ್ವಜನಿಕ ಉದ್ಯಾನಗಳಲ್ಲಿ ಮಹಿಳೆಯರು ಒಬ್ಬೊಬ್ಬರೇ ಹೋಗಿ ಮಲಗುವ, ಪುಸ್ತಕ ಓದುವ, ಒಬ್ಬರೇ ಕುಳಿತು ತಿನ್ನುವ ವಿಶೇಷ ಅಭಿಯಾನ ಇದು. ಬೆಂಗಳೂರಿನಲ್ಲಿ ಆರಂಭವಾದ ‘ಮೀಟ್ ಟು ಸ್ಲೀಪ್’ ಇಂದು ಪ್ರಪಂಚದ ಅನೇಕ ನಗರಗಳಲ್ಲಿಯೂ ನಡೆಯುತ್ತಿದೆ. “ಮನೆಯಿಂದ ಹೊರಗೆ ಹೋದಾಗಲೆಲ್ಲಾ, ಪ್ರತಿ ಬಾರಿ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆದಾಗಲೆಲ್ಲಾ ಇನ್ನಷ್ಟು ಜೋಪಾನವಾಗಿರುವಂತೆ, ಜಾಗರೂಕರಾಗಿರುವಂತೆ ಅವಳಿಗೆ ಹೇಳಲಾಗುತ್ತದೆ. ಮೀಟ್ ಟು ಸ್ಲೀಪ್ ಅಭಿಯಾನ ಅಂತಹ ಎಲ್ಲಾ ಎಚ್ಚರಿಕೆಗಳನ್ನು ತಿರಸ್ಕರಿಸುವ ಆಹ್ವಾನವಾಗಿದೆ” ಎಂಬುದು ಪಥೇಜಾ ಅವರ ನಿಲುವು. ಮಹಿಳೆಯರಿಗೆ ಭಯ ಹೋಗಬೇಕು ಎಂದರೆ ಸಾರ್ವಜನಿಕರ ಮೇಲೆ ನಂಬುಗೆ ಮೂಡಬೇಕು. ಅಂತಹ ಆತ್ಮವಿಶ್ವಾಸ ಗಳಿಸಿಕೊಳ್ಳಲು ಬಹಳ ಪ್ರಯಾಸ ಪಡಬೇಕು.

ಈ ವಿಮೋಚನೆಯ ದಾರಿ, ಹೋಗುತ್ತಾ ಕೊಯ್ಯುವ ಬರುತ್ತಾ ಕೊಯ್ಯುವ ಗರಗಸದಂತೆ, ನೂರಾರು ವರುಷಗಳ ಚಳವಳಿ, ಹೋರಾಟದ ಈ ದಾರಿ ಸವೆಸುತ್ತಾ, ವ್ಯವಸ್ಥೆಯಲ್ಲಿರುವ ತಾರತಮ್ಯದ ಬಗೆಗೆ ಜಾಗೃತಿ ಮೂಡಿಸುತ್ತಿದೆ. ಭಾಂವ್ರಿ ದೇವಿ, ನಿರ್ಭಯಾದಂತಹ ಪ್ರಕರಣಗಳು ಮಹಿಳೆಯರಿಗೆ ಕಾನೂನಾತ್ಮಕ ನೆರವು ದೊರಕಿಸಿಕೊಡುವಲ್ಲಿ ದೊಡ್ಡ ಮೈಲಿಗಲ್ಲುಗಳಾಗಿವೆ.

ಚಿಮಮಾಂಡ ಹೇಳುತ್ತಾಳೆ: “ವಿ ಮಸ್ಟ್ ರೈಸ್ ಅವರ್ ಡಾಟರ್ಸ್ ಡಿಫರೆಂಟ್ಲೀ, ಬಟ್ ವಿ ಮಸ್ಟ್ ಆಲ್ಸೋ ರೈಸ್ ಅವರ್ ಸನ್ಸ್ ಡಿಫರೆಂಟ್ಲೀ”. ಅವಳ ಪುಸ್ತಕ ಅನುವಾದ ಮಾಡಿ ಒಂದು ವರ್ಷವಾಯಿತು, ಮೊನ್ನೆಯೊಬ್ಬರು ಮಹಿಳೆ ಮಂಗಳೂರಿನಿಂದ ನನ್ನ ಮೊಬೈಲ್‍ ಗೆ ಕರೆ ಮಾಡಿದ್ದರು, ಆ ಪುಸ್ತಕ ಓದಿದೆ ಬಹಳ ಉಪಯುಕ್ತವಾದ ಪುಸ್ತಕ, ಆದರೆ ನೀವೇಕೆ ಗಂಡು ಮಕ್ಕಳನ್ನು ಬೆಳೆಸುವುದು ಹೇಗೆ ಎಂಬ ಪುಸ್ತಕ ಬರೆಯಬಾರದು ಎಂದು ಕೇಳಿದರು, ನಿಮಗೆ ಗಂಡು ಮಕ್ಕಳಿದ್ದಾರೆಯೇ, ಯಾವ ವಯಸ್ಸಿನವರು ಎಂದು ಕೇಳಿದೆ, ಅದಕ್ಕವರು ಅಯ್ಯೋ ನನಗಾಗಲೇ ಅರವತ್ತರ ಮೇಲಾಯ್ತು, ಮೊಮ್ಮಕ್ಕಳಿದ್ದಾರೆ, ಆದರೆ ನಮ್ಮ ಸಮಾಜಕ್ಕೆ ಗಂಡು ಮಕ್ಕಳನ್ನು ಹೇಗೆ ಬೆಳೆಸಬೇಕೆಂದು ಕಲಿಸಬೇಕು ಎಂದರು. ಹೌದಲ್ಲವೇ, ಪೆಟ್ಟು ತಿನ್ನದೆ ಬುದ್ಧಿ ಕಲಿಯುವಷ್ಟು ಜಾಣರಾಗುವುದು ಯಾವಾಗ?!

ಡಾ. ಕಾವ್ಯಶ್ರೀ ಎಚ್, ಲೇಖಕಿ- ಉಪನ್ಯಾಸಕಿ. (ಚಿಂತಕಿ ಚಿಮಮಾಂಡ ಅಡಿಚಿ ಅವರ ಫೆಮಿನಿಸ್ಟ್ ಮ್ಯಾನಿಫೆಸ್ಟೋ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...